ADVERTISEMENT

ಯಾದಗಿರಿ: ಸಂಪೂರ್ಣ ಲಾಕ್‌ಡೌನ್‌ಗೆ ಜನರ ಸ್ಪಂದನೆ

ಕೊರೊನಾ ತಡೆಗಟ್ಟಲು ಕಠಿಣ ಕ್ರಮ; ಅಲ್ಲಲ್ಲಿ ವಾಹನ ಸವಾರರು, ಪೊಲೀಸರ ಮಧ್ಯೆ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 20 ಮೇ 2021, 4:38 IST
Last Updated 20 ಮೇ 2021, 4:38 IST
ಯಾದಗಿರಿಯಲ್ಲಿ ಸಂಪೂರ್ಣ ಲಾಕ್‌ಡೌನ್‌ ಕಾರಣದಿಂದ ಶಾಸ್ತ್ರಿ ವೃತ್ತದಲ್ಲಿ ಜನ ಸಂಚಾರವಿಲ್ಲದೇ ಬಿಕೋ ಎನ್ನುತ್ತಿತ್ತುಪ್ರಜಾವಾಣಿ ಚಿತ್ರ: ರಾಜಕುಮಾರ ನಳ್ಳಿಕರ
ಯಾದಗಿರಿಯಲ್ಲಿ ಸಂಪೂರ್ಣ ಲಾಕ್‌ಡೌನ್‌ ಕಾರಣದಿಂದ ಶಾಸ್ತ್ರಿ ವೃತ್ತದಲ್ಲಿ ಜನ ಸಂಚಾರವಿಲ್ಲದೇ ಬಿಕೋ ಎನ್ನುತ್ತಿತ್ತುಪ್ರಜಾವಾಣಿ ಚಿತ್ರ: ರಾಜಕುಮಾರ ನಳ್ಳಿಕರ   

ಯಾದಗಿರಿ: ಜಿಲ್ಲೆಯಲ್ಲಿ ಮೂರು ದಿನಗಳ ಕಾಲ ಘೋಷಿಸಿರುವ ಸಂಪೂರ್ಣ ಲಾಕ್‌ಡೌನ್‌ಗೆ ಮೊದಲ ದಿನ ಸಾರ್ವಜನಿಕರ ಸ್ಪಂದನೆ ಉತ್ತಮವಾಗಿ ಸಿಕ್ಕಿದೆ.

ಬೆಳಿಗ್ಗೆ 6 ಗಂಟೆಯಿಂದಲೇ ರಸ್ತೆಗಳಿದ ಅಧಿಕಾರಿ, ಪೊಲೀಸರು ಸಂಚಾರ ನಿಯಂತ್ರಣಕ್ಕೆ ಕ್ರಮ ಕೈಗೊಂಡರು. ಅನಾವಶ್ಯವಾಗಿ ತಿರುಗಾಡದಂತೆ ಎಚ್ಚರಿಕೆ ನೀಡುವ ಜೊತೆಗೆ ದಂಡ ಹಾಕಿದರು.

ನಗರದ ಪ್ರಮುಖ ವೃತ್ತಗಳಾದ ಸುಭಾಷ ವೃತ್ತ, ಶಾಸ್ತ್ರಿ ವೃತ್ತ, ಗಾಂಧಿ ವೃತ್ತ, ಗಂಜ್‌ ವೃತ್ತ, ಹೊಸಳ್ಳಿ ಕ್ರಾಸ್‌, ಹತ್ತಿಕುಣಿ ಕ್ರಾಸ್‌ ಸೇರಿದಂತೆ ವಿವಿಧ ಕಡೆ ಪೊಲೀಸರು ಬ್ಯಾರಿಕೇಡ್‌ ಹಾಕಿ ಅನಗತ್ಯ ಓಟಾಟಕ್ಕೆ ಕಡಿವಾಣ ಹಾಕಲಾಗಿದೆ.

ADVERTISEMENT

ರಸ್ತೆಯಲ್ಲಿ ಸಂಚರಿಸುವ ಪ್ರತಿಯೊಂದು ವಾಹನವನ್ನು ಪೊಲೀಸರು ತಪಾಸಣೆ ನಡೆಸಿ ದಾಖಲಾತಿ ಪಡೆದು ಸಂಚಾರಕ್ಕೆ ಬಿಡುತ್ತಿದ್ದರು. ಕಾರುಗಳಲ್ಲಿ ಬಂದವರನ್ನು ವಿಚಾರಿಸಿಯೇ ನಂತರ ಬಿಡುತ್ತಿದ್ದರು.

ಹಾಲು, ಔಷಧಿ, ಆಸ್ಪತ್ರೆಗಳು ಮಾತ್ರ ಓಪನ್‌: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಹಾಲು, ಔಷಧಿ, ಆಸ್ಪತ್ರೆಗಳು, ಪೆಟ್ರೋಲ್‌ ಬಂಕ್‌ ಮಾತ್ರ ತೆಗೆದಿದ್ದವು. ಆದರೂ ಕೆಲವರು ಅನಗತ್ಯವಾಗಿ ತಿರುಗಾಡಲು ಹೊರಗಡೆ ಬಂದಾಗ ವಾಹನ ವಶಪಡಿಸಿಕೊಂಡು ದಂಡ ವಿಧಿಸಿದರು.

ದಿನಸಿ, ತರಕಾರಿ ಸೇರಿದಂತೆ ಇನ್ನಿತರ ಅಂಗಡಿಗಳನ್ನು ಬಂದ್‌ ಮಾಡಿದ್ದರಿಂದ ಜನರು ಮನೆ ಬಿಟ್ಟು ಹೊರಗೆ ಸಂಚಾರ ಮಾಡಿಲ್ಲ. ಸಂಪೂರ್ಣ ಲಾಕ್‌ಡೌನ್‌ಗೆ ಮುಂಚೆ ಎರಡು ದಿನಗಳ ಕಾಲ ಖರೀದಿಗೆ ಅವಕಾಶ ಕಲ್ಪಿಸಲಾಗಿತ್ತು.

ಬಿಕೋ ಎಂದ ರಸ್ತೆಗಳು : ಸಂಪೂರ್ಣ ಲಾಕ್‌ಡೌನ್‌ ಕಾರಣದಿಂದ ನಗರದ ಪ್ರಮುಖ ರಸ್ತೆಗಳಲ್ಲ ಬಿಕೋ ಎನ್ನುತ್ತಿದ್ದವು. ಅಲ್ಲೊಂದು, ಇಲ್ಲೊಂದು ವಾಹನ ಸಂಚಾರ ಮಾಡುತ್ತಿತ್ತು. ಪೊಲೀಸರು ಅವರನ್ನು ವಿಚಾರಿಸಿ ಕಳುಹಿಸುತ್ತಿದ್ದರು.

***

₹17 ಸಾವಿರ ದಂಡ, 192 ವಾಹನ ಜಪ್ತಿ

ಯಾದಗಿರಿ: ಜಿಲ್ಲೆಯಾದ್ಯಂತ ಸಂಪೂರ್ಣ ಲಾಕ್‌ಡೌನ್‌ ಇದ್ದರೂ ಅನಾವಶ್ಯಕವಾಗಿ ತಿರುಗಾಡುತ್ತಿದ್ದವಾಹನ ಸವಾರರ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

187 ದ್ವಿಚಕ್ರ, 2 ಮೂರು ಚಕ್ರ ಹಾಗೂ 3 ನಾಲ್ಕು ಚಕ್ರದ ವಾಹನಗಳನ್ನು ಜಪ್ತಿ ಪಡಿಸಲಾಗಿದೆ. ಮಾಸ್ಕ್ ಹಾಕದೆ ಇರುವವರವಿರುದ್ಧ178 ಪ್ರಕರಣ ಹಾಗೂ ₹17,800 ದಂಡ ವಿಧಿಸಲಾಗಿದೆ. ಸಾರ್ವಜನಿಕರು ಕೋವಿಡ್ ಸೋಂಕನ್ನು ತಡೆಗಟ್ಟಲು ಪೊಲೀಸರೊಂದಿಗೆ ಸಹಕರಿಸಿ ಅನಗತ್ಯವಾಗಿ ರಸ್ತೆಗಳಲ್ಲಿ ಓಡಾಡಬಾರದೆಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ.ವೇದಮೂರ್ತಿ ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.