ADVERTISEMENT

ಯಾದಗಿರಿ: ಒಂದೇ ದಿನ 103 ಕೋವಿಡ್‌ ದೃಢ

ಎಂಎಲ್‌ಎಚ್‌ಪಿ ಹೆಲ್ತ್‌ ವರ್ಕರ್‌ಗೆ ಸೋಂಕು, ಜಿಲ್ಲೆಯಲ್ಲಿ 476 ಸೋಂಕಿತರು

​ಪ್ರಜಾವಾಣಿ ವಾರ್ತೆ
Published 6 ಜೂನ್ 2020, 15:48 IST
Last Updated 6 ಜೂನ್ 2020, 15:48 IST
ಪ್ರಕಾಶ್ ಜಿ.ರಜಪೂತ್
ಪ್ರಕಾಶ್ ಜಿ.ರಜಪೂತ್   

ಯಾದಗಿರಿ: ಜಿಲ್ಲೆಯಲ್ಲಿ ಶನಿವಾರ ಒಂದೇ ದಿನ 103 ಕೋವಿಡ್‌–19 ಸೋಂಕಿತರು ಪತ್ತೆಯಾಗಿದ್ದು, ಇದರಿಂದ ಕೊರೊನಾ ಪೀಡಿತರ ಸಂಖ್ಯೆ 476ಕ್ಕೆ ಏರಿಕೆಯಾಗಿದೆ.ಶುಕ್ರವಾರ 74 ಸೋಂಕಿತರು ಪತ್ತೆಯಾಗಿದ್ದರು. ರಾಜ್ಯದಲ್ಲಿ ಸೋಂಕಿತರ ಪಟ್ಟಿಯಲ್ಲಿ ಜಿಲ್ಲೆ ಮೂರನೇ ಸ್ಥಾನಕ್ಕೆ ಜಿಗಿದಿದೆ.

ಯಾದಗಿರಿ ತಾಲ್ಲೂಕಿನ ವಿಶ್ವಾಸಪುರದ 26 ವರ್ಷದ ಮಹಿಳೆ, 32 ವರ್ಷದ ಪುರುಷ, 49 ವರ್ಷದ ಮಹಿಳೆ, 30 ವರ್ಷದ ಪುರುಷ, 52 ವರ್ಷದ ಪುರುಷ, ಗುರುಮಠಕಲ್ ತಾಲ್ಲೂಕಿನ ಮಿನಸಪುರದ 20 ವರ್ಷದ ಪುರುಷ, 38 ವರ್ಷದ ಪುರುಷ, 22 ವರ್ಷದ ಮಹಿಳೆ, 25 ವರ್ಷದ ಪುರುಷ, 40 ವರ್ಷದ ಮಹಿಳೆ,ಯಾದಗಿರಿ ರೈಲ್ವೆ ಸ್ಟೇಷನ್ ಏರಿಯಾದ 62 ವರ್ಷದ ಪುರುಷ,ಯಾದಗಿರಿ ನಗರದ 34 ವರ್ಷದ ಮಹಿಳೆ ಸೇರಿದಂತೆಯಾದಗಿರಿ, ಗುರುಮಠಕಲ್‌, ವಡಗೇರಾ ತಾಲ್ಲೂಕಿನಲ್ಲಿ ಶನಿವಾರ ಹೆಚ್ಚು ಸೋಂಕು ಪತ್ತೆಯಾಗಿದೆ. 2 ವರ್ಷದ ಮೂವರುಬಾಲಕರಿಗೂ ಸೋಂಕು ತಗುಲಿದೆ.

ಯಾದಗಿರಿ ತಾಲ್ಲೂಕಿನ ಠಾಣಗುಂದಿಯ 23 ವರ್ಷದ ಮಹಿಳೆ (ಪಿ-5060), ಠಾಣಗುಂದಿಯ 29 ವರ್ಷದ ಪುರುಷ, 26 ವರ್ಷದ ಎಂಎಲ್‍ಎಚ್‍ಪಿ ಹೆಲ್ತ್ ವರ್ಕರ್ (ಪಿ-5062) ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. 103 ಜನ ಸೋಂಕಿತರಲ್ಲಿ 49 ಮಹಿಳೆಯರು, 64 ಪುರುಷರಿದ್ದಾರೆ. ಪ್ರಕರಣ ಸಂಖ್ಯೆ ಪಿ-5062ರ ಎಂಎಲ್‍ಎಚ್‍ಪಿ ಹೆಲ್ತ್ ವರ್ಕರ್‌ಗೆ ಕೋವಿಡ್ ದೃಢಪಟ್ಟಿದ್ದು, ಸಂಪರ್ಕ ಪತ್ತೆ ಹಚ್ಚಲಾಗುತ್ತಿದೆ ಎಂದು ಜಿಲ್ಲಾಡಳಿತ ತಿಳಿಸಿದೆ. ಉಳಿದ ಸೋಂಕಿತರೆಲ್ಲರೂ ಅಂತರರಾಜ್ಯ ಪ್ರಯಾಣದ ಹಿನ್ನೆಲೆ ಹೊಂದಿದ್ದು, ಮಹಾರಾಷ್ಟ್ರದ ಠಾಣೆ, ಮುಂಬೈ, ಪುಣೆ ಸ್ಥಳಗಳಿಂದ ಜಿಲ್ಲೆಗೆ ಹಿಂದಿರುಗಿದ್ದಾರೆ.

ADVERTISEMENT

27 ದಿನಗಳಲ್ಲಿ 500 ಗಡಿ: ಜಿಲ್ಲೆಯಲ್ಲಿ 27 ದಿನಗಳಲ್ಲೇ ಕೋವಿಡ್‌ ಪೀಡಿತರ ಸಂಖ್ಯೆ 500ರ ಗಡಿಗೆ ಬಂದು ನಿಂತಿದೆ. ಜಿಲ್ಲೆಗಾಗಿ ಬೆಂಗಳೂರಿನಲ್ಲಿ ಪ್ರತ್ಯೇಕ ಲ್ಯಾಬ್‌ ಜೊತೆಗೆ ಇನ್ನಿತರ ಕಡೆಯೂ ಕೊರೊನಾ ಪರೀಕ್ಷೆ ಮಾಡಲಾಗುತ್ತಿದೆ. ಇದರಿಂದ ಪರೀಕ್ಷಾ ವರದಿಗಳಲ್ಲಿ ಹೆಚ್ಚಳವಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಕೂರ್ಮಾರಾವ್‌ ತಿಳಿಸಿದ್ದಾರೆ.

ಜಿಲ್ಲೆಯಲ್ಲಿ ಕ್ವಾರಂಟೈನ್‌ ಅವಧಿ ಮುಗಿದ ನಂತರ ವರದಿ ಬರುವ ಮುನ್ನವೇ ಕಾರ್ಮಿರನ್ನು ಮನೆಗೆ ಕಳುಹಿಸಲಾಗುತ್ತಿದೆ. ಇದರಿಂದ ಕಾರ್ಮಿಕರು ಮನೆಯಲ್ಲಿರದೇ ಊರೆಲ್ಲ ಸುತ್ತಾಡುತ್ತಾರೆ. ಜೊತೆಗೆ ಸಾವು–ನೋವು ಸಂಭವಿಸಿದರೂ ಇವರು ಅಲ್ಲಿಗೆ ತೆರಳುತ್ತಾರೆ ಎನ್ನುವ ಆರೋಪ ಕೇಳಿಬಂದಿದೆ. ವಡಗೇರಾ ತಾಲ್ಲೂಕಿನ ಗ್ರಾಮವೊಂದರಲ್ಲಿ ಹೋಂ ಕ್ವಾರಂಟೈನ್‌ ಇದ್ದವರು ತಿರುಗಾಡಿದ್ದಾರೆ ಎನ್ನುವ ಅಂಶ ಬೆಳಕಿಗೆ ಬಂದಿದೆ. ಇದು ಸಮುದಾಯಕ್ಕೆ ಹರಡುವ ಭೀತಿ ಇಲ್ಲದಿಲ್ಲ. ಹೀಗಾಗಿ ಹೋಂ ಕ್ವಾರಂಟೈನ್‌ ಇದ್ದವರ ಮೇಲೆ ಹೆಚ್ಚಿನ ನಿಗಾ ವಹಿಸುವ ಅವಶ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.