ಯಾದಗಿರಿ: ‘ಇಳೆಗೂ ಬಾನಿಗು ಮಳೆ ಜೋಕಾಲಿ ತೂಗಿದೆ, ತಂಗಿದೆ ಚೆಲುವು; ಹಸುರೇ ಹಬ್ಬಿದೆ, ಹಸುರೇ ತಬ್ಬಿದೆ ಹೆಸರಿಗು ಕಾಣದು ನೆಲವು. ನಸುಕೋ, ಸಂಜೆಯೊ, ಮಿಸುಕದು ಬೆಳಕು ತಾಯಿಯ ಮೊಲೆಗಿದೆ ಕೂಸು. ಇರುಳೇ ಹೊರಳಿತು, ಹಗಲೇ ಮರಳಿತು ಚಿಗುರೆಲೆ ಹೂವಿಗೆ ಹಾಸು...’
ಕವಿ ಡಾ. ಚೆನ್ನವೀರ ಕಣವಿ ಅವರ ‘ಗಗನದಿ ಸಾಗಿವೆ’ ಕವಿತೆಯ ಈ ಮೇಲಿನ ಸಾಲುಗಳು ಗುರುವಾರ ರಾತ್ರಿಯಿಂದ ಶುಕ್ರವಾರ ಇಡೀ ದಿನ ಮಳೆ ಸೃಷ್ಟಿಸಿರುವ ಪರಿಸ್ಥಿತಿಗೆ ಅರ್ಥಗರ್ಭಿತವಾಗಿವೆ.
ರಾತ್ರಿ ಹತ್ತರ ಸುಮಾರಿಗೆ ಆರಂಭಗೊಂಡ ಜಿಟಿಜಿಟಿ ಮಳೆ ಶುಕ್ರವಾರ ಬೆಳಗಿನ ಜಾವದ ವರೆಗೆ ಸುರಿಯಿತು. ಬಳಿಕ ಕೆಲಕಾಲ ಬಿರುಸಾಗಿ ಸುರಿದ ಮಳೆ ಮತ್ತೆ ಜಿಟಿಜಿಟಿಯಾಗಿ ಬಿದ್ದು, ಜನಜೀವನ ಅಸ್ತವ್ಯಸ್ತಗೊಳಿಸಿತು. ಕೃಷಿ ಚಟುವಟಿಕೆಗಳು ಸಂಪೂರ್ಣವಾಗಿ ಸ್ಥಗಿತಗೊಂಡವು. ವ್ಯಾಪಾರ ವಹಿವಾಟಿಗೂ ಹಿನ್ನಡೆಯಾಯಿತು. ಕೆಲವು ಅಂಗಡಿಗಳ ಬಾಗಿಲು ಸಹ ತೆರೆಯಲಿಲ್ಲ.
ಬಿಡುವು ಕೊಡದೆ ಮಳೆ ಸುರಿಯುತ್ತಿರುವುದರಿಂದ ಶುಕ್ರವಾರ ಬೆಳಿಗ್ಗೆ ದೈನಂದಿನ ಕೆಲಸಕ್ಕೆ ಹೋಗುವವರಿಗೆ ತೊಂದರೆಯಾಯಿತು. ಕೆಲವರು ಮಳೆಯಲ್ಲೇ ನೆನೆದುಕೊಂಡು ಹೋದರು. ಮತ್ತೆ ಕೆಲವರು ಕೊಡೆಗಳನ್ನು ಆಶ್ರಯಿಸಿಕೊಂಡು ಹೆಜ್ಜೆ ಹಾಕಿದರು.
ಲಕ್ಷ್ಮಿ ನಗರ, ಕೋಳಿವಾಡ, ರೈಲ್ವೆ ಸ್ಟೇಷನ್ ಏರಿಯಾ, ಮಹಾತ್ಮ ಗಾಂಧಿ ವೃತ್ತ, ರೈಲ್ವೆ ನಿಲ್ದಾಣ ಪ್ರದೇಶ, ಚಿತ್ತಾಪುರ ರಸ್ತೆ, ಹಳೆ, ಹೊಸ ಬಸ್ ನಿಲ್ದಾಣ, ಚಕ್ರಕಟ್ಟಾ, ಕನಕದಾಸ ವೃತ್ತ, ಹೊಸಳ್ಳಿ ಕ್ರಾಸ್, ಗಂಜ್ ಪ್ರದೇಶ, ರಾಜೀವ ಗಾಂಧಿ ನಗರ, ಮಾತಾ ಮಾಣಿಕೇಶ್ವರ ಕಾಲೊನಿ ಸೇರಿದಂತೆ ಹಲವೆಡೆಯ ರಸ್ತೆಗಳಲ್ಲಿ ಮಳೆ ಮತ್ತು ಚರಂಡಿ ನೀರು ಹರಿದಾಡಿತು.
ಕೆರೆ ಕಟ್ಟೆಗಳು, ಜಲಾಶಯಗಳು, ಝರಿಗಳು ಮೈದುಂಬಿ ಹರಿದವು. ಅರಣ್ಯದ ಬಂಡೆ ಗಲ್ಲುಗಳ ನಡುವಿನ ಸಣ್ಣ–ಪುಟ್ಟ ಝರಿಗಳು ನೋಡುಗರಿಗೆ ನಯನ ಮನೋಹರವಾಗಿ, ಹಿತ ಭಾವ ತಂದವು.
ಮನೆಗೆ ನುಗ್ಗಿದ ನೀರು: ತಾಲ್ಲೂಕಿನ ಸೌದಾಗರ್ ತಾಂಡಾದ ಮನೆ, ದನದ ಕೊಟ್ಟಿಗೆಗಳಿಗೆ ಮಳೆಯ ನೀರು ನುಗ್ಗಿದೆ. ಮನೆಯಲ್ಲಿನ ದವಸ ಧಾನ್ಯಗಳು ನೀರಲ್ಲಿ ಕೊಚ್ಚಿಕೊಂಡು ಹೋಗಿವೆ. ನಿವಾಸಿಗಳು ನಿದ್ರೆ ಇಲ್ಲದೆ ಇಡೀ ರಾತ್ರಿ ಎಚ್ಚರವಾಗಿದ್ದರು.
'ನನ್ನ ಮಗ ಮುಂಬೈಗೆ ಕೆಲಸಕ್ಕಾಗಿ ವಲಸೆ ಹೋಗಿದ್ದಾನೆ. ಜೋಪಡಿ ಕಟ್ಟಿಕೊಂಡು ವಾಸ ಮಾಡುತ್ತಿದ್ದೇವೆ. ಮಳೆ ನೀರು ಜೋಪಡಿಗೆ ನುಗ್ಗಿದೆ. ನಮ್ಮ ಕಷ್ಟಗಳು ಕೇಳುವವರಿಲ್ಲ, ಹೇಳುವವರೂ ಇಲ್ಲ. ಒಂದು ಕುರಿ ಮರಿ ಸಹ ಸತ್ತಿದೆ. ಗುಡಿಸಲಿಗೂ ಹಾನಿಯಾಗಿದೆ. ಜೋರು ಮಳೆಯಾದರೆ ತಾಂಡಾಕ್ಕೆ ನೀರು ಆವರಿಸಿಕೊಳ್ಳುತ್ತದೆ. ಅಧಿಕಾರಿಗಳು ತಾಂಡಾದ ಸಮಸ್ಯೆಗೆ ಪರಿಹಾರ ಕೊಡುತ್ತಿಲ್ಲ' ಎಂದು ತಾಂಡಾ ನಿವಾಸಿ ಹೆಮ್ಲಾ ಜಗುನು ಹೇಳಿದರು.
ಹವಾಮಾನ ಇಲಾಖೆಯು ಸೆಪ್ಟೆಂಬರ್ 28ರ ವರೆಗೆ ಜಿಲ್ಲೆಯಲ್ಲಿ ಗುಡುಗು ಸಹಿತ ಬಿರುಗಾಳಿಯೊಂದಿಗೆ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಆರೆಂಜ್ ಅಲರ್ಟ್ ಕೊಟ್ಟಿದ್ದಾರೆರಮೇಶ ಕೋಲಾರ ಹೆಚ್ಚುವರಿ ಜಿಲ್ಲಾಧಿಕಾರಿ
ವಾಡಿಕೆಗಿಂತ ಅತ್ಯಧಿಕ ಮಳೆ ಜಿಲ್ಲೆಯಲ್ಲಿ ಶುಕ್ರವಾರ ಬೆಳಿಗ್ಗೆ 8ಕ್ಕೆ ಕೊನೆಗೊಂಡ 24 ಗಂಟೆಗಳ ಅವಧಿಯಲ್ಲಿ ಅತ್ಯಧಿಕ 50 ಮಿ.ಮೀ. ಮಳೆ ಸುರಪುರದ ಯಕ್ತಾಪುರದಲ್ಲಿ ಬಿದ್ದಿದೆ. ವಾಡಿಕೆಗಿಂತ ಶೇ 238ರಷ್ಟು ಅತ್ಯಧಿಕ ಮಳೆಯಾಗಿದೆ. ಹುಣಸಿಯ ಬೈಚಬಾಳದಲ್ಲಿ 47.5 ಮಿ.ಮೀ. ಹುಣಸಗಿಯಲ್ಲಿ 44 ಕೋಳಿಹಾಳ್‌ನಲ್ಲಿ 39.5 ಅಗ್ನಿಯಲ್ಲಿ 39 ಕಚಕನೂರುನಲ್ಲಿ 37 ವಜ್ಜಲ್‌ನಲ್ಲಿ 35.5 ಕಾಮನಟಗಿಯಲ್ಲಿ 31.5 ವರ್ಕನಳ್ಳಿಯಲ್ಲಿ 29 ಚಪೆಟ್ಲಾದಲ್ಲಿ 22.5 ಮಿ.ಮೀ ಮಳೆಯಾಗಿದೆ. ಶುಕ್ರವಾರ ಸಂಜೆ 5ರ ವರೆಗೆ ಅತ್ಯಧಿಕ ಮಳೆ ಸುರಪುರದ ಏವೂರ್‌ನಲ್ಲಿ 68.5 ಮಿ.ಮೀ. ಬಿದ್ದಿದೆ. ನಾಗನೂರದಲ್ಲಿ 59 ಸುರಪುರದಲ್ಲಿ 57.6 ತಡಿಬಿಡಿಯಲ್ಲಿ54.5 ಬೈಚಬಾಳದಲ್ಲಿ 53 ಠಾಣಗುಂದಿಯಲ್ಲಿ 44.5 ಉಕ್ಕಿನಾಳದಲ್ಲಿ 41.5 ಗುರುಮಠಕಲ್‌ನಲ್ಲಿ 29.8 ಮಿ.ಮೀ. ಮಳೆಯಾಗಿದೆ ಎಂಬುದು ಕೆಎಸ್‌ಎನ್‌ಡಿಎಂಸಿ ಮೂಲಕ ತಿಳಿದುಬಂದಿದೆ.
ಹಾಲ್ನೊರೆಯೊಂದಿಗೆ ಭೀಮೆಯ ಘರ್ಜನೆ ಭೀಮಾ ನದಿಗೆ ಉಜಿನಿ ಜಲಾಶಯದಿಂದ ಸಾಕಷ್ಟು ನೀರು ಹರಿ ಬಿಡಲಾಗುತ್ತಿದೆ. ಸನ್ನತಿ ಬ್ಯಾರೇಜ್‌ನಿಂದ 3.60 ಲಕ್ಷ ಕ್ಯುಸೆಕ್ ನೀರು ನದಿಗೆ ಹರಿಬಿಡಲಾಗಿದೆ. ನಗರ ಸಮೀಪ ಬ್ರಿಡ್ಜ್ ಕಂ ಬ್ಯಾರೇಜ್‌ನ ಎಲ್ಲ ಗೇಟ್‌ಗಳು ಎತ್ತಲಾಗಿದ್ದು ನದಿ ನೀರು ಹಾಲ್ನೊರೆಯೊಂದಿಗೆ ರಭಸವಾಗಿ ಹರಿಯುತ್ತಿದೆ. ಎರಡೂ ದಡಗಳು ತುಂಬಿ ಹರಿಯುತ್ತಿದ್ದು ನದಿ ಪಾತ್ರದ ಎರಡೂ ಕಡೆಯ ಜಮೀನುಗಳಿಗೆ ಪ್ರವಾಹದ ನೀರು ಅಲ್ಲಲ್ಲಿ ನುಗ್ಗಿದೆ. 4 ಲಕ್ಷ ಕ್ಯುಸೆಕ್ ನೀರು: ‘ಉಜನಿ ಡ್ಯಾಮ್‌ನಿಂದ ಇನ್ನೂ ಹೆಚ್ಚಿನ ಪ್ರಮಾಣ ನೀರು ಭೀಮಾ ನದಿಗೆ ಹರಿದು ಬರುವ ಸಾಧ್ಯತೆ ಇದೆ. ಸನ್ನತಿ ಬ್ಯಾರೇಜ್‌ನಿಂದ ಸುಮಾರು 4 ಲಕ್ಷ ಕ್ಯುಸೆಕ್ ನೀರು ಹರಿಸಬಹುದು ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ ‘ಪ್ರಜಾವಾಣಿ’ಗೆ ತಿಳಿಸಿದರು. ‘ನದಿಗೆ ಇಳಿಯದಂತೆ ಜಾನುವಾರುಗಳನ್ನು ಬಿಡದಂತೆ ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ನೋಡಲ್ ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ನಗರ ಸಮೀಪದ ಬ್ರಿಡ್ಜ್ ಕಂ ಬ್ಯಾರೇಜ್ ಮೇಲೆ ಸಾರ್ವಜನಿರು ಓಡಾದಂತೆ ನದಿ ಸಮೀಪ ಹೋಗದಂತೆ ತಡೆಯಲು ಪೊಲೀಸರನ್ನು ನಿಯೋಜಿಸಲಾಗುವುದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.