ಯಾದಗಿರಿ: ನಗರದ ಹೊಸ ಬಸ್ ನಿಲ್ದಾಣದ ಮುಂಭಾಗದಲ್ಲಿ ಬಹುದಿನಗಳಿಂದ ತಾತ್ಕಾಲಿಕವಾಗಿ ಇರಿಸಲಾಗಿದ್ದ ಉಪಹಾರ, ಚಹಾ ಮತ್ತು ಹಣ್ಣಿನ ಬಂಡಿಗಳು, ಸಣ್ಣ ಮಳಿಗೆಗಳನ್ನು ತೆರವುಗೊಳಿಸಲಾಗಿದೆ.
ನಗರಸಭೆಯ ಸಿಬ್ಬಂದಿ ಈಚೆಗೆ ಕಾರ್ಯಾಚರಣೆ ನಡೆಸಿ, ಅಂಗಡಿಗಳನ್ನು ತೆರವು ಮಾಡಿದ್ದಾರೆ. ವಾಹನಗಳ ಸಂಚಾರ, ಪಾದಚಾರಿಗಳ ಓಡಾಟಕ್ಕೆ ಅನುವು ಮಾಡಿಕೊಟ್ಟಿದ್ದಾರೆ.
ಕೆಲ ಮಧ್ಯವರ್ತಿಗಳು ಸಣ್ಣ–ಪುಟ್ಟ ವ್ಯಾಪಾರಿಗಳಿಂದ ತಿಂಗಳಿಗೆ ಬಾಡಿಗೆ ರೂಪದಲ್ಲಿ ಹಣ ವಸೂಲಿ ಮಾಡುತ್ತಿರುವ ಆರೋಪ ಹಾಗೂ ಬಸ್ ಸಂಚಾರಕ್ಕೆ ಅಡ್ಡಿ ಆಗುತ್ತಿರುವ ಬಗ್ಗೆ ಕೆಕೆಆರ್‌ಟಿಸಿ ಅಧಿಕಾರಿಗಳು ನಗರಸಭೆಗೆ ದೂರು ನೀಡಿದ್ದರು. ಹೀಗಾಗಿ, ಕಾರ್ಯಾಚರಣೆ ನಡೆಸಿ, ಎಲ್ಲ ಅಂಗಡಿಗಳನ್ನು ತೆಗೆದು ಹಾಕಲಾಗಿದೆ. ಕೈಬಂಡಿಗಳನ್ನು ತೆರವು ಸಹ ಮಾಡಲಾಗಿದೆ ಎಂದು ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ತಿಳಿಸಿದರು.
ನಗರಸಭೆಗೆ ಸೇರಿರುವ ಜಾಗದಲ್ಲಿ ಸಂಚಾರಕ್ಕೆ ಅಡ್ಡಿಯಾಗದಂತೆ, ನಿರ್ದಿಷ್ಟ ಸ್ಥಳಕ್ಕೆ ಬಾಡಿಗೆ ನಿಗದಿ ಮಾಡಿ ಬಡ ವ್ಯಾಪಾರಸ್ಥರಿಗೆ ಅನುಕೂಲ ಆಗುವಂತೆ ವ್ಯವಸ್ಥೆ ಮಾಡಿಕೊಡುವ ಚಿಂತನೆ ಇದೆ. ಪೌರಾಯುಕ್ತರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ಮಾಡಲಾಗುವುದು ಎಂದರು.
ರಸ್ತೆಯ ಬದಿಯ ಕೆಲವು ವ್ಯಾಪಾರಸ್ಥರು ಆಗಾಗ ಗಲಾಟೆ ಮಾಡುತ್ತಿದ್ದರು. ಗಲಾಟೆ ಮಾಡದೆ, ಸಾರ್ವಜನಿಕರಿಗೆ ತೊಂದರೆ ಕೊಡದಂತೆ ಎಚ್ಚರಿಕೆ ನೀಡಲಾಗಿತ್ತು. ಇದಕ್ಕೆ ಕಿವಿಗೊಡದ ಕೆಲವರು ಮತ್ತೆ ಗಲಾಟೆ ಮಾಡಿಕೊಂಡು ಪೊಲೀಸ್ ಠಾಣೆಗೆ ಹೋಗಿದ್ದರು. ನಗರಸಭೆಗೆ ಹೋಗಿ ಇತ್ಯರ್ಥ ಮಾಡಿಕೊಳ್ಳುವಂತೆ ಪೊಲೀಸರು ಕಳುಹಿಸಿದ್ದರು. ಮುಂದೆ ಇಂತಹ ಗಲಾಟೆ ಆಗದೆ ಇರಲಿ ಎಂದು ಎಲ್ಲ ಮಳಿಗೆ, ಕೈಬಂಡಿಗಳನ್ನು ತೆರವು ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ವಿಜಯಪುರದಿಂದ ಬಂದು ಬಾಡಿಗೆ ವಸೂಲಿ: ಬಸ್ ನಿಲ್ದಾಣದ ಸಮೀಪದ ನಗರಸಭೆಗೆ ಸೇರಿದ ಸ್ಥಳದಲ್ಲಿ ವ್ಯಾಪಾರಿಯೊಬ್ಬರು ಡಬ್ಬಿಯ ಚಹಾದ ಅಂಗಡಿ ಇರಿಸಿಕೊಂಡಿದ್ದರು. ಆ ಜಾಗ ತನಗೆ ಸೇರಿದ್ದು ಎಂದು ವಿಜಯಪುರದ ವಕೀಲರೊಬ್ಬರು ಪ್ರತಿ ತಿಂಗಳು ಬಂದು, ಆತನಿಂದ ಬಾಡಿಗೆ ಪಡೆದುಕೊಂಡು ಹೋಗುತ್ತಿದ್ದರು ಎಂದು ಹೇಳಿದರು.
₹ 3 ಸಾವಿರ ಬಾಡಿಗೆಯನ್ನು ₹ 4 ಸಾವಿರಕ್ಕೆ ಏರಿಕೆ ಮಾಡಿದಾಗ ವ್ಯಾಪಾರಿಯು ಆಕ್ಷೇಪ ಮಾಡಿದ್ದರು. ಹೆಚ್ಚಿನ ಬಾಡಿಗೆ ಕೊಡುವಂತೆ ವಕೀಲರು ದುಂಬಾಲು ಬಿದ್ದಾಗ ನಗರಸಭೆಗೆ ಗಮನಕ್ಕೆ ಬಂದಿದೆ. ಬಾಡಿಗೆ ವಸೂಲಿ ಮಾಡಿರುವ ವಕೀಲನ ಪತ್ತೆ ಮಾಡಲಾಗುವುದು ಎಂದರು.
ಬಸ್ ನಿಲ್ದಾಣ ಮುಂಭಾಗದಲ್ಲಿ ಸ್ವಚ್ಛತೆ ಕಾಪಾಡಿ ಸಂಚಾರ ಹಾಗೂ ಸಾರ್ವಜನಿಕರಿಗೂ ಅಡ್ಡಿಯಾಗದಂತೆ ವ್ಯಾಪಾರ ಮಾಡಿಕೊಂಡು ಹೋಗುವರಿಗೆ ಬಾಡಿಗೆ ಕೊಡುವ ಚಿಂತನೆ ಇದೆಲಲಿತಾ ಅನಪುರ ಯಾದಗಿರಿ ನಗರಸಭೆ ಅಧ್ಯಕ್ಷೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.