ADVERTISEMENT

ಕಳೆಗಟ್ಟಿದ ಕ್ರಿಸ್‌ಮಸ್‌ ಸಂಭ್ರಮ

ಚರ್ಚ್‌ಗಳಿಗೆ ಬಣ್ಣ ಬಣ್ಣದ ವಿದ್ಯುತ್‌ ದೀಪಗಳ ಅಲಂಕಾರ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2025, 6:00 IST
Last Updated 24 ಡಿಸೆಂಬರ್ 2025, 6:00 IST
ಕ್ರಿಸ್‌ಮಸ್‌ ಅಂಗವಾಗಿ ಯಾದಗಿರಿಯ ಮೆಥೋಡಿಸ್ಟ್ ಸೆಂಟರ್ ಚರ್ಚ್‌ ಮಂಗಳವಾರ ಆಕರ್ಷಕ ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸಿತು 
ಕ್ರಿಸ್‌ಮಸ್‌ ಅಂಗವಾಗಿ ಯಾದಗಿರಿಯ ಮೆಥೋಡಿಸ್ಟ್ ಸೆಂಟರ್ ಚರ್ಚ್‌ ಮಂಗಳವಾರ ಆಕರ್ಷಕ ವಿದ್ಯುತ್‌ ದೀಪಾಲಂಕಾರದಿಂದ ಕಂಗೊಳಿಸಿತು    

ಯಾದಗಿರಿ: ಜಿಲ್ಲೆಯಾದ್ಯಂತ ಕ್ರಿಶ್ಚಿಯನ್ ಶಾಲಾ–ಕಾಲೇಜು, ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಹಬ್ಬದ ಸಂಭ್ರಮ ಮನೆ ಮಾಡಿದೆ. ಹಬ್ಬಕ್ಕೆ ಬೇಕಾದ ಸಿದ್ಧತೆಗಳು ಭರದಿಂದ ಸಾಗುತ್ತಿದ್ದು, ಮಕ್ಕಳು, ಯುವಕರು ಹಿರಿಯರೊಂದಿಗೆ ಬೆರತು ಹಬ್ಬದ ಸ್ವಾಗತಕ್ಕೆ ಸಜ್ಜಾಗುತ್ತಿದ್ದಾರೆ.

ನಗರದ ಕೇಂದ್ರ ಮೆಥೋಡಿಸ್ಟ್ ದೇವಾಲಯ, ತಾತಾ ಸಿಮೆಂಡ್ಸ್ ಮೆಮೋರಿಯಲ್ ಚರ್ಚ್, ಅಂಬೇಡ್ಕರ್ ನಗರದ ಮೆಥೊಡಿಸ್ಟ್ ಚರ್ಚ್ ಸೇರಿದಂತೆ ಹಲವು ಚರ್ಚ್‌ಗಳಲ್ಲಿ ಕ್ರಿಸ್‌ಮಸ್ ಸಡಗರ ಮನೆ ಮಾಡಿದೆ.  

ಚರ್ಚ್‌ ಆವರಣದಲ್ಲಿ ಯೇಸು ಕ್ರಿಸ್ತರ ಜನನ ವೃತ್ತಾಂತ ತಿಳಿಸುವ ಬೊಂಬೆಗಳು ಹಾಗೂ ವಸ್ತು ಪ್ರದರ್ಶನ ಗಮನ ಸೆಳೆಯುವಂತೆ ನಿರ್ಮಿಸಲಾಗಿದೆ.  ಏಸುಸ್ವಾಮಿ, ಮರಿಯ ಮಾತೆ, ಜೋಸೆಫ್ ಮತ್ತು ಅವರ ಹಿಂದೆಯೇ ದೇವದೂತರು, ಮೂವರು ಜೋಯಿಸರು ಏಸುಸ್ವಾಮಿಯನ್ನು ನೋಡಲು ಬಂದ ರೀತಿಯಲ್ಲಿ ಗೋದಲಿ ನಿರ್ಮಾಣ ಮಾಡಲಾಗಿದೆ. 

ADVERTISEMENT

ಮನೆ ಸೇರಿದಂತೆ ಚರ್ಚ್‌ಗಳನ್ನು ಬಣ್ಣ ಬಣ್ಣದ ವಿದ್ಯುತ್‌ ದೀಪಗಳು, ಗಂಟೆಗಳು, ನಕ್ಷತ್ರ, ಕ್ರಿಸ್‌ಮಸ್‌ ವೃಕ್ಷದಿಂದ ಅಲಂಕರಿಸಲಾಗಿದೆ. ಮನೆ ಮುಂದೆ ಕ್ರಿಸ್‌ಮಸ್‌ ಟ್ರೀ ಸಹ ನಿರ್ಮಿಸಲಾಗಿದೆ.

ಕ್ರಿಶ್ಚಿಯನ್‌ ಸಮುದಾಯವದರು ಸಾಂತ ಕ್ಲಾಸ್‌ ವೇಶದಲ್ಲಿ ಸಂಜೆ ಮನೆ ಮನೆಗಳಿಗೆ ಭೇಟಿ ನೀಡಿ ಯೇಸು ಪ್ರಭುವಿನ ಬಾಲ್ಯದ ಹಾಡುಗಳನ್ನು ಹಾಡಿ, ವಾದ್ಯಗಳನ್ನು ಬಾರಿಸಿ ಕುಣಿದು ಸಂಭ್ರಮಿಸುತ್ತಿರುವ ದೃಶ್ಯ ಕಂಡುಬಂದವು. ಕರೋಲ್‌ ಗಾಯನವು ಮುಕ್ತಾಯವಾಗಿದೆ.

‘ಕ್ರಿಸ್‍ಮಸ್ ಪ್ರಯುಕ್ತ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಯುವಕ– ಯುವತಿಯರು, ಮಹಿಳೆಯರು, ಮಕ್ಕಳಿಗೆ ಏಸು ಕುರಿತ ಹಾಡು, ನಾಟಕ, ಬೈಬಲ್ ಕುರಿತ ರಸಪ್ರಶ್ನೆಯಂತಹ ಸ್ಪರ್ಧೆಗಳನ್ನು ನಡೆಸಲಾಗುತ್ತದೆ. ವಿಜೇತರಿಗೆ ಹಬ್ಬದ ದಿನ ಬಹುಮಾನ ವಿತರಿಸಲಾಗುವುದು’ ಎಂದು ಮೆಥೋಡಿಸ್ಟ್ ಚರ್ಚ್ ಜಿಲ್ಲಾ ಮೇಲ್ವಿಚಾರಕ ಎಸ್ ನಂದಕೂರ್ ತಿಳಿಸಿದರು. 

ಬಗೆಬಗೆಯ ಕೇಕ್‌ಗಳ ತಯಾರಿ: ಬೇಕರಿಗಳಲ್ಲಿ ನಾನಾ ಬಗೆಯ ಕೇಕ್‌ಗಳ ತಯಾರಿ ಜೋರಾಗಿ ನಡೆಯುತ್ತಿದೆ. ಕ್ರಿಸ್‌ಮಸ್‌ ಸ್ಪೆಷಲ್ ಕೇಕ್, ಫ್ರೂಟ್‌ ಕೇಕ್, ಚಾಕೊಲೇಟ್‌ ಕೇಕ್, ಪ್ಲಮ್‌ ಕೇಕ್, ಮಿಕ್ಸ್ ಕೇಕ್, ಸಲಾಡ್ ಕೇಕ್ ಸೇರಿ ವಿವಿಧ ಮಾದರಿಯ ಕೇಕ್‍ಗಳನ್ನು ಸಿದ್ಧಪಡಿಸಲಾಗುತ್ತಿದೆ. ಹಬ್ಬದ ಪ್ರಯುಕ್ತ ಸಮುದಾಯದವರು ತಮ್ಮ ಸ್ನೇಹಿತರು, ಆಪ್ತರು, ಕುಟುಂಬಸ್ಥರಿಗೆ ಕೇಕ್‌ಗಳನ್ನು ಹಂಚುತ್ತಿದ್ದಾರೆ.

ಕ್ರಿಸ್‌ಮಸ್ ಅಂಗವಾಗಿ ಯಾದಗಿರಿಯ ತಾತಾ ಸಿಮೆಂಡ್ಸ್ ಮೆಮೋರಿಯಲ್ ಚರ್ಚ್ ಮಂಗಳವಾರ ಬಣ್ಣ– ಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಯಿತು  ಪ್ರಜಾವಾಣಿ ಚಿತ್ರ: ರಾಜಕುಮಾರ ನಳ್ಳಿಕರ 

‘ಸಾಮೂಹಿಕ ಪ್ರಾರ್ಥನೆ’

‘ಡಿಸೆಂಬರ್ 25ರಂದು ಕ್ರಿಸ್‌ಮಸ್‌ ಹಬ್ಬದ ದಿನ ನಗರದ ಎಲ್ಲ ಚರ್ಚ್‌ಗಳಲ್ಲಿ ಬೆಳಿಗ್ಗೆಯಿಂದಲೇ ಪ್ರಾರ್ಥನೆ ನೆರವೇರಲಿದೆ. ಇದಕ್ಕೆ ಬೇಕಾದ ಎಲ್ಲ ರೀತಿಯ ತಯಾರಿಯೂ ನಡೆದಿದೆ. ಸಾಮೂಹಿಕ ಪ್ರಾರ್ಥನೆಯಲ್ಲಿ ಮಕ್ಕಳು ಮಹಿಳೆಯರು ಹಿರಿಯರು ಸೇರಿದಂತೆ ಎಲ್ಲರು ಭಾಗವಹಿಸುವರು ಎಂದು ತಾತಾ ಸಿಮೆಂಡ್ಸ್ ಮೆಮೋರಿಯಲ್ ಚರ್ಚ್‌ನ ರೆ. ಅರುಣಕುಮಾರ ತಿಳಿಸಿದರು. ‘ಕ್ರಿಸ್‌ಮಸ್ ಆರಾಧನೆ ಸಭೆಗೆ ವ್ಯಾಖ್ಯ ಸಂದೇಶ ಆಶೀರ್ವಚನ ನೆರವೇರಿ ಮಧ್ಯಾಹ್ನ 12ರ ವೇಳೆ ಪ್ರಾರ್ಥನಾ ಕಾರ್ಯಕ್ರಮಗಳು ಮುಕ್ತಾಯವಾಗಲಿವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.