ADVERTISEMENT

ಯಾದಗಿರಿ: ಸತತ ಮಳೆಗೆ ಜನಜೀವನ ಅಸ್ತವ್ಯಸ್ತ

ಗುರುಮಠಕಲ್ ತಾಲ್ಲೂಕಿನ ಚಪೆಟ್ಲಾದಲ್ಲಿ ಅತ್ಯಧಿಕ 37 ಮಿ.ಮೀಟರ್ ಮಳೆ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2025, 6:29 IST
Last Updated 12 ಸೆಪ್ಟೆಂಬರ್ 2025, 6:29 IST
ಯಾದಗಿರಿ ನಗರದಲ್ಲಿ ಗುರುವಾರ ಸುರಿದ ಮಳೆಯಲ್ಲಿ ಸೀತಾಫಲ ಹಣ್ಣುಗಳ ಬುಟ್ಟಿ ಹೊತ್ತು ಸಾಗಿದ ಮಹಿಳೆಯರು
ಯಾದಗಿರಿ ನಗರದಲ್ಲಿ ಗುರುವಾರ ಸುರಿದ ಮಳೆಯಲ್ಲಿ ಸೀತಾಫಲ ಹಣ್ಣುಗಳ ಬುಟ್ಟಿ ಹೊತ್ತು ಸಾಗಿದ ಮಹಿಳೆಯರು   

ಯಾದಗಿರಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ತಡ ರಾತ್ರಿಯಿಂದ ಗುರುವಾರ ಮಧ್ಯಾಹ್ನನದ ವರೆಗೂ ಜೋರು ಮಳೆಯಾಗಿದೆ. ಸತತ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡು, ಕೃಷಿ ಚಟುವಟಿಕೆಗಳು ಸ್ಥಗಿತಗೊಂಡವು.

ಕೆಲ ವಾರ ಬಿಡುವುಕೊಟ್ಟಿದ್ದ ಮಳೆ ಮತ್ತೆ ಶುರುವಾಗಿದೆ. ಗುರವಾರ ದಿನವಿಡೀ ದಟ್ಟವಾದ ಮೋಡ ಕವಿದ ವಾತಾವರಣ, ಮಧ್ಯಾಹ್ನದ ಬಳಿಕ ಆಗಾಗ ಜಿಟಿಜಿಟಿ ಮಳೆ ಬಿತ್ತು. ರೈತರು ಕೃಷಿ ಕಾರ್ಯಗಳಿಗೆ ಹೋಗಲು ತೊಂದರೆಯಾಯಿತು. ವಿದ್ಯಾರ್ಥಿಗಳು, ಉದ್ಯೋಗಿಗಳಿಗೂ ಮಳೆ ಕಾಡಿದ್ದು, ನೆನೆದುಕೊಂಡೆ ತೆರಳಿದರು.

ವ್ಯಾಪಾರ ಚಟುವಟಿಕೆಗಳಿಂದ ಸದಾ ಗಿಜುಗುಡುತ್ತಿದ್ದ ಗಾಂಧಿ ಚೌಕ್, ಗಂಜ್ ಪ‍್ರದೇಶ, ಮೈಲಾಪುರ ಅಗಸಿ ರಸ್ತೆ, ಮಾರುಕಟ್ಟೆ ಪ್ರದೇಶದಲ್ಲಿ ವಿರಳ ಜನರು ಕಂಡು ಬಂದರು. ಗ್ರಾಮೀಣ ಭಾಗದವರು ನಗರದತ್ತ ಮುಖ ಮಾಡಲಿಲ್ಲ. ನಗರವಾಸಿಗಳು ಮನೆಯಿಂದಲೂ ಹೊರಬಾರದೆ ತಮ್ಮ ನಿತ್ಯದ ಕೆಲಸಗಳನ್ನು ಒಂದು ದಿನದ ಮಟ್ಟಿಗೆ ಮುಂದೂಡಿದ್ದರು.

ADVERTISEMENT

ಅಂಗಡಿ–ಮುಂಗಟ್ಟುಗಳಲ್ಲಿ ಮಧ್ಯಾಹ್ನದವರೆಗೆ ವ್ಯಾಪಾರ ಕಡಿಮೆ ಇತ್ತು. ಸುರಿಯುವ ಮಳೆಯಲ್ಲಿ ಕೈಬಂಡಿಯ ವರ್ತಕರು ವ್ಯಾಪಾರಕ್ಕಾಗಿ ಅಲೆದಾಡುತ್ತಿದ್ದರು. ಪೋಷಕರು ತಮ್ಮ ಮಕ್ಕಳಿಗೆ ರೇನ್‌ಕೋಟ್ ಹಾಕಿಸಿ, ಕೆಲವರು ಕೊಡೆ ಹಿಡಿದು ಬೈಕ್‌ಗಳ ಮೇಲೆ ಶಾಲೆಗೆ ಕರೆದೊಯ್ದರು. ಮತ್ತೆ ಕೆಲವು ಮಕ್ಕಳು ತಾವೇ ಕೊಡೆಗಳನ್ನು ಹಿಡಿದು ರಸ್ತೆಯ ಗುಂಡಿಗಳನ್ನು ಜಿಗಿದು ದಾಟುತ್ತಾ ಶಾಲೆಯತ್ತ ಹೆಜ್ಜೆಹಾಕಿದರು.

ನಗರದ ಹತ್ತಿಕುಣಿ ರಸ್ತೆ, ಲುಂಬಿನಿ ಉದ್ಯಾನ ರಸ್ತೆ, ಗಾಂಧಿ ಚೌಕ್, ಹೊಸಳ್ಳಿ ರಸ್ತೆ, ಮೈಲಾಪುರ ಅಗಸಿ– ಗಂಜ್ ನಡುವಿನ ರಸ್ತೆ ಸೇರಿದಂತೆ ಹಲವೆಡೆಯ ರಸ್ತೆಯ ಗುಂಡಿಗಳಲ್ಲಿ ಮಳೆ ನೀರು ನಿಂತಿತು. ಇದರಿಂದ ವಾಹನಗಳ ಸವಾರರು ಪರದಾಡಿದರು. ಹಲವೆಡೆ ಚರಂಡಿಗಳ ನೀರು ರಸ್ತೆಯ ಮೇಲೆ ಹರಿದಾಡಿತು.

ನಗರ ಸಮೀಪದ ದೊಡ್ಡ ಹಳ್ಳ ಎರಡೂ ದಡಗಳನ್ನು ಸೋಸಿ ಹರಿಯಿತು. ಯುವಕರು ಹಳ್ಳದಲ್ಲಿ ಮೀನುಗಳನ್ನು ಹಿಡಿಯಲು ಬಲೆ, ಕೆಲವರು ಗಾಳ ಹಾಕಿ ಕಾದು ಕುಳಿತಿದ್ದರು.

ಗುರುವಾರ ಬೆಳಿಗ್ಗೆಯಿಂದ ಸಂಜೆಯವರೆಗೆ ಗುರುಮಠಕಲ್ ತಾಲ್ಲೂಕಿನ ಚಪೆಟ್ಲಾದಲ್ಲಿ ಅತ್ಯಧಿಕ 37 ಮಿ.ಮೀಟರ್ ಮಳೆಯಾಗಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.

ಗಾಜರಕೋಟ್ ಗ್ರಾಮದಲ್ಲಿ 21.5 ಮಿ.ಮೀ., ವರ್ಕನಳ್ಳಿಯಲ್ಲಿ 17.5, ಯರಗೋಳದಲ್ಲಿ 16.5, ಹೊನಗೇರಾದಲ್ಲಿ 14.5, ಅರಕೇರಾ (ಕೆ) ಗ್ರಾಮದಲ್ಲಿ 11, ಮಾದವಾರ ಮತ್ತು ಮಲ್ಲಾರ ಗ್ರಾಮಗಳಲ್ಲಿ ತಲಾ 6.5, ಚಂಡ್ರಿಕಿಯಲ್ಲಿ 9, ಅಲ್ಲಿಪುರದಲ್ಲಿ 4.5 ಮಿ.ಮೀ.ನಷ್ಟು ಮಳೆಯಾಗಿದೆ. ಶಹಾಪುರ, ವಡಗೇರಾ, ಸುರಪುರ, ಕೆಂಭಾವಿ ಸೇರಿದಂತೆ ಹಲವೆಡೆಯೂ ಮಳೆ ಬಿದ್ದಿದೆ ಎಂದಿದ್ದಾರೆ.

ಮುಂದಿನ ಎರಡ್ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ಸಾಧಾರಣ ಮಳೆಯಾಗುವ ಸಂಭವವಿದೆ ಎಂದು ಮುನ್ಸೂಚನೆಯಲ್ಲಿ ಹೇಳಿದ್ದಾರೆ.

ಯಾದಗಿರಿ ನಗರದಲ್ಲಿ ಗುರುವಾರ ಸುರಿದ ಮಳೆಯಲ್ಲಿ ಶಾಲೆಗೆ ತೆರಳಿದ ಮಕ್ಕಳು
ಯಾದಗಿರಿ ನಗರದಲ್ಲಿ ಗುರುವಾರ ಸುರಿದ ಮಳೆಯಲ್ಲಿ ಬಂಡಿಗಳನ್ನು ತಳ್ಳುತ್ತಾ ಸಾಗಿದ ಮೆಕ್ಕೆಜೋಳ ವ್ಯಾಪಾರಿಗಳು

‘ಮಳೆ ನೀರು ನಿಲ್ಲದಂತೆ ಎಚ್ಚರ ವಹಿಸಿ’

‘ಸತತ ಮಳೆಯಿಂದಾಗಿ ನೀರು ಜಮೀನಿನ ತಗ್ಗು ಪ್ರದೇಶದಲ್ಲಿ ನಿಲ್ಲದಂತೆ ಎಚ್ಚರವಹಿಸಬೇಕು. ತೇವಾಂಶ ಹೆಚ್ಚಳದಿಂದ ಹತ್ತಿ ತೊಗರಿ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆ ಇರುತ್ತದೆ’ ಎಂದು  ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸೂಗುರ ತಿಳಿಸಿದರು.  ‘ಬೆಳೆಹಾನಿಯ ಸಮೀಕ್ಷೆಯು ಶೇ 80ರಷ್ಟು ಪೂರ್ಣಗೊಂಡಿದೆ. ಶೇ 20ರಷ್ಟು ಮಾತ್ರವೇ ಉಳಿದಿದೆ. ಮತ್ತೆ ಶುರುವಾದ ಮಳೆಯಿಂದಾಗಿ ಸಮೀಕ್ಷೆಗೆ ಸ್ವಲ್ಪ ಹಿನ್ನಡೆಯಾಗಿದೆ. ಹಾನಿಯಾದ ಜಮೀನಿಗೆ ಇಳಿದು ಜಿಪಿಎಸ್‌ ಫೋಟೊಗಳನ್ನು ತೆಗೆಯಬೇಕಿದೆ. ಕೆಸರಿನಿಂದಾಗಿ ಸಮೀಕ್ಷೆ ಮಾಡುವವರು ಜಮೀನಿಗೆ ಇಳಿಯಲು ಹಿಂಜರಿಯುತ್ತಾರೆ. ಮಳೆ ಬಿಡುವು ಕೊಟ್ಟ ಬಳಿಕ ಸಮೀಕ್ಷೆ ಕಾರ್ಯ ಮುಂದುವರಿಯಲಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.