ADVERTISEMENT

ಯಾದಗಿರಿ: ಬೆಳೆಹಾನಿ ಸಮೀಕ್ಷೆ ಕಾರ್ಯ ಚುರುಕು

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2025, 5:08 IST
Last Updated 22 ಆಗಸ್ಟ್ 2025, 5:08 IST
ಯಾದಗಿರಿ ತಾಲ್ಲೂಕಿನ ಗ್ರಾಮವೊಂದರ ಜಮೀನಿನಲ್ಲಿ ಹೆಸರು ಬೆಳೆ ಹಾನಿಯನ್ನು ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸೂಗುರ ಅವರು ಪರಿಶೀಲಿಸಿದರು     
ಯಾದಗಿರಿ ತಾಲ್ಲೂಕಿನ ಗ್ರಾಮವೊಂದರ ಜಮೀನಿನಲ್ಲಿ ಹೆಸರು ಬೆಳೆ ಹಾನಿಯನ್ನು ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸೂಗುರ ಅವರು ಪರಿಶೀಲಿಸಿದರು        

ಯಾದಗಿರಿ: ಜಿಲ್ಲೆಯಾದ್ಯಂತ ಆರೇಳು ದಿನಗಳವರೆಗೆ ನಿರಂತರವಾಗಿ ಮಳೆ ಸುರಿದ ಪರಿಣಾಮ ರೈತರ ಜಮೀನಿನಲ್ಲಿ ಬೆಳೆದ ಬೆಳೆ ಹಾನಿಯ ಕುರಿತು ಕೃಷಿ, ತೋಟಗಾರಿಕೆ ಹಾಗೂ ಕಂದಾಯ ಇಲಾಖೆಗಳಿಂದ ಜಂಟಿ ಸಮೀಕ್ಷೆ ನಡೆಸಲಾಗುತ್ತಿದೆ.

ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ 3.90 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಈಚೆಗೆ ಬಿದ್ದ ಮಳೆಯಿಂದಾಗಿ ಪ್ರಾಥಮಿಕ ಮಾಹಿತಿ ಪ್ರಕಾರ 26 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳಿಗೆ ಹಾನಿಯಾಗಿರುವ ಸಾಧ್ಯತೆ ಇದೆ ಎನ್ನುತ್ತಾರೆ ಕೃಷಿ ಅಧಿಕಾರಿಗಳು.

ಆಗಸ್ಟ್ 2ನೇ ವಾರದಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಬಿತ್ತು. ಇದರಿಂದಾಗಿ ತೊಗರಿ, ಹೆಸರು, ಉದ್ದು, ಹತ್ತಿ ಬೆಳೆಗಳಿಗೆ ಹಾನಿಯಾಗಿದೆ. ಸತತ ಮಳೆಯಿಂದಾಗಿ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗಿವೆ. ಕಳೆ ಸಹ ಎತ್ತರವಾಗಿ ಬೆಳೆದಿದೆ.

ADVERTISEMENT

ಹಳ್ಳಗಳು, ಕೋಡಿ ಬಿದ್ದ ಕೆರೆಗಳ ನೀರು ಸೇರಿದಂತೆ ಅತಿವೃಷ್ಟಿಯಿಂದ ಹೊಲಗಳಲ್ಲಿನ ಬೆಳೆಗಳು ಕೊಚ್ಚಿ ಹೋಗಿದ್ದನ್ನು ಮೂರು ಇಲಾಖೆಗಳ ಅಧಿಕಾರಿಗಳು ಸಮೀಕ್ಷೆ ಮಾಡುತ್ತಿದ್ದಾರೆ. ನಿರಂತರ ಮಳೆಯಿಂದಾಗಿ ಹಳ್ಳದ ಬದಿಯ ಹೊಲಗಳಲ್ಲಿನ ಹತ್ತಿ, ತೊಗರಿ ಬೆಳೆಗಳು ಸಹ ಕೊಚ್ಚಿ ಹೋಗಿವೆ. ಹೊಲಗಳಲ್ಲಿ ನೀರು ನಿಂತಿದ್ದರಿಂದ ಬೆಳೆಗಳು ಹಳದಿ ಬಣ್ಣಕ್ಕೆ ತಿರುಗಿ, ಬೆಳವಣಿಗೆ ಕುಂಠಿತವಾಗುವ ಆತಂಕವಿದೆ. ತಗ್ಗಿರುವ ಪ್ರದೇಶಗಳಲ್ಲಿನ ಬೆಳೆಗಳು ಸಂಪೂರ್ಣವಾಗಿ ನೆಲಕಚ್ಚಿವೆ ಎನ್ನುತ್ತಾರೆ ರೈತರು.

ಜಿಪಿಎಸ್‌ ಫೋಟೊ ಕಡ್ಡಾಯ: ತೋಟಗಾರಿಕೆ, ಕಂದಾಯ ಮತ್ತು ಕೃಷಿ ಇಲಾಖೆಯ ಅಧಿಕಾರಿಗಳು ಜಂಟಿ ಸಮೀಕ್ಷೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕಂದಾಯ ಅಧಿಕಾರಿ, ಗ್ರಾಮ ಆಡಳಿತ ಅಧಿಕಾರಿಯೊಂದಿಗೆ ತೋಟಗಾರಿಕೆ, ಕೃಷಿ ಸಿಬ್ಬಂದಿ ಹಾನಿಯಾದ ಜಮೀನುಗಳಿಗೆ ಭೇಟಿ ಕೊಡುತ್ತಿದ್ದಾರೆ. ಹಾನಿಯಾದ ಬೆಳೆಯ ಜಿಪಿಎಸ್‌ ಸಹಿತ ಫೋಟೊಗಳನ್ನು ತೆಗೆದು ಅಪ್‌ಲೋಡ್ ಮಾಡುವಂತೆ ಸೂಚಿಸಲಾಗಿದೆ. ಜಮೀನಿನ ಜಿಪಿಎಸ್ ಫೋಟೊ ಕಡ್ಡಾಯ ಮಾಡಲಾಗಿದೆ’ ಎಂದು ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸೂಗುರ ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೇಂದ್ರ ಸರ್ಕಾರದ ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಅನ್ವಯ ಮಳೆ ಆಶ್ರಿತ ಬೆಳೆಗಳಿಗೆ ಒಂದು ಹೆಕ್ಟೇರ್‌ಗೆ ₹ 8,500, ನೀರಾವರಿ ಬೆಳೆಗಳಿಗೆ ಒಂದು ಹೆಕ್ಟೇರ್‌ಗೆ ₹ 17 ಸಾವಿರ ಹಾಗೂ ಮಾವು, ಹುಣಸೆಹಣ್ಣು, ಪೇರಲ ಹಣ್ಣಿನಂತಹ ಬಹು ವಾರ್ಷಿಕ ಬೆಳೆಗಳಿಗೆ ಒಂದು ಹೆಕ್ಟೇರ್‌ಗೆ ₹ 22,500ರಂತೆ ಬೆಳೆ ಹಾನಿ ಪ್ರಮಾಣಕ್ಕೆ ಅನುಸಾರವಾಗಿ ಪರಹಾರ ಧನ ನೀಡಲಾಗುತ್ತದೆ’ ಎಂದು ಮಾಹಿತಿ ನೀಡಿದರು.

ಯಾದಗಿರಿ ತಾಲ್ಲೂಕಿನ ಗ್ರಾಮವೊಂದರ ಜಮೀನಿಗೆ ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸೂಗುರ ಭೇಟಿ ನೀಡಿದರು     
ಮಲ್ಲನಗೌಡ ಹಗರಟಗಿ
10 ದಿನಗಳಲ್ಲಿ ಬೆಳೆ ಹಾನಿಯ ಸಮೀಕ್ಷೆಯನ್ನು ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಸಮೀಕ್ಷೆ ಮುಗಿದ ಬಳಿಕ ಹಾನಿಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು‌
ರತೇಂದ್ರನಾಥ ಸೂಗುರ ಜಂಟಿ ಕೃಷಿ ನಿರ್ದೇಶಕ 
ಬೆಳೆಹಾನಿ :
 ₹ 50 ಸಾವಿರ ಪರಿಹಾರ ನೀಡಿ’ ‘ಸತತ ಮಳೆಯಿಂದ ಹತ್ತಿ ತೊಗರಿ ಹೆಸರು ಬೆಳೆಗಳಿಗೆ ಹಾನಿಯಾಗಿದೆ. ಸಮರ್ಪಕವಾಗಿ ಸಮೀಕ್ಷೆ ನಡೆಸಿ ಪ್ರತಿ ಎಕರೆಗೆ ₹ 50 ಸಾವಿರ ಪರಿಹಾರ ನೀಡಬೇಕು’ ಎಂದು ರಾಜ್ಯ ರೈತ ಸಂಘ ಹಸಿರು ಸೇನೆ (ವಾಸುದೇವ ಮೇಟಿ ಬಣ) ಜಿಲ್ಲಾ ಅಧ್ಯಕ್ಷ ಮಲ್ಲನಗೌಡ ಹಗರಟಗಿ ಮನವಿ ಮಾಡಿದ್ದಾರೆ. ಈಗಾಗಲೇ ಹಲವು ಬೆಳೆಗಳನ್ನು ಕಳೆದುಕೊಂಡ ರೈತರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸಾಲ ಮಾಡಿ ಬೆಳೆಗಳನ್ನು ಬೆಳೆದಿದ್ದರು. ಉತ್ತಮ ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ನಿರಾಸೆಯಾಗಿದೆ. ಅಧಿಕಾರಿಗಳು ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ ಸರಿಯಾಗಿ ಪರಿಶೀಲನೆ ನಡೆಸಬೇಕು. ರೈತರಿಗೆ ಸಮರ್ಪಕ ಬೆಳೆ ಹಾನಿ ಪರಿಹಾರ ಕೊಡಬೇಕು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.