ADVERTISEMENT

ಯಾದಗಿರಿ | ಹೆಣ್ಣು ಭ್ರೂಣ ಹತ್ಯೆ ತಡೆಗೆ ವಿಶೇಷ ಗಮನ: ಡಿಸಿ ಹರ್ಷಲ್ ಭೋಯರ್

​ಪ್ರಜಾವಾಣಿ ವಾರ್ತೆ
Published 22 ಜನವರಿ 2026, 5:30 IST
Last Updated 22 ಜನವರಿ 2026, 5:30 IST
ಯಾದಗಿರಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಮಾತನಾಡಿದರು. ಗಣ್ಯರು ಉಪಸ್ಥಿತರಿದ್ದರು
ಯಾದಗಿರಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಮಾತನಾಡಿದರು. ಗಣ್ಯರು ಉಪಸ್ಥಿತರಿದ್ದರು   

ಯಾದಗಿರಿ: ‘ಗರ್ಭಪೂರ್ವ ಮತ್ತು ಪ್ರಸವಪೂರ್ವ ಭ್ರೂಣಲಿಂಗ ಪತ್ತೆ ಸಾಮಾಜಿಕ ಪಿಡುಗಾಗಿದ್ದು, ಅದರ ನಿರ್ಮೂಲನೆಗೆ ಜಾರಿಯಲ್ಲಿರುವ ಕಾಯ್ದೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವತ್ತ ವಿಶೇಷ ಗಮನ ಹರಿಸಿ ಹೆಣ್ಣು ಭ್ರೂಣ ಹತ್ಯೆ ತಡೆಯಬೇಕು’ ಎಂದು ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಹೇಳಿದರು.

ಇಲ್ಲಿನ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಸಭಾಂಗಣದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ ಮಿಷನ್ ಶಕ್ತಿ ಯೋಜನೆಯಡಿ ‘ಬೇಟಿ ಬಚಾವೋ ಬೇಟಿ ಪಡಾವೋ’, ಸ್ಕ್ಯಾನಿಂಗ್ ಕೇಂದ್ರಗಳ ವೈದ್ಯರು ಹಾಗೂ ಸ್ತೀರೋಗ ತಜ್ಞರಿಗೆ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

‘ಭ್ರೂಣ ಲಿಂಗ ಪತ್ತೆ ಹಾಗೂ ಹೆಣ್ಣು ಭ್ರೂಣ ಹತ್ಯೆಯೇ ಲಿಂಗಾನುಪಾತದ ಅಸಮತೋಲನಕ್ಕೆ ಪ್ರಮುಖ ಕಾರಣವಾಗಿದೆ. ಭ್ರೂಣಲಿಂಗ ಪತ್ತೆ ತಂತ್ರ, ವಿಧಾನಗಳ ನಿಷೇಧಕ್ಕಾಗಿ ಪಿಸಿ ಮತ್ತು ಪಿಎನ್‌ಡಿಟಿ ಕಾಯ್ದೆ -1994 ಅನ್ನು ಜಾರಿಗೆ ತರಲಾಗಿದೆ. 2003ರಲ್ಲಿ ಈ ಕಾಯ್ದೆಯನ್ನು ಇನ್ನಷ್ಟು ಬಲಪಡಿಸಿ, ಭ್ರೂಣಲಿಂಗ ಪತ್ತೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಮೂಲಕ ಹೆಣ್ಣು ಮಕ್ಕಳ ಜನನ ಉತ್ತೇಜಿಸಿ, ಲಿಂಗಾನುಪಾತವನ್ನು ಸಮತೋಲನದಲ್ಲಿ ಇರಿಸಿ ಮಹಿಳೆಯರ ಗೌರವ ಮತ್ತು ಹಕ್ಕುಗಳನ್ನು ರಕ್ಷಿಸಲಾಗುತ್ತಿದೆ’ ಎಂದರು.

ADVERTISEMENT

‘ವೈದ್ಯಕೀಯ ತಂತ್ರಜ್ಞಾನ ದುರುಪಯೋಗದಿಂದ ಗರ್ಭಾವಸ್ಥೆಯಲ್ಲಿ ಲಿಂಗ ಪತ್ತೆ ಮಾಡಿ, ಹೆಣ್ಣು ಭ್ರೂಣವನ್ನು ನಾಶಪಡಿಸುವ ಪ್ರವೃತ್ತಿ ಹೆಚ್ಚಾಗಿದೆ. ಸಮಾಜದಲ್ಲಿ ಗಂಡು-ಹೆಣ್ಣು ಎಂಬ ಭೇದಭಾವ ಗಾಢವಾಗಿಸಿ, ಭವಿಷ್ಯದಲ್ಲಿ ಹಲವು ಸಾಮಾಜಿಕ ಸಮಸ್ಯೆಗಳಿಗೂ ಕಾರಣವಾಗುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದರು.

‘ಭ್ರೂಣ ಲಿಂಗ ಪತ್ತೆ ಕೇವಲ ಕಾನೂನಿನ ಅಪರಾಧವಲ್ಲ, ಅದು ಮಾನವೀಯ ಅಪರಾಧವಾಗಿದೆ. ಈ ಬಗ್ಗೆ ಸಮಾಜದಲ್ಲಿ ಮಾನಸಿಕ  ಬದಲಾವಣೆ ತರುವುದು ಅಗತ್ಯವಿದೆ. ವೈದ್ಯರು ಕಾನೂನಿನ ಮಿತಿಯೊಳಗೆ ಕಾರ್ಯನಿರ್ವಹಿಸಿ ಸಾಮಾಜಿಕ ನೈತಿಕ ಮಾದರಿಯಾಗಿ ಕೆಲಸ ಮಾಡಬೇಕು. ವೈದ್ಯಕೀಯ ಸೇವೆ ವ್ಯಾಪಾರವಲ್ಲ; ಅದು ಮಾನವ ಸೇವೆ ಎಂಬ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯೂ ಆಗಿರುವ ಹಿರಿಯ ಸಿವಿಲ್  ನ್ಯಾಯಾಧೀಶ ಮರಿಯಪ್ಪ ಮಾತನಾಡಿ, ‘ವೈದ್ಯರು ಸಮಾಜಕ್ಕೆ ಮಾದರಿಯಾಗಿ ಕಾರ್ಯ ನಿರ್ವಹಿಸಬೇಕು. ಹೆಣ್ಣು-ಗಂಡು ಎಂಬ ಭೇದ-ಭಾವ ದೂರ ಮಾಡುವ ನಿಟ್ಟಿನಲ್ಲಿ ಜನರ ಮನಸ್ಥಿತಿಯಲ್ಲಿ ಬದಲಾವಣೆ ತರಬೇಕಿದೆ’ ಎಂದು ಹೇಳಿದರು.‌

ಡಿಎಚ್‌ಒ ಡಾ.ಮಹೇಶ್ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿದರು. 

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಉಪನಿರ್ದೇಶಕ ತಿಪ್ಪಣ್ಣ ಶಿರಸಗಿ, ಸಂತಾನೋತ್ಪತ್ತಿ ಮತ್ತು ಮಕ್ಕಳ ಆರೋಗ್ಯ ಅಧಿಕಾರಿ ಡಾ. ಮಲ್ಲಪ್ಪ, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿಗಳಾದ ಡಾ. ಜ್ಯೋತಿ. ಡಿ.ಕೆ., ಭೀಮರಾಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಭೀಮರಾಯ, ಜಿಲ್ಲಾ ಮಿಷನ್ ಸಂಯೋಜಕ ಕೆ.ಯಲ್ಲಪ್ಪ ಸೇರಿ ಇತರರು ಉಪಸ್ಥಿತರಿದ್ದರು.

ಭ್ರೂಣ ಹತ್ಯೆ ಎಂಬ ಗಂಭೀರ ಸಮಸ್ಯೆಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಕಾನೂನು ಆಡಳಿತಧಿಕಾರಿಗಳು ವೈದ್ಯರು ಹಾಗೂ ಸಮಾಜವು ಒಂದಾಗಿ ಕೆಲಸ ಮಾಡಬೇಕಿದೆ
ಮರಿಯಪ್ಪ ಹಿರಿಯ ಸಿವಿಲ್  ನ್ಯಾಯಾಧೀಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.