ಕಕ್ಕೇರಾ: ವರದಕ್ಷಿಣೆಯ ಬಂಗಾರ ತರುವಂತ ಪೀಡಿಸಿ, ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ, ಕೊಲೆ ಮಾಡಿದ್ದಾರೆ ಎಂದು ಆರೋಪಿಸಿ ಮೃತ ಗೃಹಿಣಿಯ ತಂದೆ ಕೊಡೇಕಲ್ ಪೊಲೀಸ್ ಠಾಣೆಯಲ್ಲಿ ಮಂಗಳವಾರ ದೂರು ನೀಡಿದ್ದಾರೆ.
ಪಟ್ಟಣದ ಬೂದಗುಂಪೇರದೊಡ್ಡಿಯ ಗೃಹಿಣಿ ಅಯ್ಯಮ್ಮ ಅಂಬರೇಶ (21) ಕೊಲೆಯಾದವರು. ಆಕೆಯ ಗಂಡ ಅಂಬರೇಶ ನಿಂಗಪ್ಪನನ್ನು ಬಂಧಿಸಲಾಗಿದ್ದು, ಒಟ್ಟು ಐವರ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಯ್ಯಮ್ಮ ಅವರ ಮಾವ ನಿಂಗಪ್ಪ ಯಮನಪ್ಪ, ಅತ್ತೆ ನಿಂಗಮ್ಮ ನಿಂಗಪ್ಪ, ಸುನಂದಮ್ಮ ನಿಂಗಪ್ಪ ಹಾಗೂ ಸುನಂದಮ್ಮ ಪತಿ ನಿಂಗಪ್ಪ ದೇವಿಂದ್ರಪ್ಪ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಎರಡು ವರ್ಷಗಳ ಹಿಂದ ವೆಂಕಟಾಪುರದ ಬಸಪ್ಪ ಅವರ ಪುತ್ರಿ ಅಯ್ಯಮ್ಮ ಜೊತೆಗೆ ಬೂದಗುಂಪೇರದೊಡ್ಡಿಯ ಅಂಬರೇಶ ಅವರೊಂದಿಗೆ ವಿವಾಹ ಆಗಿತ್ತು. ಮದುವೆಯಲ್ಲಿ ವರನಿಗೆ 3 ತೊಲ ಬಂಗಾರ, ಸಾಮಗ್ರಿಗಳನ್ನು ಕೊಡಲಾಗಿತ್ತು. ಗಂಡನ ಮನೆಯವರು ಒಂದು ವರ್ಷ ಸೊಸೆಯನ್ನು ಚೆನ್ನಾಗಿ ನೋಡಿಕೊಂಡಿದ್ದು, ಬಳಿಕ ವರದಕ್ಷಿಣೆ ತರುವಂತೆ ಕಿರುಕುಳ ಕೊಡಲು ಆರಂಭಿಸಿದರು. ಮದುವೆಯಲ್ಲಿ ಕೇಳಿದಷ್ಟು ಬಂಗಾರ ಕೊಟ್ಟಿಲ್ಲ. ತವರು ಮನೆಯಿಂದ 2 ತೊಲ ಬಂಗಾರ ಹಾಗೂ ₹ 2 ಲಕ್ಷ ತರುವಂತೆ ಮಾನಸಿಕ ಹಾಗೂ ದೈಹಿಕವಾಗಿ ಕಿರುಕುಳಕೊಟ್ಟಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಕೇಳಿದಷ್ಟು ವರದಕ್ಷಿಣೆ ತರಲಿಲ್ಲ ಎಂದು ಸೋಮವಾರ ರಾತ್ರಿ ಅಯ್ಯಮ್ಮ ಅವರಿಗೆ ಹೊಡೆದು, ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಗಂಡ ಸೇರಿ ಐವರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಮೃತರ ಪೋಷಕರು ದೂರು ಕೊಟ್ಟಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಎಸ್‌ಪಿ ಪೃಥ್ವಿಕ್ ಶಂಕರ್, ಹೆಚ್ಚುವರಿ ಎಸ್‌ಪಿ ಧರಣೇಶ, ಸುರಪುರ ಡಿವೈಎಸ್‌ಪಿ ಜಾವೀದ್ ಇನಾಂದಾರ್, ಹುಣಸಗಿ ಸಿಪಿಐ ರವಿಕುಮಾರ ಎಸ್.ಎನ್., ಕೊಡೇಕಲ್ ಪಿಎಸ್ಐ ಅಯ್ಯಪ್ಪ ಅವರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.