ಯಾದಗಿರಿ: ಪೂರ್ವ ಮುಂಗಾರು ಮಳೆಯ ಉತ್ತಮ ಆರಂಭ ಮತ್ತು ಕೃಷ್ಣಾ ಜಲಾನಯನ ಪ್ರದೇಶದ ಕಾಲುವೆಗಳಲ್ಲಿ ಒಂದು ತಿಂಗಳು ಮುಂಚಿತವಾಗಿಯೇ ನೀರು ಹರಿಸಿದ್ದರಿಂದ ಕೃಷಿಕರು ಭರದಿಂದ ಬಿತ್ತನೆ ಮಾಡಿದ್ದರು. ಕಳೆದ ಎರಡು ತಿಂಗಳಲ್ಲಿ ವಾಡಿಕೆಗಿಂತ ಅತ್ಯಧಿಕ ಮಳೆಯಾಗಿದ್ದರಿಂದ ಬೆಳೆಗಳಿಗೆ ಹಾನಿಯಾಗಿದೆ. ಇದರಿಂದ ರೈತರ ಕೈಗೆ ಬಂದ ತುತ್ತು ಬಾಯಿಗೆ ಬಾರದಂತೆ ಆಗಿದೆ.
ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಭತ್ತ, ಮೆಕ್ಕೆಜೋಳ, ಸಜ್ಜೆ, ತೊಗರಿ, ಹೆಸರು, ಉದ್ದು, ಶೇಂಗಾ, ಸೂರ್ಯಕಾಂತಿ, ಹತ್ತಿ ಸೇರಿ 4.10 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಕಳೆದ ವರ್ಷ ಹತ್ತಿಗೆ ಉತ್ತಮ ಧಾರಣೆ ಇದ್ದಿದ್ದರಿಂದ ಈ ಬಾರಿ ದುಪ್ಪಟ್ಟು ಪ್ರದೇಶದಲ್ಲಿ (ಕಳೆದ ವರ್ಷ 1 ಲಕ್ಷ ಹೆಕ್ಟೇರ್, ಈ ವರ್ಷ 2.10 ಲಕ್ಷ ಹೆಕ್ಟೇರ್) ಬಿತ್ತನೆ ಮಾಡಲಾಗಿದೆ. ಮಳೆಯಿಂದ ಹಾನಿಯಾದ ಬೆಳೆಗಳಲ್ಲಿ ಹತ್ತಿಯದ್ದೇ ಅಗ್ರ ಪಾಲಿದೆ.
ಕೃಷಿ, ಕಂದಾಯ ಹಾಗೂ ತೋಟಗಾರಿಕೆ ಇಲಾಖೆಗಳು ಜಂಟಿಯಾಗಿ ಹಾನಿಯ ಸಮೀಕ್ಷೆ ನಡೆಸುತ್ತಿವೆ. ಆಗಾಗ ಬಿಡುವ ಕೊಡುವ ಮಳೆಯ ನಡುವೆಯೂ ಶೇ 70ರಷ್ಟು ಸಮೀಕ್ಷೆ ಕಾರ್ಯ ಪೂರ್ಣಗೊಳಿಸಿದ್ದಾರೆ. ಸುಮಾರು 35 ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆಗಳು ಮಳೆಯಿಂದಾಗಿ ಹಾನಿಗೀಡಾಗಿವೆ. ವಾರದ ಬಳಿಕ ನಿಖರ ಮಾಹಿತಿ ಬರಲಿದೆ ಎನ್ನುತ್ತಾರೆ ಕೃಷಿ ಅಧಿಕಾರಿಗಳು.
ವಾಡಿಕೆಗಿಂತ ಅಧಿಕ ಮಳೆ: ಜಿಲ್ಲೆಯಲ್ಲಿ ಆಗಸ್ಟ್ ತಿಂಗಳಲ್ಲಿ 137 ಮಿ.ಮೀಟರ್ ಮಳೆ ಆಗಬೇಕಿತ್ತು. ಆದರೆ, ವಾಸ್ತವದಲ್ಲಿ 233 ಮಿ. ಮೀಟರ್ ಮಳೆಯಾಗಿ ವಾಡಿಕೆಗಿಂತ ಶೇ 71ರಷ್ಟು ಅಧಿಕವಾಗಿದೆ. ಸೆಪ್ಟೆಂಬರ್ 1ರಿಂದ 21ರ ನಡುವೆ ವಾಡಿಕೆಯ 108 ಮಿ.ಮೀ. ಮಳೆಯ ಬದಲು 137 ಮಿ.ಮೀ. ಬಿದ್ದು, ಶೇ 26ರಷ್ಟು ಹೆಚ್ಚು ಮಳೆ ಬಿದ್ದಿರುವುದು ಬೆಳೆ ಹಾನಿಗೆ ಪ್ರಮುಖ ಕಾರಣವಾಗಿದೆ.
‘ಶಹಾಪುರ ತಾಲ್ಲೂಕಿನಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ ವಾಡಿಕೆಯಂತೆ 115 ಮಿ.ಮೀ. ಮಳೆಯ ಅಗತ್ಯವಿತ್ತು. ಆದರೆ, 149 ಮಿ.ಮೀ. ಮಳೆಯಾಗಿದೆ. ಜೂನ್ ಹಾಗೂ ಜುಲೈ ತಿಂಗಳಲ್ಲಿ ಕೊರತೆ ಮಳೆ ಅನುಭವಿಸಿದ್ದರೂ ಕಳೆದ ಎರಡು ತಿಂಗಳ ಅಧಿಕ ಮಳೆಯಿಂದ ರೈತರು ಸಂಕಷ್ಟ ಎದುರಿಸಬೇಕಾಯಿತು’ ಎನ್ನುತ್ತಾರೆ ಸಹಾಯಕ ಕೃಷಿ ನಿರ್ದೇಶಕ ಸುನಿಲಕುಮಾರ ಯರಗೋಳ.
ಹತ್ತಿ ಹೊಲಗಳಲ್ಲಿ ನಿಂತಿರುವ ನೀರು ಕಡಿಮೆ ಆಗುತ್ತಿಲ್ಲ. ನೀರಿನಿಂದಾಗಿ ತಗ್ಗು ಪ್ರದೇಶದ ಬೆಳೆಗಳಿಗೆ ಬಾಡುವ ಭೀತಿ ಕಾಡುತ್ತಿದೆ. ಎತ್ತರದಲ್ಲಿ ಹೂ ಮತ್ತು ಕಾಯಿ ಬಿಟ್ಟಿರುವ ಗಿಡಗಳಲ್ಲಿ ಲದ್ದಿ ಹುಳು ಅಥವಾ ರಬ್ಬರ ಹುಳು ಬಾಧೆ ಕಾಣಿಸಿಕೊಂಡಿದೆ. ಇದರಿಂದ ಹೂ ಮತ್ತು ಕಾಯಿಗಳು ನೆಲಕ್ಕೆ ಬಿದ್ದಿರುವುದು ಕಂಡುಬಂದಿದೆ.
ಹುಣಸಗಿ ತೊಗರಿ ಹಾನಿಯೇ ಅಧಿಕ: ಹುಣಸಗಿ ತಾಲ್ಲೂಕಿನ ಎಡೆಬಿಡದೆ ಸುರಿದ ಮಳೆಯಿಂದಾಗಿ ತೊಗರಿ ಬೆಳೆಗೆ ಹೆಚ್ಚಿನ ಹಾನಿಯಾಗಿದ್ದು, ನಂತರದ ಸ್ಥಾನದಲ್ಲಿ ಹತ್ತಿ ಇದೆ. ‘ತಾಲ್ಲೂಕಿನ ಹೋಬಳಿ ವ್ಯಾಪ್ತಿಯಲ್ಲಿ ಸುಮಾರು ,1500 ಎಕರೆ ತೊಗರಿ ಹಾಗೂ 1,000 ಎಕರೆ ಎಷ್ಟು ಹತ್ತಿ ಬೆಳೆಗೆ ಹಾನಿಯಾಗಿದೆ’ ಎನ್ನುತ್ತಾರೆ ಕೃಷಿ ಅಧಿಕಾರಿ ದೀಪಾ ದೊರೆ.
2 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬೆಳೆಯ ಬಿತ್ತನೆಯಾಗಿದ್ದು ಇದುವರೆಗಿನ ಹಾನಿಯ ಸಮೀಕ್ಷೆಯಲ್ಲಿ ಹತ್ತಿ ಬೆಳೆಯ ಪ್ರಮಾಣವೇ ಅಧಿಕವಾಗಿದ್ದು ಕೆಲ ದಿನಗಳಲ್ಲಿ ನಿಖರ ಮಾಹಿತಿ ಬರಲಿದೆರತೇಂದ್ರನಾಥ ಸೂಗುರ ಜಂಟಿ ಕೃಷಿ ನಿರ್ದೇಶಕ
ಮೊಡ ಕವಿದ ವಾತಾವರಣದಿಂದ ಹತ್ತಿ ಬೆಳೆಗೆ ರಬ್ಬರ ಕೀಟ ಬಾಧೆ ಕಾಣಿಸಿಕೊಂಡಿದೆ. ಕೀಟಗಳ ನಿಯಂತ್ರಣಕ್ಕೆ ಸಮೀಪದ ರೈತ ಸಂಪರ್ಕ ಕೇಂದ್ರಗಳಿಗೆ ತೆರಳಿ ಸಲಹೆ ಪಡೆಯಬೇಕುಸುನಿಲಕುಮಾರ ಯರಗೋಳ ಸಹಾಯಕ ಕೃಷಿ ನಿರ್ದೇಶಕ
ಶಹಾಪುರ ತಾಲ್ಲೂಕಿನಲ್ಲಿ ಶೇ 80ರಷ್ಟು ಮಳೆ ಹಾನಿ ಸರ್ವೆ ಮುಗಿದಿದೆ. ಕೆಲ ದಿನಗಳಿಂದ ಹೆಚ್ಚಿನ ಮಳೆಯಾಗಿದ್ದರಿಂದ ಮತ್ತೊಮ್ಮೆ ಸಮೀಕ್ಷೆ ಮಾಡಲಾಗುವುದುಸಿದ್ಧರೂಢ ಬನ್ನಿಕೊಪ್ಪ ಶಹಾಪುರ ತಹಶೀಲ್ದಾರ್
ಮಳೆಯಿಂದ ಬೆಳೆ ಹಾನಿಯಾದ ಬಗ್ಗೆ ರೈತರು 91489 24377ಗೆ ಸಂಪರ್ಕಿಸಬಹುದು. ಎಲ್ಲ ರೈತರು ತಪ್ಪದೇ ಬೆಳೆ ವಿಮೆ ಮಾಡಿಸಬೇಕುರಾಮನಗೌಡ ಪಾಟೀಲ ಸುರಪುರ ಸಹಾಯಕ ಕೃಷಿ ನಿರ್ದೇಶಕ
ನಾಲ್ಕು ಎಕರೆ ಪ್ರದೇಶದಲ್ಲಿ ಬಿತ್ತನೆಯಾದ ಹತ್ತಿ ಬೆಳೆ ಮಳೆಯಿಂದಾಗಿ ಕಂದು ಬಣ್ಣಕ್ಕೆ ತಿರುಗಿನಾಶವಾಗಿದೆ. ಸಮೀಕ್ಷೆ ಮಾಡಲು ನಮ್ಮ ಜಮೀನಿಗೆ ಯಾರೂ ಬಂದಿಲ್ಲಶಿವಪ್ಪ ಸಕ್ರಿ ಸುರಪುರ ತಾಲ್ಲೂಕಿನ ಕವಡಿಮಟ್ಟಿ ರೈತ
‘ಹಸಿ ಬರಗಾಲ ಬಿದ್ದೈತಿ’
‘ನಮ್ಮಲ್ಲಿ ಹಸಿ ಬರಗಾಲ ಬಿದ್ದೈತಿ. ಹೊಲದಾಗ ರಾಶಿ ಮಾಡಿದ ಕಾಳು ಮನಿಗಿ ತಗೊಂಡು ಹೋಗಲು ಆಗುತ್ತಿಲ್ಲ. ಹಿಂಗಾದ್ರೆ ಭೂತಾಯಿನ ನಂಬಿದವರ ಬದುಕು ಹೇಗೆ’ ಎಂದು ನೋವನ್ನು ವ್ಯಕ್ತಪಡಿಸಿದವರು ಯರಗೋಳ ಗ್ರಾಮದ ರೈತ ಶಿವಣ್ಣ ಇರಿಕೇರಿ. ಹೋಬಳಿ ವ್ಯಾಪ್ತಿಯ ಬಹುತೇಕ ಕೆರೆ ಹಳ್ಳಗಳು ಮೈದುಂಬಿ ಹರಿದು ಹೊಲಗಳಿಗೂ ನುಗ್ಗಿದೆ. ತೊಗರಿ ಹತ್ತಿ ಜೋಳಕ್ಕೆ ಹಾನಿಯಾಗಿದೆ. ಆದಷ್ಟು ಬೇಗ ಸಮೀಕ್ಷೆ ಕಾರ್ಯ ಮುಗಿಸಿ ಪರಿಹಾರದ ಹಣ ಕೊಟ್ಟರೆ ಮುಂದಿನ ಬೆಳೆಗಳ ಬಿತ್ತನೆಗೆ ಅನುಕೂಲ ಆಗುತ್ತದೆ ಎನ್ನುತ್ತಾರೆ ರೈತರು.
ಪರಿಹಾರದ ನಿರೀಕ್ಷೆಯಲ್ಲಿ ರೈತರು
ಸುರಪುರ: ತಾಲ್ಲೂಕಿನಲ್ಲಿ ಕಳೆದ ಎರಡು ತಿಂಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದ್ದರಿಂದ ಬೆಳೆ ಹಾನಿ ಸಂಭವಿಸಿದೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 1.61 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. 60450 ಹೆಕ್ಟೇರ್ ಪ್ರದೇಶದ ಭತ್ತಕ್ಕೆ ಮಳೆ ವರವಾಗಿದೆ. 65823 ಹೆಕ್ಟೇರ್‌ನಲ್ಲಿ ಹತ್ತಿ 21145 ಹೆಕ್ಟೇರ್‌ನಲ್ಲಿ ತೊಗರಿ 2641 ಹೆಕ್ಟೇರ್‌ನಲ್ಲಿ ಸಜ್ಜೆ ಹಾಗೂ 105 ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ ಬಿತ್ತನೆ ಮಾಡಲಾಗಿದೆ. ಮಳೆಯಾಶ್ರಿತ ಈ ಬೆಳೆಗಳಿಗೆ ಹಾನಿಯಾಗಿದ್ದು ರೈತರು ಪರಿಹಾರದ ನಿರೀಕ್ಷೆಯಲ್ಲಿ ಇದ್ದಾರೆ. ‘ಬೆಳೆ ಹಾನಿಯ ಜಂಟಿ ಸಮೀಕ್ಷೆಯಲ್ಲಿ ಈಗಾಗಲೇ 3500 ಹೆಕ್ಟೇರ್ ಸರ್ವೆ ಮಾಡಲಾಗಿದೆ. ಇನ್ನಷ್ಟು ಸಮೀಕ್ಷೆ ಕಾರ್ಯ ಬಾಕಿ ಇದೆ’ ಎನ್ನುತ್ತಾರೆ ಅಧಿಕಾರಿಗಳು.
‘ಬದುಕು ಬರ್ಬಾದ್ ಆಗ್ಯಾದ್'
ಶಹಾಪುರ: ‘ಮಳೆಯಿಂದಾಗಿ ಹತ್ತಿ ತೊಗರಿ ಬೆಳಿದಾಗ ಮಳೆ ನೀರು ನಿಂತು ಬೆಳೆಗಳೆಲ್ಲ ಸತ್ತು ಹೋಗ್ಯಾವ್. ಮಳಿಯಿಂದನ ನಮ್ ಬದುಕು ಬರ್ಬಾದ್ ಆಗ್ಯಾದ್. ಮಳೆರಾಯ ನಮ್ಮ ಮ್ಯಾಲ್ ಮುನಿಸಿಕೊಂಡಾನ್ ಮುಂದೇನು ಮಾಡಬೇಕು ದಿಕ್ಕು ತೋಚದಂಗ್ ಆಗ್ಯಾದ್’ ಎಂದು ಅಲವತ್ತುಕೊಂಡವರು ತಾಲ್ಲೂಕಿನ ಬೆಳೆ ಕಳೆದುಕೊಂಡ ರೈತರು. ‘ಒಂದು ವಾರ ಬಿಡುವು ನೀಡಿ ಮತ್ತೆ ಶುರುವಾದ ಮಳೆರಾಯನ ಅರ್ಭಟಕ್ಕೆ ರೈತರು ನಲುಗಿ ಹೋಗಿದ್ದಾರೆ. ಹೂ ಕಟ್ಟುವ ಹಂತದಲ್ಲಿದ್ದ ಹತ್ತಿ ಬೆಳೆಗೆ ರಬ್ಬರ ಹುಳ ಬಾಧೆ ಕಾಣಿಸಿಕೊಂಡು ಹತ್ತಿಯ ಎಲೆಯನ್ನು ತಿನ್ನುತ್ತಿವೆ. ಗೊಬ್ಬರ ಸಿಂಪರಣೆ ಮಾಡಲೂ ಅವಕಾಶ ಕೊಡುತ್ತಿಲ್ಲ. ತೊಗರಿ ಬೆಳೆಯ ಕಥೆಯಂತೂ ಮುಗಿದಿದೆ. ನಿರಂತರವಾಗಿ ಮಳೆಯಾದರೆ ಭತ್ತಕ್ಕೂ ಕುತ್ತು ತಪ್ಪಿದಲ್ಲ’ ಎನ್ನುತ್ತಾರೆ ರೈತ ಮಲ್ಲಿಕಾರ್ಜುನ. ‘ತಾಲ್ಲೂಕಿನ ತಿಪ್ಪನಹಳ್ಳಿ ಗ್ರಾಮದ ಬಳಿ ಗದಗ-ವಾಡಿ ರೈಲ್ವೆ ಸೇತುವೆ ಕಾಮಗಾರಿ ನಡೆಯುತ್ತಿದೆ. ಮಳೆ ನೀರು ಹರಿದು ಹೋಗಲು ಸರಿಯಾದ ವ್ಯವಸ್ಥೆ ಇಲ್ಲ. ಹೀಗಾಗಿ. ಸುಮಾರು 7 ಎಕರೆಯಲ್ಲಿ ಬೆಳೆದು ನಿಂತ ಹತ್ತಿ ಮೆಣಸಿನಕಾಯಿ ಬೆಳೆ ನೀರು ಪಾಲಾಗಿವೆ’ ಎನ್ನುತ್ತಾರೆ ಭೀಮರಾಯ ತಿಪ್ಪನಹಳ್ಳಿ.
ಪೂರಕ ಮಾಹಿತಿ: ಟಿ.ನಾಗೇಂದ್ರ, ಅಶೋಕ ಸಾಲವಾಡಗಿ, ಭೀಮಸೇನರಾವ ಕುಲಕರ್ಣಿ, ತೋಟೇಂದ್ರ ಎಸ್ ಮಾಕಲ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.