
ಯಾದಗಿರಿ: ತಾಲ್ಲೂಕಿನ ಕಟಗಿ ಶಹಾಪುರ ಗ್ರಾಮದ ಹಲವು ರೈತರ ಹೊಲದಲ್ಲಿ ಬಿತ್ತನೆ ಮಾಡಿದ ಸಜ್ಜೆ ಬೆಳೆ ಸರಿಯಾಗಿ ಕಾಳು ಕಟ್ಟದೆ ಇರುವುದರಿಂದ ರೈತರು ಆತಂಕಗೊಂಡಿದ್ದಾರೆ.
ಗ್ರಾಮದ ದೇವಪ್ಪ ಮುದಕನಳ್ಳಿ, ಮರೆಪ್ಪ ಸಾಬಣ್ಣ, ಚಂದ್ರಪ್ಪ ಸೇರಿದಂತೆ ಹಲವು ರೈತರು ಖಾಸಗಿ ಅಂಗಡಿಯಲ್ಲಿ ಸಜ್ಜೆ ಬೀಜ ತಂದು ಎರಡೂವರೆ ತಿಂಗಳ ಹಿಂದೆಯೇ ಬಿತ್ತನೆ ಮಾಡಿದ್ದರು. ಸಜ್ಜೆ ದಂಟುಗಳು ಹುಲುಸಾಗಿ ಬೆಳೆದಿದ್ದರೂ ಬಹುತೇಕ ತೆನೆಗಳಲ್ಲಿ ಸರಿಯಾಗಿ ಕಾಳು ಕಟ್ಟಿಲ್ಲ. ಕಳಪೆ ಬಿತ್ತನೆ ಬೀಜ ವಿತರಣೆ ಮಾಡಿದ್ದರಿಂದಾಗಿ ಕಾಳುಗಳು ಕಟ್ಟಿಲ್ಲ ಎಂಬುದು ರೈತರ ದೂರು.
ಯಾದಗಿರಿ ನಗರದ ಬಿತ್ತನೆ ಬೀಜ ಮಾರಾಟದ ಅಂಗಡಿಯಿಂದ ಎಂಪಿ 7572 ತಳಿಯ ಸಜ್ಜೆ ಬಿತ್ತನೆ ಬೀಜ ತಂದು ಬಿತ್ತನೆ ಮಾಡಿದ್ದರು. ಈ ವರ್ಷ ಉತ್ತಮ ಮಳೆಯಾಗಿದ್ದರಿಂದ ಬೆಳೆಯೂ ಚೆನ್ನಾಗಿ ಬಂದಿದ್ದು, ತೆನೆಯೂ ಸುಂಕು ಕಟ್ಟಿ ನೋಡುಗರಿಗೆ ದಪ್ಪವಾಗಿ ಕಾಣುತ್ತಿದೆ. ಆದರೆ, ತೆನೆಯಲ್ಲಿ ಸರಿಯಾಗಿ ಕಾಳುಗಳು ಕಟ್ಟದೆ ಇಳುವರಿ ಕುಂಠಿತಗೊಳ್ಳುವ ಭಯ ಬೆಳೆಗಾರರಲ್ಲಿ ಕಾಡುತ್ತಿದೆ.
ಇದೇ ಗ್ರಾಮದಲ್ಲಿ ಜಮೀನುಗಳಲ್ಲಿ ಬೇರೆ ತಳಿಯ ಸಜ್ಜೆ ಬೀಜಗಳನ್ನು ಬಿತ್ತನೆ ಮಾಡಲಾಗಿದ್ದು, ತೆನೆಗಳು ಉತ್ತಮವಾಗಿದ್ದು ಕಾಳು ಸಹ ಗಟ್ಟಿಯಾಗಿ ತೆನೆ ತುಂಬೆಲ್ಲ ಆವರಿಸಿವೆ.
‘ಪ್ರತಿ ವರ್ಷ ಬಿತ್ತನೆ ಮಾಡುತ್ತಿದ್ದ ಸಜ್ಜೆ ಬೀಜದ ಪ್ಯಾಕೇಟ್ ಬದಲು ಎಂಪಿ 7572 ತಳಿಯ ಪ್ಯಾಕೇಟ್‌ಗಳನ್ನು ವರ್ತಕರು ನೀಡಿದರು. ಎಕರೆಗೆ ಈ ಹಿಂದಿನ ವರ್ಷಕ್ಕಿಂತ ಮೂರ್ನಾಲ್ಕು ಕ್ವಿಂಟಲ್ ಹೆಚ್ಚಿಗೆ ಇಳುವರಿ ಬರುತ್ತದೆ ಎಂದು ಹೇಳಿದರು. ಅವರ ಮಾತುಗಳನ್ನು ನಂಬಿ ಸಾವಿರಾರು ರೂಪಾಯಿ ಕೊಟ್ಟು ಬೀಜ ಖರೀದಿಸಿ ನೂಕಾರು ಎಕರೆಯಲ್ಲಿ ಬಿತ್ತನೆ ಮಾಡಿದ್ದು, ಈಗ ಸರಿಯಾಗಿ ತೆನೆಗಳು ಕಟ್ಟಿಲ್ಲ. ಈ ಬಗ್ಗೆ ವರ್ತಕರು ಹಾಗೂ ಕಂಪನಿ ಏಜೆಂಟರ್‌ಗೆ ಕೇಳಿದರೆ ಮಳೆ ಹೆಚ್ಚಾಗಿದ್ದರಿಂದ ಸರಿಯಾಗಿ ಕಾಳು ಕಟ್ಟಿಲ್ಲ ಎಂದು ನೆಪ ಹೇಳುತ್ತಿದ್ದಾರೆ’ ಎಂದು ರೈತ ದೇವಪ್ಪ ಮುದಕನಳ್ಳಿ ಅಸಮಾಧಾನ ವ್ಯಕ್ತಪಡಿಸಿದರು.
‘ಕಂಪನಿಯ ಏಜೆಂಟರ್ ಜಮೀನಿಗೆ ಭೇಟಿ ನೀಡಿ ತೆನೆಗಳ ಮಾದರಿ ತೆಗೆದುಕೊಂಡು ಹೋಗಿದ್ದಾರೆ. ಕೃಷಿ ಅಧಿಕಾರಿಗಳ ಗಮನಕ್ಕೂ ತಂದಿದ್ದು, ಕೃಷಿ ತಜ್ಞರನ್ನು ಕರೆಯಿಸಿ ಪರಿಶೀಲನೆ ಮಾಡುವುದಾಗಿ ಭರವಸೆ ಕೊಟ್ಟಿದ್ದಾರೆ. ಲೀಸ್ ಮೇಲೆ ಹೊಲ ಹಾಕಿಕೊಂಡು, ಲಕ್ಷಾಂತರ ರೂಪಾಯಿ ಸಾಲ ಮಾಡಿ ಸಜ್ಜೆ ಬಿತ್ತನೆ ಮಾಡಿದ್ದೇನೆ. ಎಕೆರೆಗೆ ನಾಲ್ಕೈದು ಕ್ವಿಂಟಲ್ ಸಹ ಬರುವುದಿಲ್ಲ. ಮಾಡಿದ ಸಾಲ ತೀರಿಸುವ ಚಿಂತೆ ಕಾಡುತ್ತಿದೆ’ ಎಂದು ಅಲವತ್ತುಕೊಂಡರು.
ಕಳಪೆ ಬಿತ್ತನೆ ಬೀಜಗಳ ಬಿತ್ತನೆಯಿಂದಾಗಿ ರೈತರಿಗೆ ನಷ್ಟವಾಗಿದೆ. ಸರ್ಕಾರದಿಂದ ಸಹಾಯಧನ ಕೊಟ್ಟು ಮುಂದೆ ಇಂತಹ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕುಮಹಿಪಾಲರೆಡ್ಡಿ ಪೊಲೀಸ್ ಪಾಟೀಲ ತಾಲ್ಲೂಕು ರೈತರ ಸಂಘದ ಅಧ್ಯಕ್ಷ
ತಜ್ಞರಿಂದ ಬೆಳೆಗಳ ಪರಿಶೀಲನೆ
’ ‘ಕಟಗಿ ಶಹಾಪುರದಲ್ಲಿನ ಸಜ್ಜೆ ತೆನೆಗಳು ಕಾಳು ಕಟ್ಟದ ಬಗ್ಗೆ ಕೃಷಿ ಇಲಾಖೆಯ ಗಮನಕ್ಕೆ ಬಂದಿದೆ. ಸ್ಥಳೀಯ ಕೃಷಿ ಅಧಿಕಾರಿಗಳು ಜಮೀನಿಗೆ ಭೇಟಿ ಕೊಟ್ಟು ಪ್ರಾಥಮಿಕ ಮಾಹಿತಿಯನ್ನು ಕಲೆ ಹಾಕುವರು. ಶೀಘ್ರವೇ ರಾಯಚೂರು ಕೃಷಿ ವಿಶ್ವವಿದ್ಯಾಲಯದ ಪರಿಣಿತರ ತಂಡವನ್ನು ಜಮೀನುಗಳಿಗೆ ಕಳುಹಿಸಿ ಪರಿಶೀಲನೆ ಮಾಡಿಸಿ ವರದಿಯನ್ನು ಪಡೆಯಲಾಗುವುದು’ ಎಂದು ಸಹಾಯಕ ಕೃಷಿ ನಿರ್ದೇಶಕ ರಾಜಕುಮಾರ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.