ಯಾದಗಿರಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಬುಧವಾರ ತುಂತುರು ಮಳೆಯ ನಡುವೆಯೂ ಗಣೇಶನ ಮೂರ್ತಿಗಳನ್ನು ಪ್ರತಿಷ್ಠಾಪನೆ ಮಾಡಿ ಶ್ರದ್ಧಾ-ಭಕ್ತಿಯಿಂದ ಆಚರಿಸಲಾಯಿತು.
ಬೆಳಿಗ್ಗೆಯಿಂದಲೇ ಮನೆಗಳಲ್ಲೂ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಲಾಯಿತು. ಕೆಲವರು ನಡೆದುಕೊಂಡೇ ಮೂರ್ತಿ ತೆಗೆದುಕೊಂಡು ಹೋದರೆ. ಮತ್ತೆ ಕೆಲವು ಯುವಕರು ಟ್ರ್ಯಾಕ್ಟರ್, ಬೊಲೆರೊ, ಟಂಟಂಗಳಲ್ಲಿ ಮೂರ್ತಿಗಳನ್ನು ಇರಿಸಿ ‘ಗಣಪತಿ ಬಪ್ಪಾ ಮೋರಯಾ...’ ಎಂಬ ಜೈಕಾರ ಹಾಕುತ್ತಾ ಒಯ್ದರು. ಗಣೇಶನ ಭಕ್ತಿಗೀತೆಗಳಿಗೆ ಸಂತಸದಿಂದ ಹೆಜ್ಜೆಯೂ ಹಾಕಿದರು.
ಮಂಟಪಗಳನ್ನು ಬಣ್ಣ– ಬಣ್ಣದ ಕಾಗದ, ಅಲಂಕೃತ ದೀಪಗಳು, ಕಬ್ಬು, ಬಾಳೆ ದಿಂಡು, ತಳಿರು ತೋರಣಗಳಿಂದ ಶೃಂಗರಿಸಿ ಗಣೇಶನ ನಾನಾ ಬಗೆಯ ಮೂರ್ತಿಗಳನ್ನು ಇರಿಸಿದರು. ಮೋದಕ, ಕರಿಗಡುಬು ನೈವೇದ್ಯ ಹಿಡಿದು, ಪೂಜೆ ಸಲ್ಲಿಸಿ, ಆರತಿ ಬೆಳಗಿದರು. ಗಣೇಶನ ಭಕ್ತಿಗೀತೆಗಳಿಗೆ ಯುವಕರು ಹೆಜ್ಜೆಹಾಕಿ ಖುಷಿಪಟ್ಟರು.
ದೇವಸ್ಥಾನಗಳಲ್ಲಿ ಅರ್ಚಕರಿಂದ ಗಣಪತಿ ಪೂಜೆ, ಕಳಶ ಪೂಜೆ, ವಿಗೃಹ ಪೂಜೆ, ಅರ್ಚನೆ, ಮಂಗಳಾರತಿ, ಮಂತ್ರಪುಷ್ಪ ಹಾಗೂ ಪ್ರಸಾದ ವಿನಿಯೋಗ ಜರುಗಿತು. ಗಣೇಶ ಮೂರ್ತಿ ಪ್ರತಿಷ್ಠಾಪನೆ ಅಂಗವಾಗಿ ಕೆಲವು ಯುವ ಮಂಡಳಿಯವರು ಮಕ್ಕಳು ಮತ್ತು ಮಹಿಳೆಯರಿಗೆ ಧಾರ್ಮಿಕ ಮತ್ತು ಸಾಂಸ್ಕೃತಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದವು. ಸಂಗೀತ, ನೃತ್ಯ, ನಾಟಕ, ಕ್ರೀಡೆಯಂತಹ ಸ್ಪರ್ಧೆಗಳು ವಿಸರ್ಜನೆಯವರೆಗೂ ನಡೆಯಲಿವೆ.
ಕೆಲವರು ತಮ್ಮ ಮನೆಗಳಲ್ಲಿ ಪ್ರತಿಷ್ಠಾಪನೆಗೊಂಡ ಗಣೇಶನ ಮೂರ್ತಿಗಳನ್ನು ಸಂಜೆಯೇ ವಿಸರ್ಜಿಸಿದರು. ಇನ್ನೂ ಕೆಲವರು 5, 7, 9 ಮತ್ತು 11ನೇ ದಿನಗಳಂದು ವಿಸರ್ಜಿಸಲಿದ್ದಾರೆ. ಗಣಪನ ಭಕ್ತರು ರಾತ್ರಿ ವೇಳೆ ಕುಟುಂಬ ಸಮೇತರಾಗಿ ತಮ್ಮ ನಿವಾಸಿದ ಸಮೀಪದಲ್ಲಿ ಪ್ರತಿಷ್ಠಾಪಿಸಿರುವ ಗಣೇಶನ ಮೂರ್ತಿಗಳ ದರ್ಶನ ಪಡೆದರು.
ನಗರದ ಮಹಾತ್ಮ ಗಾಂಧಿ ವೃತ್ತ, ರೈಲ್ವೆ ನಿಲ್ದಾಣ ಪ್ರದೇಶ, ಚಿತ್ತಾಪುರ ರಸ್ತೆ, ಹಳೆ, ಹೊಸ ಬಸ್ ನಿಲ್ದಾಣ, ಚಕ್ರಕಟ್ಟಾ, ಕನಕದಾಸ ವೃತ್ತ, ಹೊಸಳ್ಳಿ ಕ್ರಾಸ್, ಗಂಜ್ ಪ್ರದೇಶ, ರಾಜೀವ ಗಾಂಧಿ ನಗರ, ಮಾತಾ ಮಾಣಿಕೇಶ್ವರ ಕಾಲೊನಿ ಸೇರಿದಂತೆ ವಿವಿಧೆಡೆ ಸಾಮೂಹಿಕ ಪೂಜೆ ನೆರವೇರಿಸಿ ಗಣೇಶ ಮೂರ್ತಿಗಳನ್ನು ಸ್ಥಾಪಿಸಲಾಯಿತು.
ಸುಖಾಸಿನ ಗಣಪತಿ, ಪಾರ್ವತಿ ಪರಮೇಶ್ವರ ಗಣಪತಿ, ಮಹಾರಾಜ ಗಣಪತಿ, ಅಯೋಧ್ಯೆ ರಾಮ ಗಣಪತಿ, ನವಿಲು ಗಣಪತಿ, ಸಿಂಹ ಗಣಪತಿ, ಗೋವು ಗಣಪತಿ... ಹೀಗೆ ನಾನಾ ಬಗೆಯ ಗಣಪತಿ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಪೊಲೀಸರು ಜಿಲ್ಲೆಯಾದ್ಯಂತ ಭದ್ರತೆ ಕೈಗೊಂಡಿದ್ದರು.
ಮನೆಗಳಲ್ಲಿ ಬಾಲ ಗಣಪತಿ ಪೂಜೆ
ಮನೆಗಳಲ್ಲಿ ಮಂಟಪಗಳನ್ನು ಮಾಡಿ ಪುಟ್ಟ ಗಣಪಗಳನ್ನು ಕೂರಿಸಿದ ಭಕ್ತರು ಗಣೇಶನಿಗೆ ಪ್ರಿಯವಾದ ಸಿಹಿ ತಿನಿಸು ಮೋದಕಗಳನ್ನು ತಯಾರಿಸಿ ಇರಿಸಿದರು. ನೆರೆ ಹೊರೆಯವರು ಬಂಧು– ಆಪ್ತರನ್ನು ಆಹ್ವಾನಿಸಿ ವಿಶೇಷ ಪೂಜೆ ನೆರವೇರಿಸಿದರು. ಹಬ್ಬದ ಅಂಗವಾಗಿ ತಯಾರಿಸಿದ್ದ ಮೋದಕ ಕಡಬು ಚಕ್ಕಲಿ–ಕೋಡುಬಳೆ ಹೋಳಿಗೆಯಂತಹ ಖಾದ್ಯಗಳನ್ನು ನೈವೇದ್ಯವಾಗಿ ಸಮರ್ಪಿಸಿದರು. ನಂತರ ಸ್ನೇಹಿತರು ಕುಟುಂಬ ಸಮೇತರಾಗಿ ಹಬ್ಬದ ಊಟ ಸವಿದರು. ಮನೆಯಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿದವರ ಪೈಕಿ ಬಹುತೇಕರು ಬುಧವಾರವೇ ಮೂರ್ತಿಗಳನ್ನು ವಿಸರ್ಜನೆ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.