ಯಾದಗಿರಿ: ಪರಿಷ್ಕೃತ ಕನಿಷ್ಠ ವೇತನ ಜಾರಿ, ಜಿಲ್ಲಾ ಮಟ್ಟದ ಕಾರ್ಮಿಕರ ವಿವಿಧೋದ್ದೇಶ ಸಹಕಾರ ಸಂಘ ಸ್ಥಾಪನೆ ಸೇರಿದಂತೆ ವಿವಿಧ ಭೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಯುಟಿಯುಸಿ ಸಂಯೋಜಿತ ಕರ್ನಾಟಕ ರಾಜ್ಯ ಸಂಯುಕ್ತ ವಸತಿನಿಲಯ ಕಾರ್ಮಿಕರ ಸಂಘ ಜಿಲ್ಲಾ ಸಮಿತಿ ವತಿಯಿಂದ ನಗರದಲ್ಲಿ ಬುಧವಾರ ಪ್ರತಿಭಟನೆ ನಡೆಸಲಾಯಿತು.
ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಮತ್ತು ಕ್ರೈಸ್ ವ್ಯಾಪ್ತಿಯ ಹಾಸ್ಟೆಲ್, ಆಶ್ರಮ ಶಾಲೆ, ವಸತಿಶಾಲೆ ಮತ್ತು ಕಾಲೇಜುಗಳಲ್ಲಿ ಹೊರಗುತ್ತಿಗೆ ನೌಕರರು ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಅವರ ಸೇವೆ ಕಾಯಂಗೊಳಿಸಿ, ಪರಿಷ್ಕೃತ ಕನಿಷ್ಠ ವೇತನ ಜಾರಿಗೆ ತರಬೇಕು ಎಂದು ಒತ್ತಾಯಿಸಿದರು.
ಕಾರ್ಮಿಕರ ಬದುಕು ಅತ್ಯಂತ ಸಂಕಷ್ಟದಿಂದ ಕೂಡಿದೆ. ಕನಿಷ್ಠ ವೇತನ, ಪಿಎಫ್, ರಜೆಯಂತಹ ಸೌಲಭ್ಯಗಳು ಪಡೆಯಬೇಕಾದರೂ ಹರಸಾಹಸ ಪಡಬೇಕಾಗಿದೆ. ಕಾರ್ಮಿಕರು ದಶಕಗಳಿಂದ ಕೆಲಸ ಮಾಡುತ್ತಿದ್ದರೂ ಕೆಲಸದ ಭದ್ರತೆಯಿಲ್ಲ. ಕನಿಷ್ಠ ಪಕ್ಷ ಒಳಗುತ್ತಿಗೆ ಆಧಾರದ ಮೇಲು ತೆಗೆದುಕೊಂಡಿಲ್ಲ. ಗುತ್ತಿಗೆದಾರರ ಮೂಲಕ ನೂತನ ಜೀತ ಪದ್ಧತಿಗೆ ನೂಕಿದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹೊರಗುತ್ತಿಗೆ ಪದ್ಧತಿಯನ್ನು ರದ್ದುಗೊಳಿಸಿ, ಕಾರ್ಮಿಕರ ಸೇವೆಯನ್ನು ಕಾಯಂ ಮಾಡಬೇಕು. ಕಾಯಂ ಆಗುವವರೆಗೂ ಇಲಾಖೆಗಳಿಂದ ನೇರವಾಗಿ ವೇತನ ಪಾವತಿಸಿ, ಸೇವಾ ಭದ್ರತೆ ಒದಗಿಸಬೇಕು. ಕನಿಷ್ಠ ವೇತನದ ಅಧಿಸೂಚನೆ ಜಾರಿಯಾಗಬೇಕು. ಜಿಲ್ಲಾ ಕೇಂದ್ರಗಳಲ್ಲಿ ಸುಸಜ್ಜಿತ ಇಎಸ್‌ಐ ಆಸ್ಪತ್ರೆ ಪ್ರಾರಂಭಿಸಿ, ಕಾರ್ಮಿಕರಿಗೆ ಹಾಗೂ ಅವರ ಕುಟುಂಬಗಳಿಗೆ ಇಎಸ್‌ಐ ಸೌಲಭ್ಯ ದೊರೆಯಬೇಕು ಎಂದು ಕೋರಿದರು.
ಇಎಸ್‌ಐ ಸೌಲಭ್ಯದ ಮಿತಿಯನ್ನು ₹36,000ಕ್ಕೆ ಹೆಚ್ಚಿಸಬೇಕು. ಗುತ್ತಿಗೆ ಕಾರ್ಮಿಕರಿಗೆ ಕನಿಷ್ಠ ವೇತನ ₹36,000 ನಿಗದಿಪಡಿಸಬೇಕು. 2017ರ ನಂತರ ಆರಂಭವಾದ ಎಲ್ಲಾ ವಸತಿ ಶಾಲೆ, ಕಾಲೇಜುಗಳಿಗೆ 11 ಜನ ಅಡಿಗೆ ಸಿಬ್ಬಂದಿಯನ್ನು ನೇಮಕ ಮಾಡಬೇಕು ಎಂದರು.
ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಶರಣಪ್ಪ ಜಿ.ತೆಳಿಗೇರಿಕರ್, ಕಾರ್ಯದರ್ಶಿ ರಾಮಲಿಂಗಪ್ಪ ಬಿ.ಎನ್, ಉಪಾಧ್ಯಕ್ಷ ತಾಜುದ್ದೀನ್ ಚೌಕಿ, ಗಜಾನಂದ, ಭೀಮಶಂಕರ್, ಶ್ರೀಕಾಂತ, ಶ್ಯಾಮಪ್ಪ, ಮಲ್ಲಪ್ಪ, ಹಣಮಂತ, ಜ್ಞಾನಮಿತ್ರ, ನರಸಪ್ಪ, ಮರಳಮ್ಮ, ಅಂಬಮ್ಮ, ಲಕ್ಷ್ಮಿ, ನಾಗಪ್ಪ, ಲಾವಣ್ಯ, ಫಾತಿಮಾ, ಶ್ರೀದೇವಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.