ಯಾದಗಿರಿ: ‘ಸಮಾಜದಲ್ಲಿನ ಮೇಲು–ಕೀಳು, ಜಾತಿ–ಮತ, ದ್ವೇಷದ ಗೋಡೆಗಳನ್ನು ಒಡೆದು ಹಾಕಿ ಎಲ್ಲರಲ್ಲಿಯೂ ಭ್ರಾತೃತ್ವ ಮತ್ತು ಸಮಾನತೆಯ ಪರಿಕಲ್ಪನೆಯನ್ನು ಬಿತ್ತಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಕೇವಲ ಒಂದು ಸಮುದಾಯಕ್ಕೆ ಗುರುವಲ್ಲ. ಇಡೀ ಲೋಕಕ್ಕೆ ಜ್ಞಾನದ ಗುರು’ ಎಂದು ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಹೇಳಿದರು.
ಇಲ್ಲಿನ ಸರ್ಕಾರಿ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ ಭಾನುವಾರ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುಗಳ ಜಯಂತ್ಯುತ್ಸವ ಸಮಿತಿ ವತಿಯಿಂದ ಆಯೋಜಿಸಿದ್ದ ನಾರಾಯಣ ಗುರುಗಳ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ನಾರಾಯಣ ಗುರುಗಳು ತಂದೆ ಮತ್ತು ತಾಯಿ ತೀರಿ ಹೋದ ನಂತರ ಆಧ್ಯಾತ್ಮಿಕ ಚಿಂತನೆ ಕಡೆಗೆ ಹೆಚ್ಚು ಒಲವು ತೋರಿಸಿದ್ದರು. ಅಧ್ಯಾಪಕ ವೃತ್ತಿಯ ಜೊತೆಗೆ ವೇದ, ಉಪನಿಷತ್ತುಗಳು, ರಾಮಾಯಣ, ಮಹಾಭಾರತ, ಕುರಾನ್, ಬೈಬಲ್ ಗ್ರಂಥಗಳ ಅಧ್ಯಯನ ಮಾಡಿದರು. ಮಹಾಕಾವ್ಯಗಳು, ಧರ್ಮಗ್ರಂಥಗಳ ಬಗ್ಗೆ ಚಿಂತನೆ ನಡೆಸಿ ಆ ಮೂಲಕ ಅಂತರ್ಮುಖಿ ಜ್ಞಾನವನ್ನು ಗಳಿಸಿಕೊಂಡರು’ ಎಂದರು.
‘ಆಧ್ಯಾತ್ಮಿಕ ದೀಕ್ಷೆ ಪಡೆದ ಬಳಿಕ ನಾರಾಯಣ ಗುರು ಜನರಿಗೆ ಹೆಚ್ಚು ಹತ್ತಿರವಾದರು. ಎಲ್ಲರೊಂದಿಗೂ ಸಮಾನವಾಗಿ ಬೆರೆಯತೊಡಗಿದರು. ತನ್ನ ಪ್ರದೇಶದ ಸುತ್ತು ಇರುವ ಪುಲಯ್ಯ, ಪರಯ್ಯ, ನಾಯಾಡಿ ಕೇರಿಗಳಿಗೆ ತೆರಳಿ, ಅಲ್ಲಿನ ಜನರ ಸಂಕಷ್ಟಗಳಿಗೆ ಕಿವಿಯಾಗಿ, ಅವರ ನೋವುಗಳಿಗೂ ಸ್ಪಂದಿಸಿದರು’ ಎಂದು ಹೇಳಿದರು.
‘ಕೆಳ ವರ್ಗದವರಿಗೆ ನಮ್ಮ ದೇವಾಲಯಗಳನ್ನು ನಾವೇ ಕಟ್ಟೋಣ, ನಮಗೆ ಈಳವ ಶಿವ ಬೇಕು ಎಂದು ಕೇರಳದಿಂದ ದಕ್ಷಿಣದ ಕರಾವಳಿಯವರೆಗೂ ಸವರ್ಣಿಯರಿಗಾಗಿ ಹಲವು ದೇವಸ್ಥಾನಗಳನ್ನು ನಿರ್ಮಿಸಿ ದೇವರ ಆರಾಧನೆಗೆ ಅವಕಾಶ ಕಲ್ಪಿಸಿದರು. ಸತ್ಯ, ಧರ್ಮ, ಶಾಂತಿ ಮತ್ತು ದಯೆಯನ್ನೂ ಜನರಿಗೆ ಬೋಧಿಸಿದರು. ತಾವೂ ಸಹ ಅದೇ ಮಾರ್ಗದಲ್ಲಿ ನಡೆದರು’ ಎಂದರು.
ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಸಾಹಿತ್ಯ ಗುರುಪ್ರಸಾದ್, ‘ಸನಾತನ ಹಿಂದೂ ಧರ್ಮದ ಪುನರುಜ್ಜೀವನ ಗೊಳಿಸಿದ ನಾರಾಯಣ ಗುರುಗಳು, ಸಮಾಜದಲ್ಲಿನ ಅಸ್ಪೃಶ್ಯತೆ, ಜಾತಿಯತೆಯನ್ನು ತೊಡೆದು ಹಾಕಿ ರಕ್ತರಹಿತವಾಗಿ ಮಾನವೀಯ ಮೌಲ್ಯಗಳನ್ನು ಅರಳಿಸಿದವರು' ಎಂದು ಹೇಳಿದರು.
ಇದೇ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳು, ಸುಮಾರ 54 ಬಾರಿ ರಕ್ತದಾನ ಮಾಡಿದ ರಾಘವೇಂದ್ರ ಕಲಾಲ, ಕಲಾವಿದ ಭೀಮರಾಯ ಮುಂಡರಗಿ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಭೀಮಾಶಂಕರ ಸ್ವಾಮೀಜಿ, ಶಂಕರಲಿಂಗಯ್ಯ ತಾತ, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ್, ಜಿಲ್ಲಾ ಪಂಚಾಯಿತಿ ಮುಖ್ಯ ಲೆಕ್ಕಾಧಿಕಾರಿ ವೆಂಕಟೇಶ, ನಗರಸಭೆ ಸದಸ್ಯೆ ಪ್ರಭಾವತಿ ಮಾರುತಿ ಕಲಾಲ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ಮಠಪತಿ, ಕರ್ನಾಟಕ ಪ್ರದೇಶ ಆರ್ಯ ಈಡಿಗರ ಸಂಘದ ಜಿಲ್ಲಾ ಅಧ್ಯಕ್ಷ ಮಹೇಂದ್ರ ಕುಮಾರ ಅನಾಪುರ, ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಶರಣಪ್ಪ ಮಾನೇಗಾರ, ಮುಖಂಡ ರಾಜಶೇಖರಗೌಡ ವಡಗೇರಾ ಸೇರಿ ಹಲವರು ಉಪಸ್ಥಿತರಿದ್ದರು.
ನಾರಾಯಣ ಗುರುಗಳು ಎಲ್ಲ ಜಾತಿ ಧರ್ಮದ ನಾಯಕರಾಗಿದ್ದರು. ಎಲ್ಲರ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳಲು ಪ್ರಯತ್ನ ಮಾಡುವ ಮೂಲಕ ಅವರೊಬ್ಬ ಆದರ್ಶ ಪುರುಷ
-ಚನ್ನಾರೆಡ್ಡಿ ಪಾಟೀಲ ತುನ್ನೂರು ಶಾಸಕ
ಅದ್ದೂರಿ ಮೆರವಣಿಗೆ ಗಂಜ್ ಪ್ರದೇಶದ ರಾಜೇಂದ್ರ ಮಹಾಸ್ವಾಮಿಗಳ ಆಶ್ರಮದ ಆವರಣದಲ್ಲಿ ನಾರಾಯಣ ಗುರುಗಳ ಭಾವಚಿತ್ರದ ಮೆರವಣಿಗೆಗೆ ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್ ಹಾಗೂ ಜೆಡಿಎಸ್ ಕಲಬುರಗಿ ಜಿಲ್ಲಾ ಘಟಕದ ಅಧ್ಯಕ್ಷ ಬಾಲರಾಜ್ ಗುತ್ತೇದಾರ್ ಅವರು ಚಾಲನೆ ನೀಡಿದರು. ಅಲಂಕೃತ ವಾಹನದಲ್ಲಿ ನಾರಾಯಣ ಗುರುಗಳ ಭಾವಚಿತ್ರ ಇರಿಸಲಾಯಿತು. ಅದ್ದೂರಿ ಮೆರವಣಿಗೆಯು ಗಂಜ್ ಸರ್ಕಲ್ ಮೈಲಾಪುರ ಬೇಸ್ ಚಕ್ಕರಕಟ್ಟಾ ಗಾಂಧಿ ಚೌಕ್ ಬಾಬು ಜಗಜೀವನರಾಂ ವೃತ್ತ ಕನಕ ವೃತ್ತ ಡಾ.ಬಿ.ಆರ್. ಅಂಬೇಡ್ಕರ್ ವೃತ್ತ ಶಾಸ್ತ್ರಿ ವೃತ್ತ ನೇತಾಜಿ ಸುಭಾಷ್ ವೃತ್ತದ ಮೂಲಕ ಸಾಗಿ ಸರ್ಕಾರಿ ಪದವಿ ಕಾಲೇಜು ತಲುಪಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.