ADVERTISEMENT

ಯಾದಗಿರಿ | ಸಿನಿಮಾ ಥಿಯೇಟರ್‌ಗಳೇ ಇಲ್ಲದ ಜಿಲ್ಲಾ ಕೇಂದ್ರ

ಯಾದಗಿರಿಯಲ್ಲಿ 8ಕ್ಕೂ ಹೆಚ್ಚು ಚಿತ್ರಮಂದಿರಗಳು ಬಂದ್: ನೆರೆಯ ಜಿಲ್ಲೆ, ಹೊರ ರಾಜ್ಯದತ್ತ ಪ್ರೇಕ್ಷರ ಮೊರೆ

ಮಲ್ಲಿಕಾರ್ಜುನ ನಾಲವಾರ
Published 13 ಆಗಸ್ಟ್ 2025, 5:33 IST
Last Updated 13 ಆಗಸ್ಟ್ 2025, 5:33 IST
ಯಾದಗಿರಿ ನಗರದಲ್ಲಿನ ಭಾಗ್ಯಲಕ್ಷ್ಮಿ ಸಿನಿಮಾ ಥಿಯೇಟರ್‌ ಆವರಣದಲ್ಲಿ ಬೆಳೆದ ಗಿಡಗಂಟಿಗಳು 
ಯಾದಗಿರಿ ನಗರದಲ್ಲಿನ ಭಾಗ್ಯಲಕ್ಷ್ಮಿ ಸಿನಿಮಾ ಥಿಯೇಟರ್‌ ಆವರಣದಲ್ಲಿ ಬೆಳೆದ ಗಿಡಗಂಟಿಗಳು    

ಯಾದಗಿರಿ: ಸಿನಿಪ್ರಿಯರಿಗೆ ಮನರಂಜನೆ ಉಣಬಡಿಸುವ ಒಂದೇ ಒಂದು ಚಿತ್ರಮಂದಿರವೂ ಜಿಲ್ಲಾ ಕೇಂದ್ರದಲ್ಲಿ ಇಲ್ಲ. ಹೊಸ ಕನ್ನಡ ಸಿನಿಮಾ ನೋಡಬೇಕಾದರೆ ಪ್ರೇಕ್ಷಕರು ಶಹಾಪುರ, ಇಲ್ಲವೆ ನೆರೆಯ ಕಲಬುರಗಿ ಅಥವಾ ರಾಯಚೂರಿಗೆ ತೆರಳಬೇಕಿದೆ.

ಬೆಳಗಿನ ಜಾವದಿಂದ ಹಿಡಿದು ಮಧ್ಯರಾತ್ರಿ ತನಕ ಪ್ರೇಕ್ಷಕರ ಸಿಳ್ಳೆ, ಕೇಕೆ, ಚಪ್ಪಾಗಳೆಗಳಿಂದ ಸದಾ ಗದ್ದಲದಲ್ಲಿಯೇ ಇರುತ್ತಿದ್ದ ನಗರದ ‘ಅಮ್ರಪಾಲಿ’ ಮತ್ತು ‘ಸಪ್ನಾ’ ಥಿಯೇಟರ್‌ಗಳು ಕೋವಿಡ್‌ಗೂ ಮುನ್ನ ನೆಲಸಮವಾದವು. 2021ರಲ್ಲಿ ಬಾಗಿಲು ಮುಚ್ಚಿದ ‘ಭಾಗ್ಯಲಕ್ಷ್ಮಿ’ ಥಿಯೇಟರ್ ಈಗ ಪಾಳು ಬಿದ್ದು, ಗಿಡಗಂಟಿಗಳಿಂದ ಆವೃತ್ತವಾಗಿದೆ. ಆ ಬಳಿಕ ಹೊಸದಾಗಿ ಯಾವೊಂದು ಚಿತ್ರಮಂದಿರವೂ ಜಿಲ್ಲಾ ಕೇಂದ್ರದಲ್ಲಿ ತಲೆ ಎತ್ತಿಲ್ಲ.

‘ಬದಲಾದ ಸನ್ನಿವೇಶದಲ್ಲಿ ಥಿಯೇಟರ್‌ಗಳಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆಯಲ್ಲಿ ಹಿನ್ನೆಡೆ, ಒಟಿಟಿಗಳ ಲಗ್ಗೆ, ಪ್ರೇಕ್ಷರ ಕೊರತೆಯಿಂದಾಗಿ ಆರ್ಥಿಕ ಹೊರೆಯಾಗಿ ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿ ಥಿಯೇಟರ್‌ಗಳಿಂದ ದೂರ ಸರಿದಿದ್ದೇವೆ’ ಎನ್ನುತ್ತಾರೆ ಥಿಯೇಟರ್ ಮಾಲೀಕರಾಗಿದ್ದ ಮಹೇಂದ್ರ ಕುಮಾರ್ ಅನಪುರ.

ADVERTISEMENT

‘ಯಾದಗಿರಿಯಲ್ಲಿ 1950ರ ದಶಕದಲ್ಲಿ ಸಿನಿಮಾ ಥಿಯೇಟರ್‌ಗಳು ತಲೆ ಎತ್ತಿದ್ದವು. ತೆಲಂಗಾಣದ ಜತೆಗೆ ಗಡಿ ಹಂಚಿಕೊಂಡು, ಉರ್ದು ಭಾಷಿಕರು ಇದ್ದರೂ ಕನ್ನಡ ಸಿನಿಮಾಗಳಿಗೆ ಬಹುಬೇಡಿಕೆ ಇತ್ತು. ಸಾಹಸ ಸಿನಿಮಾಗಳ ಪ್ರಿಯರಾದ ಯಾದಗಿರಿಯ ನಿವಾಸಿಗಳು ಶಿವರಾಜ್‌ಕುಮಾರ್, ದರ್ಶನ್ ಮತ್ತು ಸುದೀಪ್ ಚಲನಚಿತ್ರಗಳನ್ನು ಮುಗಿಬಿದ್ದು ನೋಡುತ್ತಿದ್ದರು. ಥಿಯೇಟರ್‌ ನಡೆಸುವವರಿಗೆ ಸರ್ಕಾರದ ಸಬ್ಸಿಡಿ ಇಲ್ಲ, ಬ್ಯಾಂಕ್ ಸಾಲವೂ ಸಿಗುವುದಿಲ್ಲ. ಈ ಹಿಂದಿನ ಜಿಲ್ಲಾಧಿಕಾರಿ ಕರೆದು ಮತ್ತೆ ಸಿನಿಮಾ ಥಿಯೇಟರ್ ತೆರೆದರೆ ಪರವಾನಗಿ ಶುಲ್ಕವಿಲ್ಲದೆ ಅನುಮತಿ ನೀಡಿ, ಅಗತ್ಯ ಸಹಕಾರ ಕೊಡುವ ಭರವಸೆ ಕೊಟ್ಟಿದ್ದರು. ಥಿಯೇಟರ್ ತೆರೆಯಲು ಆರ್ಥಿಕ ನಷ್ಟದ ಭಯ, ಸ್ವಂತ ಜಾಗವೂ ಇಲ್ಲ’ ಎಂದು ಹೇಳಿದರು.

‘ಜಿಲ್ಲೆಯ ಕೇಂದ್ರಕ್ಕೆ ಸಿನಿಮಾ ಥಿಯೇಟರ್‌ನ ಅವಶ್ಯವಿದೆ. ಸಿನಿಮಾ ಉತ್ತಮವಾದ ಮಾಧ್ಯಮವಾಗಿದ್ದು, ಎಲ್ಲರೂ ಚಲನಚಿತ್ರಗಳು ನೋಡುವಂತೆ ಆಗಬೇಕು. ಬೇರೊಂದು ಜಿಲ್ಲೆಯ ಮೇಲಿನ ಅವಲಂಬನೆಯೂ ತಪ್ಪಬೇಕು. ಈ ಹಿಂದೆ ಈ ಕುರಿತು ಏನೆಲ್ಲ ಚರ್ಚೆಯಾಗಿತ್ತು ಎಂಬುದನ್ನು ಪರಿಶೀಲಿಸಲಾಗುವುದು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ ಕೋಲಾರ ಅವರು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

ಇರುವುದು ಎರಡೇ ಥಿಯೇಟರ್‌ ಜಿಲ್ಲೆಯಲ್ಲಿ ಪ್ರಸ್ತುತ ಶಹಾಪುರದಲ್ಲಿ ಮಾತ್ರ ‘ಜಯಶ್ರೀ’ ಮತ್ತು ‘ಭವಾನಿ’ ಚಿತ್ರಮಂದಿರಗಳು ಪ್ರದರ್ಶನ ನೀಡುತ್ತಿವೆ. ಜಿಲ್ಲೆಯ ಎಲ್ಲಾ ಭಾಗಗಳಿಗೆ ಅಲ್ಲಿಗೆ ಪ್ರೇಕ್ಷಕರು ತೆರಳುವುದು ಸಹ ವಿರಳವಾಗಿದೆ. ಗುರುಮಠಕಲ್ ಸುರಪುರ ಹುಣಸಗಿ ಸೇರಿ ವರ್ಷಗಳ ಹಿಂದೆಯೇ 8ಕ್ಕೂ ಹೆಚ್ಚು ಥಿಯೇಟರ್‌ಗಳು ಬಾಗಿಲು ಮುಚ್ಚಿವೆ. ತೆಲಂಗಾಣ ಗಡಿ ಭಾಗದ ಜನರು ನೆರೆಯ ನಾರಾಯಣಪೇಟ್‌ನ ಥಿಯೇಟರ್‌ಗಳ ಮೊರೆ ಹೋಗುತ್ತಿದ್ದಾರೆ. ಉಳಿದವರು ರಾಯಚೂರು ಕಲಬುರಗಿಯತ್ತ ಮುಖ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.