ADVERTISEMENT

ಯಾದಗಿರಿ: ಪ್ರತ್ಯೇಕ ಒಳ ಮೀಸಲಾತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2025, 5:54 IST
Last Updated 9 ಅಕ್ಟೋಬರ್ 2025, 5:54 IST
ಯಾದಗಿರಿಯಲ್ಲಿ ಬುಧವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಾ.ಎನ್. ಮೂರ್ತಿ ಸ್ಥಾಪಿತ), ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಡಾ.ಬಿ.ಆರ್.ಅಂಬೇಡ್ಕರ್ ಸ್ಥಾಪಿತ) ಜಿಲ್ಲಾ ಸಮಿತಿಯ ಮುಖಂಡರು ಪ್ರತಿಭಟನೆ ನಡೆಸಿದರು
ಯಾದಗಿರಿಯಲ್ಲಿ ಬುಧವಾರ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಾ.ಎನ್. ಮೂರ್ತಿ ಸ್ಥಾಪಿತ), ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಡಾ.ಬಿ.ಆರ್.ಅಂಬೇಡ್ಕರ್ ಸ್ಥಾಪಿತ) ಜಿಲ್ಲಾ ಸಮಿತಿಯ ಮುಖಂಡರು ಪ್ರತಿಭಟನೆ ನಡೆಸಿದರು   

ಯಾದಗಿರಿ: ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ ಬರುವ 59 ಅಲೆಮಾರಿ ಸಮುದಾಯಗಳಿಗೆ ಪ್ರತ್ಯೇಕವಾಗಿ ಶೇ 1ರಷ್ಟು ಒಳ ಮೀಸಲಾತಿ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಡಾ.ಎನ್. ಮೂರ್ತಿ ಸ್ಥಾಪಿತ) ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ (ಡಾ.ಬಿ.ಆರ್.ಅಂಬೇಡ್ಕರ್ ಸ್ಥಾಪಿತ) ಜಿಲ್ಲಾ ಸಮಿತಿಯ ಮುಖಂಡರು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ಪರಿಶಿಷ್ಟ ಜಾತಿಯ ಅಸ್ಪೃಶ್ಯ 59 ಅಲೆಮಾರಿ ಸಮುದಾಯಗಳಿಗೆ ನ್ಯಾ.ಎಚ್.ಎನ್. ನಾಗಮೋಹನದಾಸ್ ಆಯೋಗವು ಶೇ 1ರಷ್ಟು ಪ್ರತ್ಯೇಕ ಮೀಸಲಾತಿಗೆ ಶಿಫಾರಸು ಮಾಡಿದೆ. ಆದರೆ, ರಾಜ್ಯ ಸರ್ಕಾರವು ಆಯೋಗದ ವರದಿಯನ್ನು ಪರಿಷ್ಕರಿಸುವ ಮೂಲಕ ಅಲೆಮಾರಿ ಸಮುದಾಯಗಳಿಗೆ ಅನ್ಯಾಯ ಮಾಡಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು. 

ಆದಿ ಕರ್ನಾಟಕ, ಆದಿ ಆಂಧ್ರ ಮತ್ತು ಆದಿ ದ್ರಾವಿಡ ಜಾತಿಗಳ ಮೂಲ ಜಾತಿಗಳನ್ನು ಗುರುತಿಸಿ, ಆಯಾ ಪ್ರವರ್ಗಕ್ಕೆ ಸೇರಿಸಬೇಕು. ಎಸ್‌ಸಿ, ಎಸ್‌ಟಿ ಮೀಸಲಾತಿಯನ್ನು ಶೇ 30ಕ್ಕೆ ಹೆಚ್ಚಿಸಬೇಕು. ಬೇರೆ ಜಾತಿಗಳನ್ನು ಎಸ್‌ಸಿ, ಎಸ್‌ಟಿಗೆ ಸೇರಿಸುವುದನ್ನು ಕೈಬಿಡಬೇಕು. ಖಾಸಗಿ ಔದ್ಯೋಗಿಕ ವಲಯದಲ್ಲಿ ಮೀಸಲಾತಿ ಜಾರಿ ಆಗಬೇಕು ಎಂದರು.

ADVERTISEMENT

ಎಸ್‌ಸಿಪಿ, ಟಿಎಸ್‌ಪಿ ಮೀಸಲು ಅನುದಾನವನ್ನು ಬೇರೆ ಕಾರ್ಯಗಳಿಗೆ ಬಳಸಿಕೊಳ್ಳಲಾಗಿದೆ. ಆ ಹಣವನ್ನು ಹಿಂತಿರುಗಿಸಿ ಪರಿಶಿಷ್ಟ ಜಾತಿಗಳ ಅಭಿವೃದ್ಧಿಗೆ ಬಳಸಬೇಕು. ರಿಯಲ್ ಎಸ್ಟೇಟ್‌ ದಂಧೆ ಆಗಿರುವ ಸಿಆರ್‌ಇ ಸೆಲ್‌ ಪರಿಷ್ಕರಿಸಿ ದಲಿತರ ಮೇಲಿನ ದೌರ್ಜನ್ಯವನ್ನು ನಿಗ್ರಹಿಸಬೇಕು. ಕಂದಾಯ ಇಲಾಖೆಯಲ್ಲಿ 10 ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿರುವ 12 ಸಾವಿರ ಗ್ರಾಮ ಸಹಾಯಕರನ್ನು ಕಾಯಂ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

ಪ್ರತಿಭಟನೆಯಲ್ಲಿ ಮುಖಂಡರಾದ ಹಣಮಂತ ಬಿ.ಕಟ್ಟಿಮನಿ, ಭೀಮಣ್ಣ ಎಚ್.ಕಚಕನೂರು, ರವಿಕುಮಾರ ದೇವರಮನಿ, ದೊಡ್ಡಮಲ್ಲಪ್ಪ ಮಂದಾಲೆ, ಧರ್ಮಣ್ಣ ನಾಟೇಕಾರ, ಶಂಕರಶಾಸ್ತ್ರಿ, ಆಂಜನೇಯ ಬಲಗಲ್, ಮಾರುತಿ ಚಿತ್ತಾಪುರ, ಭೀಮರಾಯ ಒಂಟೆತ್ತು ಸೇರಿ ಹಲವರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.