ಬಂಧನ
(ಪ್ರಾತಿನಿಧಿಕ ಚಿತ್ರ)
ಯಾದಗಿರಿ: ಜಮೀನು ಸರ್ವೆ ಮಾಡುವ ಕಂದಾಯ ಇಲಾಖೆ ಸಿಬ್ಬಂದಿಯ ರಕ್ಷಣೆಗೆ ತೆರಳಿದ್ದ ಪೊಲೀಸರ ಮೇಲೆ ಹಲ್ಲೆ ಮಾಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದಡಿ 13 ಮಂದಿಯನ್ನು ಗುರುಮಠಕಲ್ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಪೊಲೀಸ್ ಇನ್‌ಸ್ಪೆಕ್ಟರ್ ವೀರಣ್ಣ ಎಸ್.ದೊಡ್ಡಮನಿ ಅವರು ನೀಡಿದ ದೂರಿನ ಅನ್ವಯ, ಗುರುಮಠಕಲ್ ತಾಲ್ಲೂಕಿನ ರಾಮಪುರ ಗ್ರಾಮದ ಅಯ್ಯಪ್ಪ ಮಲ್ಲಪ್ಪ, ಮಲ್ಲಪ್ಪ ಅಯ್ಯಣ್ಣ, ಶರಣಪ್ಪ ಅಯ್ಯಪ್ಪ, ಕಾಂತಪ್ಪ ಅಯ್ಯಪ್ಪ, ಚನ್ನಮ್ಮ ಅಯ್ಯಪ್ಪ, ಮಲ್ಲಮ್ಮ ಮಲ್ಲಪ್ಪ ಸೇರಿ 13 ಮಂದಿಯನ್ನು ಬಂಧಿಸಲಾಗಿದೆ.
ನ್ಯಾಯಾಲಯದ ಆದೇಶದಂತೆ ರಾಮಪುರ ಪಕ್ಕದ ಗಾಜರಕೋಟನಲ್ಲಿನ ರೇಣುಕಮ್ಮ ಅವರಿಗೆ ಸಂಬಂಧಿಸಿದ ಜಮೀನಿನ ಸರ್ವೆಗೆ ಅಧಿಕಾರಿಗಳ ತಂಡ ತೆರಳಿತ್ತು. ರೇಣುಕಮ್ಮ ಅವರ ಎದುರಾಳಿಗಳು ಸಹ ಅಲ್ಲಿಗೆ ಬಂದಿದ್ದರು. ಸರ್ವೆ ಕಾರ್ಯ ಆರಂಭಿಸುತ್ತಿದ್ದಂತೆ ಆರೋಪಿಗಳು ಗುಂಪಾಗಿ ಬಂದು ಕೆಲಸಕ್ಕೆ ಅಡ್ಡಿಪಡಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ.
‘ಜಮೀನು ಸರ್ವೆ ಮಾಡಿದರೆ ವಿಷ ಕುಡಿದು ಸಾಯುವುದಾಗಿ ಆರೋಪಿಗಳು ಬೆದರಿಕೆ ಹಾಕಿದರು. ಮನವೊಲಿಕೆಗೆ ಕಿವಿಗೊಡದೆ, ತಾವೇ ಕಲ್ಲಿನಿಂದ ತಲೆಗೆ ಹೊಡೆದುಕೊಂಡು ರಕ್ತಗಾಯ ಮಾಡಿಕೊಂಡರು. ಆರೋಗ್ಯ ಸಿಬ್ಬಂದಿಯ ಔಷಧಿ ಬಾಕ್ಸ್‌ಗಳನ್ನು ಒಡೆದು ಹಾಕಿದರು. ಭೂದಾಖಲೆ ಹಾಗೂ ಪೊಲೀಸರ ಮೇಲೆ ಹಲ್ಲೆ ಮಾಡಿ, ಕರ್ತವ್ಯಕ್ಕೆ ಅಡ್ಡಿ ಮಾಡಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.