ADVERTISEMENT

ಯಾದಗಿರಿ: 17 ಶಾಲೆಗಳಿಗೆ ಮಾನ್ಯತೆ ನೀಡಲು ಮನವಿ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 6:12 IST
Last Updated 22 ನವೆಂಬರ್ 2025, 6:12 IST
ಯಾದಗಿರಿಯಲ್ಲಿ ಶುಕ್ರವಾರ ಜಿಲ್ಲಾ ಖಾಸಗಿ ಶಾಲಾ ಆಡಳಿತ ಮಂಡಳಿಯ ಒಕ್ಕೂಟದ ಪದಾಧಿಕಾರಿಗಳು ಡಿಡಿಪಿಐ ಚನ್ನಬಸಪ್ಪ ಮುಧೋಳ ಅವರಿಗೆ ಮನವಿ ಸಲ್ಲಿಸಿದರು
ಯಾದಗಿರಿಯಲ್ಲಿ ಶುಕ್ರವಾರ ಜಿಲ್ಲಾ ಖಾಸಗಿ ಶಾಲಾ ಆಡಳಿತ ಮಂಡಳಿಯ ಒಕ್ಕೂಟದ ಪದಾಧಿಕಾರಿಗಳು ಡಿಡಿಪಿಐ ಚನ್ನಬಸಪ್ಪ ಮುಧೋಳ ಅವರಿಗೆ ಮನವಿ ಸಲ್ಲಿಸಿದರು   

ಯಾದಗಿರಿ: ಮಾನ್ಯತೆ ನವೀಕರಣಕ್ಕಾಗಿ ಅರ್ಜಿ ಸಲ್ಲಿಸಿದ 17 ಖಾಸಗಿ ಶಾಲೆಗಳ ಮಾನ್ಯತೆ ನವೀಕರಣ ರದ್ದು ಪಡಿಸುವುದನ್ನು ಮರು ಪರಿಶೀಲಿಸಿ ನವೀಕರಣ ಮಾಡಿಕೊಡಬೇಕು ಎಂದು ಕೋರಿ ಯಾದಗಿರಿ ಜಿಲ್ಲಾ ಖಾಸಗಿ ಶಾಲಾ ಆಡಳಿತ ಮಂಡಳಿಯ ಒಕ್ಕೂಟದ ಪದಾಧಿಕಾರಿಗಳು ಡಿಡಿಪಿಐ ಚನ್ನಬಸಪ್ಪ ಮುಧೋಳ ಅವರಿಗೆ ಮನವಿ ಸಲ್ಲಿಸಿದರು.

ಸಂಘಟನೆಯ ಸದಸ್ಯ ಶಾಲೆಯ ಆಡಳಿತ ಮಂಡಳಿಯವರು ಸರ್ಕಾರ ಮತ್ತು ಶಿಕ್ಷಣ ಇಲಾಖೆಯ ಆದೇಶಗಳನ್ನು ಪಾಲಿಸಿ, ಶಿಕ್ಷಣ ಇಲಾಖೆಯ ಜೊತೆ ಸಹಕಾರ ನೀಡುತ್ತಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಅತ್ಯಲ್ಪ ಶುಲ್ಕ ಪಡೆದು ಗುಣಮಟ್ಟದ ಶಿಕ್ಷಣ, ದಾಸೋಹ ಕಾರ್ಯದಲ್ಲಿ ತೊಡಗಿದ್ದಾರೆ. ಎಸ್‌ಎಸ್‌ಎಲ್‌ಸಿ ಮತ್ತು ಪಿಯು ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಸುಧಾರಣೆಯಾಗಲು ಖಾಸಗಿ ಶಾಲೆಗಳ ಪಾತ್ರವು ಬಹಳ ಮುಖ್ಯವಾಗಿದೆ ಎಂದರು.

ಇತ್ತೀಚಿಗೆ ಸರ್ಕಾರವು ಖಾಸಗಿ ಅನುದಾನ ರಹಿತ ಶಾಲೆಗಳನ್ನು ಗುರಿಯಾಗಿಸಿ ಖಾಸಗಿ ಹಾಗೂ ಸರ್ಕಾರಿ ಶಾಲೆಗೊಂದು ಕಾನೂನು ಮಾಡುತ್ತಿರುವುದು ವಿಷಾದನೀಯ. ಪ್ರಸಕ್ತ ಸಾಲಿನಲ್ಲಿ ಮಾನ್ಯತೆ ನವೀಕರಣ ರದ್ದು ಮಾಡಿರುವುದರಿಂದ ಜಿಲ್ಲೆಯ ಖಾಸಗಿ ಶಾಲೆಯಲ್ಲಿ ಅಧ್ಯಯನ ಮಾಡುತ್ತಿರುವ ಸುಮಾರು 500 ವಿದ್ಯಾರ್ಥಿಗಳ ಭವಿಷ್ಯ ಅತಂತ್ರ ಸ್ಥಿತಿಯಲ್ಲಿದೆ ಎಂದು ಹೇಳಿದರು.

ADVERTISEMENT

ಎಸ್‌ಎಸ್‌ಎಲ್‌ಸಿ ಮಕ್ಕಳ ಭವಿಷ್ಯ ಹಾಗೂ ಖಾಸಗಿ ಶಾಲೆಗಳ ಹಿತದೃಷ್ಟಿಯಿಂದ ಖಾಸಗಿ ಶಾಲೆಗಳಿಗೆ ಅಫಿಡೇವಿಟ್ ಪಡೆದು, ಪ್ರಸಕ್ತ ಸಾಲಿನ ಮಾನ್ಯತೆ ನವೀಕರಣ ರದ್ದುಪಡಿಸಿರುವ 17 ಶಾಲೆಗಳಿಗೆ ಮಾನ್ಯತೆ ನವೀಕರಣ ಮರು ಪರಿಶೀಲಿಸಬೇಕು. ಆ ಶಾಲೆಗಳಿಗೆ  ಮಾನ್ಯತೆ ನವೀಕರಿಸಬೇಕು ಎಂದು ಕೋರಿದರು.

ಒಕ್ಕೂಟದ ಅಧ್ಯಕ್ಷ ವಿಜಯ ಎಂ. ರಾಠೋಡ, ಶಹಾಪುರ ತಾಲ್ಲೂಕು ಅಧ್ಯಕ್ಷ ಆರ್‌.ಚೆನ್ನಬಸು ವನದುರ್ಗ, ಸುರಪುರ ಅಧ್ಯಕ್ಷ ಕೃಷ್ಣ ದರ್ಬಾರಿ, ಯಾದಗಿರಿ ತಾ. ಅಧ್ಯಕ್ಷ ಸುಭಾಷ ಬಡಿಗೇರ, ಕೃಪಾ ಸಂಘಟನೆಯ ಜಿಲ್ಲಾ ಅಧ್ಯಕ್ಷ ಸಾಯಬಣ್ಣ ಬಸವಂತಪುರ, ಕಾನೂನು ಸಲಹೆಗಾರ ನಾಗಪ್ಪ ಮಗದಂಪುರ, ಜಿಲ್ಲಾ ವಕ್ತಾರ ಆನಂದ್ ಕಾಡ್ಲೂರ್, ಪ್ರಕಾಶ ಗುಡಿಮನಿ, ಪ್ರಮುಖರಾದ ಹೊನ್ನಪ್ಪ ಗಂಗನಾಳ, ರಾಮಚಂದ್ರಪ್ಪ ಜಿ. ಸಗರ, ಸತ್ಯಂ ರೆಡ್ಡಿ, ಭೀಮನಗೌಡ ಪಾಟೀಲ, ಶರಣಗೌಡ ಪಾಟೀಲ ಸೇರಿ ಇತರರು ಉ‍ಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.