ಶಹಾಪುರ: ‘ಕೋಲಿ, ಕಬ್ಬಲಿಗ ಮತ್ತು ತಳವಾರ ಸಮುದಾಯದ ಸಂಯುಕ್ತ ಆಶ್ರಯದಲ್ಲಿ ಸೆ.1 ರಂದು ಯಾದಗಿರಿಯಲ್ಲಿ ಜಿಲ್ಲಾಮಟ್ಟದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಪ್ರತಿಭಟನೆಯಲ್ಲಿ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು’ ಎಂದು ಕೋಲಿ ಕಬ್ಬಲಿಗ ಸಮಾಜದ ತಾಲ್ಲೂಕು ಘಟಕದ ಅಧ್ಯಕ್ಷ ರಾಯಪ್ಪ ಸಾಲಿಮನಿ ತಿಳಿಸಿದರು.
ನಗರದ ನಿಜಶರಣ ಚೌಡಯ್ಯ ಮಂದಿರದ ಆವರಣದಲ್ಲಿ ಗುರುವಾರ ಕಬ್ಬಲಿಗ ಹಾಗೂ ತಳವಾರ ಸಮಾಜದ ಮುಖಂಡ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
‘ನಮ್ಮ ಸಮುದಾಯದ ಗುರುಗಳ ವಿರುದ್ಧ ವಾಲ್ಮೀಕಿ ಸಮಾಜದಿಂದ ನಡೆದ ಪ್ರತಿಭಟನೆ ವೇಳೆ ಇಲ್ಲ ಸಲ್ಲದ ಮಾತುಗಳನ್ನು ಆಡಿರುವುದು ಸರಿಯಲ್ಲ. ಈಗಾಗಲೇ ಪ್ರಕರಣ ದಾಖಲಾಗಿದ್ದರೂ ಆರೋಪಿಗಳನ್ನು ಬಂಧಿಸಿಲ್ಲ. ತಳವಾರ ಸಮುದಾಯಕ್ಕೆ ಎಸ್‌ಟಿ ಮೀಸಲಾತಿ ಸೌಲಭ್ಯವನ್ನು ಸರ್ಕಾರ ಸಂವಿಧಾನಾತ್ಮವಾಗಿ ನೀಡಿದೆ. ಸಂವಿಧಾನಾತ್ಮಕವಾಗಿ ಎಲ್ಲರಿಗೂ ಮೀಸಲಾತಿ ಕೇಳುವ ಹಕ್ಕಿದೆ. ಕೇಳಬೇಡಿ, ಕೊಡಬೇಡಿ ಎನ್ನಲು ಇವರಾರು’ ಎಂದು ಸಮಾಜದ ಹಿರಿಯ ಮುಖಂಡ ಅಯ್ಯಣ್ಣ ಕನ್ಯಾಕೊಳ್ಳೂರ ಪ್ರಶ್ನಿಸಿದರು.
‘ಮೊದಲು ರಾಜಮನೆತನದ ವಂಶಸ್ಥರಾದ ವಾಲ್ಮೀಕಿ ಸಮುದಾಯ ಮೀಸಲಾತಿಯಡಿ ಎಸ್‌ಟಿ ಸೌಲಭ್ಯ ಪಡೆದಿರುವುದು ತಪ್ಪಾಗಿದೆ. ಮೀಸಲಾತಿ ಅಸಹಾಯಕರಿಗೆ ಸೌಲಭ್ಯ ಕಲ್ಪಿಸುವುದಾಗಿದೆ, ರಾಜಮನೆತನದವರಿಗೆ ಅಲ್ಲ’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಸಮಾಜದ ಮುಖಂಡರಾದ ರಾಮಣ್ಣ ನಾಯ್ಕೋಡಿ, ಯಲ್ಲಪ್ಪ ನಾಯ್ಕೋಡಿ, ಬಸವರಾಜ ಕಂದಳ್ಳಿ, ಭಾಗೇಶ ಏವೂರ, ಭೀಮಣ್ಣ ಶಖಾಪುರ, ಮರೆಪ್ಪ ಮಿಲ್ಟ್ರಿ, ಗೋಪಾಲ ಸುರಪುರ, ಸಣ್ಣ ಕಾಶಪ್ಪ ಓನೇರ, ಬಸವರಾಜ ಹೊಸಕೆರ, ಬಸವರಾಜ ಚಂಡು ರತ್ತಾಳ, ವೆಂಕಟೇಶ ಬೋನೇರ, ಸಚಿನ್ ನಾಶಿ, ಮಲ್ಲಿಕಾರ್ಜುನ ಬೊಮ್ಮನಳ್ಳಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.