ಯಾದಗಿರಿ: ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಕೈಗೊಂಡಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಾಗಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿಗಳ ಕಚೇರಿ 2.40 ಲಕ್ಷ ಕುಟುಂಬಗಳನ್ನು ಗುರುತಿಸಿದೆ. 2,441 ಶಿಕ್ಷಕರನ್ನು ಗಣತಿದಾರರನ್ನಾಗಿ ನೇಮಿಸಲಾಗಿದೆ.
ರಾಜ್ಯ ಹಿಂದುಳಿದ ಆಯೋಗದ ವತಿಯಿಂದ ಈಚೆಗೆ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರ ಅಧ್ಯಕ್ಷತೆಯಲ್ಲಿ ಈಚೆಗೆ ಸಮೀಕ್ಷೆ ಕುರಿತು ಸಭೆ ನಡೆಯಿತು. ಜೆಸ್ಕಾಂನ ವಿದ್ಯುತ್ ಮೀಟರ್ ರೀಡರ್‌ಗಳು ಮನೆ ಮನೆಗೆ ಜಿಯೊ ಟ್ಯಾಗಿಂಗ್ ಮಾಡುವ ಕಾರ್ಯದಲ್ಲಿ ನಿರತವಾಗಿದ್ದಾರೆ. ಸ್ಟೀಕರ್ ಅಂಟಿಸುವ ಕಾರ್ಯ ಅಂತಿಮ ಹಂತದಲ್ಲಿದೆ ಎಂದು ಜಿಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಹರ್ಷಲ್ ಭೋಯರ್ ಅವರು, ‘ಎಲ್ಲ ತಹಶೀಲ್ದಾರ್‌ಗಳು ತುರ್ತಾಗಿ ಜಿಐ ಟ್ಯಾಗಿಂಗ್ ಮಾಡಿ, ಸ್ಟೀಕರ್ ಅಂಟಿಸುವ ಕಾರ್ಯ ಮುಗಿಸುವಂತೆ ಜೆಸ್ಕಾಂ ಅಧಿಕಾರಿಗಳಿಗೆ ನಿರ್ದೇಶನ ಕೊಡಬೇಕು ಎಂದರು.
ತಹಶೀಲ್ದಾರ್‌ಗಳು ಬ್ಲಾಕ್‌ವಾರು ಗಣತಿದಾರರನ್ನು ನೇಮಿಸಿಕೊಳ್ಳುವಾಗ ಪ್ರತಿ 150 ಮನೆಗಳಿಗೆ ಒಬ್ಬರಂತೆ ಗಣತಿದಾರರನ್ನು ನೇಮಿಸಬೇಕು. ಶಿಕ್ಷಕರು ಕಾರ್ಯನಿರ್ವಹಿಸುತ್ತಿರುವ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿಯೇ ನೇಮಕ ಮಾಡಿಕೊಳ್ಳಬೇಕು. ಮಹಿಳಾ ಶಿಕ್ಷಕರಿಗೆ ಪ್ರಥಮ ಆದ್ಯತೆ ನೀಡಬೇಕು. ನೇಮಕದಲ್ಲಿ ಪಿಡಿಒ ಹಾಗೂ ಗ್ರಾಮ ಆಡಳಿತ ಅಧಿಕಾರಿಗಳ ಸಹಯೋಗವೂ ಪಡೆಯಬೇಕು. ಅನಾರೋಗ್ಯ ಕಾರಣಕ್ಕೆ ಕೊರತೆಯಾಗುವ ಗಣತಿದಾರರನ್ನು ಹೆಚ್ಚುವರಿಯಾಗಿ ಶಿಕ್ಷಕರ ಪಟ್ಟಿಯಿಂದ ಪಡೆದುಕೊಳ್ಳಬೇಕು ಎಂದು ತಹಶೀಲ್ದಾರ್‌ಗಳಿಗೆ ಸೂಚಿಸಿದರು.
60 ಮಾಸ್ಟರ್ ಟ್ರೇನರ್‌ಗಳ ನೇಮಕ: ರಾಜ್ಯ ಮಟ್ಟದ ಮಾಸ್ಟರ್ ಟ್ರೇನರ್‌ಗಳಿಂದ ಜಿಲ್ಲಾ ಮಟ್ಟದ 60 ಟ್ರೇನರ್‌ಗಳಿಗೆ ತರಬೇತಿ ಕೊಡಲಾಗಿದೆ. ಈಗಾಗಲೇ ಮೊದಲ ಹಂತದ ತರಬೇತಿಯೂ ಮುಗಿದಿದೆ. 2ನೇ ಹಂತದ ತರಬೇತಿ ಕೊಡಲಾಗುವುದು ಎಂದು ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಅಧಿಕಾರಿ ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ 998 ಆಶಾ ಕಾರ್ಯಕರ್ತೆಯರು ಕಾರ್ಯನಿರತವಾಗಿದ್ದಾರೆ. ಅವರಿಗೆ ಸಮೀಕ್ಷೆಯ ನಮೂನೆಗಳನ್ನು ನೀಡಲಾಗಿದೆ ಎಂದರು.
ಸಮೀಕ್ಷೆಯಲ್ಲಿ ಸುಮಾರು 60 ಪ್ರಶ್ನೆಗಳಿವೆ. ಪಡಿತರ ಚೀಟಿ ಅಥವಾ ಆಧಾರ್ ಕಾರ್ಡ್ ಸಂಖ್ಯೆಯನ್ನು ದೃಢೀಕರಣ ಪತ್ರವಾಗಿ ಮಾಡಿಕೊಳ್ಳಬೇಕು. ಅವುಗಳ ಜತೆಗೆ ಮತದಾರರ ಗುರುತಿನ ಚೀಟಿ, ಅಂಗವಿಕಲರಿಗೆ ಯುಐಡಿ ಕಾರ್ಡ್ ಸಿದ್ಧವಾಗಿ ಇರಿಸಿಕೊಳ್ಳುವಂತೆ ಜನರಿಗೆ ತಿಳಿಸಬೇಕು ಎಂದು ಸಭೆಯಲ್ಲಿ ಜಿಲ್ಲಾಧಿಕಾರಿ ಸಲಹೆ ನೀಡಿದರು.
ಪ್ರತಿ ಕುಟುಂಬದ ಆಧಾರ್ ಕಾರ್ಡ್ ಮೊಬೈಲ್‌ಗೆ ಜೋಡಣೆ ಆಗಿರುವುದನ್ನು ಖಚಿತಪಡಿಸಿಕೊಳ್ಳಬೇಕು. ಸಮೀಕ್ಷೆಯಲ್ಲಿ ಇ–ಕೆವೈಸಿ ಪ್ರಕ್ರಿಯೆಗೆ ಒಟಿಪಿ ನೋಂದಾಯಿತ ಮೊಬೈಲ್‌ಗೆ ಬರುತ್ತದೆ. 6 ವರ್ಷ ಮೇಲ್ಪಟ್ಟ ಕುಟುಂಬ ಸದಸ್ಯರಿಗೆ ಆಧಾರ್ ಕಡ್ಡಾಯವಾಗಿದೆ ಎಂದು ಹೇಳಿದರು.
ನಗರ ಪ್ರದೇಶಗಳಲ್ಲಿ ಸಮೀಕ್ಷೆಯ ಬಗ್ಗೆ ಶಿಕ್ಷಣ ಇಲಾಖೆಯು ವಿದ್ಯಾರ್ಥಿಗಳ ಮೂಲಕ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು. ಸಮೀಕ್ಷೆಯ ನಮೂನೆಗಳನ್ನು ಕಾಲೇಜಿನ ನೋಟಿಸ್ ಬೋರ್ಡ್‌ಗಳಲ್ಲಿ ಅಂಟಿಸಿ, ನಿತ್ಯ ಪ್ರಾರ್ಥನೆ ಸಮಯದಲ್ಲಿ ಓದಿಸಬೇಕು ಎಂದು ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾ, ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.