ADVERTISEMENT

ನೂರಾರು ಸಮಸ್ಯೆಗಳ ‘ಗೊರನೂರು’

ಗೊರನೂರು; ಸೌಲಭ್ಯಗಳಿಲ್ಲದೆ ಹೈರಾಣಾದ ಗಡಿ ಗ್ರಾಮದ ಜನರು

​ಪ್ರಜಾವಾಣಿ ವಾರ್ತೆ
Published 21 ನವೆಂಬರ್ 2022, 7:31 IST
Last Updated 21 ನವೆಂಬರ್ 2022, 7:31 IST
ಸೈದಾಪುರ ಸಮೀಪದ ಗೊರನೂರ ಗ್ರಾಮದಲ್ಲಿ ಚರಂಡಿ ಸಮಸ್ಯೆಯಿಂದ ಕೊಳಚೆ ನೀರು ರಸ್ತೆ ಮೇಲೆ ಹರಿದು ಕೆಸರು ಗದ್ದೆಯಾಗಿರುವುದು
ಸೈದಾಪುರ ಸಮೀಪದ ಗೊರನೂರ ಗ್ರಾಮದಲ್ಲಿ ಚರಂಡಿ ಸಮಸ್ಯೆಯಿಂದ ಕೊಳಚೆ ನೀರು ರಸ್ತೆ ಮೇಲೆ ಹರಿದು ಕೆಸರು ಗದ್ದೆಯಾಗಿರುವುದು   

ಸೈದಾಪುರ:ಗಡಿ ಗ್ರಾಮಗಳಲ್ಲಿ ಅಧಿಕಾರಿಗಳ ಬೇಜಾವಬ್ದಾರಿತನದಿಂದ ಹಾಗೂ ಜನಪ್ರತಿನಿಧಿಗಳ ದಿವ್ಯ ನಿರ್ಲಕ್ಷ್ಯದಿಂದಾಗಿ ಮೂಲಭೂತ ಸೌಕರ್ಯಗಳ ಸೇರಿದಂತೆ ಇತರೆ ಹತ್ತು ಹಲವು ಸಮಸ್ಯೆಗಳು ಗ್ರಾಮಸ್ಥರನ್ನು ಹೈರಾಣಾಗಿಸಿವೆ.

ಸಮೀಪದ ಜೈಗ್ರಾಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊರೆನೂರು ಗ್ರಾಮದಲ್ಲಿ ಹಲವು ಸಮಸ್ಯೆಗಳು ಹಲವು ದಿನಗಳಿಂದ ತಾಂಡವವಾಡುತ್ತಿದ್ದರೂ ಸಂಬಂಧಿಸಿದ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಗಮನಹರಿಸದೆ ಇರುವುದು ರ್ದುದೈವದ ಸಂಗತಿ.

ಶುದ್ಧ ಕುಡಿಯುವ ನೀರಿನ ಘಟಕವಿಲ್ಲ: ಸುಮಾರು 2,500 ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವಿಲ್ಲ. ದೈನಂದಿನ ಬಳಕೆಗೆ ಇಲ್ಲವೇ ಸಮಾರಂಭಗಳಿಗೆ ಸುಮಾರು 10 ರಿಂದ 15 ಕಿ.ಮೀ ದೂರದ ಗ್ರಾಮಗಳಿಂದ ಶುದ್ಧ ನೀರು ಖರೀದಿಸಿ ತರಬೇಕು. ಗ್ರಾಮದಲ್ಲಿರುವ ಕೊಳವೆ ಬಾವಿಗಳಿಂದ ಪ್ಲೋರೈಡ್‌ಯುಕ್ತ ನೀರು ಬರುತ್ತಿರುವುದು ತಪಾಸಣೆಯಲ್ಲಿ ಖಾತ್ರಿಯಾದರೂ ಯಾವುದೇ ಅಧಿಕಾರಿ, ಜನಪ್ರತಿನಿಧಿಗಳು ಈ ಬಗ್ಗೆ ಕ್ರಮ ಕೈಗೊಳ್ಳುತ್ತಿಲ್ಲ. ಪ್ಲೋರೈಡ್‌ಯುಕ್ತ ನೀರು ಸೇವನೆಯಿಂದ ಜನರ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ಗ್ರಾಮಸ್ಥರು ತಮ್ಮ ಅಳಲನ್ನು ತೊಡಿಕೊಂಡರು.

ADVERTISEMENT

ಜೋತು ಬಿದ್ದ ವಿದ್ಯುತ್ ತಂತಿಗಳು: ಹಲವು ವರ್ಷಗಳ ಹಿಂದೆ ಅಳವಡಿಸಿದ ವಿದ್ಯುತ್ ತಂತಿಗಳು ಇದೀಗ ಗ್ರಾಮದ ಹಲವು ಮನೆಗಳ ಮೇಲೆ ಜೋತು ಬಿದ್ದು ಅಪಾಯಕ್ಕೆ ಅಹ್ವಾನ ನೀಡುತ್ತಿವೆ. ಮಳೆ-ಗಾಳಿಗೆ ಹಲವು ಬಾರಿ ತಂತಿಗಳು ಕಡಿತಗೊಂಡು ಬೀಳುತ್ತಿವೆ. ಈ ಕುರಿತು ಹಲವು ಬಾರಿ ಸಂಬಂಧಿಸಿದ ಜೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ. ಸೂಕ್ತ ಕ್ರಮ ಕೈಗೊಂಡಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಹಳ್ಳಕ್ಕೆ ಸೇತುವೆ ಇಲ್ಲ: ಗೊರನೂರು ಗ್ರಾಮದಿಂದ ನಸಲವಾಯಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ದಾರಿಯಲ್ಲಿ ಹಳ್ಳ ಹರಿಯುತ್ತದೆ. ಈ ಹಳ್ಳಕ್ಕೆ ಸೇತುವೆ ವ್ಯವಸ್ಥೆಯಿಲ್ಲ. ಮಳೆಗಾಲದಲ್ಲಿ ತುಂಬಿ ಹರಿಯುವ ಹಳ್ಳವನ್ನು ದಾಟಿ ರೈತರು ತಮ್ಮ ಹೊಲಗದ್ದೆಗಳಿಗೆ ಹೋಗಲು ಸಾದ್ಯವಾಗುವುದಿಲ್ಲ. ಇದರಿಂದ ಹೊಲಗಳಲ್ಲಿ ಬೆಳೆದ ಬೆಳೆ ನಿರ್ವಹಣೆ ಮಾಡಲು ಸಾಧ್ಯವಾಗದೆ ಹಾಳಾಗುತ್ತವೆ. ಈ ಹಿನ್ನಲೆಯಲ್ಲಿ ಈ ಹಳ್ಳಕ್ಕೆ ಸೇತುವೆ ನಿರ್ಮಿಸಿ ವ್ಯವಸ್ಥೆ ಮಾಡಿ ರೈತರು ಮತ್ತು ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಬೇಕು ಎನ್ನುತ್ತಾರೆ ಗ್ರಾಮಸ್ಥರು.

ಚರಂಡಿ ಮತ್ತು ರಸ್ತೆ ಸಮಸ್ಯೆ: ಗ್ರಾಮದ ಹನುಮಾನ ದೇವಸ್ಥಾನದ ಹತ್ತಿರದಿಂದ ಅಂಬೇಡ್ಕರ್‌ ಭವನದವರೆಗಿನ ಮುಖ್ಯ ರಸ್ತೆ ಸೇರಿದಂತೆ ಗ್ರಾಮದಲ್ಲಿರುವ ಬಹುತೇಕ ಚರಂಡಿಗಳಲ್ಲಿ ಕಸ-ಕಡ್ಡಿ, ಮಣ್ಣು ತುಂಬಿಕೊಂಡು ಮಳೆನೀರು ಮತ್ತು ಗೃಹ ಬಳಕೆ ನೀರು ಸರಾಗವಾಗಿ ಹರಿಯದೆ ಕೊಳಚೆ ನೀರು ರಸ್ತೆಗಳ ಮೇಲೆ ಹರಿಯತ್ತಿವೆ. ಇದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಜನಸಾಮಾನ್ಯರು ಎದುರಿಸುತ್ತಿದ್ದಾರೆ.

ಶಿಕ್ಷಕರ ಕೊರತೆ: 1 ರಿಂದ 8ನೇ ತರಗತಿಯವರೆಗೆ ಸುಮಾರು 250ಕ್ಕೂ ಹೆಚ್ಚು ಮಕ್ಕಳಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕೇವಲ ಇಬ್ಬರು ಶಿಕ್ಷಕರು ಕಾರ್ಯನಿರ್ವಹಿಸುತ್ತಾರೆ. ಇದರಿಂದ ಉನ್ನತ ಅಭ್ಯಾಸಕ್ಕೆ ಪಕ್ಕದ ಅನಪುರ (8 ಕಿ.ಮೀ), ಗುರುಮಠಕಲ್ (27 ಕಿ.ಮೀ) ಪಟ್ಟಣಕ್ಕೆ ಹೋಗುತ್ತಿದ್ದಾರೆ. ಇವರಿಗೆ ಬಸ್ ವ್ಯವಸ್ಥೆ ಸರಿಯಾಗಿಲ್ಲ.

ಸಾರ್ವಜನಿಕ ರುದ್ರಭೂಮಿ ಇಲ್ಲ. ಗ್ರಾಮದ ಸರ್ವೆ 82ರಲ್ಲಿ ಸಾರ್ವಜನಿಕ ರುದ್ರಭೂಮಿಗಾಗಿ ಸ್ಥಳವನ್ನು ಗುರುತಿಸಿದ್ದಾರೆ. ಆದರೆ, ಇಲ್ಲಿಯವರೆಗೆ ಅದಕ್ಕೆ ಸೂಕ್ತ ದಾಖಲೆ ಮೂಲಕ ಗಡಿ ಗುರುತಿಸಿ ತಡೆಗೋಡೆ ನಿರ್ಮಿಸಿಲ್ಲ. ಇದರಿಂದ ಆ ಸ್ಥಳದಲ್ಲಿ ಯಾರೂ ಶವವನ್ನು ಹೂಳುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.