ADVERTISEMENT

ಯಾದಗಿರಿ: ಆಡಳಿತದ ಶಕ್ತಿ ಕೇಂದ್ರಗಳಲ್ಲಿ ಗುಂಡಿಗಳ ದರ್ಬಾರ್

ಬಾಯ್ತೆರೆದ ರಸ್ತೆಯ ಗುಂಡಿಗಳಿಂದ ದುಸ್ತರವಾದ ಸಂಚಾರ: ಮಳೆಗೆ ಕೆಸರು ಗದ್ದೆಯಂತಾಗುವ ರಸ್ತೆಗಳು

ಮಲ್ಲಿಕಾರ್ಜುನ ನಾಲವಾರ
Published 25 ಆಗಸ್ಟ್ 2025, 7:34 IST
Last Updated 25 ಆಗಸ್ಟ್ 2025, 7:34 IST
ಯಾದಗಿರಿಯ ಹತ್ತಿಕುಣಿ ರಸ್ತೆಯು ಮಳೆಯಿಂದ ಕೆಸರು ಗದ್ದೆಯಂತೆ ಆಗಿರುವುದು
ಯಾದಗಿರಿಯ ಹತ್ತಿಕುಣಿ ರಸ್ತೆಯು ಮಳೆಯಿಂದ ಕೆಸರು ಗದ್ದೆಯಂತೆ ಆಗಿರುವುದು   

ಯಾದಗಿರಿ: ಸರ್ಕಾರಿ ಕಚೇರಿಗಳ ಕೆಲಸ, ಆರೋಗ್ಯ ಸೇವೆ, ಶಿಕ್ಷಣ, ವ್ಯವಹಾರ ಸೇರಿದಂತೆ ಮತ್ತಿತರ ಕಾರ್ಯಗಳಿಗಾಗಿ ಜಿಲ್ಲಾ ಕೇಂದ್ರ, ನಗರ, ಪಟ್ಟಣಗಳಿಗೆ ಸುತ್ತಮುತ್ತಲಿನ ಗ್ರಾಮೀಣ ಭಾಗದಿಂದ ಸಾವಿರಾರು ಜನರು ನಿತ್ಯ ಬಂದು ಹೋಗುತ್ತಾರೆ. ಆದರೆ, ಬಹುತೇಕ ಕಡೆಗಳಲ್ಲಿ ಸುಸಜ್ಜಿತವಾದ ರಸ್ತೆಗಳೇ ಇಲ್ಲ. ಗುಂಡಿಗಳಿಂದ ತುಂಬಿರುವ ಪ್ರಮುಖ ರಸ್ತೆಗಳು ಪ್ರಾಣಹರಣಕ್ಕಾಗಿ ಕಾಯುತ್ತಿವೆ.

ಅಪಾಯಕ್ಕೆ ಆಹ್ವಾನ ನೀಡುವ ಗುಂಡಿಗಳು ಬಾಯ್ತೆರೆದು ನಿಂತಿವೆ. ವಾಹನ ಸವಾರರ ಹಾಗೂ ಪಾದಚಾರಿಗಳ ಜೀವಕ್ಕೆ ಕಂಟಕವಾಗಿವೆ. ಸ್ಥಳೀಯ ಆಡಳಿತಗಳು ಹಾಗೂ ಲೋಕೋಪಯೋಗಿ ಇಲಾಖೆ ನಿಯಮಿತವಾಗಿ ರಸ್ತೆಗಳ ನಿರ್ವಹಣೆ ಮಾಡುತ್ತಿಲ್ಲ. ಗುಂಡಿಬಿದ್ದ ರಸ್ತೆಗಳಲ್ಲಿ ಪ್ರಯಾಣಿಸುವುದೇ ಸಾರ್ವಜನಿಕರಿಗೆ ಅನಿವಾರ್ಯವಾಗಿದೆ.

ಜಿಲ್ಲಾ ಕೇಂದ್ರವಾದ ಯಾದಗಿರಿ ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್‌ಗಳಿವೆ. ಪ್ರಮುಖ ರಸ್ತೆಗಳ ಪರಿಸ್ಥಿತಿ ತೀರಾ ಶೋಚನೀಯವಾಗಿದೆ. ಅಡಿಯುದ್ದ ಯಮಸ್ವರೂಪಿ ಗುಂಡಿಗಳು ಅಪಾಯಕ್ಕೆ ಆಹ್ವಾನ ನೀಡುವಂತಿವೆ. ಗುಂಡಿಬಿದ್ದ ರಸ್ತೆಗಳಲ್ಲಿ ವಾಹನ ಚಾಲಾಯಿಸುವಾಗ ಬೈಕ್ ಸವಾರರು ಬಿದ್ದು ಗಾಯಗೊಂಡ ಉದಾಹರಣೆಗಳೂ ಇವೆ. ಹಲವು ವರ್ಷಗಳಿಂದ ಸಾರ್ವಜನಿಕರು ನಡೆದಾಡುತ್ತಿರುವ, ವಾಹನಗಳು ಓಡಾಡುತ್ತಿರುವ ಕಾಲುದಾರಿಗಳೇ ಮುಖ್ಯ ರಸ್ತೆಗಳಾಗಿ ಬದಲಾಗಿವೆ. ಆದರೆ, ಗುಂಡಿಗಳಿಂದ ಮುಕ್ತಿ ಸಿಗುತ್ತಿಲ್ಲ ಎನ್ನುತ್ತಾರೆ ಸ್ಥಳೀಯರು.

ADVERTISEMENT

ನಗರದ ಲುಂಬಿನಿ ಕೆರೆ ರಸ್ತೆ, ಗಾಂಧಿ ವೃತ್ತದ ರಸ್ತೆಗಳು, ಮೈಲಾಪುರ ಅಗಸಿ–ಗಂಜ್ ರಸ್ತೆ, ಹೊಸಳ್ಳಿ ರಸ್ತೆ, ಹತ್ತಿಕುಣಿ ರಸ್ತೆಗಳಲ್ಲಿ ಗುಂಡಿಗಳದ್ದೇ ದರ್ಬಾರ್. ಮಳೆಗಾಲದಲ್ಲಿ ಕೆಸರು ಗದ್ದೆಯಂತೆಯಾದರೆ, ಬೇಸಿಗೆಯಲ್ಲಿ ದೂಳಿನ ಮಜ್ಜನ ಮಾಡಿಸುತ್ತವೆ. ನಗರಸಭೆಗೆ ಲಕ್ಷಾಂತರ ರೂಪಾಯಿ ತೆರಿಗೆ ಪಾವತಿಸಿದರೂ ಅಗತ್ಯ ಇರುವ ರಸ್ತೆ, ಚರಂಡಿ, ಬೀದಿದೀಪ ಸರ್ಮಪಕವಾಗಿ ಸಿಗುತ್ತಿಲ್ಲ ಎಂಬುದು ಸಾರ್ವಜನಿಕರು ಆಕ್ರೋಶವಾಗಿದೆ.

‌‘ನಗರ, ಪಟ್ಟಣಗಳಲ್ಲಿ ಗುಣಮಟ್ಟದ ರಸ್ತೆ ನಿರ್ಮಿಸದಿರುವುದೇ ರಸ್ತೆ ಗುಂಡಿಗೆ ಪ್ರಮುಖ ಕಾರಣವಾಗಿದೆ. ನಿಯಮಗಳ ಪ್ರಕಾರ ರಸ್ತೆಗಳು ನಿರ್ಮಾಣವಾದರೆ ಕನಿಷ್ಠ 5 ವರ್ಷಗಳವರೆಗೆ ಬಾಳಿಕೆ ಬರುತ್ತವೆ. ಆದರೆ, ಕಳಪೆ ಕಾಮಗಾರಿಯಿಂದ ಸಣ್ಣ ಮಳೆಗೇ ರಸ್ತೆಗಳು ಗುಂಡಿಗಳಿಂದ ತುಂಬಿಹೋಗುತ್ತಿವೆ. ಕಳಪೆ ಕಾಮಗಾರಿಯಾದರೂ ಯಾರ ಮೇಲೂ ಕ್ರಮ ಕೈಗೊಳ್ಳುವುದಿಲ್ಲ’ ಎನ್ನುತ್ತಾರೆ ನಗರವಾಸಿಗಳು.

ಪೂರಕ ಮಾಹಿತಿ: ಅಶೋಕ ಸಾಲವಾಡಗಿ, ಟಿ.ನಾಗೇಂದ್ರ, ವಾಟ್ಕರ್ ನಾಮದೇವ

ಯಾದಗಿರಿಯ ಮೈಲಾಪುರ ಅಗಸಿ–ಗಂಜ್ ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳು
ಯಾದಗಿರಿಯ ಲುಂಬಿನಿ ಉದ್ಯಾನ ರಸ್ತೆಯ ದುಸ್ಥಿತಿ
ಯಾದಗಿರಿಯ ಗಾಂಧಿ ವೃತ್ತದ ರಸ್ತೆಯಲ್ಲಿ ನಿಂತ ಮಳೆ ನೀರು
ಸುರಪುರದ ತಹಶೀಲ್ದಾರ್ ಕಚೇರಿ ರಸ್ತೆಯ ದುಸ್ಥಿತಿ
ವಡಗೇರಾ ತಾಲ್ಲೂಕಿನ ಜಿಲ್ಲಾ ಮುಖ್ಯ ರಸ್ತೆ ಮೇಲೆ ಬಿದ್ದಿರುವ ಗುಂಡಿಗಳು
ಶಹಾಪುರ ತಾಲ್ಲೂಕಿನ ಶಿರವಾಳ ಗ್ರಾಮದ ಹದಗೆಟ್ಟಿರುವ ರಸ್ತೆ
ಲಲಿತಾ ಅನಪುರ
ಅನುದಾನ ಮಂಜೂರಾಗಿ ಅಂದಾಜಿತ ಮೊತ್ತವೂ ಸಿದ್ಧವಾಗಿದೆ. ಟೆಂಡರ್ ಕರೆದು ಗುಂಡಿ ಬಿದ್ದಿರುವ ರಸ್ತೆಗಳ ದುರಸ್ತಿಯನ್ನು ಶೀಘ್ರದಲ್ಲಿ ಮಾಡುತ್ತೇವೆ
ಅಭಿಮನ್ಯು ಕಾರ್ಯನಿರ್ವಾಹಕ ಎಂಜಿನಿಯರ್ ಪಿಡಬ್ಲ್ಯುಡಿ ಯಾದಗಿರಿ ವಿಭಾಗ
ಸುರಪುರದಲ್ಲಿ ವೇಣುಗೋಪಾಲಸ್ವಾಮಿ ಜಾತ್ರೆಗಾಗಿ ತಾತ್ಕಾಲಿಕ ದುರಸ್ತಿ ಮಾಡಲಾಗುವುದು. ಜಾತ್ರೆಯ ನಂತರ ಕಾಮಗಾರಿ ಕೈಗೊಳ್ಳಲಾಗುವುದು
ಮಹೇಶ ಮಾಳಗಿ ಕಿರಿಯ ಎಂಜಿನಿಯರ್ ಸುರಪುರ ನಗರಸಭೆ

Quote - ಸುರಪುರದಲ್ಲಿ ಒಂದು ರಸ್ತೆಯೂ ಸರಿಯಾಗಿಲ್ಲ. ನಗರಸಭೆಯು ಜನರ ಜೀವನದ ಜೊತೆಗೆ ಆಟವಾಡುತ್ತಿದೆ. ಗುಣಮಟ್ಟದ ರಸ್ತೆಗಳನ್ನು ನಿರ್ಮಿಸುವ ಅಗತ್ಯವಿದೆ ಉಸ್ತಾದ್ ವಜಾಹತ್ ಹುಸೇನ್ ರಾಜ್ಯ ಸಂಘಟನಾ ಕಾರ್ಯದರ್ಶಿ ಜೆಡಿಎಸ್

ಜಿಲ್ಲಾ ಮುಖ್ಯ ರಸ್ತೆಯ ಮೇಲೆ ನಿತ್ಯ ನೂರಾರು ವಾಹನಗಳು ಸಂಚರಿಸುತ್ತವೆ. ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ರಸ್ತೆ ದುರಸ್ತಿಗೆ ಮುಂದಾಗಬೇಕು
ಮಹಮ್ಮದ್ ಖುರೇಷಿ ವಡಗೇರಾ ಬೈಕ್ ಸವಾರ

Cut-off box - ಎಲ್ಲೆಲ್ಲೂ ಗುಂಡಿಗಳ ಸಾಮ್ರಾಜ್ಯ ಸುರಪುರ: ನಿರಂತರ ಸುರಿದ ಮಳೆಗೆ ನಗರದ ಮುಖ್ಯ ರಸ್ತೆಗಳ ಹಲವೆಡೆ ಗುಂಡಿಗಳು ಬಿದ್ದಿವೆ. ಹನುಮಾನ ಟಾಕೀಸ್ ರಸ್ತೆ ನಡುವೆ ಮ್ಯಾನ್‍ಹೋಲ್ ಶಿಥಿಲಗೊಂಡು ಅಪಾಯಕ್ಕೆ ಆಹ್ವಾನಿಸುವಂತಿದೆ. ಬಸ್ ನಿಲ್ದಾಣದ ಪ್ರವೇಶ ದ್ವಾರದಲ್ಲಿ ಗುಂಡಿಗಳು ಬಿದ್ದು ಬಸ್‍ಗಳು ವಾಲಾಡುತ್ತಾ ನಿಲ್ದಾಣಕ್ಕೆ ಹೋಗಿ ಬರುತ್ತಿವೆ. ನಗರಸಭೆಯ ಸಮೀಪವೇ ದೊಡ್ಡ ಗುಂಡಿ ಬಿದ್ದಿದ್ದು ನಿರ್ಲಕ್ಷ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಕುಂಬಾರಪೇಟೆ ರಸ್ತೆ ತಿಮ್ಮಾಪುರ ಬಸ್ ನಿಲ್ದಾಣ ಸಮೀಪ ತಹಶೀಲ್ದಾರ್ ಕಚೇರಿ ರಸ್ತೆ ಎಂಜಿನಿಯರಿಂಗ್ ಕಾಲೇಜು ಹತ್ತಿರ ರಂಗಂಪೇಟೆ ಎಸ್‍ಬಿಐ ಬಳಿ ಕಬಾಡಗೇರಾ ಲಕ್ಷ್ಮೀಪುರ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು ಚಾಲಕರು ಪರದಾಡುವಂತಾಗಿದೆ. ಮಳೆ ಬಂದು ಹಲವೆಡೆ ರಸ್ತೆ ಕಿತ್ತುಹೋಗಿದೆ. ಮಳೆ ನೀರು ರಸ್ತೆಯ ಇಕ್ಕೆಲಗಳಲ್ಲಿ ಗುಂಡಿಗಳಲ್ಲಿ ಸಂಗ್ರಹವಾಗುತ್ತದೆ. ನಗರಸಭೆಗೆ ಸ್ಥಳೀಯರು ಮಾಡಿರುವ ಮನವಿಗೆ ಸ್ಪಂದನೆ ಸಿಕ್ಕಿಲ್ಲ. ಬೈಕ್ ಸವಾರರು ಬಿದ್ದು ಗಾಯಗೊಂಡ ಘಟನೆಗಳು ನಡೆಯುತ್ತಲೇ ಇವೆ ಎನ್ನುತ್ತಾರೆ ನಗರದ ನಿವಾಸಿಗಳು.

ಸುಗಮ ಸಂಚಾರಕ್ಕೆ ಅಡ್ಡಿ  ವಡಗೇರಾ: ವಡಗೇರಾ ಪಟ್ಟಣದಿಂದ ಯಾದಗಿರಿಗೆ ಸಂಪರ್ಕಿಸುವ ಜಿಲ್ಲಾ ಮುಖ್ಯ ರಸ್ತೆಯ ಅಲ್ಲಲ್ಲಿ ಕಂದಕಗಳು ಬಿದ್ದಿರುವದರಿಂದ ಸುಗಮ ಸಂಚಾರಕ್ಕೆ ಸಂಚಕಾರ ತಂದಿದೆ. ಗಡ್ಡೆಸೂಗುರು ಹುಲ್ಕಲ್ (ಜೆ) ಹಳ್ಳದ ಸಮೀಪ ಹುಲ್ಕಲ್ (ಜೆ) ಗ್ರಾಮದ ಗೇಟ್‌ನ ಅನತಿ ದೂರದಲ್ಲಿ ಅಜೀಮ್ ಪ್ರೇಮ್ ಜಿ ಶಾಲೆ ಸಮೀಪದ ರಸ್ತೆ ಮೇಲೆ ಗುಂಡಿಗಳು ಬಿದ್ದಿವೆ.

ಇದರಿಂದ ವಾಹನ ಚಾಲಕರಿಗೆ ಸಾಕಷ್ಟು ತೊಂದರೆ ಆಗುತ್ತಿದೆ. ಒಂದು ವಾರದ ಹಿಂದೆ ಹುಲ್ಕಲ್ (ಜೆ) ಹಳ್ಳದ ಸಮೀಪ ಗುಂಡಿಯನ್ನು ತಪ್ಪಿಸಲು ಹೋದ ವಾಹನ ಚಾಲಕರು ನಿಯಂತ್ರಣ ತಪ್ಪಿ ಹಳ್ಳದ ಪಕ್ಕದ ಜಮೀನುಗಳಿಗೆ ವಾಹನಗಳು ನುಗ್ಗಿಸಿದ್ದಾರೆ. ದ್ವಿಚಕ್ರ ವಾಹನ ಸವಾರರು ನಿಯಂತ್ರಣ ತಪ್ಪಿ ಕೈಕಾಲುಗಳನ್ನು ಮುರಿದುಕೊಂಡು ಗಾಯಗೊಂಡ ಉದಾಹರಣೆಗಳೂ ಇವೆ.

ಗುಂಡಿಗಳಿಗೆ ಸಿಗದ ಶಾಶ್ವತ ಪರಿಹಾರ

ಶಹಾಪುರ: ನಗರದ ಹಳೆ ಬಸ್ ನಿಲ್ದಾಣ ಮೊಚಿಗಡ್ಡೆ ಬಸವೇಶ್ವರ ವೃತ್ತ ಸೇರಿದಂತೆ ಹಲವೆಡೆಯ ರಸ್ತೆ ಗುಂಡಿಗಳಿಗೆ ಮುರುಮ್‌ ಹಾಕಿ ಮುಚ್ಚಲಾಗಿದೆ. ಗುಂಡಿಗಳಿಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ. ಮಳೆಗೆ ಗ್ರಾಮೀಣ ಭಾಗದ ಹಾಗೂ ನಗರಹೊರ ವಲಯದ ರಸ್ತೆಗಳು ಹದಗೆಟ್ಟಿವೆ.

ತಾಲ್ಲೂಕಿನ ಶಹಾಪುರ–ಶಿರವಾಳ ರಸ್ತೆಯಲ್ಲಿ ಸಂಚರಿಸುವುದು ಯಮಯಾತನೆ ಅನುಭವವನ್ನು ವಾಹನ ಸವಾರರು ಎದುರಿಸುತ್ತಿದ್ದಾರೆ. ರೈಲ್ವೆ ಕಾಮಗಾರಿ ಹಾಗೂ ಭಾರತಮಾಲಾ ರಸ್ತೆ ಕಾಮಗಾರಿ ನಡೆಯುತ್ತಿದೆ. ಇದೇ ರಸ್ತೆಯ ಮೇಲೆ ಅಧಿಕ ವಾಹನ ಓಡಾಡುತ್ತಿರುವುದರಿಂದ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ ಎನ್ನುತ್ತಾರೆ ಶಿರವಾಳ ಗ್ರಾಮದ ನಿವಾಸಿ.  ‘₹ 15 ಕೋಟಿ ವೆಚ್ಚದಲ್ಲಿ ರಸ್ತೆ ಕಾಮಗಾರಿ ದುರಸ್ತಿಗೆ ಅಂದಾಜುಪಟ್ಟಿ ಸಿದ್ಧಪಡಿಸಿದೆ. ತ್ವರಿತವಾಗಿ ಅನುಮೋದನೆ ಪಡೆದ ಬಳಿಕ ಸುಸಜ್ಜಿತವಾದ ರಸ್ತೆ ಕಾಮಗಾರಿ ನಡೆಯಲಿದೆ’ ಎಂದು ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಒಬ್ಬರು ತಿಳಿಸಿದರು.

‘ವಾರದಲ್ಲಿ ಸರ್ವೆ ಮಾಡಿ ದುರಸ್ತಿ’

ಯಾದಗಿರಿ ನಗರದ ಕೆಲವು ರಸ್ತೆಗಳು ನಗರಸಭೆ ವ್ಯಾಪ್ತಿಗೆ ಬಾರದೆ ಇದ್ದರೂ ಸಾರ್ವಜನಿಕರ ಅನುಕೂಲಕ್ಕಾಗಿ ನಾವೇ ದುರಸ್ತಿ ಮಾಡಿಕೊಂಡು ಬರುತ್ತಿದೆ. ವಾರದಲ್ಲಿ ಗುಂಡಿ ಬಿದ್ದ ರಸ್ತೆಗಳ ಸರ್ವೆ ಮಾಡಿಸಿ ದುರಸ್ತಿ ಕಾರ್ಯವನ್ನು ಆರಂಭಿಸುತ್ತೇವೆ’ ಎಂದು ನಗರಸಭೆ ಅಧ್ಯಕ್ಷೆ ಲಲಿತಾ ಅನಪುರ ‘ಪ್ರಜಾವಾಣಿ’ಗೆ ತಿಳಿಸಿದರು. ‘ಬಹುತೇಕ ರಸ್ತೆಗಳ ಪಿಡಬ್ಲ್ಯುಡಿ ಅಧೀನಕ್ಕೆ ಒಳಪಡುತ್ತವೆ. ಆ ರಸ್ತೆಗಳಲ್ಲಿ ಗುಂಡಿ ಬಿದ್ದರೂ ಜನರು ನಮ್ಮನ್ನೇ ಕೇಳುತ್ತಾರೆ. ಅನುದಾನದ ಕೊರತೆ ಇದ್ದರೂ ನಾವೇ ದುರಸ್ತಿ ಮಾಡುತ್ತಿದ್ದೇವೆ. ವಾರ್ಡ್‌ಗಳಲ್ಲಿ ಒಳ ರಸ್ತೆಗಳಿಗೂ ಮುರುಮ್ ಹಾಕಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.