ಯಾದಗಿರಿ: ‘ಯಕ್ಷಗಾನ ಕಲೆ ವಿಶ್ವವ್ಯಾಪಿ ಪಸರಿಸಿದ್ದು, ಇದನ್ನು ಪ್ರತಿಯೊಬ್ಬರೂ ಕಲಿಯಬೇಕು’ ಎಂದು ಹೆಡಗಿಮದ್ರಾ ಮಠದ ಪೀಠಾಧಿಪತಿ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ನುಡಿದರು.
ಹೋಟೆಲ್ ಮತ್ತು ಬೇಕರಿ ಸಂಘಟನೆ ವತಿಯಿಂದ ಸರ್ಕಾರಿ ಪದವಿ ಮಹಾವಿದ್ಯಾಲಯದ ವಿಶ್ವನಾಥರೆಡ್ಡಿ ಮುದ್ನಾಳ ಸಭಾಂಗಣದಲ್ಲಿ ಸೋಮವಾರ ರಾತ್ರಿ ಮಹಾಗಣಪತಿ ಯಕ್ಷಗಾನ ಮಂಡಳಿ ಮಂದಾರ್ತಿ ಉಡುಪಿ ತಂಡದಿಂದ ಮಹಾಶಕ್ತಿ ವೀರಭದ್ರ ಎಂಬ ಪುಣ್ಯಕಥಾನಕ ಯಕ್ಷಗಾನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
‘ದಕ್ಷಿಣ ಕನ್ನಡ ಜಿಲ್ಲೆಯ ಜನರು ಶ್ರಮಜೀವಿಗಳು. ವಿಶ್ವದ ಎಲ್ಲೆಡೆ ತಮ್ಮ ಕಾಯಕದೊಂದಿಗೆ ಬದುಕು ಕಟ್ಟಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ’ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರು ಮಾತನಾಡಿ,‘ದಕ್ಷಿಣ ಕನ್ನಡ ಜಿಲ್ಲೆಯ ಕಲಾ ಸಂಸ್ಕೃತಿ ವಿಶಾಲವಾಗಿದೆ. ಯಕ್ಷಗಾನ ಅದ್ಭುತ ಕಲೆಯಾಗಿದ್ದು, ಇದನ್ನು ನೋಡುವುದರಿಂದ ಮಾನಸಿಕ ನೆಮ್ಮದಿ ಲಭಿಸುತ್ತದೆ’ ಎಂದರು.
ಪದವಿ ಕಾಲೇಜು ಪ್ರಾಂಶುಪಾಲ ಸುಭಾಶ್ಚಂದ್ರ ಕೌಲಗಿ ಮಾತನಾಡಿ,‘ಉತ್ತರ ಕರ್ನಾಟಕದ ದೊಡ್ಡಾಟ, ಬೈಲಾಟಗಳಂತೆಯೇ ಕರಾವಳಿ ಪ್ರದೇಶದಲ್ಲಿ ಯಕ್ಷಗಾನ ಕಲೆ ಪ್ರಸಿದ್ಧವಾಗಿದೆ. ಈ ಕಲೆ ಕರಾವಳಿ ಜನರು ಉಳಿಸಿಕೊಂಡು ಬರುತ್ತಿರುವುದು ಶ್ಲಾಘನೀಯ’ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ಯುವ ಮುಖಂಡ ಮಹೇಶರೆಡ್ಡಿ ಮುದ್ನಾಳ, ಕಾಂಗ್ರೆಸ್ ಯುವ ಮುಖಂಡ ಬಸ್ಸುಗೌಡ ಬಿಳ್ಹಾರ, ದೇವೇಂದ್ರನಾಥ ನಾದ್, ಹೋಟೆಲ್ ಬೇಕರಿ ಸಂಘಟನೆಗಳ ಪದಾಧಿಕಾರಿಗಳಾದ ಪ್ರಶಾಂತ್ ಶೆಟ್ಟಿ, ಸಂತೋಷ ಶೆಟ್ಟಿ, ರವಿಗೌಡ ಗುರುಸುಣಗಿ, ಸುಶಾಂತ ಶೆಟ್ಟಿ, ವಿಶ್ವನಾಥ ಶೆಟ್ಟಿ ಉಪಸ್ಥಿತರಿದ್ದರು.
ಗುರುಪ್ರಸಾದ ವೈದ್ಯ ನಿರೂಪಿಸಿದರು. ಕರುಣಾಕರ ಸ್ವಾಗತಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.