ಯರಗೋಳ: ಗ್ರಾಮ ಪಂಚಾಯಿತಿ ಕೇಂದ್ರ ಸ್ಥಾನವಾದ ಯರಗೋಳದಲ್ಲಿ ಜೆಜೆಎಂ ಕಾಮಗಾರಿಯು ಕಳಪೆಯಾಗಿದ್ದು, ನಲ್ಲಿಗಳಲ್ಲಿ ನೀರು ಬರುತ್ತಿಲ್ಲ ಎಂದು ಆರೋಪಿಸಿ ಕಾಂಗ್ರೆಸ್‌ನ ಸ್ಥಳೀಯ ಮುಖಂಡರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.
ಯರಗೋಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಲ್ಕಪ್ಪನಹಳ್ಳಿ, ತಾನು ನಾಯಕ ತಾಂಡಾ, ಥಾವರ ನಾಯಕ ತಾಂಡಾ, ಖೇಮುನಾಯಕ್ ತಾಂಡಾ, ಅಡ್ಡಮಡಿ ತಾಂಡಾ, ಲಿಂಗಸನಹಳ್ಳಿ ತಾಂಡಾಗಳಲ್ಲಿಯೂ ಕಾಮಗಾರಿ ಕಳಪೆಯಾಗಿದೆ. ಕಾಂಕ್ರಿಟ್ ರಸ್ತೆಯನ್ನು ಅಗೆದು ಹಾಗೆ ಬಿಟ್ಟಿರುವುದರಿಂದ ರಸ್ತೆಗಳಲ್ಲಿ ಗುಂಡಿಯಾಗಿದ್ದು, ಮಳೆ ನೀರು ಸಂಗ್ರಹವಾಗುತ್ತಿದೆ. ಎಂಜಿನಿಯರ್‌ಗಳು ಕಾಮಗಾರಿ ಪರಿಶೀಲನೆ ನಡೆಸಿಲ್ಲ. ಹಾಗಾಗಿ ಗುತ್ತಿಗೆದಾರರಿಗೆ ಬಿಲ್ ಪಾವತಿ ಮಾಡಬಾರದು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶೌಚಾಲಯ, ಪ್ರೌಢಶಾಲೆಗೆ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಜವಾನ ನೇಮಕ ಮಾಡಬೇಕು. ಕಾಳಮ್ಮ ಮತ್ತು ಗಾಂಪಲ್ಲಿ ಓಣಿಗಳಲ್ಲಿ ಪೈಪ್‌ಲೈನ್ ದುರಸ್ತಿ ಮಾಡಬೇಕು ಎಂದು ಇದೇ ವೇಳೆ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ವೇಳೆ ಯಂಕಾರೆಡ್ಡಿ ರೆಡ್ಡಿ ಮಾನೆಗರ್, ಸಾಹೇಬ್ ಗೌಡ ಗಾಂಪಲ್ಲಿ, ಮಲ್ಲಿಕಾರ್ಜುನ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.