ADVERTISEMENT

ಹೆಸರು ಬೆಳೆಗೆ ಹಳದಿ ನಂಜಾಣು ರೋಗ

ಸಸಿಯಿಂದ ಸಸಿಗೆ ಹರಡುತ್ತಿರುವ ರೋಗಕಾರಕ ಬಿಳಿ ನೊಣ

​ಪ್ರಜಾವಾಣಿ ವಾರ್ತೆ
Published 22 ಜುಲೈ 2021, 3:12 IST
Last Updated 22 ಜುಲೈ 2021, 3:12 IST
ಸೈದಾಪುರ ಸಮೀಪದ ಬಳಿಚಕ್ರ ಗ್ರಾಮದ ರೈತರ ಹೊಲಕ್ಕೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಭೇಟಿ ನೀಡಿ ಹೆಸರು ಬೆಳೆಗೆ ತಗುಲಿದ ಹಳದಿ ನಂಜಾಣು ರೋಗ ಕಂಡು ಬಂದ ಕ್ಷೇತ್ರ ವೀಕ್ಷಣೆ ಮಾಡಿದರು
ಸೈದಾಪುರ ಸಮೀಪದ ಬಳಿಚಕ್ರ ಗ್ರಾಮದ ರೈತರ ಹೊಲಕ್ಕೆ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಭೇಟಿ ನೀಡಿ ಹೆಸರು ಬೆಳೆಗೆ ತಗುಲಿದ ಹಳದಿ ನಂಜಾಣು ರೋಗ ಕಂಡು ಬಂದ ಕ್ಷೇತ್ರ ವೀಕ್ಷಣೆ ಮಾಡಿದರು   

ಬಳಿಚಕ್ರ(ಸೈದಾಪುರ): ಉತ್ತಮ ಮಳೆಯಿಂದಾಗಿ ರೈತರು ಖುಷಿಯಿಂದ ಹೆಸರು ಬಿತ್ತನೆ ಮಾಡಿದ್ದರು. ಆದರೆ, ಹಳದಿ ನಂಜಾಣು ಮೊಸಾಯಿಕ್ ರೋಗದಿಂದ ಬೆಳೆಗಳು ಹಾಳಾಗುತ್ತಿದ್ದು, ರೈತರಿಗೆ ಚಿಂತೆ ಹೆಚ್ಚಿಸಿದೆ.

ಸಮೀಪದ ಬಳಿಚಕ್ರ ವಲಯದಲ್ಲಿ ಬರುವ ಹಲವು ಗ್ರಾಮಗಳಲ್ಲಿ ವಾಡಿಕೆಯಂತೆ ರೈತರು ಸುಮಾರು 1,200 ಹೆಕ್ಟೆರ್‌ನಲ್ಲಿ ಹೆಸರು ಬೆಳೆ ಬಿತ್ತನೆ ಮಾಡಲಾಗಿದೆ. ಕಳೆದೊಂದು ವಾರದಿಂದ ಮಳೆ ಸುರಿಯುತ್ತಿರುವುದರಿಂದ ಹಾಗೂ ಮೋಡ ಕವಿದ ತಂಪು ವಾತಾವರಣದಿಂದ ಹೆಸರು ಬಿತ್ತನೆ ಮಾಡಿದ ಪ್ರತಿ ಹೊಲದಲ್ಲಿ ಹಳದಿ ನಂಜಾಣು ರೋಗ ಕಾಣಿಸಿಕೊಂಡಿದೆ. ಈ ರೋಗವು ಬಿಳಿ ನೊಣ ಎಂಬ ರೋಗಕಾರಕ ಸಸಿಯಿಂದ ಸಸಿಗೆ ಹರಡುತ್ತಿದೆ. ಇದು ರೈತರನ್ನು ಆತಂಕಕ್ಕೆ ದೂಡಿದೆ.

ಉತ್ತಮ ಮಳೆಯಿಂದ ಫಸಲು ಸಮೃದ್ಧವಾಗಿ ಬೆಳೆದಿದೆ. ಆದರೆ ಈಗ ಹೂ ಬಿಡುವ ಹಾಗೂ ಕಾಯಿ ಕಟ್ಟುವ ಸಮಯದಲ್ಲಿಯೇ ಹಳದಿ ರೋಗದ ಕಾಟ ಶುರುವಾಗಿದೆ. ಇದರಿಂದ ಇಳುವರಿ ಕಡಿಮೆ ಬರುವ ಸಾಧ್ಯತೆ ಇದೆ. ಸಾವಿರಾರು ರೂಪಾಯಿ ಖರ್ಚು ಮಾಡಿ ಬೀಜ, ರಸಗೊಬ್ಬರ ತಂದು ಬಿತ್ತನೆ ಮಾಡಿದ ರೈತರು ಈಗ ಹಳದಿ ಬಣ್ಣಕ್ಕೆ ತಿರುಗಿದ ಬೆಳೆಯನ್ನು ನೋಡಿ ಚಿಂತೆಗೀಡಾಗಿದ್ದಾರೆ.

ADVERTISEMENT

ರೋಗದ ಲಕ್ಷಣಗಳು: ಆರಂಭದಲ್ಲಿ ಎಲೆಯ ಮೇಲೆ ಹಳದಿ ಬಣ್ಣದ ಚುಕ್ಕೆಗಳು ಕಾಣಿಸುತ್ತವೆ. ನಂತರ ಎಲೆಗಳು ಕಪ್ ರೀತಿಯಲ್ಲಿ ಮುದುಡಿಕೊಳ್ಳುತ್ತವೆ. ರೋಗದ ತೀವ್ರತೆ ಹೆಚ್ಚಾದಾಗ ಸಸಿಗಳೆಲ್ಲ ಹಳದಿ ಬಣ್ಣಕ್ಕೆ ತಿರುಗಿ ಕಾಯಿಗಳು ಸುಕ್ಕುಗಟ್ಟುತ್ತವೆ. ಇದರಿಂದಾಗಿ ಗಿಡಗಳ ಬೆಳವಣಿಗೆ ಕುಂಠಿತಗೊಂಡು ಇಳುವರಿ ಕಡಿಮೆಯಾಗುತ್ತದೆ. ತೇವದ ನಂತರ ಬರುವ ಬೆಚ್ಚಗಿನ ವಾತಾವರಣ ರೋಗ ಹರಡುವ ಬಿಳಿ ನೊಣದ ಸಂತಾನೋತ್ಪತ್ತಿಗೆ ತುಂಬಾ ಅನುಕೂಲವಾಗುತ್ತದೆ.

ಹಳದಿ ರೋಗ ತಡೆಗಟ್ಟುವ ವಿಧಾನ: ರೋಗದ ಪ್ರಾರಂಭಿಕ ಹಂತದಲ್ಲಿ ಬಾಧಿತ ಸಸಿಗಳನ್ನು ಕಿತ್ತೆಸೆಯಬೇಕು. ಸಾಧ್ಯವಾದಷ್ಟು ಹೊಲದ ಸುತ್ತಲೂ ರೋಗ ನಿರೋಧಕ ತಳಿಗಳಾದ ಜೋಳ, ಸಜ್ಜೆ ಬೆಳೆಗಳನ್ನು ಬೆಳೆದರೆ ರೋಗಕಾರಕದ ಹರಡುವಿಕೆಯನ್ನು ತಡೆಯಬಹುದು.

ಹಳದಿ ಅಂಟು ಕಾರ್ಡ್‌ಗಳನ್ನು ಬಳಸಬೇಕು. ಕೀಟನಾಶಕಗಳಾದ ತಯಾಮಿತಾಕ್ಷಮ್ 0.3 ಗ್ರಾಂ, ಅಥವಾ ಅಸಿಟಾಮಿಪ್ರಿಡ್ 20, ಎಸ್‍ಪಿ, ಇಮಿಡಾಕ್ಲೋಪ್ರಿಡ್ 0.5 ಎಂಎಲ್, ಬೇವಿನ ಎಣ್ಣೆ 0.3 ಎಂಎಲ್ ನೀರಿಗೆ ಬೆರೆಸಿ ಸಿಂಪಡಣೆ
ಮಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.