ADVERTISEMENT

ಅನ್ವಯಿಕ ಓದಿನಿಂದ ಯಶಸ್ಸು ಖಚಿತ: ಕೆಎಎಸ್ ಅಧಿಕಾರಿ ಸ್ನೇಹಾ ಕೋರಿ ಸಂದರ್ಶನ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2021, 21:30 IST
Last Updated 29 ಸೆಪ್ಟೆಂಬರ್ 2021, 21:30 IST
ಸ್ನೇಹಾ ಕೋರಿ
ಸ್ನೇಹಾ ಕೋರಿ   

ಮೂಲತಃ ಧಾರವಾಡ ಜಿಲ್ಲೆ ಕುಂದಗೋಳ ತಾಲ್ಲೂಕಿನ ಸಂಶಿಯವರಾದ ಸ್ನೇಹಾ ಕೋರಿ, 2014ರಲ್ಲಿ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾದ ಅವರು ವಾಣಿಜ್ಯ ತೆರಿಗೆ ಇಲಾಖೆಯ ಧಾರವಾಡ ವಿಭಾಗದಲ್ಲಿ ಪ್ರೊಬೇಷನರಿ ಸಿಟಿಒ ಅಧಿಕಾರಿಯಾಗಿ ಸೇವೆ ಸಲ್ಲಿಸಿ, ಹುಬ್ಬಳ್ಳಿಯಲ್ಲಿ ಎಲ್‌.ಜಿ.ಎಸ್‌.ಟಿ.ಒ (ಸ್ಥಳೀಯ ಜಿ.ಎಸ್‌.ಟಿ ಅಧಿಕಾರಿ) ಆಗಿ ಸೇವೆಯಲ್ಲಿದ್ದಾರೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಗಳಿಸುವ ನಿಟ್ಟಿನಲ್ಲಿ ಅವರು ಇಲ್ಲಿ ಮಾರ್ಗದರ್ಶನ ನೀಡಿದ್ದಾರೆ.

l ಆರಂಭಿಕ ಶೈಕ್ಷಣಿಕ ಜೀವನ ಹೇಗಿತ್ತು?

ಸಂಶಿಯಲ್ಲಿಯೇ ಎಸ್ಸೆಸ್ಸೆಲ್ಸಿವರೆಗೆ ಕನ್ನಡ ಮಾಧ್ಯಮದಲ್ಲಿ ಅಧ್ಯಯನ. ಹುಬ್ಬಳ್ಳಿಯ ಪಿ.ಸಿ.ಜಾಬಿನ್‌ ಕಾಲೇಜಿನಲ್ಲಿ ಪಿಯುಸಿ ಓದು. ಬಿಎಸ್‌ಸಿ (ಕೃಷಿ ಮಾರುಕಟ್ಟೆ) ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಓದಿದ್ದೇನೆ. ಬಿಎಸ್‌ಸಿ ಮುಗಿದ ಮೊದಲ ವರ್ಷದಲ್ಲಿ ಮೊದಲನೇ ಪ್ರಯತ್ನದಲ್ಲಿಯೇ ಕನ್ನಡ ಮಾಧ್ಯಮದಲ್ಲಿ ಪರೀಕ್ಷೆ ಬರೆದು ಕೆಎಎಸ್‌ ಅಧಿಕಾರಿಯಾದೆ.

ADVERTISEMENT

l ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಹೇಗಿತ್ತು?

ಬಾಲ್ಯದಿಂದಲೇ ಓದುವ ಹವ್ಯಾಸವಿತ್ತು. ಐಪಿಎಸ್‌ ಅಧಿಕಾರಿ ಸಂತೋಷ ಹಾದಿಮನಿ ಅವರಿಂದ ನಾಗರಿಕ ಪರೀಕ್ಷೆ ಎದುರಿಸಲು ಪ್ರೇರಣೆ ದೊರೆಯಿತು. ಒಬಿಸಿ ಕೋಟಾದಡಿ ಕೋಚಿಂಗ್‌ಗೆ ಆಯ್ಕೆಯಾಗಿ ಹೈದರಾಬಾದ್‌ಗೆ ತೆರಳಿದ್ದೆ. ನಂತರ ಧಾರವಾಡದಲ್ಲಿಯೇ ಉಳಿದುಕೊಂಡು ಸ್ವಯಂ ಅಧ್ಯಯನ ಮಾಡಿದೆ. ಹಲವು ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಸಂಸ್ಥೆಗಳಲ್ಲಿ ಕಾರ್ಯಾಗಾರ ಹಾಗೂ ಮಾದರಿ ಪರೀಕ್ಷೆಗಳನ್ನು ಎದುರಿಸಿದೆ.‌ ನಾನು ದಿನಕ್ಕೆ ಇಂತಿಷ್ಟು ಗಂಟೆ ಓದಬೇಕು ಎಂಬ ನಿಯಮ ಹಾಕಿಕೊಂಡಿರಲಿಲ್ಲ. ಆದರೆ, ಓದಿದ್ದಷ್ಟನ್ನು ಆನಂದದಿಂದ, ಅನ್ವಯ ಮಾಡಿಕೊಂಡು ಓದುತ್ತಿದ್ದೆ. ರಾಜ್ಯಸಭಾ ಟಿವಿ ವೀಕ್ಷಣೆ, ಆಲ್‌ ಇಂಡಿಯಾ ರೇಡಿಯೊ ವಾರ್ತೆ ಕೇಳಿದ್ದು, ಒಂದು ಪರಿಕಲ್ಪನೆಯ ಪರ-ವಿರೋಧ ನಿಲುವುಗಳನ್ನು ಅರ್ಥ ಮಾಡಿಕೊಳ್ಳಲು ನೆರವು ನೀಡಿತು. ರಾಜ್ಯ ಪಠ್ಯಕ್ರಮದ 5 ರಿಂದ 12ನೇ ತರಗತಿವರೆಗಿನ ಪುಸ್ತಕಗಳ ಓದು ಬಹಳ ನೆರವಾಯಿತು.

l ನೋಟ್ಸ್‌, ಬರವಣಿಗೆ ಹೇಗಿತ್ತು?

ನಿರ್ದಿಷ್ಟವಾದ ಕೆಲವು ಪುಸ್ತಕಗಳನ್ನು ಮಾತ್ರ ಓದಿ ಮುಖ್ಯಾಂಶಗಳನ್ನು ‘ಮೈಂಡ್‌ ಮ್ಯಾಪಿಂಗ್’ಗೆ ಅನುಕೂಲ ಆಗುವಂತೆ ‘ಡಯಾಗ್ರಾಮಿಕ್ ಪ್ಯಾಟರ್ನ್‌’ ಅಲ್ಲಿ ಬರೆದಿಟ್ಟುಕೊಳ್ಳುತ್ತಿದ್ದೆ. ಇದರಿಂದ ವಿಷಯ ಬಲು ಸುಲಭವಾಗಿ, ಬಹು ದಿನಗಳವರೆಗೆ ನೆನಪಿನಲ್ಲಿ ಉಳಿಯುತ್ತಿತ್ತು. ಸರ್ಕಾರದಿಂದ ಪ್ರಕಾಶಿತವಾಗುವ ಯೋಜನಾ, ಕುರುಕ್ಷೇತ್ರ, ಎಕನಾಮಿಕ್‌ ಸರ್ವೇ, ಬಜೆಟ್‌ ರಿಪೋರ್ಟ್‌, ಜನಸಂಖ್ಯಾ ವರದಿ ನಿಯತಕಾಲಿಕೆಗಳನ್ನು ಓದಿ ಪ್ರಬಂಧ ಬರವಣಿಗೆ ರೂಢಿಸಿಕೊಳ್ಳುತ್ತಿದ್ದೆ.

l ಸ್ಪರ್ಧಾರ್ಥಿಗಳಿಗೆ ನಿಮ್ಮ ಸಲಹೆ ಏನು?

ನೀವು ಬರೆಯುವ ಪರೀಕ್ಷೆಯ ಪಠ್ಯಕ್ರಮದ ಒಂದು ಪ್ರತಿಯನ್ನು ತಪ್ಪದೇ ಇಟ್ಟುಕೊಳ್ಳಬೇಕು. ಹಳೆಯ ಪ್ರಶ್ನೆಪತ್ರಿಕೆಗಳ ಪರಾಮರ್ಶೆ, ಒಂದು ಪರಿಕಲ್ಪನೆಯ ಬಗ್ಗೆ 360 ಡಿಗ್ರಿ ಪರಿಶೀಲನೆ ಅಗತ್ಯ. ಆದಷ್ಟು ಸಾಮಾಜಿಕ ಜಾಲತಾಣಗಳಿಂದ ದೂರವಿರಬೇಕು. ‘ನೀ ನನಗೆ- ನಾ ನಿನಗೆ’ ಎಂಬ ತತ್ವದಡಿ ಸಮಾನಮನಸ್ಕರೊಡನೆ ಉತ್ತಮ ಜ್ಞಾನ ವಿನಿಮಯಕ್ಕೆ ಆದ್ಯತೆ ನೀಡಬೇಕು.

l ಮಹಿಳಾ ಸ್ಪರ್ಧಾರ್ಥಿಗಳಿಗೆ ವಿಶೇಷ ಕಿವಿಮಾತು?

ನಾನು, ನಮ್ಮ ತಾಲ್ಲೂಕಿನ ಮೊದಲ ಮಹಿಳಾ ಕೆಎಎಸ್‌ ಅಧಿಕಾರಿ. ಈ ನಿಟ್ಟಿನಲ್ಲಿ ನನ್ನ ತಂದೆ-ತಾಯಿಯ ಪರಿಶ್ರಮ ಮತ್ತು ನೆರವು ಅಪಾರವಾಗಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಂಬಂಧಿಸಿದಂತೆ ಮಹಿಳೆಯರಿಗೆ ಕುಟುಂಬದ ಬೆಂಬಲ ದೊರೆತದ್ದೇ ಆದರೆ, ಬಹುತೇಕರು ಖಂಡಿತವಾಗಿ ಯಶಸ್ಸು ಸಾಧಿಸುತ್ತಾರೆ. ತಂದೆ- ತಾಯಿ, ಹೆಣ್ಣುಮಕ್ಕಳಿಗಾಗಿ ಆಸ್ತಿ ಮಾಡುವ ಬದಲು ನಮ್ಮನ್ನೇ ಆಸ್ತಿಯಾಗಿಸಬೇಕು. ‘ನಮಗೆ ಕರುಣೆ ಬೇಡ; ಪ್ರೋತ್ಸಾಹ ಸಾಕು’. ಪ್ರಸ್ತುತ ಪತಿ ಗುರುಬಸಯ್ಯ ಕೂಡ ಸಿಟಿಒ ಆಗಿದ್ದು, ಓದಲು ಪ್ರೋತ್ಸಾಹಿಸುತ್ತಿದ್ದಾರೆ. ಇಬ್ಬರೂ ಒಟ್ಟಾಗಿಯೇ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸಿದ್ದೇವೆ.

‘ಪ್ರಜಾವಾಣಿ’ಯ ಋಣ ದೊಡ್ಡದು

ನಾನು ಆರಂಭದಲ್ಲಿ ‘ಪ್ರಜಾವಾಣಿ’ ಪತ್ರಿಕೆಯ ಪ್ರತಿನಿಧಿಯಾಗಿ ಕೆಲಸ ಮಾಡಿದ್ದೆ. ಆ ಸಂದರ್ಭದಲ್ಲಿ ಈ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಲೇಖನಗಳು ಹಾಗೂ ಸಾಧಕರ ಯಶೋಗಾಥೆಗಳು ನನಗೆ ಪ್ರೇರಣೆ ನೀಡಿದವು. ಅನ್ನ, ಅಕ್ಷರ ಎರಡೂ ವಿಧದ ದಾಸೋಹವಿತ್ತ ಈ ಪತ್ರಿಕೆಯ ಋಣ ದೊಡ್ಡದು. ನಾನು ಪರೀಕ್ಷೆಗೆ ಸಿದ್ಧಳಾಗುವಾಗ ಪ್ರಚಲಿತ ವಿದ್ಯಮಾನಗಳ ಕುರಿತು ಪ್ರತಿನಿತ್ಯ ಈ ಪತ್ರಿಕೆಯನ್ನ ಓದಿ ನೋಟ್ಸ್‌ ಮಾಡಿಕೊಳ್ಳುತ್ತಿದ್ದೆ. ಇದರ ಸಂಪಾದಕೀಯ ಪುಟಗಳಲ್ಲಿ ಪ್ರಕಟವಾದ ಲೇಖನಗಳು ಕೆಪಿಎಸ್‌ಸಿ ಪರೀಕ್ಷೆ ಎದುರಿಸಲು ನನಗೆ ತುಂಬಾ ನೆರವಾದವು. ಹೀಗಾಗಿ, ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವವರಿಗಂತೂ ‘ಪ್ರಜಾವಾಣಿ’ಯ ಓದು ಕಡ್ಡಾಯ ಎನ್ನಬಹುದು.

(ಸಂದರ್ಶಕರು: ನಿರ್ದೇಶಕರು, ಸ್ಲೇಟ್‌ ಸ್ಪರ್ಧಾತ್ಮಕ ಪರೀಕ್ಷೆಗಳ ಮಾರ್ಗದರ್ಶನ ಕೇಂದ್ರ, ಧಾರವಾಡ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.