ADVERTISEMENT

ನಿರ್ಗತಿಕರ ಆರೈಕೆಯಲ್ಲಿ ಅರಳಿದ ಮಹಿಳೆಯ ಸ್ವಾಭಿಮಾನದ ಬದುಕು

ಶಿವರಾಜು ಮೌರ್ಯ
Published 18 ಮಾರ್ಚ್ 2019, 20:00 IST
Last Updated 18 ಮಾರ್ಚ್ 2019, 20:00 IST
   

ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಲಕ್ಷ್ಮೀಸಾಗರದಿಂದ ಕೆಲಸ ಅರಸಿ ಗಂಡನ ಜೊತೆ ಬೆಂಗಳೂರಿಗೆ ಬಂದ ಲತಾ, ಗಾರ್ಮೆಂಟ್ಸ್‌ಗಳಲ್ಲಿ ಕೆಲಸ ಹುಡುಕಿಕೊಂಡರು. ಗಂಡ ಬಾಡಿಗೆ ಆಟೊ ಓಡಿಸುತ್ತಿದ್ದರು. ಗಂಡನ ಗಳಿಕೆ ಕುಟುಂಬ ನಿರ್ವಹಣೆಗೆ ಸಾಕಾಗುತ್ತಿರಲಿಲ್ಲ. ಸಂಪಾದನೆಯ ಬಹುಭಾಗವನ್ನು ಕುಡಿತ ನುಂಗಿ ಹಾಕುತಿತ್ತು.

ಹತ್ತನೆ ತರಗತಿವರೆಗೆ ವಿದ್ಯಾಭ್ಯಾಸ ಪಡೆದಿದ್ದ ಲತಾ ಪೋಷಕರ ಆಸೆಯಂತೆ ಸೋದರತ್ತೆಯ ಮಗನನ್ನೆ ವರಸಿದ್ದರು. ಕೊನೆಗೊಂದು ದಿನ ಆತ ಕುಡಿತಕ್ಕೆ ಬಲಿಯಾದ.ಚಿಕ್ಕ ಮಗುವಿನ ಭವಿಷ್ಯದ ಚಿಂತೆಯಲ್ಲಿದ್ದ ಲತಾಪೋಷಕರ ಒತ್ತಾಸೆಗೆ ಕಟ್ಟುಬಿದ್ದು ಕಾಫಿ ಎಸ್ಟೇಟ್ ಮಾಲೀಕರೊಬ್ಬರನ್ನು ಎರಡನೇ ಮದುವೆಯಾದರು. ಆದರೆ, ಒಂದು ದಿನ ಆತ ಪುಟ್ಟ ಮಗು ಮತ್ತು ಪೋಷಕರನ್ನು ಬಿಟ್ಟು ಬರುವಂತೆ ಷರತ್ತು ಮುಂದಿಟ್ಟ. ಮಗನ ಭವಿಷ್ಯವನ್ನು ಆಯ್ಕೆ ಮಾಡಿಕೊಂಡಲತಾ, ಒಂಟಿಯಾಗಿ ಸ್ವಾಭಿಮಾನದ ಬದುಕು ರೂಪಿಸಿಕೊಳ್ಳುವ ದಿಟ್ಟ ನಿರ್ಧಾರ ಕೈಗೊಂಡರು.

ವಿಕ್ಟೋರಿಯಾ ಆಸ್ಪತ್ರೆ, ಕೆ.ಸಿ.ಜನರಲ್ ಆಸ್ಪತ್ರೆ ಹೆಲ್ಪ್‌ಲೈನ್‌ನಲ್ಲಿ ಸ್ವಯಂಸೇವಕಿಯಾಗಿ ಕೆಲಸಕ್ಕೆ ಸೇರಿಕೊಂಡರು. ಗ್ರಾಮೀಣ ಪ್ರದೇಶದ ಬಡ ಹೆಣ್ಣುಮಕ್ಕಳನ್ನು ಬೆಂಗಳೂರಿಗೆ ಕರೆತಂದು ರೋಗಿಗಳ ಆರೈಕೆ, ಶುಶ್ರೂಷೆ ತರಬೇತಿ ಕೊಡಿಸುತ್ತಿದ್ದರು. 2010ರಲ್ಲಿ ಹೊಯ್ಸಳ ಚಾರಿಟೇಬಲ್ ಫೌಂಡೇಷನ್ ಪ್ರಾರಂಭಿಸಿದರು. ನಂತರ ಕೆ.ಆರ್.ಪುರ ಸಮೀಪದ ಆನಂದಪುರದಲ್ಲಿ ನಿರ್ಗತಿಕರಿಗೆ ಅನಾಥ ಆಶ್ರಮ ತೆರೆದರು.

ADVERTISEMENT

ಈವರೆಗೆ ನೂರಕ್ಕೂ ಹೆಚ್ಚು ವೃದ್ದರು, ರೋಗಿಗಳು, ಮಹಿಳೆಯರು, ಮಕ್ಕಳಿಗೆ ಆಶ್ರಮದಲ್ಲಿ ಆಶ್ರಯ ಕೊಟ್ಟಿದ್ದಾರೆ. ಕ್ಯಾನ್ಸರ್, ಹೃದಯ ಸಂಬಂಧಿ ಕಾಯಿಲೆ, ಇರುಳುಗುರುಡುತನ ಮತ್ತು ಇತರ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳಿಗೆ ಉಚಿತ ಚಿಕಿತ್ಸೆ, ಆರೈಕೆ ನೀಡುತ್ತಿದ್ದಾರೆ. ಬಡ ಹೆಣ್ಣುಮಕ್ಕಳಿಗೆ ದುಡಿಮೆಯ ದಾರಿ ತೋರಿಸಿದ್ದಾರೆ.

ವಿಳಾಸ:ಹೊಯ್ಸಳ ಚಾರಿಟೆಬಲ್ ಫೌಂಡೇಶನ್ ವೃದ್ಧಾಶ್ರಮ, ಟಿ.ಸಿ.ಪಾಳ್ಯ ರಸ್ತೆ, ಆನಂದಪುರ, ಕೆ.ಆರ್.ಪುರ, ಬೆಂಗಳೂರು-36. ಸಂಪರ್ಕ ಸಂಖ್ಯೆ: 99017 77981

ಸುರಕ್ಷಿತ ಗೂಡು ಸೇರಿದೆ

* ಇಪ್ಪತ್ತು ವರ್ಷಗಳ ಹಿಂದೆ ನನ್ನವರೆಲ್ಲರನ್ನು ಕಳೆದುಕೊಂಡೆ. ನಂತರ ಇಪ್ಪತ್ತು ವರ್ಷ ಬೇರೆಯವರ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದೆ. ಮನೆಯ ಮಾಲೀಕರೇ ಆಶ್ರಯ ಕೊಟ್ಟಿದ್ದರು. ಮುಪ್ಪಿನ ಕಾಲದಲ್ಲಿನನ್ನನ್ನು ನೋಡಿಕೊಳ್ಳಲು ಅವರಿಗೆ ಕಷ್ಟವಾಗಬಹುದೆಂದು ಈ ಆಶ್ರಮಕ್ಕೆ ಸೇರಿಕೊಂಡಿದ್ದೇನೆ

– ಲಕ್ಷ್ಮಮ್ಮ

* ತಮಿಳುನಾಡಿನಲ್ಲಿ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸಿದ್ದೇನೆ.ನಿವೃತ್ತಿಯಾದ ನಂತರ ನನ್ನ ಮಕ್ಕಳು ಸಂಬಂಧಿಕರು ನನ್ನನ್ನು ಸರಿಯಾಗಿ ನೋಡಿಕೊಳ್ಳುತ್ತಿರಲಿಲ್ಲ. ಇಲ್ಲಿ ಆಶ್ರಯ ಪಡೆದು ನೆಮ್ಮದಿಯಿಂದ ಬದುಕುತ್ತಿದ್ದೇನೆ.

–ಸ್ವಾಮಿನಾಥನ್, ತಮಿಳುನಾಡು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.