ADVERTISEMENT

ಎಸ್‌ಎಸ್‌ಸಿ ಪರೀಕ್ಷೆ ಕನ್ನಡದಲ್ಲೂ ಬರೆಯಲು ಅವಕಾಶ

​ಪ್ರಜಾವಾಣಿ ವಾರ್ತೆ
Published 20 ಜನವರಿ 2023, 13:13 IST
Last Updated 20 ಜನವರಿ 2023, 13:13 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ಕೇಂದ್ರ ಸಿಬ್ಬಂದಿ ನೇಮಕಾತಿ ಆಯೋಗ (ಎಸ್‌ಎಸ್‌ಸಿ) ಇದೇ ಮೊದಲ ಬಾರಿ ಕನ್ನಡ, ಕೊಂಕಣಿ ಸೇರಿದಂತೆ 15 ಸ್ಥಳೀಯ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶ ಕಲ್ಪಿಸಿದೆ.

ಎಸ್‌ಎಸ್‌ಸಿ 10,880 ಮಲ್ಟಿ ಟಾಸ್ಕಿಂಗ್ ಸ್ಟಾಫ್‌ (ಎಂಟಿಎಸ್‌) ಹಾಗೂ ಸುಂಕ ಮತ್ತು ಪರೋಕ್ಷ ತೆರಿಗೆಯ ಕೇಂದ್ರೀಯ ಮಂಡಳಿ, ನರ್ಕೋಟಿಕ್ಸ್‌ ಕಂಟ್ರೋಲ್‌ ಬ್ಯೂರೊದಲ್ಲಿ ಖಾಲಿ ಇರುವ 529 ಹವಾಲ್ದಾರ್‌ ಸೇರಿ 11,409 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದು, ಪರೀಕ್ಷೆ ತೆಗೆದುಕೊಳ್ಳುವ ರಾಜ್ಯದ ಅಭ್ಯರ್ಥಿಗಳು ಕನ್ನಡವನ್ನು ಆಯ್ಕೆ ಮಾಡಿಕೊಳ್ಳಲು 08 ಕೋಡ್‌ ಬಳಸಬಹುದು.

ಕಂಪ್ಯೂಟರ್‌ ಆಧಾರಿತ ಪರೀಕ್ಷೆಯು (ಪತ್ರಿಕೆ ಒಂದು ) ವಸ್ತುನಿಷ್ಠ ಮಾದರಿಯ ಬಹುಆಯ್ಕೆ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ. ಈ ಪತ್ರಿಕೆಯನ್ನು ಅಭ್ಯರ್ಥಿಗಳು ತಮಗೆ ಅನುಕೂಲವಾಗುವ ಇಂಗ್ಲಿಷ್‌ ಅಥವಾ ಹಿಂದಿಯಲ್ಲೇ ಬರೆಯಬಹುದು. ಎರಡನೇ ಪತ್ರಿಕೆಯನ್ನು ಅಭ್ಯರ್ಥಿಗಳು ಕನ್ನಡ ಸೇರಿದಂತೆ ಸೂಚಿತ 15 ಭಾಷೆಯಲ್ಲಿ ಬರೆಯಬಹುದು. 50 ಅಂಕಗಳಿಗೆ ವಿವರಣಾತ್ಮಕ ಅಥವಾ ಪ್ರಬಂಧ ಮಾದರಿಯಲ್ಲಿ ಉತ್ತರಿಸಬೇಕಾಗುತ್ತದೆ (45 ನಿಮಿಷಗಳ ಅವಕಾಶ).

ADVERTISEMENT

ಫೆ.17 ಅರ್ಜಿ ಸಲ್ಲಿಸಲು ಕೊನೆಯ ದಿನ. ಏಪ್ರಿಲ್‌ನಲ್ಲಿ ಪರೀಕ್ಷೆ ನಡೆಯಲಿದೆ. ಎಸ್ಸೆಸ್ಸೆಲ್ಸಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು. ಮಾಹಿತಿಗೆ ಸಹಾಯವಾಣಿ 08025502520, 9483862020, ವೆಬ್‌ಸೈಟ್‌ https://ssc.nic.in ಸಂಪರ್ಕಿಸಬಹುದು.

ಪ್ರಾದೇಶಿಕ ಮೀಸಲಾತಿಗೆ ಒತ್ತಾಯ

ಎಸ್‌ಎಸ್‌ಸಿ ಪರೀಕ್ಷೆಗಳನ್ನು ಇದುವರೆಗೂ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಬರೆಯಲು ಅವಕಾಶವಿತ್ತು. ಇದರಿಂದ ಹಿಂದಿ ಭಾಷಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುತ್ತಿದ್ದರು. ಹಾಗಾಗಿ, ಇದುವರೆಗೂ ಕೇಂದ್ರ ಸರ್ಕಾರದ ಸಚಿವಾಲಯ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಹಿಂದಿ ಭಾಷಿಕರ ಪ್ರಾಬಲ್ಯವಿತ್ತು.

‘ಕನ್ನಡದಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡಿರುವುದು ಸ್ವಾಗತಾರ್ಹ. ಹಾಗೆಯೇ, ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಕನ್ನಡಿಗರನ್ನೇ ಆಯ್ಕೆ ಮಾಡಬೇಕು. ಪ್ರಾದೇಶಿಕ ಮೀಸಲಾತಿ ಕಲ್ಪಿಸಬೇಕು. ಆಗ ಮಾತ್ರ ಅಧಿಕ ಸಂಖ್ಯೆಯ ಕನ್ನಡಿಗರಿಗೆ ರಾಜ್ಯದಲ್ಲೇ ಕೆಲಸ ಮಾಡಲು ಅನುಕೂಲವಾಗುತ್ತದೆ’ ಎನ್ನುವುದು ರಾಜ್ಯದ ಅಭ್ಯರ್ಥಿಗಳ ಒತ್ತಾಯ.

ರಾಜ್ಯದ ಪರೀಕ್ಷಾ ಕೇಂದ್ರಗಳು

ಬೆಂಗಳೂರು

ಬೆಳಗಾವಿ

ಹುಬ್ಬಳ್ಳಿ

ಕಲಬುರಗಿ

ಮಂಗಳೂರು

ಮೈಸೂರು

ಶಿವಮೊಗ್ಗ

ಉಡುಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.