ADVERTISEMENT

ವೆಡ್ಡಿಂಗ್ ಪ್ಲಾನರ್‌ ಕೋರ್ಸ್‌: ಮದುವೆ ಮಾಡಿಸಿ, ಹಣ ಸಂಪಾದಿಸಿ...

​ಪ್ರಜಾವಾಣಿ ವಾರ್ತೆ
Published 31 ಜನವರಿ 2020, 6:22 IST
Last Updated 31 ಜನವರಿ 2020, 6:22 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಹಿಂದೆಲ್ಲಾ ಮದುವೆ ಎಂದರೆ ಮನೆಯವರು ನಿಶ್ಚಯಿಸಿ, ಮಂಟಪ, ಪುರೋಹಿತರು ಸೇರಿದಂತೆ ಸಕಲವನ್ನೂ ನೋಡಿಕೊಂಡು ಮದುವೆ ಮುಗಿಸುತ್ತಿದ್ದರು. ಆದರೆ ಇಂದಿನ ಒತ್ತಡದ ಜೀವನದಲ್ಲಿ ಮದುವೆಗೆ ಮಂಟಪ ಬುಕ್ಕಿಂಗ್, ಅಲಂಕಾರ, ಅಡುಗೆ ಇವೆಲ್ಲವೂ ಮನೆಯವರೇ ಮಾಡುವುದು ಅಸಾಧ್ಯದ ಮಾತು. ಈಗ ಟ್ರೆಂಡ್ ಬದಲಾಗಿದೆ. ಈ ಟ್ರೆಂಡ್‌ಗೆ ತಕ್ಕಂತೆ ಉದ್ಯೋಗವೊಂದು ಸೃಷ್ಟಿಯಾಗಿದೆ. ಅದುವೇ ವೆಡ್ಡಿಂಗ್ ಪ್ಲಾನರ್.

ವೆಡ್ಡಿಂಗ್ ಪ್ಲಾನರ್‌ಗಳಾಗಲು ಡಿಗ್ರಿ ಮುಗಿಸಿದರೆ ಸಾಕು. ಇಂತಹದ್ದೇ ಕೋರ್ಸ್ ಮಾಡಬೇಕೆಂಬುದೇನೂ ಇಲ್ಲ. ಆದರೆ ಕ್ರಿಯಾಶೀಲತೆ, ಕೌಶಲಗಳೇ ವೆಡ್ಡಿಂಗ್ ಪ್ಲಾನರ್‌ಗಳಿಗೆ ಜೀವಾಳ.

ವೆಡ್ಡಿಂಗ್ ಪ್ಲಾನರ್‌ಗಳು

ADVERTISEMENT

ಮದುವೆಯ ಸಂಪ್ರದಾಯ ಹಾಗೂ ಕಾರ್ಯಕ್ರಮಗಳನ್ನು ಮದುವೆ ಮಾಡಿಕೊಳ್ಳುವವರ ಅವಶ್ಯಕತೆ ಹಾಗೂ ಬಜೆಟ್‌ಗೆ ಅನುಸಾರವಾಗಿ ತಮ್ಮ ಕೌಶಲವನ್ನು ಉಪಯೋಗಿಸಿ ಯಾವುದೇ ಕುಂದುಕೊರತೆ ಕಾಣಿಸದಂತೆ ಮಾಡುವ ಕೆಲಸ ವೆಡ್ಡಿಂಗ್ ಪ್ಲಾನರ್‌ಗಳದ್ದು.

ಪುರೋಹಿತರು, ಮನೋರಂಜನಾ ಕಾರ್ಯಕ್ರಮ, ಫೋಟೊಗ್ರಫಿ ಸೇರಿದಂತೆ ಸಂಬಂಧಿಕರು ಹಾಗೂ ಮದುವೆಗೆ ಬಂದವರನ್ನು ಆತ್ಮೀಯತೆಯಿಂದ ನೋಡಿಕೊಳ್ಳುವ ಜವಾಬ್ದಾರಿಯು ಇವರದ್ದೇ. ವೃತ್ತಿಪರ ವೆಡ್ಡಿಂಗ್ ಪ್ಲಾನರ್‌ಗಳು ಅಮೆರಿಕ, ಇಂಡಿಯಾ, ಚೀನಾ, ಯೂರೋಪ್‌ನಂತಹ ದೊಡ್ಡ ದೊಡ್ಡ ರಾಷ್ಟ್ರಗಳಲ್ಲೂ ಇರುತ್ತಾರೆ. ‌

ಕೋರ್ಸ್‌ಗಳು

ವೆಡ್ಡಿಂಗ್ ಪ್ಲಾನಿಂಗ್ ಅನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳುವವರಿಗೆ ವೆಡ್ಡಿಂಗ್ ಪ್ಲಾನಿಂಗ್ ಸಂಬಂಧಿಸಿದ ಅಲ್ಪಾವಧಿ ಕೋರ್ಸ್‌ಗಳಿವೆ. ಜೊತೆಗೆ ಸರ್ಟಿಫಿಕೇಟ್ ಕೋರ್ಸ್ ಕೂಡ ಲಭ್ಯವಿದೆ. ಇದಕ್ಕೆಂದೇ ಪ್ರತ್ಯೇಕ ಪದವಿ ಹಾಗೂ ಸ್ನಾತಕೋತ್ತರ ಪದವಿ ಕೋರ್ಸ್‌ಗಳಿಲ್ಲ. ಹಾಸ್ಪಿಟಾಲಿಟಿ ಮ್ಯಾನೇಜ್‌ಮೆಂಟ್‌, ಫುಡ್ ಅಂಡ್ ಬೆವ್‌ರೇಜ್ ಮ್ಯಾನೇಜ್‌ಮೆಂಟ್‌, ಸ್ಪೆಷಲ್ ಇವೆಂಟ್ ಮ್ಯಾನೇಜ್‌ಮೆಂಟ್‌, ಟೂರಿಸಂ ಮ್ಯಾನೇಜ್‌ಮೆಂಟ್ ಕೋರ್ಸ್ ಮಾಡಿದವರು ಈ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬಹುದು.

ವೇತನ

ವೆಡ್ಡಿಂಗ್ ಪ್ಲಾನರ್‌ಗಳಿಗೆ ಇಂತಿಷ್ಟೇ ಎಂಬ ನಿರ್ದಿಷ್ಟ ವೇತನ ಇರುವುದಿಲ್ಲ. ಒಂದು ಮದುವೆಯ ಖರ್ಚಿನಲ್ಲಿ ಇಂತಿಷ್ಟು ಶೇಕಡಾ ಮೊತ್ತವನ್ನು ಅವರು ತಮಗೆ ನಿಗದಿ ಪಡಿಸಿಕೊಂಡಿರುತ್ತಾರೆ.

ಡೆಸ್ಟಿನೇಷನ್ ವೆಡ್ಡಿಂಗ್

ಇತ್ತೀಚೆಗೆ ಹೆಚ್ಚು ಖ್ಯಾತಿ ಪಡೆಯುತ್ತಿರುವ ಡೆಸ್ಟಿನೇಷನ್ ವೆಡ್ಡಿಂಗ್‌ಗೆ ಡಾಕ್ಯುಮೆಂಟೇಷನ್ ಕೆಲಸಗಳು ಕಷ್ಟಕರ. ಯಾವುದೇ ದೇಶದಲ್ಲಿ ಮದುವೆಯಾಗಬೇಕು ಎಂದಾದರೆ ಆ ದೇಶದ ರಾಷ್ಟ್ರೀಯತೆಯ ಆಧಾರದ ಮೇಲೆ ಮದುವೆ ಗಂಡು ಹಾಗೂ ಹೆಣ್ಣಿಗೆ ಬೇರೆ ಬೇರೆ ರೀತಿಯ ಕಾನೂನಿನ ರೀತಿ ರಿವಾಜುಗಳಿರುತ್ತವೆ. ಈ ಎಲ್ಲಾ ರೀತಿ-ರಿವಾಜುಗಳನ್ನು ಅಲ್ಲಿನ ಸ್ಥಳೀಯ ವೆಡ್ಡಿಂಗ್ ಪ್ಲಾನರ್‌ಗಳು ನೋಡಿಕೊಳ್ಳುತ್ತಾರೆ.

ವೆಡ್ಡಿಂಗ್ ಪ್ಲಾನರ್ ಜವಾಬ್ದಾರಿಗಳು

* ಮದುವೆ ಗಂಡು-ಹೆಣ್ಣು ಹಾಗೂ ಪೋಷಕರ ಬೇಡಿಕೆಗಳನ್ನು ತಿಳಿದುಕೊಳ್ಳಲು ಅವರ ಸಂದರ್ಶನ ಮಾಡುವುದು

* ಬಜೆಟ್ಗೆ ತಯಾರಿ ನಡೆಸುವುದು

* ಕಾರ್ಯಕ್ರಮದ ರೂಪುರೇಷೆಗಳನ್ನು ರೂಪಿಸುವುದು

* ಸೂಕ್ತ ಸ್ಥಳವನ್ನು ಹುಡುಕುವುದು( ಹೋಟೆಲ್, ಪಾರ್ಟಿ ಹಾಲ್, ಚರ್ಚ್, ದೇವಸ್ಥಾನ)

* ಫೋಟೊಶೂಟ್ ನಡೆಸುವುದು

* ಕಾರ್ಯಕ್ರಮದಲ್ಲಿ ಭಾಗವಹಿಸುವ ಮಂದಿಯ ಪಟ್ಟಿ ತಯಾರಿಸುವುದು

* ಮದುವೆಗೆ ಸಂಬಂಧಿಸಿದ ಫೋಟೊಗ್ರಾಫರ್, ವಿಡಿಯೊಗ್ರಾಫರ್, ಬ್ಯೂಟಿಶಿಯನ್, ಅಲಂಕಾರ ಮಾಡುವವರು, ಊಟ ಹಾಗೂ ಪಾನೀಯ ವ್ಯವಸ್ಥೆಗಳನ್ನು ಮಾಡುವ ವೃತ್ತಿಪರರನ್ನು ಹುಡುಕುವುದು

* ಕಾರ್ಯಕ್ರಮದಲ್ಲಿ ಯಾವುದೇ ಅನಾಹುತಗಳಾದರೆ ಇನ್ನೊಂದು ಯೋಜನೆಯೊಂದಿಗೆ ಸಿದ್ಧರಾಗಿರುವುದು

* ಸ್ಟಾಪ್ ವೇರ್ ಸಹಾಯದೊಂದಿಗೆ ಕಾರ್ಯಕ್ರಮವನ್ನು ಆಯೋಜಿಸುವುದು.

* ಡೆಸ್ಟಿನೇಷನ್ ವೆಡ್ಡಿಂಗ್ ಗಳಿಗೆ ಕಾನೂನು ಪತ್ರಗಳನ್ನು ತಯಾರಿ ಮಾಡಿಕೊಳ್ಳುವುದು.

* ಡಾನ್ಸ್ ಫ್ಲೋರ್, ಊಟದ ಸ್ಥಳ, ಕುರ್ಚಿ ಟೇಬಲ್‌ಗಳ ವ್ಯವಸ್ಥೆ ಮಾಡುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.