ADVERTISEMENT

ಸುವರ್ಣ ಸಂಭ್ರಮ ಎಸ್‌ಡಿಎಂ ಶಿಕ್ಷಣ ಡಿಂಡಿಮ

ಇರ್ಷಾದ್ ಎಂ.ವೇಣೂರು
Published 13 ಡಿಸೆಂಬರ್ 2015, 19:50 IST
Last Updated 13 ಡಿಸೆಂಬರ್ 2015, 19:50 IST

ಉಜಿರೆ ಎಂದಾಕ್ಷಣ ನೆನಪಾಗುವ ಎಸ್‌ಡಿಎಂ ಕಾಲೇಜಿಗೀಗ ಸುವರ್ಣ ಸಂಭ್ರಮ. 1966ರಲ್ಲಿ ಸಿದ್ಧವನದಲ್ಲಿ ಕೇವಲ 120 ವಿದ್ಯಾರ್ಥಿಗಳಿಂದ ಪ್ರಾರಂಭವಾದ ಸಂಸ್ಥೆ ಇಂದು 2,880ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ವಿದ್ಯಾದಾನ ನೀಡುತ್ತಿದೆ. ಎತ್ತಿನಗಾಡಿಗಳು ಅಡ್ಡಾಡುತ್ತಿದ್ದ, ತೀರಾ ಗ್ರಾಮೀಣ ಪ್ರದೇಶವಾಗಿದ್ದ ಉಜಿರೆಯಲ್ಲಿ ನೆಲೆಯೂರಿದ ಎಸ್‌ಡಿಎಂ ಕಾಲೇಜು ಇಂದು ಶಿಕ್ಷಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿದೆ. ಯುಜಿಸಿಯಿಂದ ‘ಸೆಂಟರ್ ಫಾರ್ ಎಕ್ಸಲೆನ್ಸ್’ ಎಂಬ ಮಾನ್ಯತೆ ಪಡೆದಿರುವ ಈ ಕಾಲೇಜು ಈಗ ಸ್ವಾಯತ್ತ ಸಂಸ್ಥೆ.

ಧರ್ಮಸ್ಥಳದ ಧರ್ಮಾಧಿಕಾರಿಯಾಗಿದ್ದ ಡಿ. ರತ್ನವರ್ಮ ಹೆಗ್ಗಡೆ ಅವರ ದೂರದರ್ಶಿತ್ವವೇ ಈ ಶಿಕ್ಷಣ ಸಂಸ್ಥೆ. ಶಿಕ್ಷಣ ಕನಸಿನ ಕೂಸಾಗಿದ್ದ ದಿನಗಳಲ್ಲಿ ‘ಹೈಸ್ಕೂಲ್ ಶಿಕ್ಷಣದ ಬಳಿಕ ದೂರದ ಊರುಗಳಿಗೆ ಹೋಗಬೇಕಲ್ಲ, ಇಲ್ಲೇ ಎಲ್ಲಾದರೂ ಕಾಲೇಜು ಪ್ರಾರಂಭಿಸಿದರೆ ಹೇಗೆ’ ಎಂಬ ರತ್ನವರ್ಮ ಹೆಗ್ಗಡೆಯವರ ದೂರಾಲೋಚನೆಯೇ ಈ ಶಿಕ್ಷಣದ ಕಾಶಿಯ ಪ್ರತಿರೂಪ. ತಾಲ್ಲೂಕು ಕೇಂದ್ರ ಬೆಳ್ತಂಗಡಿಯಿಂದ 6 ಕಿ.ಮೀ ದೂರದಲ್ಲಿರುವ ಎಸ್‌ಡಿಎಂ ತಾನು ಬೆಳೆದಿದ್ದಲ್ಲದೇ ಕುಗ್ರಾಮವಾಗಿದ್ದ ಉಜಿರೆಯನ್ನು ನಗರವಾಗಿ ಬೆಳೆಸಿದೆ. 

ಧರ್ಮಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ‘ಆಧುನಿಕ ಧರ್ಮಸ್ಥಳದ ರೂವಾರಿ’ ಎನಿಸಿಕೊಂಡಿರುವ ಡಿ. ವೀರೇಂದ್ರ ಹೆಗ್ಗಡೆ ಹಲವು ಬದಲಾವಣೆಗೆ ಕಾರಣರಾದರು. ‘ವಿದ್ಯಾರ್ಥಿಗಳ ಬೇಡಿಕೆಗೆ ಅನುಗುಣವಾಗಿ 1971ರಲ್ಲಿ ಕಾಲೇಜು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡಿತು. ಅಂದು ₹ 9 ಲಕ್ಷ ವೆಚ್ಚದಲ್ಲಿ ನಿರ್ಮಾಣವಾದ ಕಾಲೇಜನ್ನು, ತುಮಕೂರಿನ ಸಿದ್ದಗಂಗಾ ಶಿವಕುಮಾರ ಸ್ವಾಮೀಜಿ ಉದ್ಘಾಟಿಸಿದರು. ವಿದ್ಯಾರ್ಥಿಗಳಿಗಾಗಿ ಸದಾ ಹೊಸತನಕ್ಕೆ ತುಡಿಯುವ ಕಾಲೇಜು ನಮ್ಮದು’ ಎನ್ನುತ್ತಾರೆ ಧರ್ಮಸ್ಥಳ ಮಂಜುನಾಥೇಶ್ವರ ಎಜುಕೇಷನಲ್ ಟ್ರಸ್ಟ್‌ನ ಅಧ್ಯಕ್ಷ ಡಿ.ವೀರೇಂದ್ರ ಹೆಗ್ಗಡೆ.

ಉಜಿರೆಯ ಸುತ್ತಮುತ್ತಲಿನ ಪ್ರದೇಶ ಇನ್ನೂ ಗ್ರಾಮೀಣ ಸೊಗಡನ್ನು ಉಳಿಸಿಕೊಂಡಿದೆ. ಪಶ್ಚಿಮಘಟ್ಟ ಗಿರಿಗಳ ಸೌಂದರ್ಯ ತಾಲ್ಲೂಕಿನ ಬಹುಭಾಗವನ್ನು ಆವರಿಸಿಕೊಂಡಿವೆ. ಇಂದಿಗೂ, ಹಲವೆಡೆ ಮಳೆ ಬಂದರೆ ತೆಪ್ಪದಲ್ಲಿ ದಾಟಿ ಕಾಲ್ದಾರಿ ಹಿಡಿದು ಮುಖ್ಯ ರಸ್ತೆಗಳಿಗೆ ತಲುಪಬೇಕಾದ ಸ್ಥಿತಿಯಿದೆ. ಇಂಥ ಪ್ರದೇಶದ ಪ್ರತಿಭಾವಂತರು ಕಡಿಮೆ ವೆಚ್ಚದಲ್ಲಿ ಶಿಕ್ಷಣ ಪಡೆಯುವಲ್ಲಿ ಎಸ್‌ಡಿಎಂ ಕಾಲೇಜಿನ ಪಾತ್ರ ಬಹುದೊಡ್ಡದಿದೆ.  ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಎಸ್‌ಡಿಎಂ ಮುಂದಿದೆ. ಕಾಲೇಜು ಯುಜಿಸಿ ನ್ಯಾಕ್‌  ಮಾನ್ಯತೆ ಹೊಂದಿದೆ.

ಸ್ವಾಯತ್ತತ್ತೆಯ ಗರಿ: 2008 ರಿಂದ ಸಂಪೂರ್ಣ ಸ್ವಾಯತ್ತ ಶಿಕ್ಷಣ ಸಂಸ್ಥೆಯಾದ ಎಸ್‌ಡಿಎಂ ಸರ್ಟಿಫಿಕೇಟ್‌ ಕೋರ್ಸ್‌ಗಳ ಮೂಲಕ ವಿದ್ಯಾರ್ಥಿಗಳ ಪಾಠದ ಜೊತೆಗೆ ಬದುಕುವ ಕಲೆ ಕಲಿಸಿಕೊಟ್ಟಿತು. ‘2007-08ರಲ್ಲಿ ವಿಶ್ವವೇ ಎದುರಿಸಿದ ಆರ್ಥಿಕ ಕುಸಿತದಂತಹ ಸಮಸ್ಯೆಗಳು ಭವಿಷ್ಯದಲ್ಲಿ ಮರುಕಳಿಸಿದರೆ ನಮ್ಮ ವಿದ್ಯಾರ್ಥಿಗಳು, ತೊಂದರೆ ಅನುಭವಿಸದಿರಲಿ ಎಂದು ವೃತ್ತಿಪರವಾದ ಹಲವು ತರಬೇತಿಗಳನ್ನು ನೀಡಿ ವಿದ್ಯಾರ್ಥಿಗಳ ಕೌಶಲ ಹೆಚ್ಚಿಸಿದೆವು’ ಎನ್ನುತ್ತಾರೆ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ಭಾಸ್ಕರ ಹೆಗಡೆ.

ಈಗ ಕಾಲೇಜಿನಲ್ಲಿ ಫೋಟೊಗ್ರಫಿ, ವಿಡಿಯೊಗ್ರಫಿ, ಮಾಧ್ಯಮ ಬರವಣಿಗೆ, ಷೇರು ಮಾರುಕಟ್ಟೆ, ಸ್ಪರ್ಧಾತ್ಮಕ ಪರೀಕ್ಷೆ ತರಬೇತಿ, ರಂಗ ತರಬೇತಿ, ಪೌಷ್ಟಿಕ ಆಹಾರ ತಯಾರಿಕೆ, ತರಕಾರಿ ಕೃಷಿ, ಗ್ರಂಥಾಲಯ ವಿಜ್ಞಾನ, ಬೇಸಿಕ್ ಎಲೆಕ್ಟಾನಿಕ್ಸ್, ವೆಬ್ ಡಿಸೈನಿಂಗ್ ಇತ್ಯಾದಿ ಕೋರ್ಸ್‌ಗಳನ್ನು ವಿದ್ಯಾರ್ಥಿಗಳಿಗೆ ಉಚಿತವಾಗಿ ಕಲಿಸಿಕೊಡಲಾಗುತ್ತಿದೆ. ಇದಲ್ಲದೆ ಕಮ್ಯೂನಿಟಿ ರೇಡಿಯೊ ಇದೆ.

ಎಸ್‌ಡಿಎಂ ಮಲ್ಟಿಮೀಡಿಯಾ ಸ್ಟುಡಿಯೊ ವಿದ್ಯಾರ್ಥಿಗಳಿಗೆ ಎಲೆಕ್ಟ್ರಾನಿಕ್‌ ಮಾಧ್ಯಮದ ಒಳ ಜಗತ್ತನ್ನು ಪರಿಚಯಿಸುತ್ತಿದೆ. ಇದರ ಪರಿಣಾಮವಾಗಿ ವಿದ್ಯಾರ್ಥಿಗಳೇ ರೂಪಿಸುವ ‘ನಮ್ಮೂರ ವಾರ್ತೆ’ ಸ್ಥಳೀಯ ವಾಹಿನಿಯಲ್ಲಿ ಸುದ್ದಿ ಬಿತ್ತರಿಸುತ್ತಿದೆ. ಕಾಲೇಜಿನಲ್ಲಿರುವ ಹಾ. ಮಾ. ನಾಯಕ್ ಸಂಶೋಧನಾ ಕೇಂದ್ರ ಸಂಶೋಧನೆಗೆ ಪ್ರೇರಣೆ ನೀಡುತ್ತಿದೆ. ವಿದ್ಯಾರ್ಥಿಗಳಿಗೆ ಗ್ರಂಥಾಲಯದಲ್ಲಿ ಕಿಂಡಲ್‌ ರೀಡರ್ ಕೂಡ ಒದಗಿಸಿದೆ.  

ಪದವಿಯಲ್ಲಿ ಐಚ್ಛಿಕ ವಿಷಯವಾಗಿ ಎನ್‌ಸಿಸಿ (ರಾಷ್ಟ್ರೀಯ ಸೇವಾ ದಳ): ಕರ್ನಾಟಕದಲ್ಲಿ ಮೊದಲನೇ ಬಾರಿಗೆ ಪದವಿ ವ್ಯಾಸಂಗವೊಂದರ ಜೊತೆಗೆ ಎನ್‌ಸಿಸಿ ವಿಷಯ ಪರಿಚಯಿಸಿದ ಹೆಗ್ಗಳಿಕೆ ಎಸ್‌ಡಿಎಂ ಕಾಲೇಜಿನದ್ದು. ‘ಪದವಿ ವಿದ್ಯಾರ್ಥಿಗಳು ಇತರ ಎರಡು ವಿಷಯಗಳ ಜೊತೆಗೆ ಒಂದು ಐಚ್ಛಿಕ ವಿಷಯವಾಗಿ ಎನ್‌ಸಿಸಿ ಕಲಿಯುವ ಅವಕಾಶವಿದೆ. ಉದಾಹರಣೆಗೆ ಬಿ.ಎ ವಿದ್ಯಾರ್ಥಿ ಎಚ್‌ ಆರ್ ಡಿ ಹಾಗೂ ಅರ್ಥಶಾಸ್ತ್ರದ ಜೊತೆಗೆ ಒಂದು ವಿಷಯವಾಗಿ ಎನ್‌ಸಿಸಿ ಆಯ್ದುಕೊಳ್ಳಬಹುದು.

ಈ ಹೊಸತನಕ್ಕೆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ಇದೆ. ವಿದ್ಯಾರ್ಥಿಗಳಲ್ಲಿ ದೇಶಪ್ರೇಮ ಬಿತ್ತುವ ಸಣ್ಣ ಪ್ರಯತ್ನ ಇದು. ಮಾನವ ಸಂಪನ್ಮೂಲ ಸಚಿವಾಲಯ ಹಾಗೂ ರಕ್ಷಣಾ ಇಲಾಖೆಯ ಪ್ರಯತ್ನಕ್ಕೆ ಕೈಜೋಡಿಸಿದ ರಾಜ್ಯದ ಏಕೈಕ ಕಾಲೇಜು ನಮ್ಮದು’ ಎನ್ನುತ್ತಾರೆ ಎಸ್‌ಡಿಎಂ ಕಾಲೇಜಿನ ಪ್ರಾಂಶುಪಾಲ ಡಾ.ಬಿ. ಯಶೋವರ್ಮ. ಎಸ್‌ಡಿಎಂ ಕಾಲೇಜಿನ ಯಶೋಗಾಥೆಯ ರೂವಾರಿ ಯಶೋವರ್ಮ. 1993ರಲ್ಲಿ ಕಾಲೇಜಿನ ಪ್ರಾಂಶುಪಾಲರಾಗಿ ಅವರು ಅಧಿಕಾರ ವಹಿಸಿಕೊಂಡ ಮೇಲೆ ಕಾಲೇಜು ಬಹಳಷ್ಟು ಪ್ರಗತಿ ಹೊಂದಿದೆ. 2001ರಿಂದ ಸ್ನಾತಕೋತ್ತರ ಪದವಿ ಕೂಡ ಉಜಿರೆಯಲ್ಲಿ ಪ್ರಾರಂಭವಾಗಿದೆ. ಇದಕ್ಕಾಗಿಯೇ ಸುಸಜ್ಜಿತ ಪ್ರತ್ಯೇಕ ಕ್ಯಾಂಪಸ್‌ ನಿರ್ಮಿಸಲಾಗಿದೆ.

ಸುವರ್ಣ ಸಂಭ್ರಮದ ಹಬ್ಬ: ಡಿಸೆಂಬರ್ 17, 18 ರಂದು ಕಾಲೇಜಿನ ಸುವರ್ಣ ಸಂಭ್ರಮದ ಹಬ್ಬಕ್ಕೆ ಚಾಲನೆ ದೊರೆಯಲಿದೆ. ಸುಖಬೋಧಾನಂದ ಸ್ವಾಮೀಜಿ, ಉನ್ನತ ಶಿಕ್ಷಣ ಸಚಿವ ಟಿ.ಬಿ ಜಯಚಂದ್ರ ಮುಂತಾದ ಗಣ್ಯರು ಭಾಗವಹಿಸಲಿದ್ದಾರೆ. ರಘು ದೀಕ್ಷಿತ್ ಸಂಗೀತ ಸುಧೆ ಹರಿಸಲಿದ್ದಾರೆ.

ಕಾಲೇಜಿನ ಸಂಪರ್ಕಕ್ಕೆ: 08256 – 236101

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.