ADVERTISEMENT

ಸ್ಪರ್ಧಾವಾಣಿ: ‘ಭೂಕಂಪ’ ಏನು.. ಎತ್ತ?

ಚನ್ನಬಸಪ್ಪ ರೊಟ್ಟಿ
Published 19 ಫೆಬ್ರುವರಿ 2025, 19:41 IST
Last Updated 19 ಫೆಬ್ರುವರಿ 2025, 19:41 IST
   

ಈಚೆಗೆ ಟಿಬೆಟ್‌, ನೇಪಾಳ, ಚೀನಾ, ದೆಹಲಿ ಹಾಗೂ ಬಿಹಾರದ ಕೆಲ ಜಿಲ್ಲೆಗಳಲ್ಲಿ ಭೂಕಂಪ ಸಂಭವಿಸಿದ್ದು, ಭಾರತದ ಉತ್ತರ ಭಾಗ ಅದರಲ್ಲೂ ವಿಶೇಷವಾಗಿ ಹಿಮಾಲಯ ಪರ್ವತ ಶ್ರೇಣಿ ವ್ಯಾಪ್ತಿ ಮತ್ತು ಅದರ ಆಸುಪಾಸಿನ ಪ್ರದೇಶಗಳು ‘ಭೂಕಂಪ ವಲಯ’ ಪ್ರದೇಶಗಳೆಂದು ಮತ್ತೊಮ್ಮೆ ಸಾಬೀತಾಗಿದೆ. ಭವಿಷ್ಯದಲ್ಲಿ ಹಿಂದೂ ಕುಶ್‌ನಿಂದ ಅರುಣಾಚಲ ಪ್ರದೇಶದವರೆಗೆ ವ್ಯಾಪಿಸಿರುವ ಈ ಪ್ರದೇಶದಲ್ಲಿ 8 ಅಥವಾ ಅದಕ್ಕಿಂತ ಹೆಚ್ಚಿನ ರಿಕ್ಟರ್‌ ಪ್ರಮಾಣದ ಭೂಕಂಪಗಳು ಉಂಟಾಗಲಿವೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಹಿಮಾಲಯ ಪ್ರದೇಶದಲ್ಲಿ ಭೂಕಂಪ

ಹಿಮಾಲಯ ಪ್ರದೇಶ ಇಂಡೋ ಮತ್ತು ಯುರೇಷಿಯನ್ ‘ಟೆಕ್ಟೋನಿಕ್ ಪ್ಲೇಟ್‌’ಗಳ ಘರ್ಷಣೆಯಿಂದುಂಟಾಗುವ ಭೂಕಂಪನ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ಅದರಲ್ಲೂ ಭಾರತೀಯ ಭೂತಟ್ಟೆ (ಇಂಡೋ ಟೆಕ್ಟೋನಿಕ್ ಪ್ಲೇಟ್‌) ಉತ್ತರ ದಿಕ್ಕಿನತ್ತ ಪ್ರತಿವರ್ಷ ಸರಿಸುಮಾರು 60 ಮಿ.ಮೀ. ತಳ್ಳುವಿಕೆಯನ್ನು ಮುಂದುವರಿಸಿದ್ದು, ಉತ್ತರ ಭಾರತದಲ್ಲಿ ಆಗಾಗ ಭೂಕಂಪಗಳು ಸಂಭವಿಸುತ್ತವೆ. ಪಶ್ಚಿಮ ಹಿಮಾಲಯದಲ್ಲಿರುವ ಚೀನಾದ ಭೂಭಾಗ ‘ಲಾಸಾ ಟೆರೇನ್’ ಹಿಮಾಲಯನ್‌ ಭೂಕಂಪನಗಳ ಕೇಂದ್ರಸ್ಥಳವಾಗಿದೆ. ಈ ಪ್ರದೇಶದಲ್ಲಿ 1950 ರಿಂದ ಇಲ್ಲಿಯವರೆಗೆ, 6 ಅಥವಾ ಅದಕ್ಕಿಂತ ಹೆಚ್ಚು ರಿಕ್ಟರ್‌ ಪ್ರಮಾಣದ 21 ಭೂಕಂಪಗಳನ್ನು ದಾಖಲಿಸಲಾಗಿದೆ.

ADVERTISEMENT

‘ಟೆಕ್ಟೋನಿಕ್ ಪ್ಲೇಟ್‌’ ಚಲನೆಗಳ ಬಗ್ಗೆ

‘ಭೂ ತಟ್ಟೆಗಳು’ ಅಥವಾ ‘ಟೆಕ್ಟೋನಿಕ್ ಪ್ಲೇಟ್‌ಗಳು’ ಭೂಮಿಯ ಹೊರಪದರದಲ್ಲಿ (ಭೂ ಮೇಲ್ಮೈಯಿಂದ 12 ಕಿ.ಮೀ. ದೂರದವರೆಗೆ ವ್ಯಾಪಿಸಿದೆ) ಇರುವ ಭೂತಳ ಅಥವಾ ಫಲಕಗಳಾಗಿವೆ. ಇವುಗಳ ಮೇಲೆಯೇ ಭೂಭಾಗಗಳು, ಸಾಗರಗಳು ನೆಲೆಗೊಂಡಿವೆ. ಭೂಮಿಯ ಹೊರಪದರ 15 ಪ್ರಮುಖವಾದ ಮತ್ತು ಸಾವಿರಾರು ಸಣ್ಣ ‘ಟೆಕ್ಟೋನಿಕ್ ಪ್ಲೇಟ್‌’ಗಳನ್ನು ಒಳಗೊಂಡಿದೆ. ಇವು ಚಲಿಸುತ್ತಿರುತ್ತವೆ. ಇವುಗಳ ನಡುವೆ ಘರ್ಷಣೆ ಉಂಟಾದಾಗ ಬಿಡುಗಡೆಯಾಗುವ ಅಪಾರ ಶಕ್ತಿಯೇ ಭೂಕಂಪನ ಉಂಟುಮಾಡುತ್ತದೆ. ಭೂಫಲಕಗಳ ನಿರಂತರ ಚಲನೆಗೆ ಅಂತರ್ಜಲದ ಸಂವಹನ ಪ್ರವಾಹಗಳು ಕಾರಣವಾಗಿರುತ್ತವೆ.

***

‘ಭೂಕಂಪ’ ಎಂದರೇನು?

ಭೂಕಂಪವೆಂದರೆ, ಭೂಮಿಯ ಹೊರಪದರದಲ್ಲಿ ಉಂಟಾಗುವ ತೀವ್ರತರ ನಡುಕವಾಗಿದೆ. ಇದು ಭೂಮಿಯ ಶಕ್ತಿ ತರಂಗ ಚಲನೆಯ ರೂಪವಾಗಿದೆ. ಭೂಕಂಪದ ಮೂಲ ಸ್ಥಳವನ್ನು ‘ಹೈಪೋಸೆಂಟರ್’ (ಭೂಕಂಪ ನಾಭಿ / ಕೇಂದ್ರ ಪ್ರದೇಶ) ಎನ್ನಲಾಗುತ್ತದೆ. ಭೂಕಂಪನ ಅಲೆಗಳನ್ನು ಸ್ವೀಕರಿಸುವ ಭೂಮಿಯ ಮೇಲ್ಮೈಯ ಬಿಂದುವನ್ನು ‘ಎಪಿಸೆಂಟರ್’ ಎನ್ನಲಾಗುತ್ತದೆ. ಭೂಕಂಪಗಳ ವೈಜ್ಞಾನಿಕ ಅಧ್ಯಯನವನ್ನು ‘ಭೂಕಂಪಶಾಸ್ತ್ರ’ ಎಂದು ಕರೆಯಲಾಗುತ್ತದೆ. ಭೂಕಂಪದ ಸ್ಥಳ, ಸಮಯ, ವೇಗ ಮತ್ತು ದಿಕ್ಕನ್ನು ‘ಸಿಸ್ಮೋಗ್ರಾಫ್’ ಎಂದು ಕರೆಯುವ ಉಪಕರಣದಿಂದ ‘ರಿಕ್ಟರ್‌’ ಎಂಬ ಮಾಪನದ ಮೂಲಕ ದಾಖಲಿಸಲಾಗುತ್ತದೆ. ಭೂಕಂಪವನ್ನು ‘ಮರ್ಸೆಲ್ಲಿ ಮಾಪಕ’ದಿಂದ ಅಳೆಯಬಹುದಾದರೂ ನಿಖರತೆಯ ಕಾರಣದಿಂದ ಅದರ ಬಳಕೆ ಈಚೆಗೆ ಕಡಿಮೆಯಾಗಿದೆ.

ಭೂಕಂಪದ ಪ್ರಕಾರಗಳು

ಭೂರಚನಾ ಭೂಕಂಪಗಳು: ಭೂಮಿಯ ಹೊರಪದರದಲ್ಲಿನ ಶಿಲೆಗಳ ಮಡಿಸುವಿಕೆ, ಮತ್ತು ಶಿಲಾಸ್ತರಗಳ ಸ್ಥಳಾಂತರದ ಕಾರಣದಿಂದ ಇವು ಉಂಟಾಗುತ್ತವೆ. ಇವು ಹೆಚ್ಚು ತೀವ್ರ ಮತ್ತು ವಿನಾಶಕಾರಿ ಭೂಕಂಪಗಳಾಗಿವೆ.

ಜ್ವಾಲಾಮುಖಿ ಭೂಕಂಪ: ಇವುಗಳು ಜ್ವಾಲಾಮುಖಿ ಚಟುವಟಿಕೆಗಳಿಗೆ ಸಂಬಂಧಿಸಿದ್ದು, ಸಾಮಾನ್ಯವಾಗಿ ಹೆಚ್ಚಿನ ಆಳದಲ್ಲಿ ಉಂಟಾಗುತ್ತವೆ. ಇವು ಕಡಿಮೆ ತೀವ್ರತೆ ಹೊಂದಿರುತ್ತವೆ.

ಮಾನವ ನಿರ್ಮಿತ ಭೂಕಂಪ: ಬೃಹತ್ ಅಣೆಕಟ್ಟುಗಳು, ಆಳವಾದ ಗಣಿಗಾರಿಕೆ, ಭೂಗತ ಪರಮಾಣು ಸ್ಫೋಟ ಹಾಗೂ ಪ್ರಾಕೃತಿಕ ಚಟುವಟಿಕೆಗಳಲ್ಲಿ ಅತಿಯಾದ ಹಸ್ತಕ್ಷೇಪದಿಂದ ಸಂಭವಿಸುವ ಭೂಕಂಪಗಳು ಇವಾಗಿವೆ.

ಸುನಾಮಿ: ಸಾಗರದ ತಳಭಾಗದಲ್ಲಿ ಸಂಭವಿಸುವ ಭೂಕಂಪದಿಂದ ಉಂಟಾಗುವ ಸಮುದ್ರದ ಬೃಹತ್‌ ಅಲೆಗಳನ್ನು ‘ಸುನಾಮಿ’ ಎನ್ನಲಾಗುತ್ತದೆ. ಈ ಅಲೆಗಳು ಪೆಸಿಫಿಕ್, ಹಿಂದೂ ಮಹಾಸಾಗರಗಳಲ್ಲಿ ಸಾಮಾನ್ಯವಾಗಿದ್ದು, ದೊಡ್ಡ ಪ್ರಮಾಣದ ಹಾನಿ ಉಂಟುಮಾಡುತ್ತವೆ.

***

ಭೂಕಂಪದ ಅಲೆಗಳು

ಪ್ರಾಥಮಿಕ ಅಲೆಗಳು: ಭೂಕಂಪನಾಭಿಯಿಂದ ಹೊರಟ ವೇಗದ ಅಲೆಗಳಾಗಿದ್ದು, ಭೂಮಿ, ಅನಿಲ ಮತ್ತು ಜಲಮೂಲಗಳಲ್ಲಿ ಅಡ್ಡಲಾಗಿ ಚಲಿಸುತ್ತವೆ ಮತ್ತು ವಸ್ತುಗಳನ್ನು ಮುಂದಕ್ಕೆ ಮತ್ತು ಹಿಂದಕ್ಕೆ ಚಲಿಸುವಂತೆ ಮಾಡುತ್ತವೆ. ಇವುಗಳನ್ನು ‘ಸಂಕೋಚನ’ ಅಲೆಗಳು ಎಂದೂ ಕರೆಯುತ್ತಾರೆ. ಈ ಅಲೆಗಳ ವೇಗ ಸೆಕೆಂಡಿಗೆ ಸುಮಾರು 4 ರಿಂದ 13 ಕಿ.ಮೀ. ಆಗಿರುತ್ತದೆ.

ದ್ವಿತೀಯ ಅಲೆಗಳು: ಈ ಅಲೆಗಳನ್ನು ಅಡ್ಡಲೆಗಳು ಅಥವಾ ಕುಲುಕು ಅಲೆಗಳು ಎಂದೂ ಕರೆಯುತ್ತಾರೆ. ಈ ಅಲೆಗಳು ಕಣಗಳನ್ನು ಲಂಬಕೋನದಲ್ಲಿ ಚಲಿಸುವಂತೆ ಮಾಡುತ್ತವೆ. ಆದರೆ, ಇವು ದ್ರವ ಪದಾರ್ಥಗಳ ಮೂಲಕ ಹಾದುಹೋಗಲಾರವು. ಈ ಅಲೆಗಳ ವೇಗ ಸೆಕೆಂಡಿಗೆ ಸುಮಾರು 4 ರಿಂದ 6 ಕಿ.ಮೀ. ಇರುತ್ತದೆ.

ಮೇಲ್ಮೈ ಅಲೆಗಳು: ಇವು ನಿಧಾನವಾದ ಅಲೆಗಳಾಗಿದ್ದು, ಇವುಗಳನ್ನು ‘ದೀರ್ಘಾವಧಿ ಅಲೆಗಳು’ ಎಂದೂ ಕರೆಯುತ್ತಾರೆ. ಈ ಅಲೆಗಳ ವೇಗ ಸೆಕೆಂಡಿಗೆ ಸುಮಾರು 3 ರಿಂದ 4 ಕಿ.ಮೀ. ಇರುತ್ತದೆ. ಇವು ಭೂಮೇಲ್ಮೈಗೆ ಸೀಮಿತವಾಗಿರುತ್ತದೆ. ಈ ಅಲೆಗಳು ಭೂಮಿಯ ಹೊರಪದರಲ್ಲಿ ಭಾರೀ ವಿನಾಶಕ್ಕೆ ಕಾರಣವಾಗುತ್ತವೆ.

ಪ್ರಮುಖ ಭೂಕಂಪನ ವಲಯಗಳು

ಪೆಸಿಫಿಕ್ ಸಾಗರ ವಲಯ: ಈ ವಲಯ ಪೆಸಿಫಿಕ್ ಸಾಗರದ ಕರಾವಳಿ ಪ್ರದೇಶಗಳಾದ, ರಾಕೀಸ್, ಆಂಡಿಸ್, ಫಿಲಿಪ್ಪೀನ್ಸ್, ಜಪಾನ್, ಅಲಾಸ್ಕಾ, ಮೆಕ್ಸಿಕೋ ಮತ್ತು ಇಂಡೋನೇಷ್ಯಾಗಳನ್ನು ಒಳಗೊಂಡಿದೆ. ಈ ಪ್ರದೇಶವನ್ನು ‘ರಿಂಗ್‌ ಆಫ್‌ ಫೈರ್‌’ ಎಂದು ಕರೆಯಲಾಗುತ್ತದೆ.

ಪೆಸಿಫಿಕ್ ಸಾಗರದ ಜಲಾನಯನ ಪ್ರದೇಶ: ನ್ಯೂಜಿಲೆಂಡ್‌ ಹಾಗೂ ಪೂರ್ವ ಆಸ್ಟ್ರೇಲಿಯಾ ನಡುವೆ ಇರುವ ಈ ಪ್ರದೇಶ ಕೂಡ ಭೂಕಂಪನಾತ್ಮಕವಾಗಿ ಹೆಚ್ಚು ಸಕ್ರಿಯವಾಗಿದೆ.

ಆಲ್ಪ್ಸ್ ಹಾಗೂ ಹಿಮಾಲಯ ಪರ್ವತ ಪ್ರದೇಶಗಳು: ಈ ವಲಯ ದಕ್ಷಿಣ ಯುರೋಪ್, ಉತ್ತರ ಆಫ್ರಿಕಾ, ಮಧ್ಯ ಏಷ್ಯಾ ಹಾಗೂ ಉತ್ತರ ಭಾರತವನ್ನು ಒಳಗೊಂಡಿದೆ.

ಭಾರತದಲ್ಲಿನ ಭೂಕಂಪ ವಲಯಗಳು

ಜಮ್ಮು–ಕಾಶ್ಮೀರ, ಉತ್ತರಾಖಂಡ, ಹಿಮಾಚಲ ಪ್ರದೇಶ, ಅಸ್ಸಾಂ, ಗುಜರಾತ್‌ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಹಾಗೂ ಕೇಂದ್ರಾಡಳಿತ ಪ್ರದೇಶ ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಭೂಕಂಪದ ಸಾಧ್ಯತೆಗಳು ಹೆಚ್ಚಾಗಿವೆ. ದೆಹಲಿ, ಪಾಟ್ನಾ, ಶ್ರೀನಗರ, ಕೊಹಿಮಾ, ಪುದುಚೇರಿ, ಗುವಾಹತಿ, ಗ್ಯಾಂಗ್ಟಕ್, ಶಿಮ್ಲಾ, ಡೆಹ್ರಾಡೂನ್, ಇಂಫಾಲ, ಚಂಡೀಘಡ, ಭುಜ್, ಅಂಬಾಲಾ, ಅಮೃತಸರ್, ಲೂಧಿಯಾನಾ, ರೂರ್ಕಿ ಸೇರಿದಂತೆ ಭಾರತದ 29 ಪ್ರಮುಖ ನಗರಗಳಿಗೆ ಭೂಕಂಪನವನ್ನು ತಡೆದುಕೊಳ್ಳುವ ಸಾಮರ್ಥ್ಯವಿಲ್ಲ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳನ್ನು ‘ಭೂಕಂಪನ ಸುರಕ್ಷಿತ ಪ್ರದೇಶ’ ಎಂದು ‘ರಾಷ್ಟ್ರೀಯ ಭೂಕಂಪನ ಮಾಪನ ಕೇಂದ್ರ’ ಹೇಳಿದೆ.

ಗೌರಿಬಿದನೂರು (ಕರ್ನಾಟಕ), ಕೊಡೈಕೆನಾಲ್ (ತಮಿಳುನಾಡು), ಕೊಲಾಬಾ (ಮಹಾರಾಷ್ಟ್ರ), ಹೈದರಾಬಾದ್ (ತೆಲಂಗಾಣ), ಡೆಹ್ರಾಡೂನ್ (ಉತ್ತರಾಖಂಡ) ಭಾರತದ ಪ್ರಮುಖ ಭೂಕಂಪ ಮಾಪನ ಕೇಂದ್ರಗಳಾಗಿವೆ.

ಭಾರತದಲ್ಲಿನ ಭೂಕಂಪ ವಲಯಗಳು

ಜಮ್ಮು–ಕಾಶ್ಮೀರ, ಉತ್ತರಾಖಂಡ, ಹಿಮಾಚಲ ಪ್ರದೇಶ, ಅಸ್ಸಾಂ, ಗುಜರಾತ್‌ ಮತ್ತು ಪಶ್ಚಿಮ ಬಂಗಾಳ ರಾಜ್ಯಗಳಲ್ಲಿ ಹಾಗೂ ಕೇಂದ್ರಾಡಳಿತ ಪ್ರದೇಶ ಅಂಡಮಾನ್ ಮತ್ತು ನಿಕೋಬಾರ್‌ನಲ್ಲಿ ಭೂಕಂಪದ ಸಾಧ್ಯತೆಗಳು ಹೆಚ್ಚಾಗಿವೆ. ದೆಹಲಿ, ಪಾಟ್ನಾ, ಶ್ರೀನಗರ, ಕೊಹಿಮಾ, ಪುದುಚೇರಿ, ಗುವಾಹತಿ, ಗ್ಯಾಂಗ್ಟಕ್, ಶಿಮ್ಲಾ, ಡೆಹ್ರಾಡೂನ್, ಇಂಫಾಲ, ಚಂಡೀಘಡ, ಭುಜ್, ಅಂಬಾಲಾ, ಅಮೃತಸರ್, ಲೂಧಿಯಾನಾ, ರೂರ್ಕಿ ಸೇರಿದಂತೆ ಭಾರತದ 29 ಪ್ರಮುಖ ನಗರಗಳಿಗೆ ಭೂಕಂಪನವನ್ನು ತಡೆದುಕೊಳ್ಳುವ ಸಾಮರ್ಥ್ಯವಿಲ್ಲ. ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳನ್ನು ‘ಭೂಕಂಪನ ಸುರಕ್ಷಿತ ಪ್ರದೇಶ’ ಎಂದು ‘ರಾಷ್ಟ್ರೀಯ ಭೂಕಂಪನ ಮಾಪನ ಕೇಂದ್ರ’ ಹೇಳಿದೆ.

ಗೌರಿಬಿದನೂರು (ಕರ್ನಾಟಕ), ಕೊಡೈಕೆನಾಲ್ (ತಮಿಳುನಾಡು), ಕೊಲಾಬಾ (ಮಹಾರಾಷ್ಟ್ರ), ಹೈದರಾಬಾದ್ (ತೆಲಂಗಾಣ), ಡೆಹ್ರಾಡೂನ್ (ಉತ್ತರಾಖಂಡ) ಭಾರತದ ಪ್ರಮುಖ ಭೂಕಂಪ ಮಾಪನ ಕೇಂದ್ರಗಳಾಗಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.