ADVERTISEMENT

ಬಿ.ಎಸ್‌ಸಿ. ನಂತರ ಅಲ್ಪಾವಧಿ ಕೋರ್ಸ್‌

ಹರೀಶ್ ಶೆಟ್ಟಿ ಬಂಡ್ಸಾಲೆ
Published 26 ನವೆಂಬರ್ 2019, 19:30 IST
Last Updated 26 ನವೆಂಬರ್ 2019, 19:30 IST
Focused young developer coding late in office writing script shown on computer monitors, serious handsome coder programmer hacker programming developing software applications working alone at nightFocused developer coding on computer monitors working late in office
Focused young developer coding late in office writing script shown on computer monitors, serious handsome coder programmer hacker programming developing software applications working alone at nightFocused developer coding on computer monitors working late in office   
  • ನಾನು ಧಾರವಾಡದ ಕರ್ನಾಟಕ ವಿಜ್ಞಾನ ಕಾಲೇಜಿನಲ್ಲಿ ಬಿ.ಎಸ್‌ಸಿ. ಕಂಪ್ಯೂಟರ್‌ ಸೈನ್ಸ್‌ 6ನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದೇನೆ. ನಾನು ಎಂ.ಸಿ.ಎ. ಮಾಡುವ ಇಚ್ಛೆಯಿದ್ದರೂ ಅದು ದುಬಾರಿಯಾಗಿದ್ದರಿಂದ ಎಂ.ಎಸ್‌ಸಿ. (ಸಿಎಸ್‌) ಮಾಡುವಂತೆ ನನ್ನ ಸಹೋದರ ಸಲಹೆ ನೀಡಿದ್ದಾನೆ. ಯಾವುದು ಒಳ್ಳೆಯದು? ಸ್ನಾತಕೋತ್ತರ ಮಾಡದಿದ್ದರೆ ಯಾವುದಾದರೂ ಅಲ್ಪಾವಧಿ ಕೋರ್ಸ್‌ ಇದೆಯೇ?

- ಶಂಭು ಎಸ್‌., ಧಾರವಾಡ

ಶಂಭು, ಕಂಪ್ಯೂಟರ್ ವಿಜ್ಞಾನದ ಕ್ಷೇತ್ರದಲ್ಲಿ ನಿಮ್ಮ ಶೈಕ್ಷಣಿಕ ಡಿಗ್ರಿಕ್ಕಿಂತ ನಿಮ್ಮ ಜ್ಞಾನ ಹಾಗೂ ಕೌಶಲ ಬಹಳ ಮುಖ್ಯವಾಗುತ್ತದೆ. ಹೀಗಾಗಿ ಎಂ.ಸಿ.ಎ. ಮತ್ತು ಎಂ.ಎಸ್. ಕಂಪ್ಯೂಟರ್ ಸೈನ್ಸ್ ನಡುವೆ ಅಂತಹ ವ್ಯತ್ಯಾಸವೇನಿಲ್ಲ. ಎರಡೂ ಸ್ನಾತಕೋತ್ತರ ಪದವಿಯಾಗಿ ಪರಿಗಣಿಸಲ್ಪಡುತ್ತದೆ. ಶುಲ್ಕ ಮತ್ತು ಸಮಯವನ್ನು ಪರಿಗಣಿಸಿದರೆ ಎಂ.ಎಸ್‌ಸಿ. ಕಂಪ್ಯೂಟರ್ ಸೈನ್ಸ್ ಪರವಾಗಿಲ್ಲ ಎಂದೆನಿಸುತ್ತದೆ. ಯಾವುದಕ್ಕೂ ಎಂ.ಸಿ.ಎ. ಹಾಗೂ ಎಂ.ಎಸ್‌ಸಿ. ಕಂಪ್ಯೂಟರ್ ಸೈನ್ಸ್ ಮಾಡಿ ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ನಿಮ್ಮ ಪರಿಚಯದವರ ಅಭಿಪ್ರಾಯವನ್ನು ಕೇಳಿ.

ಇನ್ನು ಕಡಿಮೆ ಅವಧಿಯ ಕೋರ್ಸ್‌ಗಳ ಬಗ್ಗೆ ನಿಮ್ಮ ಬಿ.ಎಸ್‌ಸಿ. ಕೋರ್ಸ್‌ನಲ್ಲಿ ನೀವು ಕಲಿಯದೇ ಇರುವ ಅಥವಾ ಇನ್ನೂ ಹೆಚ್ಚು ಕಲಿಯಬೇಕು ಎನ್ನುವ ವಿಷಯದ ಮೇಲೆ ಮೂರರಿಂದ 6 ತಿಂಗಳ ಕೋರ್ಸ್‌ ಮಾಡಬಹುದು. ಕಂಪ್ಯೂಟರ್ ಲ್ಯಾಂಗ್ವೇಜ್‌ಗಳಾದ ಜಾವಾ, ಡಾಟ್‌ ನೆಟ್. ಪಿ.ಎಚ್.ಪಿ, ಪೈಥಾನ್ ಇತ್ಯಾದಿ ಕೋರ್ಸ್‌ಗಳನ್ನು ಮಾಡಬಹುದು. ಇತರ ಸಂಬಂಧಿತ ಕೋರ್ಸ್‌ಗಳಾದ ಕಂಪ್ಯೂಟರ್ ಹಾರ್ಡ್‌ವೇರ್ ಅಂಡ್ ನೆಟ್‌ವರ್ಕಿಂಗ್, ವೆಬ್ ಅಂಡ್ ಗ್ರಾಫಿಕ್ ಡಿಸೈನಿಂಗ್, ಆಸಕ್ತಿ ಇದ್ದರೆ ಕಂಪ್ಯೂಟರ್‌ ಅನಿಮೇಷನ್, ವಿಡಿಯೊ ಎಡಿಟಿಂಗ್ ಇತ್ತೀಚಿನ ಹೊಸ ವಿಷಯಗಳಾದ ಡಿಜಿಟಲ್ ಮಾರ್ಕೆಟಿಂಗ್, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಅಂಡ್ ಮಷಿನ್ ಲರ್ನಿಂಗ್, ಬಿಗ್ ಡೇಟಾ ಅಂಡ್ ಹಾಡೂಪ್, ಡೇಟಾ ಎನಾಲಿಸ್ಟ್ ಬಗ್ಗೆ ಕೂಡ ಕೋರ್ಸ್‌ಗಳನ್ನು ಮಾಡಬಹುದು. ಶುಭಾಶಯ.

ADVERTISEMENT
  • ನಾನು ಈಗ ಬಿ.ಎಸ್‌ಸಿ. (ಪಿ.ಎಂ.ಸಿ ಎಸ್.) ಅಂತಿಮ ವರ್ಷದಲ್ಲಿ ಓದುತ್ತಿದ್ದೇನೆ. ಮುಂದೆ ಎಂ.ಸಿ.ಎ. ಮಾಡಬೇಕೆಂದಿದ್ದೇನೆ. ಎಂ.ಸಿ.ಎ. ಎರಡು ವರ್ಷದ ಕೋರ್ಸ್ ಮಾಡಲೇ ಅಥವಾ 3 ವರ್ಷದ ಕೋರ್ಸ್ ಮಾಡುವುದೋ ಎಂಬ ಗೊಂದಲದಲ್ಲಿದ್ದೇನೆ. ಹಾಗೂ ಎಂ.ಸಿ.ಎ. ನಂತರ ಉದ್ಯೋಗ ಅವಕಾಶಗಳ ಬಗ್ಗೆ ತಿಳಿಸಿ.

- ನಾಗರಾಜ ಎಂ. ಕಬ್ಬಾರೆ, ಊರು ಬೇಡ

ನಾಗರಾಜ್, ಎಂ.ಸಿ.ಎ. ಮತ್ತು ಎಂ.ಎಸ್‌ಸಿ. (2 ವರ್ಷ) ನಡುವಿನ ವ್ಯತ್ಯಾಸದ ಬಗ್ಗೆ ಮೇಲಿನ ಪ್ರಶ್ನೆಯಲ್ಲಿ ವಿವರಿಸಿದ್ದೇನೆ. ಇನ್ನು ಎಂ.ಸಿ.ಎ. ಅಥವಾ ಎಂ.ಎಸ್‌ಸಿ.ಯ ನಂತರ ಉದ್ಯೋಗ ಅವಕಾಶದ ಬಗ್ಗೆ ಹೇಳುವುದಾದರೆ, ಕಂಪ್ಯೂಟರ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಕೆಲಸ ಮಾಡುವ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳಲ್ಲಿ ಕೆಲಸ ಮಾಡಬಹುದು. ಇದಲ್ಲದೆ ಪದವಿ ಶಿಕ್ಷಣದ ಆಧಾರದ ಮೇಲೆ ಕರೆಯಲ್ಪಡುವ ಎಲ್ಲಾ ಹುದ್ದೆಗಳಿಗೂ ಪ್ರಯತ್ನಿಸಿಬಹುದು. ಆ ಬಗ್ಗೆ ಮಾಹಿತಿಗೆ ಕಳೆದ ವಾರದ ಪ್ರಶ್ನೋತ್ತರದ ಮೆಕ್ಯಾನಿಕಲ್ ಎಂಜಿನಿಯರ್ ಪ್ರಶ್ನೆಗೆ ಉತ್ತರಿಸಿದ ಉತ್ತರವನ್ನು ಗಮನಿಸಿ.

ಕಂಪ್ಯೂಟರ್ ಕ್ಷೇತ್ರದಲ್ಲಿ, ಸಾಮಾನ್ಯವಾಗಿ ಬೇರೆ ಬೇರೆ ಸಾಫ್ಟ್‌ವೇರ್ ಕಂಪನಿಗಳಲ್ಲಿ ಸಾಫ್ಟ್‌ವೇರ್ ಡೆವಲಪರ್, ಅನಾಲಿಸ್ಟ್, ಟೆಸ್ಟಿಂಗ್ ಎಂಜಿನಿಯರ್, ಕ್ವಾಲಿಟಿ ಅಶ್ಶೂರೆನ್ಸ್, ನೆಟ್‌ವರ್ಕಿಂಗ್, ಡೇಟಾಬೇಸ್ ಮ್ಯಾನೇಜ್‌ಮೆಂಟ್ ಇತ್ಯಾದಿ ಕೆಲಸಗಳನ್ನು ಮಾಡಬಹುದು. ಶುಭಾಶಯ.

  • ನಾನು 2009ರಲ್ಲಿ ಮೈಕ್ರೊಬಯಾಲಜಿಯಲ್ಲಿ ಎಂ.ಎಸ್‌ಸಿ. ಮಾಡಿದ್ದೇನೆ. ಮೊದಲು ಕೆಮಿಕಲ್‌ ಮತ್ತು ಮೈಕ್ರೊಬಯಾಲಜಿ ಪ್ರಯೋಗಾಲಯದಲ್ಲಿ ಕೆಲಸ ಮಾಡಿ ನಂತರ ಪರಿಸರ ಸಂಬಂಧ ಪ್ರಯೋಗಾಲಯದಲ್ಲಿ ಕೆಲಸ ಮಾಡಿದ್ದೇನೆ. ಈಗ ಉದ್ಯೋಗ ತ್ಯಜಿಸಿದ್ದೇನೆ. ಇಬ್ಬರು ಮಕ್ಕಳಿದ್ದು, ಹೊರಗಡೆ ಉದ್ಯೋಗ ಮಾಡಲು ಸಾಧ್ಯವಿಲ್ಲ. ಮನೆಯಿಂದಲೇ ಮಾಡುವ ಉದ್ಯೋಗದ ಬಗ್ಗೆ ತಿಳಿಸಿ. ನನಗೆ ಉದ್ಯೋಗದ ಅವಶ್ಯಕತೆಯಿದ್ದು ಅದು ಸರಿ ಹೋಗಬಹುದು.

- ಗೀತಾ ಡಿ., ಊರು ಬೇಡ

ಗೀತಾ ಅವರೇ, ನಿಮ್ಮ ಮೈಕ್ರೊಬಯಾಲಜಿಯ ಕ್ಷೇತ್ರದಲ್ಲಿ ಮನೆಯಿಂದ ಮಾಡಬಹುದಾದ ಕೆಲಸ ಸಿಗುತ್ತದೆಯೇ ಎಂದು ಆ ಕ್ಷೇತ್ರದಲ್ಲಿ ಕೆಲಸ ಮಾಡುವ ನಿಮ್ಮ ಪರಿಚಯಸ್ಥರ ಬಳಿ ಕೇಳಿ ಮತ್ತು ಅಂತರ್ಜಾಲದಲ್ಲಿ ಹುಡುಕಿ ನೋಡಿ. ನಿಮ್ಮ ಕ್ಷೇತ್ರ ಹೆಚ್ಚಾಗಿ ಲ್ಯಾಬ್ ಆಧಾರಿತ ಕ್ಷೇತ್ರವಾದ್ದರಿಂದ ಮನೆಯಲ್ಲಿ ಕೆಲಸ ಮಾಡುವ ಅವಕಾಶ ಸೀಮಿತವಾಗಿ ಸಿಗಬಹುದು. ಆದರೆ ನಿಮ್ಮ ಹಿಂದಿನ ಶೈಕ್ಷಣಿಕ ವಿದ್ಯಾರ್ಹತೆ ಮತ್ತು ಕೆಲಸದ ಅನುಭವದ ಮೇಲೆ ಮೈಕ್ರೊಬಯಾಲಜಿಯ ಕ್ಷೇತ್ರಕ್ಕೆ ಸಂಬಂಧಿಸಿದ ಕ್ಷೇತ್ರಗಳಲ್ಲಿ ಬರವಣಿಗೆ ಮತ್ತು ಮಾಹಿತಿ ಕ್ರೋಢೀಕರಣದಂತಹ ಕೆಲಸಗಳನ್ನು ಹುಡುಕಬಹುದು. ನಿಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ರೀಸರ್ಚ್ ರಿಪೋರ್ಟ್, ಡಾಕ್ಯುಮೆಂಟೇಷನ್, ಟ್ರಾನ್ಸ್‌ಲೇಷನ್, ಪ್ರಾಡಕ್ಟ್ ಸ್ಪೆಸಿಫಿಕೇಶನ್, ಜಾಹೀರಾತು ಇತ್ಯಾದಿ ಕಂಟೆಂಟ್ ಡೆವಲಪ್‌ಮೆಂಟ್ ಅಥವಾ ಬರವಣಿಗೆಗೆ ಸಂಬಂಧಿಸಿದ ಕೆಲಸಗಳನ್ನು ಹುಡುಕಿ ನೋಡಿ. ಅದಲ್ಲದೆ ಬೇರೆ ಕ್ಷೇತ್ರಕ್ಕೆ ಸಂಬಂಧಿಸಿದ ಆನ್‌ಲೈನ್ ರಿಕ್ರೂಟ್‌ಮೆಂಟ್, ಡೇಟಾ ಎಂಟ್ರಿ, ಅನುವಾದ, ಕಂಟೆಂಟ್ ರೈಟರ್ ಇತ್ಯಾದಿ ಕೆಲಸಗಳನ್ನು ಮಾಡಬಹುದು.

ಫ್ರೀ ಲಾನ್ಸಿಂಗ್ ಅಥವಾ ಮನೆಯಿಂದ ಕೆಲಸ ಮಾಡುವ ಅವಕಾಶಗಳನ್ನು ಹುಡುಕಲು ಸಾಮಾನ್ಯವಾಗಿ ಕೆಲಸ ಹುಡುಕಲು ಬಳಸುವ ನೌಕರಿ ಹಾಗೂ ಅಂತಹ ಇತರ ವೆಬ್‌ಸೈಟಿನಲ್ಲಿ “ವರ್ಕ್ ಫ್ರಂ ಹೋಮ್” ಕೀ ವರ್ಡ್‌ನಿಂದ ಅವಕಾಶಗಳನ್ನು ಹುಡುಕಿ. ಹಾಗೆ www.freelancer.com, www.upwork.com, www.guru.com ಇತ್ಯಾದಿ ವೆಬ್‌ಸೈಟ್‌ನಲ್ಲಿ ಹುಡುಕಿ. ಆದರೆ ಅಂತರ್ಜಾಲದಲ್ಲಿ ಸಿಗುವ ಅವಕಾಶವನ್ನು ಬಳಸಿಕೊಳ್ಳುವಾಗ ಆ ಕುರಿತು ಸರಿಯಾಗಿ ಪರಿಶೀಲನೆ ಮಾಡಬೇಕು. ಕೆಲಸ ಕೊಡುತ್ತಿರುವ ಕಂಪನಿ ಅಥವಾ ವ್ಯಕ್ತಿ ಯಾರು ಮತ್ತು ಅವರು ಸರಿಯಾದ ಸಮಯಕ್ಕೆ ವೇತನ ನೀಡುತ್ತಾರೆಯೇ, ನಂಬಿಕೆಗೆ ಅರ್ಹರೆ ಎಂದು ಪೂರ್ವಾಪರ ಪರಿಶೀಲಿಸಿ ಮುಂದುವರಿಯಿರಿ. ಆಲ್ ದಿ ಬೆಸ್ಟ್.

(ಅಂಕಣಕಾರರು ವೃತ್ತಿ ಮಾರ್ಗದರ್ಶಕರು,ಕೇಂದ್ರ ಉದ್ಯೋಗ ಮತ್ತು ಕಾರ್ಮಿಕ ಇಲಾಖೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.