ADVERTISEMENT

ಬೆಣಕಲ್‌ ಸರ್ಕಾರಿ ಶಾಲೆಯಲ್ಲಿ ‘ಕೃಷಿಪಾಠ’

ಶಿಕ್ಷಕರ ಮಾದರಿ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ l ವಿದ್ಯಾರ್ಥಿಗಳಿಗೆ ಜನಪದ ನೃತ್ಯ ಕಲೆಗಳ ತರಬೇತಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2019, 20:00 IST
Last Updated 11 ಡಿಸೆಂಬರ್ 2019, 20:00 IST
ಕುಕನೂರು ತಾಲ್ಲೂಕಿನ ಬೆಣಕಲ್ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೋಟ
ಕುಕನೂರು ತಾಲ್ಲೂಕಿನ ಬೆಣಕಲ್ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೋಟ   

ಕುಕನೂರು: ಪರಿಣಾಮಕಾರಿ ಬೋಧನೆಯಲ್ಲಿ ಅಷ್ಟೇ ಅಲ್ಲದೆ ಮೂಲಸೌಕರ್ಯ, ಶುಚಿತ್ವ, ಶಿಸ್ತಿನಲ್ಲಿಯು ತಾಲ್ಲೂಕಿನ ಬೆಣಕಲ್‌ ಗ್ರಾಮದ ಬಾಲಕಿಯರ ಸರ್ಕಾರಿ ಪ್ರಾಥಮಿಕ ಶಾಲೆ ಮುಂದಿದೆ.

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಬೇಕು ಎಂಬ ಉದ್ದೇಶದಿಂದ ಮುಖ್ಯ ಶಿಕ್ಷಕ ಶರಣಪ್ಪ ಸಜ್ಜನ್ ಅವರು ಗ್ರಾಮಸ್ಥರು ಮತ್ತು ಎಸ್‌ಡಿಎಂಸಿ ಸದಸ್ಯರ ನೆರವು ಪಡೆದು ದಾನಿಗಳ ಸಹಾಯದಿಂದ ಶಾಲೆಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿದ್ದಾರೆ.

ಶಾಲೆಯಲ್ಲಿ 134ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಮಕ್ಕಳಲ್ಲಿ ಸ್ವಚ್ಛತೆ ಬಗ್ಗೆ ಅರಿವು ಮೂಡಿಸಲು ಶಿಕ್ಷಕರು ಶ್ರಮಿಸುತ್ತಿದ್ದಾರೆ. ಅವರಲ್ಲಿ ಓದುವ ಅಭಿರುಚಿಯನ್ನು ಬೆಳೆಸಿದ್ದಾರೆ. ಈ ಶಾಲೆಯಲ್ಲಿ ಕಲಿತ ಹಲವು ಮಕ್ಕಳು ಮೊರಾರ್ಜಿ ಶಾಲೆ, ಕಿತ್ತೂರು ರಾಣಿ ಚನ್ನಮ್ಮ ಶಾಲೆ, ಆದರ್ಶ ವಿದ್ಯಾಲಯ, ಮತ್ತು ನವೋದಯ ಶಾಲೆಗಳಿಗೆ ಆಯ್ಕೆಯಾಗಿದ್ದಾರೆ.

ADVERTISEMENT

‘ಈ ಎಲ್ಲ ಕೆಲಸಗಳನ್ನು ಮಾಡಲು ಗ್ರಾಮಸ್ಥರು ಮತ್ತು ಎಸ್‌ಡಿಎಂಸಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಉತ್ತಮ ಸಹಕಾರ ನೀಡುತ್ತಾರೆ. ಮಕ್ಕಳಿಗಾಗಿ ಸೌಲಭ್ಯಗಳನ್ನು ನೀಡಲು ಹಿಂಜರಿಯುವುದಿಲ್ಲ. ಖಾಸಗಿ ಶಾಲೆಗಳಂತೆ ಗ್ರಾಮದ ಸರ್ಕಾರಿ ಶಾಲೆಯನ್ನು ಉತ್ತಮವಾಗಿ ಇಟ್ಟುಕೊಳ್ಳಬೇಕು ಎಂಬುದು ಗ್ರಾಮಸ್ಥರ ಆಶಯ. ಸರ್ಕಾರದಿಂದ ಶಾಲೆಗೆ ಕಾಂಪೌಂಡ್‌, ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ. ಶಿಕ್ಷಣ ಇಲಾಖೆಯು ಅಡುಗೆ ಮನೆ ಸೇರಿ ಕೆಲ ಸೌಲಭ್ಯಗಳನ್ನು ಕಲ್ಪಿಸಿದೆ‘ ಎಂದು ಶಿಕ್ಷಕ ರಾಜಶೇಖರ ಕಲ್ಮನಿ
ಹೇಳುತ್ತಾರೆ.

ಹಚ್ಚ ಹಸಿರು:ಶಾಲೆ ಪ್ರವೇಶಿಸುತ್ತಿದ್ದಂತೆ, ‘ಕೈ ಮುಗಿದು ಒಳಗೆ ಬಾ’ ಎನ್ನುತ್ತದೆ ಅಂಗಳದಲ್ಲಿರುವ ಗಿಡ ಮರಗಳು, ಅಲಂಕಾರಿಕ ಹೂವುಗಳು. ಎಡಬದಿಯಲ್ಲಿ ಮಿತ ನೀರಿನ ಬಳಕೆಯಿಂದ ನಿರ್ಮಾಣ ಮಾಡಿರುವ ಕೈತೋಟವಿದೆ. ಈ ತೋಟದಲ್ಲಿ ತರಕಾರಿಗಳನ್ನು ಮಕ್ಕಳೇ ಬೆಳೆಸಿದ್ದಾರೆ. ಶಿಕ್ಷಕರಾದ ಗಂಗಾಧರ ಕಲಾಲ ಇದೇ ಕೈತೋಟದಲ್ಲಿ ಮಕ್ಕಳಿಗೆ ಕೃಷಿ ಪಾಠವನ್ನು ಹೇಳಿಕೊಡುತ್ತಾರೆ.

‘ನಮ್ಮ ಶಾಲಾ ಕೈ ತೋಟದಲ್ಲಿ ಬೆಳೆದ ಪಲ್ಯದಿಂದ ಬಿಸಿಯೂಟಕ್ಕೆ ಅನುಕೂಲ ಆಗಿದೆ ಎಂದು ವಿದ್ಯಾರ್ಥಿನಿ ಸಂಜನಾ ಹಳ್ಳಿಕೇರಿ ಹೇಳುತ್ತಾಳೆ.ಪಠ್ಯ ವಿಷಯಗಳ ಬೋಧನೆಯೊಂದಿಗೆ ಜನಪದ ನೃತ್ಯ ಕಲೆಗಳ ತರಬೇತಿಯನ್ನು ನೀಡಲಾಗುತ್ತಿದೆ. ಪ್ರಾರ್ಥನೆ ಸಮಯದಲ್ಲಿ ದಿನಕ್ಕೊಂದು ವಚನ, ‘ನಾ ಓದಿದ ಪುಸ್ತಕ’ ಪರಿಚಯ, ‘ದಿನದ ವಿಶೇಷ’ವನ್ನು ಮಕ್ಕಳು ಹೇಳುತ್ತಾರೆ.

ಹಳದಿ ಶಾಲೆ: ಶೌಚಾಲಯ, ಶುಚಿತ್ವ, ನೀರಿನ ಮಿತಬಳಕೆ, ಮಳೆನೀರು ಸಂಗ್ರಹ, ಅಂತರ್ಜಲವೃದ್ಧಿಗೆ ಜಾಗೃತಿ ಅಭಿಯಾನ, ಹಸಿರೀಕರಣದಂತಹ ಪರಿಸರ ಚಟುವಟಿಕೆಯನ್ನು ಅಳವಡಿಸಿಕೊಂಡಿರುವ ಈ ಸರ್ಕಾರಿ ಶಾಲೆಗೆ ಜಿಲ್ಲಾಮಟ್ಟದ ‘ಹಳದಿ ಶಾಲೆ’ ಪ್ರಶಸ್ತಿಯೂ ಸಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.