ADVERTISEMENT

ತಳವಾರ್ ವಿರುದ್ಧ ಆರೋಪ ಸಾಬೀತು

ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರ ಕಾರ್ಯವೈಖರಿ ತನಿಖೆ: 11 ದೂರುಗಳು ನಿಜ

ರಶ್ಮಿ ಬೇಲೂರು
Published 27 ಮೇ 2020, 19:49 IST
Last Updated 27 ಮೇ 2020, 19:49 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   
""

ಬೆಂಗಳೂರು: ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಎಚ್‌.ಯು.ತಳವಾರ್‌ ಅವರ ಕಾರ್ಯವೈಖರಿಯ ಬಗ್ಗೆ ಮಾಡಲಾದ 54 ದೂರುಗಳ ಪೈಕಿ 11 ದೂರುಗಳು ಮೇಲ್ನೋಟಕ್ಕೆ ಸತ್ಯ ಎಂಬುದು ಸಾಬೀತಾಗಿದೆ ಎಂದು ತನಿಖಾ ಸಮಿತಿ ಹೇಳಿದೆ.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕ ವಿಕಾಸ್ ಕಿಶೋರ್‌ ಸುರಾಲ್ಕರ್ ಅವರು ತಾವು ಸಿದ್ಧಪಡಿಸಿದ 158 ಪುಟಗಳ ತನಿಖಾ ವರದಿಯನ್ನು ಉನ್ನತ ಶಿಕ್ಷಣ ಇಲಾಖೆಗೆ ಸಲ್ಲಿಸಿದ್ದಾರೆ.

ತಳವಾರ್

‘11 ಪ್ರಕರಣಗಳಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆ ನಿರ್ದೇಶಕರ ಸಾಧನೆ ತೃಪ್ತಿಕರವಾಗಿಲ್ಲ ಎಂಬುದು ಮೇಲ್ನೋಟಕ್ಕೆ ಸಾಬೀತಾಗುತ್ತದೆ. 20 ದೂರುಗಳು ಅನಾಮಧೇಯ ದೂರುಗಳಾಗಿದ್ದು, ಆರು ದೂರುಗಳಿಗೆ ಸೂಕ್ತ ದಾಖಲೆಗಳು ಇರಲಿಲ್ಲ. ಉಳಿದ 28 ದೂರುಗಳ ಪೈಕಿ 17 ದೂರುಗಳಿಗೆ ಸಂಬಂಧಿಸಿದಂತೆ ನಿರ್ದೇಶಕರ ನೇರ ಶಾಮೀಲಾತಿ ಕಂಡುಬಂದಿಲ್ಲ’ ಎಂದು ವರದಿಯಲ್ಲಿ ತಿಳಿಸಲಾಗಿದೆ.

ADVERTISEMENT

ದೂರು ಏನು?: ಸಾರ್ವಜನಿಕ ಕಚೇರಿಯ ದುರ್ಬಳಕೆ, ಸಹೋದ್ಯೋಗಿಗಳಿಗೆ ಕಿರುಕುಳ, ಅಧಿಕಾರ ದುರುಪಯೋಗ, ಬೋಧನಾ ಹುದ್ದೆಗಳ ನೇಮಕಾತಿಯಲ್ಲಿ ರೋಸ್ಟರ್‌/ ಮೀಸಲಾತಿ ನಿಯಮ ಉಲ್ಲಂಘನೆ, ನಕಲಿ ದಾಖಲೆಗಳನ್ನು ಸಲ್ಲಿಸಿದ ಬೋಧಕರ ನೇಮಕದಂತಹ ದೂರುಗಳು ಮೇಲ್ನೋಟಕ್ಕೆ ಸತ್ಯ ಎಂಬುದನ್ನು ಸಮಿತಿ ಕಂಡುಕೊಂಡಿದೆ.‌

ಒಂದು ಪ್ರಕರಂಣದಲ್ಲಿ ತಳವಾರ್‌ ಅವರು ಭರ್ತಿಯಾಗದ ಸೀಟನ್ನು ಮ್ಯಾನೇಜ್‌ಮೆಂಟ್ ಕೋಟಾ ಸೀಟಾಗಿ ಬದಲಾಯಿಸಿ ಖಾಸಗಿ ಎಂಜಿನಿಯರಿಂಗ್ ಕಾಲೇಜೊಂದಕ್ಕೆ ನೆರವಾಗಿದ್ದಾರೆ ಎಂಬ ದೂರು ಸಹ ಇದೆ.

ಹಿನ್ನೆಲೆ: ಸರ್ಕಾರಿ ಪಾಲಿಟೆಕ್ನಿಕ್‌ ಕಾಲೇಜೊಂದರ ಪ್ರಾಧ್ಯಾಪ‍ಕರಾಗಿದ್ದ ತಳವಾರ್ ಅವರು 10 ವರ್ಷಗಳ ಹಿಂದೆ ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ನಿಯುಕ್ತರಾಗಿದ್ದರು.

‌ಉನ್ನತ ಶಿಕ್ಷಣದಲ್ಲಿ ತಾಂತ್ರಿಕ ಶಿಕ್ಷಣ ವಿಲೀನ?: ತನಿಖಾ ವರದಿ ಸಲ್ಲಿಕೆಯಾಗುತ್ತಿದ್ದಂತೆಯೇ ಕಾಲೇಜು ಶಿಕ್ಷಣ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಗಳನ್ನು ವಿಲೀನಗೊಳಿಸಿ, ಏಕೈಕ ಕಮಿಷನರೇಟ್‌ ಅನ್ನು ರಚಿಸುವ ಹಾಗೂ ಅದಕ್ಕೆ ಐಎಎಸ್ ಅಧಿಕಾರಿಯನ್ನು ಆಯುಕ್ತರಾಗಿ ನೇಮಿಸುವ ಚಿಂತನೆಯನ್ನು ಸರ್ಕಾರ ನಡೆಸಿದೆ ಎಂದು ಹೇಳಲಾಗುತ್ತಿದೆ.

ತನಿಖೆ ನಡೆಸುವಂತಿಲ್ಲ: ತಳವಾರ್

‘ನನಗೆ ಇದುವರೆಗೆ ನೋಟಿಸ್‌ ನೀಡಿಲ್ಲ. ಆದರೆ, ಈ ತನಿಖಾ ಸಮಿತಿ ರಚಿಸಿದ ಬಗ್ಗೆಯೇ ನನ್ನ ಆಕ್ಷೇಪ ಇದೆ‘ ಎಂದು ತಳವಾರ್‌ ಪ್ರತಿಕ್ರಿಯಿಸಿದ್ದಾರೆ.

‘ಏಕೆಂದರೆ ನನ್ನ ಹುದ್ದೆ ಐಎಎಸ್‌ ಆಯ್ಕೆ ಶ್ರೇಣಿಗಿಂತ ಮೇಲ್ಮಟ್ಟದ್ದು. ತನಿಖೆ ನಡೆಸಿದವರು 2012ರ ಬ್ಯಾಚ್‌ನ ಐಎಎಸ್‌ ಅಧಿಕಾರಿ. ನನ್ನ ವರ್ಚಸ್ಸನ್ನು ಹಾಳು ಮಾಡುವ ಸಲುವಾಗಿಯೇ ಈ ತನಿಖೆ ನಡೆಸಲಾಗಿದೆ. ನೋಟಿಸ್ ಪಡೆದ ಬಳಿಕ ಇದನ್ನು ನಾನು ಸೂಕ್ತ ವೇದಿಕೆಯಲ್ಲಿ ಪ್ರಶ್ನಿಸಲಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.