ADVERTISEMENT

ಭಾಷಾ ವಿಷಯದಲ್ಲಿ ಶೇ 92, ಗಣಿತದಲ್ಲಿ ಶೇ 82ರಷ್ಟು ‘ಹಿನ್ನಡೆ’

ಕಲಿಕಾಮಟ್ಟ ಕುಸಿತ l ಅಜೀಂ ಪ್ರೇಮ್‌ಜಿ ವಿ.ವಿ ಅಧ್ಯಯನ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2021, 19:14 IST
Last Updated 11 ಫೆಬ್ರುವರಿ 2021, 19:14 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಂಗಳೂರು: ‘ಕೋವಿಡ್‌ನಿಂದಾಗಿ ಶಾಲೆಗಳು ಮುಚ್ಚಿದ್ದರಿಂದ ಪ್ರಾಥಮಿಕ ವಿದ್ಯಾರ್ಥಿಗಳ ಕಲಿಕಾ ಸಾಮರ್ಥ್ಯದಲ್ಲಿ ಭಾರಿ ಹಿನ್ನಡೆ (ಮರೆಯುವಿಕೆ) ಉಂಟಾಗಿದೆ’ ಎಂದು ಅಜೀಂ ಪ್ರೇಮ್‌ಜಿ ವಿಶ್ವವಿದ್ಯಾಲಯದ ಅಧ್ಯಯನ ವರದಿ ಹೇಳಿದೆ.

ಕ್ಷೇತ್ರಾಧ್ಯಯನದ ಈ ವರದಿಯನ್ನು ವಿಶ್ವವಿದ್ಯಾಲಯ ಬುಧವಾರ ಬಿಡುಗಡೆ ಮಾಡಿದೆ. ವರದಿಯ ಪ್ರಕಾರ, ಎಲ್ಲ ತರಗತಿಗಳಲ್ಲಿ ಹಿಂದಿನ ವರ್ಷದ ಸಾಮರ್ಥ್ಯಕ್ಕೆ ಹೋಲಿಸಿದರೆ, ಸರಾಸರಿ ಶೇ 92ರಷ್ಟು ಮಕ್ಕಳು ಭಾಷಾ ವಿಷಯದಲ್ಲಿ ಹಾಗೂ ಶೇ 82 ಮಕ್ಕಳು ಗಣಿತ ವಿಷಯದಲ್ಲಿ ಕನಿಷ್ಠ ಒಂದರಷ್ಟು ಮೂಲ ಕಲಿಕಾ ಸಾಮರ್ಥ್ಯ ( ನಿರ್ದಿಷ್ಟ ಬುನಾದಿ) ಕಳೆದುಕೊಂಡಿದ್ದಾರೆ.

ಎರಡು ಸಾವಿರಕ್ಕೂ ಹೆಚ್ಚು ಶಿಕ್ಷಕರು ಮತ್ತು ಅಜೀಂ ಪ್ರೇಮ್‌ಜಿ ಫೌಂಡೇಷನ್‌ನ 400ಕ್ಕೂ ಹೆಚ್ಚು ಸದಸ್ಯರು ಈ ಅಧ್ಯಯನದಲ್ಲಿ ತೊಡಗಿಸಿಕೊಂಡಿದ್ದರು. 2020ರ ಮಾರ್ಚ್‌ನಲ್ಲಿ ಶಾಲೆಗಳು ಮುಚ್ಚಿದ್ದಾಗ ಯಾವ ಪ್ರಮಾಣದ ನಿರ್ದಿಷ್ಟ ಬುನಾದಿ ಸಾಮರ್ಥ್ಯಗಳನ್ನು ಮಕ್ಕಳು ಹೊಂದಿದ್ದರು ಮತ್ತು ಅದೇ ಮಕ್ಕಳು ಅದೇ ಸಾಮರ್ಥ್ಯಗಳಲ್ಲಿ ಜನವರಿ 2021ರಲ್ಲಿ ಯಾವ ಪ್ರಮಾಣದ ಕಲಿಕಾಮಟ್ಟ ಹೊಂದಿದ್ದಾರೆಂದು ಹೋಲಿಸಿ ಮೌಲ್ಯಮಾಪನ ನಡೆಸಲಾಗಿದೆ. ಶಾಲೆಗಳು ನಿಯಮಿತವಾಗಿ ನಡೆದಿದ್ದರೆ ಮಕ್ಕಳು ಪಠ್ಯಕ್ರಮದಿಂದ ಪಡೆಯಬಹುದಾಗಿದ್ದ ಕಲಿಕೆಯ ನಷ್ಟ ಹಾಗೂ ಹಿಂದಿನ ತರಗತಿಯಲ್ಲಿ ಕಲಿತ
ಸಾಮರ್ಥ್ಯಗಳನ್ನು ಮಕ್ಕಳು ಮರೆತಿರು
ವುದರ ಮೇಲೆ ಅಧ್ಯಯನ ನಡೆಸಲಾಗಿದೆ.

ADVERTISEMENT

ಪ್ರಾಥಮಿಕ ಹಂತದಲ್ಲಿ ಭಾಷೆ ಮತ್ತು ಗಣಿತ ವಿಷಯದಲ್ಲಿ ಪಡೆಯುವ ಕಲಿಕೆ ಮುಂದಿನ ಹಂತಗಳ ಕಲಿಕೆಗೆ ಆಧಾರ ಒದಗಿಸುತ್ತದೆ. ಪಠ್ಯವನ್ನು ಓದಿ ಅರ್ಥ ಮಾಡಿಕೊಳ್ಳುವುದು, ಸಾರಾಂಶವನ್ನು ತಮ್ಮದೇ ವಾಕ್ಯಗಳಲ್ಲಿ ವ್ಯಕ್ತಪಡಿಸುವುದು, ಕೊಟ್ಟ ಸಂಖ್ಯೆಗಳನ್ನು ಕೂಡುವುದು, ಕಳೆಯುವುದು ಮುಂತಾದವು ಈ ಬುನಾದಿ ಸಾಮರ್ಥ್ಯಗಳಿಗೆ ಕೆಲವು ಉದಾಹರಣೆಗಳಾಗಿವೆ.

ಈ ವರದಿ ಬಗ್ಗೆ ಪ್ರತಿಕ್ರಿಯಿಸಿರುವ ವಿಶ್ವವಿದ್ಯಾಲಯದ ಉಪಕುಲಪತಿ ಅನುರಾಗ್‌ ಬೆಹಾರ್‌, ‘ಶಾಲೆಗಳು ಮತ್ತೆ ತೆರೆದಾಗ, ಈ ಕಲಿಕಾ ನಷ್ಟ ಸರಿದೂಗಿಸಿ ಮಕ್ಕಳಲ್ಲಿ ಸಾಮರ್ಥ್ಯ ಬೆಳೆಸಲು ಶಿಕ್ಷಕರಿಗೆ ಸಮಯ ನೀಡುವ ಜತೆಗೆ ಇತರ ರೀತಿಯ ಬೆಂಬಲ ನೀಡಬೇಕಿದೆ. ರಜಾ ದಿನಗಳನ್ನು ರದ್ದುಪಡಿಸುವುದೂ ಸೇರಿದಂತೆ ಶಾಲೆಗಳು ಯಾವಾಗ ತೆರೆಯುತ್ತವೆ ಎನ್ನುವುದನ್ನು ಅವಲಂಬಿಸಿ 2021ರ ಶೈಕ್ಷಣಿಕ ವರ್ಷವನ್ನು ವಿಸ್ತರಿಸಬೇಕು, ಪಠ್ಯಕ್ರಮ ಮರು ರೂಪಿಸಬೇಕು, ಕಾಲೇಜಿನ ಶೈಕ್ಷಣಿಕ ಅವಧಿ ಮರು ಹೊಂದಿಸಬೇಕು ಮತ್ತಿತರ ಕ್ರಮಗಳನ್ನು ಆಯಾ ರಾಜ್ಯಗಳು ಎಚ್ಚರಿಕೆಯಿಂದ ಕೈಗೊಳ್ಳಬೇಕು’ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಶಾಲೆಗೆ ಮಕ್ಕಳು ಮರಳಿ ಬಂದಾಗ ಹಿನ್ನಡೆಯಾಗಿರುವ ಸಾಮರ್ಥ್ಯಗಳನ್ನು ಮರಳಿ ಪಡೆಯಲು ಪರಿಹಾರ ಬೋಧನೆ, ಸಮುದಾಯ ಆಧಾರಿತ ಕಲಿಕಾ ಪ್ರಕ್ರಿಯೆ ಹಾಗೂ ಸೂಕ್ತ ಕಲಿಕಾ ಸಾಮಗ್ರಿ ಒದಗಿಸಬೇಕಾಗಿದೆ. ಕಲಿಕೆಯ ವಿವಿಧ ಹಂತಗಳಲ್ಲಿರುವ ವಿದ್ಯಾರ್ಥಿಗಳೊಂದಿಗೆ ವ್ಯವಹರಿಸಲು ಅನುಕೂಲವಾಗುವಂತೆ ಶಿಕ್ಷಕರ ಸಾಮರ್ಥ್ಯವನ್ನು, ಅದರಲ್ಲಿಯೂ ವಿಶೇಷವಾಗಿ ಬೋಧನಾ ವಿಧಾನ ಮತ್ತು ಮೌಲ್ಯಮಾಪನಗಳಿಗೆ ಗಮನ ಇರಿಸಿ ಅಭಿವೃದ್ಧಿಪಡಿಸಬೇಕು’ ಎಂದೂ ಅವರು ಸಲಹೆ ನೀಡಿದ್ದಾರೆ.

ವಿಶ್ವವಿದ್ಯಾಲಯದ ಜಾಲತಾಣದಲ್ಲಿ ವರದಿಯ ಸಂಪೂರ್ಣ ಮಾಹಿತಿ ಲಭ್ಯವಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.