ADVERTISEMENT

ಬ್ಯಾಂಕ್ ಸಿಬ್ಬಂದಿ ನೇಮಕಾತಿ ಪರೀಕ್ಷೆ 2020: ತಯಾರಿ ಹೀಗೆ ಇರಲಿ...

ಅರುಣ ಬ ಚೂರಿ
Published 28 ಜನವರಿ 2020, 10:13 IST
Last Updated 28 ಜನವರಿ 2020, 10:13 IST
   

ಕಳೆದ ಸಾಲಿನ ಬ್ಯಾಂಕಿಂಗ್‌ ಪರೀಕ್ಷೆಗಳು ಮುಕ್ತಾಯಗೊಂಡಿವೆ. ಈ ಕ್ಷೇತ್ರದಲ್ಲಿ ಉದ್ಯೋಗ ಗಿಟ್ಟಿಸಿಕೊಳ್ಳಲು ಸಿದ್ಧತೆ ಕುರಿತ ಸಲಹೆಗಳನ್ನು ಕೆಲವರಾದರೂ ಅನುಸರಿಸಿರಬಹುದು. ಈ ಪರೀಕ್ಷೆಯಲ್ಲಿ ಸಫಲರಾಗಿ ಕೆಲಸ ಗಿಟ್ಟಿಸಿಕೊಂಡವರ ಮೊಗದಲ್ಲಿ ಸಂತೋಷವಿದ್ದರೆ ಇದರಲ್ಲಿ ವಿಫಲರಾದ ಕರ್ನಾಟಕದ ಹಲವು ವಿದ್ಯಾರ್ಥಿಗಳ ಕಥೆಯೇನು? ಈ ಪ್ರಶ್ನೆ ಬಹಳ ಕಷ್ಟಕರವಾಗಿ ತೋರಿದರೂ ಸಹ ಉತ್ತರ ಅತ್ಯಂತ ಸುಲಭವಾಗಿದೆ.

ವಿಫಲರಾದ ವಿದ್ಯಾರ್ಥಿಗಳ ಮುಂದಿರುವ ಆಯ್ಕೆಗಳ ಬಗ್ಗೆ ಗಮನಹರಿಸೋಣ. ಪರೀಕ್ಷೆಯಲ್ಲಿ ವಿಫಲರಾದರೆ ಮುಂದೇನು ಎಂಬ ಬಗ್ಗೆ ಫಲಿತಾಂಶದ ನಂತರವೇ ಯೋಚಿಸಬೇಕಷ್ಟೆ. ಈಗ ಆ ಸಮಯ ಬಂದಿದೆ. ಹಾಗಿದ್ದರೆ ಸದ್ಯ ನಮ್ಮ ಕೈಯಲ್ಲಿದ್ದ ಅವಕಾಶಗಳನ್ನೇ ಹಲವಾರು ಕಾರಣಗಳಿಂದಾಗಿ ಕಳೆದುಕೊಂಡಂತಹ ತಪ್ಪಿತಸ್ಥ ಭಾವನೆ ದೂರಮಾಡುವ ಹಾಗೂ ಮತ್ತೊಂದು ಇಂತಹ ಅವಕಾಶ ದೊರಕಬಹುದೇ ಎಂಬ ನಿಮ್ಮ ಪ್ರಶ್ನೆಗೆ ಉತ್ತರ ‘ಹೌದು’. ಆದರೆ ಇದಕ್ಕೆ ಅವಶ್ಯವಿರುವುದು ಆತ್ಮಸ್ಥೈರ್ಯ ಹಾಗೂ ಹಿಂದಿನ ಪರೀಕ್ಷೆಗಳಲ್ಲಿ ನೀವು ಮಾಡಿದ ತಪ್ಪುಗಳ ಬಗ್ಗೆ ಸೂಕ್ತ ಅವಲೋಕನ. ಕೈ ತಪ್ಪಿಹೋದ ಅವಕಾಶಗಳ ಕಾರಣಗಳನ್ನು ಅವಲೋಕಿಸಿ ಮುಂಬರುವ ಅವಕಾಶಗಳನ್ನು ದೊರಕಿಸಿಕೊಳ್ಳುವತ್ತ ಯೋಚಿಸಿ.

ಪ್ರತಿವರ್ಷದಂತೆ ಈ ವರ್ಷವೂ ಕೂಡ ಬ್ಯಾಂಕ್ ಸಿಬ್ಬಂದಿಗಳ ನೇಮಕಾತಿಗಾಗಿ ಐಬಿಪಿಎಸ್ 2020-2021 ರ ತಾತ್ಕಾಲಿಕ ಕ್ಯಾಲೆಂಡರ್ ಬಿಡುಗಡೆಗೊಳಿಸಿದೆ. ಎಸ್‌ಬಿಐ ಈಗಾಗಲೇ ಜ್ಯೂನಿಯರ್ ಅಸೋಸಿಯೇಟ್ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಿದ್ದು ನಿನ್ನೆಯಷ್ಟೇ ಅರ್ಜಿ ಸಲ್ಲಿಸುವ ಕೊನೆಯದಿನ ಮುಕ್ತಾಯವಾಗಿದೆ. ಆರ್‌ಬಿಐ ಕೂಡ ಅಸಿಸ್ಟೆಂಟ್ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು ಅರ್ಜಿ ಸಲ್ಲಿಸಲು ಕೊನೆಯ ದಿನ 24 ಆಗಿತ್ತು. ಈಗಾಗಲೇ ಹಲವಾರು ಅಭ್ಯರ್ಥಿಗಳು ಅರ್ಜಿ ಸಲ್ಲಿಸಿರಬಹುದು.

ADVERTISEMENT

ಇದಲ್ಲದೆ ಎಸ್‌ಬಿಐ ಕೆಲವೇ ದಿನಗಳಲ್ಲಿ ಪ್ರೊಬೇಷನರಿ ಆಫೀಸರ್ ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಿದೆ.

ಒಟ್ಟಾರೆಯಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉದ್ಯೋಗ ಹೊಂದಬೇಕೆಂಬ ಅಭ್ಯರ್ಥಿಗಳ ಮುಂದಿರುವ ಆಯ್ಕೆಗಳೆಂದರೆ

-ಎಸ್‌ಬಿಐ ಪಿಒ

-ಎಸ್‌ಬಿಐ ಕ್ಲರ್ಕ್‌

-ಆರ್‌ಬಿಐ ಅಸಿಸ್ಟೆಂಟ್‌

-ಆರ್‌ಬಿಐ ಪಿಒ

-ಆರ್‌ಬಿಐ ಕ್ಲರ್ಕ್‌

ಇದಲ್ಲದೆ ಇನ್ನೂ ಅನೇಕ ಹುದ್ದೆಗಳಿಗೆ ಮುಂಬರುವ ದಿನಗಳಲ್ಲಿ ಅಧಿಸೂಚನೆ ಹೊರಬೀಳಲಿದೆ. ಒಟ್ಟಿನಲ್ಲಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಈಗ ಹುದ್ದೆಗಳು ಸಾಕಷ್ಟಿದ್ದು ಕೆಲಸ ಗಿಟ್ಟಿಸಿಕೊಳ್ಳಲು ಇದೊಂದು ಸದಾವಕಾಶ. ಮೇಲ್ಕಂಡ ಪರೀಕ್ಷೆಗಳಿಗೆ ಇರುವುದು ಒಂದೇ ಪಠ್ಯಕ್ರಮ. ಆದರೆ ‘ಡಿಫಿಕಲ್ಟಿ ಲೆವೆಲ್’ ಮಾತ್ರ ವಿಭಿನ್ನ. ಹೀಗಾಗಿ ಈಗಿನಿಂದಲೇ ಅವಶ್ಯಕ ತಂತ್ರಗಳೊಂದಿಗೆ ಪರೀಕ್ಷಾ ತಯಾರಿ ಪ್ರಾರಂಭಿಸಿದರೆ ನೀವು ಇಚ್ಛೆಪಟ್ಟ ಒಂದು ಬ್ಯಾಂಕಿಂಗ್ ಉದ್ಯೋಗ ಪಡೆಯುವುದು ಅತಿ ಸುಲಭ.

ಬಹುಮುಖ್ಯವಾಗಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ ತೇರ್ಗಡೆ ಹೊಂದಲು ಅವಶ್ಯಕವಾಗಿರುವುದು ಅಭ್ಯಾಸ. ತರಬೇತಿ ಕೇಂದ್ರದ ಶುಲ್ಕ ದುಬಾರಿಯಾದರೆ ಸ್ವ ಅಧ್ಯಯನದ ಕಡೆ ಗಮನಹರಿಸಿ. ವಿವಿಧ ಕಾರಣಗಳಿಂದಾಗಿ ಈ ಹಿಂದೆ ಇದು ಫಲ ಕೊಡುತ್ತಿರಲಿಲ್ಲ. ಡೇಟಾ ಶುಲ್ಕ ಕೂಡ ಜಾಸ್ತಿ ಇತ್ತು. ಆದರೆ ಸದ್ಯ ಪರಿಸ್ಥಿತಿ ಹಾಗಿಲ್ಲ. ನಿಮಗೆ ಅತಿ ಕಡಿಮೆ ಬೆಲೆಯಲ್ಲಿ ಪ್ರತಿನಿತ್ಯ ಡೇಟಾ ಸೇವೆ ದೊರಕುತ್ತಿದೆ. ಹೀಗಾಗಿ ಆನ್‌ಲೈನ್ ಅಧ್ಯಯನ ನಿಮಗೆ ಖಂಡಿತ ನೆರವಾಗಬಲ್ಲದು. ನಿಮಗೆ ಸಾಕಷ್ಟು ಸ್ಟಡಿ ಮೆಟಿರಿಯಲ್, ಸ್ಪೀಡ್ ಟೆಸ್ಟ್, ಮಾಕ್ ಟೆಸ್ಟ್ ಹಾಗೂ ವಿಶ್ಲೇಷಣೆಗೆ ರೆಕಾರ್ಡೆಡ್ ವಿಡಿಯೊ ಎಲ್ಲವೂ ದೊರಕುತ್ತವೆ. ವಿದ್ಯಾರ್ಥಿಗಳು ಇದರ ಸದುಪಯೋಗಪಡಿಸಿಕೊಂಡು ಪರೀಕ್ಷಾ ಯಶಸ್ಸಿಗೆ ಹತ್ತಿರವಾಗಬೇಕು.

ಪ್ರತಿನಿತ್ಯದ ನಿಮ್ಮ ದಿನಚರಿ ಇವುಗಳನ್ನು ಒಳಗೊಂಡಿರರಲಿ

30ರವರೆಗೆ ಸ್ಕ್ವೇರ್‌, ಕ್ಯೂಬ್‌ನ ಟೇಬಲ್‌ ಅಭ್ಯಾಸ ಮಾಡಿ.

ನಿತ್ಯ ದಿನಪತ್ರಿಕೆಯಲ್ಲಿ ಒಂದು ಸಂಪಾದಕೀಯವನ್ನಾದರೂ ಓದಿ.

ಸಾಮಾನ್ಯ ಜ್ಞಾನ ಮತ್ತು ಪ್ರಚಲಿತ ವಿಷಯವನ್ನು ನಿತ್ಯ ಓದಿ.

ಪರೀಕ್ಷಾ ಸಿದ್ಧತೆ ಪ್ರಾರಂಭಿಸಿ

ಪರೀಕ್ಷಾ ತಯಾರಿಯ ಬಗ್ಗೆ ನೋಡುವುದಾದರೆ ಅಣಕು ಪರೀಕ್ಷೆಗಳಿಗೆಪ್ರಾಧಾನ್ಯತೆ ನೀಡಿ.ಮೊದಲನೆಯದಾಗಿ ಅಭ್ಯರ್ಥಿಗಳುಪ್ರಿಲಿಮ್ಸ್ ಪರೀಕ್ಷೆಗಾಗಿ ತಯಾರಿ ನಡೆಸುವುದನ್ನು ನಿಲ್ಲಿಸಿ ಮೇನ್ಸ್ ಪರೀಕ್ಷೆಗಾಗಿ ತಯಾರಿ ನಡೆಸಿ. ಹಾಗಾದಾಗ ಮಾತ್ರ ಯಶಸ್ಸು ಸಾಧ್ಯ. ಪ್ರಿಲಿಮ್ಸ್ ಪಾಸ್ ಆಗದೆ ಮೇನ್ಸ್‌ನ ತಯಾರಿ ನಡೆಸಿ ಏನು ಲಾಭ ಎಂದು ಯೋಚಿಸದಿರಿ. ಮೇನ್ಸ್ ಸಂಪೂರ್ಣ ಪಠ್ಯಕ್ರಮ ಪ್ರಿಲಿಮ್ಸ್‌ನಲ್ಲಿ ಇರುವುದು. ಆದರೆ ‘ಡಿಫಿಕಲ್ಟಿ ಲೆವೆಲ್’ ಮಾತ್ರ ಕಡಿಮೆ. ಹೀಗಾಗಿ ಯಾವಾಗ ನೀವು ಹೆಚ್ಚಿನ ‘ಡಿಫಿಕಲ್ಟಿ ಲೆವೆಲ್‌’ನ ಅಭ್ಯಾಸ ನಡೆಸುವಿರೋ ಸಹಜವಾಗಿಯೇ ನೀವು ಪ್ರಿಲಿಮ್ಸ್ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವಿರಿ ಮತ್ತು ವೇಗ ಹಾಗೂ ನಿಖರತೆ ಮೇಲೆ ಹಿಡಿತ ಸಾಧಿಸಲು ಪ್ರತಿನಿತ್ಯ ಪ್ರಿಲಿಮ್ಸ್‌ನ ಒಂದು ಅಣಕು ಪರೀಕ್ಷೆ ಹಾಗೂ ಅದರ ವಿಶ್ಲೇಷಣೆ ನಡೆಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.