ADVERTISEMENT

ಜೈವಿಕ ತಂತ್ರಜ್ಞಾನ: ಸಂಶೋಧನೆಗೆ ವರದಾನ; ಉದ್ಯೋಗಾವಕಾಶವೂ ವಿಫುಲ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2025, 23:50 IST
Last Updated 14 ಸೆಪ್ಟೆಂಬರ್ 2025, 23:50 IST
   

ಇಪ್ಪತ್ತೊಂದನೇ ಶತಮಾನವನ್ನು ಜ್ಞಾನ ಮತ್ತು ವಿಜ್ಞಾನದ ಶತಮಾನ ಎಂದು ಕರೆಯಲಾಗುತ್ತಿದೆ. ಇದಕ್ಕೆ ಪೂರಕವಾಗಿ ಬಯೊಟೆಕ್ನಾಲಜಿ ಅಥವಾ ಜೈವಿಕ ತಂತ್ರಜ್ಞಾನ ಕ್ಷೇತ್ರವು ಬೆಳೆಯುತ್ತಿದೆ. ಮಾನವ ಜೀವನದ ಗುಣಮಟ್ಟ ಸುಧಾರಣೆ, ಆಹಾರ ಭದ್ರತೆ, ಆರೋಗ್ಯ ಸಂರಕ್ಷಣೆ, ಪರಿಸರ ಸಂರಕ್ಷಣೆ‌, ಕೈಗಾರಿಕಾ ಉತ್ಪಾದನೆಯಂತಹ ಕ್ಷೇತ್ರಗಳಲ್ಲಿ ಜೈವಿಕ ತಂತ್ರಜ್ಞಾನವು ಕ್ರಾಂತಿಯನ್ನು ಉಂಟುಮಾಡುತ್ತಿದೆ.

ಈ ಕ್ಷೇತ್ರದಲ್ಲಿನ ಸಂಶೋಧನೆ ವಿವಿಧ ದಿಕ್ಕುಗಳಲ್ಲಿ ಸಾಗುತ್ತಿದೆ. ಜನ್ಯ ತಂತ್ರಜ್ಞಾನ–  ಜೆನೆಟಿಕ್‌ ಎಂಜಿನಿಯರಿಂಗ್‌, ಆಣ್ವಿಕ ಜೀವಶಾಸ್ತ್ರ– ಮಾಲಿಕ್ಯುಲಾರ್‌ ಬಯಾಲಜಿ, ಕೃಷಿ ಜೈವಿಕ ತಂತ್ರಜ್ಞಾನ– ಅಗ್ರಿಕಲ್ಚರಲ್‌ ಬಯೊಟೆಕ್ನಾಲಜಿ, ಔಷಧ ಅಭಿವೃದ್ಧಿ– ಫಾರ್ಮಸ್ಯೂಟಿಕಲ್‌ ಬಯೊಟೆಕ್ನಾಲಜಿ, ಕೈಗಾರಿಕಾ ಉತ್ಪನ್ನ ತಯಾರಿಕೆ– ಇಂಡಸ್ಟ್ರಿಯಲ್‌ ಬಯೊಪ್ರೋಸೆಸಸ್‌ ಹಾಗೂ ಪರಿಸರ ನಿರ್ವಹಣಾ ತಂತ್ರಜ್ಞಾನ– ಎನ್‌ವಿರಾನ್‌ಮೆಂಟಲ್‌ ಬಯೊಟೆಕ್ನಾಲಜಿ ಪ್ರಮುಖವಾಗಿವೆ. ಉದಾಹರಣೆಗೆ, ಜನ್ಯ ತಂತ್ರಜ್ಞಾನದ ಮೂಲಕ ಜನ್ಯ ಪರಿವರ್ತಿತ ಬೆಳೆಗಳು (ಜೆನೆಟಿಕಲಿ ಮಾಡಿಫೈಡ್‌ ಕ್ರಾಪ್ಸ್‌) ಅಭಿವೃದ್ಧಿಯಾಗಿದ್ದು, ಅವು ಹೆಚ್ಚಿನ ಉತ್ಪಾದನೆ, ಕೀಟ ನಿರೋಧಕತೆಗೆ ಕಾರಣವಾಗಿವೆ. ಆರೋಗ್ಯ ಕ್ಷೇತ್ರದಲ್ಲಿ, ಕೃತಕ ಇನ್ಸುಲಿನ್ ಉತ್ಪಾದನೆ, ಲಸಿಕೆಗಳ ತಯಾರಿಕೆಯು ಜೈವಿಕ ತಂತ್ರಜ್ಞಾನ ಸಂಶೋಧನೆಯ ಫಲ. ಜೆನೋಮ್ ತಿದ್ದುಪಡಿ ತಂತ್ರಜ್ಞಾನವು ವೈದ್ಯಕೀಯ ರಂಗದಲ್ಲಿ ನವೀನ ಸಂಶೋಧನೆಯ ದಿಕ್ಕನ್ನು ತೋರಿಸುತ್ತಿದೆ.

ಬಿ.ಇ/ಬಿ.ಟೆಕ್‌ನಿಂದ ಹಿಡಿದು ಸ್ನಾತಕೋತ್ತರ ಮತ್ತು ಪಿಎಚ್.ಡಿ. ಹಂತದವರೆಗೂ ವಿದ್ಯಾರ್ಥಿಗಳು ಆಳವಾದ ಸಂಶೋಧನೆಯಲ್ಲಿ ತೊಡಗಿಕೊಳ್ಳಬಹುದಾಗಿದೆ. ಪ್ರಾಜೆಕ್ಟ್ ಕಾರ್ಯ, ಪ್ರಯೋಗಾಲಯ ಸಂಶೋಧನೆ, ಕೈಗಾರಿಕಾ ತರಬೇತಿ, ಇಂಟರ್ನ್‌ಶಿಪ್‌ನಂತಹವುಗಳ ಮೂಲಕ ತಾಂತ್ರಿಕ ಕೌಶಲವನ್ನು ಪಡೆಯಬಹುದಾಗಿದೆ. ಇದರ ಜೊತೆಗೆ, ಸಮಸ್ಯೆ ಪರಿಹಾರ ಸಾಮರ್ಥ್ಯ, ತಂಡದಲ್ಲಿ ಕೆಲಸ ಮಾಡುವ ಗುಣ, ಸಂವಹನ ಕೌಶಲ, ನೈತಿಕ ಹೊಣೆಗಾರಿಕೆ ಎಲ್ಲವೂ ಸದೃಢಗೊಳ್ಳುತ್ತವೆ. ಜೊತೆಗೆ ಸಮಾಜಮುಖಿ ಕೊಡುಗೆ ನೀಡಲು ಸಹ ಸಾಧ್ಯವಾಗಿದೆ.

ADVERTISEMENT

ಉದ್ಯೋಗಾವಕಾಶ: ದೇಶೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಅನೇಕ ಅವಕಾಶಗಳು ತೆರೆದಿವೆ.


ಆರೋಗ್ಯ ಕ್ಷೇತ್ರ– ಔಷಧ ಕಂಪನಿಗಳು, ಲಸಿಕೆ ತಯಾರಿಕಾ ಘಟಕಗಳು, ಕ್ಲಿನಿಕಲ್ ಸಂಶೋಧನಾ ಸಂಸ್ಥೆಗಳು.
ಕೃಷಿ ಕ್ಷೇತ್ರ– ಬೀಜ ಉತ್ಪಾದನಾ ಕಂಪನಿಗಳು, ಸಸ್ಯ ಸಂಶೋಧನಾ ಕೇಂದ್ರಗಳು, ಆಹಾರ ಸಂಸ್ಕರಣಾ ಕೈಗಾರಿಕೆಗಳು.
ಪರಿಸರ ನಿರ್ವಹಣೆ– ಜಲಶುದ್ಧೀಕರಣ ಘಟಕಗಳು, ತ್ಯಾಜ್ಯ ನಿರ್ವಹಣಾ ಕೈಗಾರಿಕೆಗಳು, ನವೀನ ಶಕ್ತಿಯ ತಂತ್ರಜ್ಞಾನ.
ಕೈಗಾರಿಕಾ ಕ್ಷೇತ್ರ– ಎನ್‌ಜೈಮ್ ತಯಾರಿಕೆ, ಜೈವಿಕ ಇಂಧನ, ಬಯೊಫಾರ್ಮಸ್ಯೂಟಿಕಲ್ಸ್.
ಸಂಶೋಧನಾ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು– ಸಂಶೋಧನಾ ಸಹಾಯಕ, ಉಪನ್ಯಾಸಕ, ವಿಜ್ಞಾನಿ ಹುದ್ದೆಗಳು.

ವಿದೇಶಿ ಅವಕಾಶ– ಅಮೆರಿಕ, ಯುರೋಪ್, ಜಪಾನ್, ಸಿಂಗಪುರದಂತಹ ದೇಶಗಳಲ್ಲಿ ಸಂಶೋಧನೆ ಹಾಗೂ ಕೈಗಾರಿಕಾ ಕೆಲಸಗಳಿಗೆ ವಿದ್ಯಾರ್ಥಿಗಳು ಹೆಚ್ಚಿನ ಬೇಡಿಕೆ ಹೊಂದಿದ್ದಾರೆ. ಇದೇ ರೀತಿ, ಬಯೊಟೆಕ್ನಾಲಜಿಯಲ್ಲಿ ಸ್ಟಾರ್ಟ್‌–ಅಪ್ ಉದ್ದಿಮೆಗಳು ಕೂಡ ವೇಗವಾಗಿ ಬೆಳೆಯುತ್ತಿವೆ. ಆರೋಗ್ಯ ನಿರ್ಣಾಯಕ ಕಿಟ್‌ಗಳು, ಸಸ್ಯ ಆಧಾರಿತ ಉತ್ಪನ್ನಗಳು, ಜೈವಿಕ ಇಂಧನ, ಆಹಾರ ತಂತ್ರಜ್ಞಾನದಲ್ಲಿ ಯುವ ಉದ್ಯಮಿಗಳು ಹೊಸ ಹಾದಿ ತೆರೆಯುತ್ತಿದ್ದಾರೆ.

ಹೀಗಾಗಿ, ವಿಜ್ಞಾನಾಭಿರುಚಿ ಹೊಂದಿರುವ ವಿದ್ಯಾರ್ಥಿಗಳು ಬಯೊಟೆಕ್ನಾಲಜಿ ಪದವಿಯನ್ನು ಆಯ್ಕೆ ಮಾಡಿಕೊಂಡು, ದೇಶದ ಭವಿಷ್ಯ ನಿರ್ಮಾಣದಲ್ಲಿ ಕೈಜೋಡಿಸಬಹುದು.

ಲೇಖಕ: ಪ್ರಾಧ್ಯಾಪಕ, ಬಾಪೂಜಿ ಇನ್‌ಸ್ಟಿಟ್ಯೂಟ್‌ ಆಫ್‌ ಎಂಜಿನಿಯರಿಂಗ್‌ ಆ್ಯಂಡ್‌ ಟೆಕ್ನಾಲಜಿ– ಬಿಐಇಟಿ, ದಾವಣಗೆರೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.