ADVERTISEMENT

'ಶುಗರ್ ಬೋರ್ಡ್' | ಆರೋಗ್ಯ ಜಾಗೃತಿ: ಈಗ ಶಾಲೆಯ ಸರದಿ

ಸಿಬಿಎಸ್‌ಇ ಶಾಲೆಗಳಲ್ಲಿ ‘ಶುಗರ್‌ ಬೋರ್ಡ್‌’, ‘ಆಯಿಲ್‌ ಬೋರ್ಡ್‌’

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2025, 1:30 IST
Last Updated 4 ಆಗಸ್ಟ್ 2025, 1:30 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಕೃಪೆ: Gemini AI

ಸಿಬಿಎಸ್‌ಇ ಪಠ್ಯಕ್ರಮದ ಶಾಲೆಗಳಲ್ಲಿ ಇರಲಿದೆ ‘ಶುಗರ್‌ ಬೋರ್ಡ್‌’ ‘ಆಯಿಲ್‌ ಬೋರ್ಡ್‌’

ನಮ್ಮ ದೈನಂದಿನ ಆಹಾರ ಪದ್ಧತಿಯು ನಮ್ಮ ಆರೋಗ್ಯಕ್ಕೆ ಹಿಡಿದ ಕನ್ನಡಿಯಂತೆ. ದೇಹ ಹಾಗೂ ಮನಸ್ಸಿಗೆ ಹಿತ ನೀಡುವ ಸಮತೋಲಿತ ಆಹಾರ ಪದಾರ್ಥಗಳ ಸೇವನೆಯು ನಮ್ಮ ಶರೀರವನ್ನು ಕಾಯುತ್ತದೆ. ಈ ದಿಸೆಯಲ್ಲಿ, ಮಕ್ಕಳು ಹಾಗೂ ಪಾಲಕರಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವುದು ದೇಶದ ಭವಿಷ್ಯಕ್ಕೆ ಪೂರಕವಾದ ನಡೆ.

ADVERTISEMENT

ಪ್ರಸ್ತುತ ಮಕ್ಕಳಲ್ಲಿ ಮಧುಮೇಹ, ತೂಕ ಹೆಚ್ಚಳದಂತಹ ದೀರ್ಘಕಾಲೀನ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿರುವುದನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (ಸಿಬಿಎಸ್‌ಇ) ಗಂಭೀರವಾಗಿ ಪರಿಗಣಿಸಿದೆ. ಆರೋಗ್ಯ ಜಾಗೃತಿ ಮೂಡಿಸಲು ಅದು ಒಂದು ಹೆಜ್ಜೆ ಮುಂದೆ ಇಟ್ಟಿದೆ. ಸಿಬಿಎಸ್‍ಇ ಪಠ್ಯಕ್ರಮದ ಶಾಲೆಗಳಲ್ಲಿ ‘ಶುಗರ್ ಬೋರ್ಡ್’ ಸ್ಥಾಪಿಸಲು ಸೂಚನೆ ನೀಡಿದೆ. ಮುಖ್ಯವಾಗಿ, ಸಕ್ಕರೆ ಕಾಯಿಲೆಯಿಂದ ಮಕ್ಕಳನ್ನು ದೂರವಿರಿಸುವ ಉದ್ದೇಶದಿಂದ ಇತ್ತೀಚೆಗೆ ಈ ಯೋಜನೆಯನ್ನು ಜಾರಿಗೆ ತರಲಾಗಿದೆ. ಪ್ರತಿನಿತ್ಯ ಎಷ್ಟು ಪ್ರಮಾಣದಲ್ಲಿ ಸಕ್ಕರೆಯ ಅಂಶವಿರುವ ಆಹಾರ ಸೇವಿಸುವುದು ಆರೋಗ್ಯದ ದೃಷ್ಟಿಯಿಂದ ಹಿತಕರ ಎಂಬುದನ್ನು ಮಂಡಳಿಯು ಉಲ್ಲೇಖಿಸಿದೆ.

ಭಾರತೀಯ ಆಹಾರ ಪದ್ಧತಿಯಲ್ಲಿ ನಾವು ಪಡೆಯುವ ಮುಖ್ಯ ಶಕ್ತಿಯ ಆಗರವೆಂದರೆ ಶರ್ಕರಪಿಷ್ಠ. ಕೊಬ್ಬು ಮತ್ತು ಪ್ರೋಟೀನ್ ಆಕರಗಳಿಂದ ದಿನಕ್ಕೆ ಬೇಕಾಗುವಷ್ಟು ಶಕ್ತಿ ಸಂದಾಯವಾಗುವುದಿಲ್ಲ. ಹೀಗಾಗಿ, ನಾವು ಶರ್ಕರಪಿಷ್ಠವನ್ನು ಹೆಚ್ಚಿನ ಪ್ರಮಾಣದಲ್ಲಿ ಹೊಂದಿರುವ ಅಕ್ಕಿ, ಗೋಧಿ, ರಾಗಿ, ಜೋಳದಂತಹವನ್ನು ಪ್ರಮುಖ ಆಹಾರ ಪದಾರ್ಥಗಳಾಗಿ ಸೇವಿಸುತ್ತೇವೆ. ಇಷ್ಟು ಸಾಲದೆಂಬಂತೆ ಬಿಸ್ಕತ್ತು, ಚಾಕೊಲೇಟ್‌, ತಂಪು ಪಾನೀಯದಂತಹವುಗಳಿಂದ ಇನ್ನಷ್ಟು ಸಕ್ಕರೆಯ ಅಂಶ ನಮ್ಮ ದೇಹವನ್ನು ಸೇರುತ್ತದೆ.

ಇದನ್ನೆಲ್ಲ ಕರಗಿಸಲು ಸಾಧ್ಯವಾಗುವಂತಹ ಕೆಲಸಗಳನ್ನು ನಾವು ಮಾಡಬೇಕಾಗುತ್ತದೆ. ಆದರೆ ನಾವೀಗ ಬಹುತೇಕ ನಿಷ್ಕ್ರಿಯ ಜೀವನಪದ್ಧತಿಯನ್ನು ಅನುಸರಿಸುತ್ತಿದ್ದೇವೆ. ಹೀಗಾಗಿ, ಪ್ರಮುಖ ಆಹಾರವಾಗಿ ಸೇವಿಸಿದ ಪದಾರ್ಥಗಳಲ್ಲಿ ಇರುವ ಸಕ್ಕರೆ ಅಂಶವೇ ವ್ಯಯವಾಗದೆ ಸಂಗ್ರಹವಾಗಿರುವಾಗ, ಇನ್ನು ದೇಹವನ್ನು ಸೇರುವ ಈ ಹೆಚ್ಚಿನ ಸಕ್ಕರೆ ಅಂಶ ಏನಾಗಬೇಕು?! ಅದು ತೂಕ ಹೆಚ್ಚಳ, ಬೊಜ್ಜಿನಂತಹ ಸಮಸ್ಯೆಗಳಿಗೆ ಎಡೆ ಮಾಡಿಕೊಡುತ್ತದೆ. ಇದರಿಂದ ದೇಹದ ಪಚನ ಸಾಮರ್ಥ್ಯ ಕಡಿಮೆಯಾಗಬಹುದು. ಇನ್ಸುಲಿನ್ ಪ್ರಮಾಣದಲ್ಲಿ ವ್ಯತ್ಯಯವಾಗಿ ಮಧುಮೇಹ ತಲೆದೋರಬಹುದು. ಆದ್ದರಿಂದ, ನೈಸರ್ಗಿಕವಾಗಿ ಸಕ್ಕರೆ ಅಂಶವನ್ನು ದೇಹಕ್ಕೆ ಸೇರಿಸುವಂತಹ ಹಣ್ಣು, ತರಕಾರಿಯನ್ನು ಹೆಚ್ಚಾಗಿ ಸೇವಿಸಬೇಕು. ಅದು ತನ್ನಲ್ಲಿರುವ ಆ್ಯಂಟಿ ಆಕ್ಸಿಡೆಂಟ್‍ಗಳನ್ನೂ ಇನ್ನಿತರ ಪೋಷಕಾಂಶಗಳನ್ನೂ ಒದಗಿಸಿ ಶರೀರವನ್ನು ಪೋಷಿಸುತ್ತದೆ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು, ದೇಹವು ಎಂದೆಂದಿಗೂ ಚೈತನ್ಯದಿಂದ ಇರುವಂತೆ ನೋಡಿಕೊಳ್ಳಲು, ಈ ಮೂಲಕ ಮನಸ್ಸು ಉಲ್ಲಸಿತವಾಗಿರಲು ಸಹಾಯ ಮಾಡುತ್ತದೆ.

ಅದೇ ನಾವು ಸಕ್ರಿಯ‌ರಾಗಿ ಇದ್ದಾಗ, ಅಂದರೆ ಹೆಚ್ಚು ಶಕ್ತಿಯನ್ನು ವ್ಯಯಿಸುವ ಚಟುವಟಿಕೆಗಳಲ್ಲಿ ತೊಡಗಿಕೊಂಡಾಗ, ದೇಹಕ್ಕೆ ಒದಗಿಸಿದ ಸಕ್ಕರೆ ಅಂಶವು ಎಲ್ಲ ಕೋಶಗಳಿಗೂ ಅಡೆತಡೆ ಇಲ್ಲದೇ ತಲುಪಿ ಉತ್ತಮ ಆರೋಗ್ಯ ನಮ್ಮದಾಗುತ್ತದೆ. 

ಸಿಬಿಎಸ್‌ಇ ಜಾರಿಗೆ ತಂದಿರುವ ಇನ್ನೊಂದು ಹೊಸ ವಿಧಾನ ‘ಆಯಿಲ್ ಬೋರ್ಡ್’. ಇದು ಪ್ರಮುಖವಾಗಿ, ಮಕ್ಕಳಲ್ಲಿ ಹೆಚ್ಚುತ್ತಿರುವ ಬೊಜ್ಜಿನ ಸಮಸ್ಯೆಯನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ. ಕರಿದ ಪದಾರ್ಥ, ಪ್ಯಾಕ್ಡ್ ಫುಡ್‍ ಸೇವಿಸುವುದರಿಂದ ಕೆಟ್ಟ ಕೊಬ್ಬು ದೇಹವನ್ನು ಸೇರುತ್ತದೆ. ಒಳ್ಳೆಯ ಕೊಬ್ಬು ನೈಸರ್ಗಿಕವಾಗಿ ಸೇರಿದರೆ ತೊಂದರೆಯಿಲ್ಲ. ಆದರೆ ಮಕ್ಕಳು ಬೇಕರಿಯಲ್ಲಿ ಸಿಗುವ ಬಣ್ಣ ಬಣ್ಣದ ತಿನಿಸು, ಪ್ಯಾಕ್‌ ಆದ ತಿಂಡಿ, ಚಿಪ್ಸ್‌ನಂತಹ ತಿನಿಸುಗಳಿಗೆ ಬಹುಬೇಗ ಆಕರ್ಷಿತರಾಗುತ್ತಾರೆ. ಅಂತಹವುಗಳಿಂದ ಮಕ್ಕಳ ಮನಸ್ಸನ್ನು ಅವಶ್ಯವಾಗಿ ಬೇರೆಡೆ ತಿರುಗಿಸಿ ಅವರಲ್ಲಿ ಜಾಗೃತಿ ಮೂಡಿಸುವಂತಹ ಪ್ರಯತ್ನ ಆಗಬೇಕಾಗಿದೆ.

ಶಾಲಾ ಕ್ಯಾಂಟೀನ್‍ಗಳು, ಮಕ್ಕಳು ಹೆಚ್ಚಾಗಿ ಓಡಾಡುವ ಕಾರಿಡಾರ್‌ಗಳು, ಸಿಬ್ಬಂದಿ ಕೊಠಡಿಯಂತಹ ಮುಖ್ಯ ಜಾಗಗಳಲ್ಲಿ ಆರೋಗ್ಯ ಜಾಗೃತಿ ಮೂಡಿಸುವ ಭಿತ್ತಿಪತ್ರಗಳನ್ನು ಅಂಟಿಸಲು ಯೋಜಿಸಲಾಗಿದೆ. ಶಾಲಾ ಕ್ಯಾಂಟೀನ್‍ಗಳು ಇನ್ನು ಮುಂದೆ ನೈಸರ್ಗಿಕ ಆಹಾರಕ್ಕೆ ಹೆಚ್ಚು ಒತ್ತು ಕೊಡಬೇಕಾಗುತ್ತದೆ. ಪಲ್ಯ, ಸಲಾಡ್, ಮೊಳಕೆ ಕಾಳುಗಳನ್ನು ಸೇವಿಸಲು ಮಕ್ಕಳನ್ನು ಪ್ರಚೋದಿಸಬೇಕಾಗುತ್ತದೆ. ಇಂತಹ ಪದಾರ್ಥಗಳನ್ನು ರುಚಿರುಚಿಯಾಗಿ ಮಕ್ಕಳು ಇಷ್ಟಪಟ್ಟು ತಿನ್ನುವಂತೆ ಮಾಡಲು ಸಾಧ್ಯವಿದೆ. ಕೆಲವು ಪದಾರ್ಥಗಳನ್ನು ಕರಿಯದೇ ಹುರಿದು ತಯಾರಿಸುವ ವಿಧಾನವನ್ನು ಅನುಸರಿಸಬಹುದಾಗಿದೆ. ಈ ರೀತಿಯ ಉಪಾಯಗಳು ಹಲವಾರು ಇರುತ್ತವೆ.

ಮಕ್ಕಳಿಗೆ ಮನೆಯಿಂದಲೇ ಊಟದ ಡಬ್ಬಿ ಕಳಿಸುವ ಪಾಲಕರ ಜವಾಬ್ದಾರಿ ಇನ್ನಷ್ಟು ಹೆಚ್ಚಾಗಿರುತ್ತದೆ. ರುಚಿ-ಶುಚಿಯಾದ ಹೊಸ ಹೊಸ ಬಗೆಯ ಆಹಾರ ಪದಾರ್ಥಗಳ ತಯಾರಿಕೆಯಲ್ಲಿ ನಮ್ಮ ಅಮ್ಮಂದಿರು ಯಾವುದಕ್ಕೂ ಕಡಿಮೆಯಿಲ್ಲ. ಅದಕ್ಕೆ ತಕ್ಕಂತೆ ಅವರು ಆರೋಗ್ಯ ಜಾಗೃತಿಯನ್ನೂ ಮೂಡಿಸಿಕೊಂಡರೆ ಸ್ವಸ್ಥ ಸಮಾಜ ನಿರ್ಮಾಣದತ್ತ ಬಲವಾದ ಹೆಜ್ಜೆ ಇಟ್ಟಂತೆಯೇ ಸರಿ. ಈ ದಿಸೆಯಲ್ಲಿ ಸಿಬಿಎಸ್‌ಇ ಉಪಕ್ರಮದೊಂದಿಗೆ ಕೈಜೋಡಿಸಿ, ಮಕ್ಕಳ ಆರೋಗ್ಯ ಕಾಯ್ದುಕೊಳ್ಳುವಲ್ಲಿ ಕಾರ್ಯಪ್ರವೃತ್ತರಾಗೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.