ADVERTISEMENT

ಬಹುಮುಖಿ ಉದ್ಯೋಗ ಖಾತ್ರಿಯ ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್ ಕೋರ್ಸ್‌

ಹೊಸ ಪಠ್ಯಕ್ರಮದೊಂದಿಗೆ ಬಹುಪಯೋಗಿ-ವಿಭಿನ್ನ ಉದ್ಯೋಗಾವಕಾಶ ಒದಗಿಸುವ ಪ್ರಮುಖ ತಾಂತ್ರಿಕೇತರ ಡಿಪ್ಲೊಮಾ ಕೋರ್ಸ್‌– ‘ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್'(ಡಿಸಿಪಿ).

ಪ್ರಜಾವಾಣಿ ವಿಶೇಷ
Published 18 ಜೂನ್ 2023, 23:44 IST
Last Updated 18 ಜೂನ್ 2023, 23:44 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಪ್ರಸ್ತುತ ತಾಂತ್ರಿಕ-ವೈದ್ಯಕೀಯ ಶಿಕ್ಷಣಗಳಂತೆ ಮತ್ತೊಂದು ಬಹು ಬೇಡಿಕೆಯಲ್ಲಿರುವುದು ‘ವಾಣಿಜ್ಯ ಶಿಕ್ಷಣ’ ವಿಭಾಗ. ಈ ವಾಣಿಜ್ಯ ಶಿಕ್ಷಣದಲ್ಲಿ ಆಯಾ ಕಾಲದ ಅಗತ್ಯಗಳಿಗೆ ತಕ್ಕಂತೆ ಹೊಸ ಪಠ್ಯಕ್ರಮದೊಂದಿಗೆ ಬಹುಪಯೋಗಿ-ವಿಭಿನ್ನ ಉದ್ಯೋಗಾವಕಾಶ ಒದಗಿಸುವ ಪ್ರಮುಖ ತಾಂತ್ರಿಕೇತರ ಡಿಪ್ಲೊಮಾ ಕೋರ್ಸ್‌– ‘ಡಿಪ್ಲೊಮಾ ಇನ್ ಕಮರ್ಷಿಯಲ್ ಪ್ರಾಕ್ಟೀಸ್'(ಡಿಸಿಪಿ).

ಕೋರ್ಸ್, ಪಠ್ಯಕ್ರಮ 

ಈ ಡಿಸಿಪಿ ಕೋರ್ಸ್‌ನ ಅವಧಿ ಮೂರು ವರ್ಷಗಳು. ಸೆಮಿಸ್ಟರ್‌ ಪದ್ಧತಿಯಲ್ಲಿ ಶಿಕ್ಷಣ ನೀಡಲಾಗುತ್ತದೆ. ಒಟ್ಟು ಆರು ಸೆಮಿಸ್ಟರ್‌ಗಳಿರುತ್ತವೆ. 10ನೇ ತರಗತಿ ಪಾಸಾದವರು ಕೋರ್ಸ್‌ಗೆ ಪ್ರವೇಶ ಪಡೆಯಬಹುದು. ಮೆರಿಟ್ ಅವಶ್ಯಕತೆ ಇರುವುದಿಲ್ಲ. ಮೊದಲು ಬಂದವರಿಗೆ ಮೊದಲ ಆದ್ಯತೆ ಮೇರೆಗೆ ಸೀಟ್ ನೀಡಲಾಗುತ್ತದೆ.

ADVERTISEMENT

ಇಂಗ್ಲಿಷ್ ಮತ್ತು ಕನ್ನಡ ಎರಡು ಮಾದ್ಯಮದಲ್ಲಿದೆ. ಕನ್ನಡ ಕೋರ್ಸ್‌ಗೆ ಪ್ರವೇಶ ಪಡೆದವರಿಗೆ ಶೀಘ್ರಲಿಪಿ ಮತ್ತು ಬೆರಳಚ್ಚು ವಿಷಯಗಳು ಮಾತ್ರ ಕನ್ನಡದಲ್ಲಿ ಕಲಿಯಬೇಕು. ಇಂಗ್ಲಿಷ್ ಕೋರ್ಸ್‌ಗೆ ಪ್ರವೇಶ ಪಡೆದವರು ಶೀಘ್ರಲಿಪಿ ಮತ್ತು ಬೆರಳಚ್ಚು ವಿಷಯಗಳು ಇಂಗ್ಲಿಷ್‌ನಲ್ಲಿ ಕಲಿಯಬೇಕು. ಈ ಎರಡು ವಿಷಯಗಳನ್ನು ಹೊರತು ಪಡಿಸಿ ಇತರೆ ವಿಷಯಗಳನ್ನು ಇಂಗ್ಲಿಷ್ ಮತ್ತು ಕನ್ನಡ ಎರಡೂ ಮಾಧ್ಯಮದಲ್ಲಿ ಕಲಿಯಬಹುದು.

ಹೊಸ ಪಠ್ಯಕ್ರಮ : ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷದಿಂದ ಫಲಿತಾಂಶ ಆಧಾರಿತ ಹೊಸಪಠ್ಯಕ್ರಮ ಜಾರಿಗೆ ಬಂದಿದೆ. ಸಿ-20 ಎಂಬ ಪರಿಷ್ಕೃತ ಪಠ್ಯಕ್ರಮವು ಎಲ್ಲ ಬಗೆಯ ಆಧುನಿಕ ಆಡಳಿತಾತ್ಮಕ ಮತ್ತು ವ್ಯವಹಾರಿಕ ಕಚೇರಿಗಳಲ್ಲಿ ಕಾರ್ಯನಿರ್ವಹಿಸಲು ಬೇಕಾದ ವಿಷಯಗಳನ್ನು ಒಳಗೊಂಡಿದೆ. ಎಲ್ಲ ವರ್ಗದ ಕ್ರಿಯಾತ್ಮಕ ಮಾನವ ಸಂಪನ್ಮೂಲವನ್ನು ಅಣಿಗೊಳಿಸುವ ತಾಂತ್ರಿಕ ಕೌಶಲ, ನಿರ್ವಹಣೆ ಮತ್ತು ಸಂವಹನ ಕೌಶಲಗಳನ್ನು ತರಬೇತಿ ನೀಡುತ್ತದೆ.

ಈ ತರಬೇತಿಗೆ ಬೇಕಾದ ವಾಣಿಜ್ಯ ಶಾಸ್ತ್ರ, ಲೆಕ್ಕಶಾಸ್ತ್ರ, ವ್ಯವಹಾರ ನಿರ್ವಹಣೆ, ವಾಣಿಜ್ಯ ಕಾನೂನು, ಭಾರತೀಯ ಹಣಕಾಸು ವ್ಯವಸ್ಥೆ, ಕಾರ್ಪೊರೇಟ್ ಅಕೌಂಟ್ಸ್, ಆಡಿಟಿಂಗ್, ಮಾನವ ಸಂಪನ್ಮೂಲ, ಭಾರತದ ಸಂವಿಧಾನ, ಅರ್ಥಶಾಸ್ತ್ರ, ಸಂವಹನ ಕೌಶಲ – ಇಂಗ್ಲಿಷ್‌ಭಾಷೆ ಇತ್ಯಾದಿ ತಾತ್ವಿಕ ವಿಷಯಗಳನ್ನು ಕಲಿಸಲಾಗುತ್ತದೆ. ಟ್ಯಾಲಿ(Talley), ಕಂಪ್ಯೂಟರ್ ಬೇಸಿಕ್, ವೆಬ್‌ಡಿಸೈನ್, ಡಿಟಿಪಿ , ಇ–ಆಫೀಸ್-ಇತ್ಯಾದಿ ತಾಂತ್ರಿಕ ಪ್ರಾಯೋಗಿಕ ವಿಷಯಗಳ ಜೊತೆಗೆ ಐಚ್ಚಿಕ ವಿಷಯಗಳಾಗಿ ಕನ್ನಡ, ಇಂಗ್ಲಿಷ್ ಶೀಘ್ರಲಿಪಿ-ಬೆರಳಚ್ಚು (ಶಾರ್ಟ್‌ಹ್ಯಾಂಡ್‌ ಟೈಪಿಂಗ್) ಮತ್ತು ಕಂಪ್ಯೂಟರ್ ಬೆರಳಚ್ಚು (ಕಂಪ್ಯೂಟರ್ ಟೈಪಿಂಗ್‌) ಕೌಶಲಗಳನ್ನು ಕಲಿಸಲಾಗುತ್ತದೆ. ಅಂತಿಮ ಸೆಮೆಸ್ಟರ್‌ನಲ್ಲಿ ತರಗತಿ ಶಿಕ್ಷಣಕ್ಕೆ ಬದಲಾಗಿ ಪ್ರಾಯೋಗಿಕ ಕೌಶಲಾನುಭವ ನೀಡಲಾಗುತ್ತದೆ.  ನಂತರ ಆಯ್ದ ವಿಷಯಗಳಲ್ಲಿ ’ಇಂಟರನ್‌ಷಿಪ್‌’ ಕೂಡ ಇದೆ. 

ಶಿಕ್ಷಣ ಮುಂದುವರಿಕೆ

ಡಿಪ್ಲೊಮಾ ತೇರ್ಗಡೆಯಾದ ನಂತರ ಶಿಕ್ಷಣವನ್ನು ಮುಂದುವರಿಸಲು ಆಸಕ್ತಿ ಇರುವವರು ನೇರವಾಗಿ 2 ನೇ ಬಿ.ಕಾಂ.-ಪದವಿಗೆ ಸೇರಬಹುದು. ನಂತರ ಎಂ.ಕಾಂ/ ಎಂಬಿಎ ಮತ್ತಿತರ ಸ್ನಾತಕೋತ್ತರ ಶಿಕ್ಷಣ ಅಧ್ಯಯನ ಮಾಡಬಹುದು. ಸಿಎ/ಎಸಿಎಸ್ ಗಾಗಿ ಸಿಪಿಟಿ ಪರೀಕ್ಷೆಗಳನ್ನು ತೆಗೆದು ಕೊಳ್ಳಬಹುದು. ಪದವಿ ನಂತರ ಸಿಎ/ಐಸಿಡಬ್ಲ್ಯು ನಂತಹ ಉನ್ನತ ವೃತ್ತಿಪರ ಶಿಕ್ಷಣವನ್ನು ಮಾಡಬಹುದಾಗಿದೆ.

ಉದ್ಯೋಗಾವಕಾಶಗಳು

ಡಿಪ್ಲೊಮಾ ಮುಗಿದ ಮೇಲೆ ಕೇಂದ್ರ / ರಾಜ್ಯ ಸರ್ಕಾರದ ಇಲಾಖೆಗಳು ಮತ್ತು ಖಾಸಗಿ ಉದ್ಯಮಗಳು / ವಾಣಿಜ್ಯ ಸಂಸ್ಥೆಗಳು 1 ವರ್ಷದ ಅಪ್ರೆಂಟಿಸ್ ತರಬೇತಿಗೆ ಅವಕಾಶ ಮಾಡಿಕೊಡುತ್ತವೆ. ಅಲ್ಲದೆ, ಎಲ್ಲ ವರ್ಗದ ಕಚೇರಿಗಳಿಗೆ ಬೇಕಾದ ಅಕೌಂಟೆಂಟ್/ ಆಪ್ತ ಸಹಾಯಕರು-ಕನ್ನಡ ಮತ್ತು ಇಂಗ್ಲಿಷ್ ಶೀಘ್ರಲಿಪಿಗಾರರರು-ಬೆರಳಚ್ಚುಗಾರರ ಹುದ್ದೆಗಳು/ಕಂಪ್ಯೂಟರ್ ಕುಶಲ ಆಧಾರಿತ ಉದ್ಯೋಗಾವಕಾಶಗಳು ಎಲ್ಲ ಬಗೆಯ ಉದ್ಯಮಗಳ ಕಚೇರಿಗಳಲ್ಲಿ ಲಭ್ಯವಿವೆ.

ಕನ್ನಡ ಶೀಘ್ರಲಿಪಿ/ ಬೆರಳಚ್ಚು ತೇರ್ಗಡೆಯಾದವರಿಗೆ ರಾಜ್ಯಸರ್ಕಾರದಲ್ಲಿ ಶೀಘ್ರಲಿಪಿ / ಬೆರಳಚ್ಚುಗಾರರು ಹುದ್ದೆಗಳಿಗೆ ಸಾಕಷ್ಟು ಅವಕಾಶ ಗಳಿವೆ. ಅಲ್ಲದೆ ಕನ್ನಡ ಮತ್ತು ಇಂಗ್ಲಿಷ್ ಶೀಘ್ರಲಿಪಿ ತೇರ್ಗಡೆಯಾದವರಿಗೆ ರಾಜ್ಯ ಸರ್ಕಾರದ ಸ್ವಾಯತ್ತ/ಸ್ಥಳೀಯ ಸಂಸ್ಥೆಗಳು ಮತ್ತು ನ್ಯಾಯಾಲಯಗಳಲ್ಲಿ ಉದ್ಯೋಗಾವಕಾಶವಿದೆ.

ವಿಶೇಷ ಸೂಚನೆ

ಡಿಪ್ಲೊಮಾ ಪೂರ್ಣಗೊಳಿಸಿರದಿದ್ದರೂ, ಕನ್ನಡ ಶೀಘ್ರಲಿಪಿ / ಬೆರಳಚ್ಚು ವಿಷಯಗಳಲ್ಲಿ ತೇರ್ಗಡೆಯಾಗಿದ್ದರೆ, ರಾಜ್ಯ ಸರ್ಕಾರದ ಬೆರಳಚ್ಚು/ ಶೀಘ್ರಲಿಪಿಗಾರರ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಹಾಗೆಯೇ ಪದವಿ ಪಡೆದ ನಂತರ ಐಎಎಸ್ / ಐಪಿಎಸ್ / ಕೆಎಎಸ್ / ಬ್ಯಾಂಕಿಂಗ್ ಹುದ್ದೆಗಳಿಗಾಗಿ ನಡೆಸುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳಬಹುದು. ಹಾಗೆಯೇ ಎಂ.ಕಾಂ., ನಂತರ ಉಪನ್ಯಾಸಕ ಹುದ್ದೆಗೂ ಮತ್ತು ಎಂಬಿಎ ನಂತರ ಆಡಳಿತಾತ್ಮಕ ಹಾಗೂ ಆರ್ಥಿಕ ಕ್ಷೇತ್ರಗಳ ಹುದ್ದೆಗಳಿಗೂ ಹೋಗುವ ಅವಕಾಶವಿದೆ.

ಡಿಪ್ಲೊಮಾ ತೇರ್ಗಡೆಯನ್ನು ಪಿಯುಸಿ ಶಿಕ್ಷಣಕ್ಕೆ ತತ್ಸಮಾನ ಎಂದು ಪರಿಗಣಿಸಲಾಗಿದ್ದು, ರಾಜ್ಯ ಮತ್ತು ಕೇಂದ್ರ ಸರ್ಕಾರದ ಬ್ಯಾಂಕುಗಳ ಲಿಪಿಕ ಹುದ್ದೆಗಳಿಗೆ ಅರ್ಹರೆಂದು ಪರಿಗಣಿಸಲಾಗಿದೆ.‌

‘ಜಿಆರ್‌ಐಸಿಪಿ’ಯಲ್ಲಿ ಪ್ರವೇಶ ಪ್ರಕ್ರಿಯೆ ಬೆಂಗಳೂರಿನ ಕೆ.ಆರ್‌.ವೃತ್ತದಲ್ಲಿರುವ (ಎಸ್‌ಜೆಪಿ ತಾಂತ್ರಿಕ ಮಹಾವಿದ್ಯಾಲಯದ ಆವರಣ) ಸರ್ಕಾರಿ ಜಿ.ಆರ್‌.ಐ.ಸಿ.ಪಿ ಕಾಲೇಜಿನಲ್ಲಿ ಡಿಪ್ಲೊಮಾ ಇನ್‌ ಕಮರ್ಷಿಯಲ್ ಪ್ರಾಕ್ಟೀಸ್‌ ಕೋರ್ಸ್‌ಗೆ ಪ್ರವೇಶ ಪ್ರಕ್ರಿಯೆ ಪ್ರಾರಂಭವಾಗಿದೆ.‘ಮೊದಲು ಬಂದವರಿಗೆ ಮೊದಲು ಪ್ರವೇಶ’ (ಮೆರಿಟ್ ಪರಿಗಣನೆ ಇಲ್ಲ) ಆಧಾರದಲ್ಲಿ ಪ್ರವೇಶ ನೀಡಲಾಗುತ್ತಿದೆ. ಹೆಚ್ಚಿನ ಮಾಹಿತಿಗೆ: ಸರ್ಕಾರಿ ಜಿ.ಆರ್‌.ಇನ್‌ಸ್ಟಿಟ್ಯೂಟ್‌ ಆಫ್ ಕರ್ಮಷಿಯಲ್ ಪ್ರಾಕ್ಟೀಸ್, ಎಸ್‌ಜೆಪಿ ಆವರಣ, ಶೇಷಾದ್ರಿ ರಸ್ತೆ, ಬೆಂಗಳೂರು –560001. ದೂರವಾಣಿ ಸಂಖ್ಯೆ 9880039144, 7204015691

ಲೇಖನ– ಆತ್ರೇಯ

(ಪೂರಕ ಮಾಹಿತಿ: ಸರ್ಕಾರಿ ಜಿ.ಆರ್‌.ಇನ್‌ಸ್ಟಿಟ್ಯೂಟ್‌ ಆಫ್ ಕರ್ಮಷಿಯಲ್ ಪ್ರಾಕ್ಟೀಸ್, ಬೆಂಗಳೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.