ADVERTISEMENT

ಜಾಗತಿಕ ಪ್ರಶಸ್ತಿ ಹೊಸ್ತಿಲಲ್ಲಿ ಬೆಂಗಳೂರಿನ ಡಾ. ರಮ್ಯಾ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2019, 19:45 IST
Last Updated 4 ಸೆಪ್ಟೆಂಬರ್ 2019, 19:45 IST
ರಮ್ಯಾ ಮೋಹನ್‌
ರಮ್ಯಾ ಮೋಹನ್‌   

ಡಾ. ರಮ್ಯಾ ಮೋಹನ್‌, ಜಾಗತಿಕ ಮಟ್ಟದಲ್ಲಿ ನಾಡಿನ ವೈದ್ಯರ ಸಾಧನೆಯನ್ನು ಕೊಂಡಾಡುವಂತೆ ಮಾಡಿದ್ದಾರೆ. ಇವರು ಬೆಂಗಳೂರಿನವರು.

ಇಂಗ್ಲೆಂಡ್‌ನ ಪ್ರತಿಷ್ಠಿತ ರಾಯಲ್ ಕಾಲೇಜ್ ಆಫ್ ಸೈಕಿಯಾಟ್ರಿಸ್ಟ್ಸ್‌ ನೀಡುವ ಜಾಗತಿಕ ಮಟ್ಟದ ‘ಸೈಕಿಯಾಟ್ರಿಕ್‌ ಕಮ್ಯುನಿಕೇಟರ್‌’ ಪ್ರಶಸ್ತಿಗೆ ಬೆಳ್ಳಂದೂರಿನ ಆರ್‌ಎಕ್ಸ್‌ಡಿಎಕ್ಸ್‌ ಆಸ್ಪತ್ರೆಯ ಮನೋವೈದ್ಯೆ ಡಾ.ರಮ್ಯಾ ಮೋಹನ್ ನಾಮನಿರ್ದೇಶನಗೊಂಡಿದ್ದಾರೆ. ಇದು ಮನೋವೈದ್ಯಕೀಯ ಕ್ಷೇತ್ರದಲ್ಲಿ ನೀಡುವ ಶ್ರೇಷ್ಠ ಪ್ರಶಸ್ತಿ.

ಕಳೆದ 20 ವರ್ಷಗಳಿಂದ ಮಾನಸಿಕ ಆರೋಗ್ಯ ಹಾಗೂ ಮನೋವೈದ್ಯಕೀಯ ಸಂಶೋಧನೆಯಲ್ಲಿ ತೊಡಗಿರುವ ರಮ್ಯಾ, ಬೆಂಗಳೂರು ವೈದ್ಯಕೀಯ ಕಾಲೇಜಿನ ಹಳೆಯ ವಿದ್ಯಾರ್ಥಿ.

ADVERTISEMENT

ಇಂಗ್ಲೆಂಡ್‌ನ ರಾಯಲ್ ಕಾಲೇಜ್ ಆಫ್ ಸೈಕಿಯಾಟ್ರಿಸ್ಟ್‌ ಸದಸ್ಯತ್ವ ಪಡೆದಿರುವ ಅವರು, ದಕ್ಷಿಣ ಲಂಡನ್‌ನ ಖ್ಯಾತ ಆಸ್ಪತ್ರೆ ಮೌಡ್ಸ್ಲೆ ಎನ್‌ಎಚ್‌ಎಸ್‌ ಆಸ್ಪತ್ರೆಯಲ್ಲಿ ಜನರಲ್‌ ಸೈಕಿಯಾಟ್ರಿಸ್ಟ್‌ ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ. ಅಲ್ಲಿ ‘ಮಕ್ಕಳು ಹಾಗೂ ಹದಿಹರೆಯದವರ ಮನೋವಿಜ್ಞಾನ’ದ ಬಗ್ಗೆ ಸಂಶೋಧನೆಯನ್ನೂ ನಡೆಸಿದ್ದಾರೆ.

ಜಗತ್ತಿನ ಅತ್ಯಂತ ಖ್ಯಾತ ಮಕ್ಕಳ ಆಸ್ಪತ್ರೆ ಲಂಡನ್‌ನ ಗ್ರೇಟ್‌ ಒರ್ಮಂಡ್‌ ಸ್ಟ್ರೀಟ್‌ನಲ್ಲಿ ಕನ್ಸಲ್ಟೆಂಟ್‌ ಆಗಿ ಕೆಲಸ ಆರಂಭಿಸಿದ ಅವರು ಸುಮಾರು 12 ವರ್ಷಗಳ ಕಾಲ ಅಲ್ಲಿ ಸೇವೆ ಸಲ್ಲಿಸಿದ್ದಾರೆ. 2016ರಲ್ಲಿ ಬೆಂಗಳೂರಿಗೆ ಹಿಂತಿರುಗಿ, ಮೂರು ವರ್ಷಗಳಿಂದ ಬೆಂಗಳೂರು ಹಾಗೂ ಲಂಡನ್‌ ಎರಡೂ ಕಡೆ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸದ್ಯ ರಮ್ಯಾ ಅವರು ನಗರದಲ್ಲಿ ‘ಐಮನಸ್‌’ ಎಂಬ ಜಾಗತಿಕ ಸಂಸ್ಥೆ ಮೂಲಕ ಸಮುದಾಯ ಅಭಿವೃದ್ಧಿ ಕೆಲಸಗಳಲ್ಲೂ ತೊಡಗಿಸಿಕೊಂಡಿದ್ದಾರೆ. ಸಂಗೀತ, ಚಿತ್ರಕಲೆ ಆಧಾರಿತ ಮಾನಸಿಕ ಚಿಕಿತ್ಸಾ ವಿಧಾನ ‘ಕೇಪ್‌’ ಮೂಲಕ ಚಿಕಿತ್ಸಾ ಪ್ರಯೋಗ ಮಾಡುತ್ತಿದ್ದಾರೆ. ‘ಕೇಪ್‌’ ಚಿಕಿತ್ಸೆಗೆ ವಿಶ್ವದೆಲ್ಲೆಡೆ ಪ್ರಶಂಸೆ ವ್ಯಕ್ತವಾಗಿದೆ. ಇಂಥ ಚಿಕಿತ್ಸೆಯ ಕಾರಣಕ್ಕೆ ಅವರು ಜಾಗತಿಕ ಮಟ್ಟದ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

2018ರಲ್ಲಿ ವಿಶ್ವ ಮನೋವೈದ್ಯಕೀಯ ಕ್ಷೇತ್ರದ ಕೊಡುಗೆಗಳಿಗಾಗಿ ರಾಯಲ್‌ ಕಾಲೇಜ್‌ ಆಫ್‌ ಸೈಕಿಯಾಟ್ರಿಸ್ಟ್‌ ಫೆಲೋಶಿಫ್‌ ಪ್ರಶಸ್ತಿಯನ್ನು ಅವರು ಪಡೆದುಕೊಂಡಿದ್ದಾರೆ.

ರಮ್ಯಾ ಸಂಗೀತಗಾರ್ತಿ ಹಾಗೂ ಚಿತ್ರಕಲಾ ಕಲಾವಿದೆ ಕೂಡ. ಇದನ್ನೇ ‘ಕೇಪ್‌’ ಚಿಕಿತ್ಸೆಯಲ್ಲಿ ಆಳವಡಿಸಿಕೊಂಡಿದ್ದಾರೆ. ‘ಈ ಚಿಕಿತ್ಸೆ ಬರಿಯ ಮಾನಸಿಕ ರೋಗಿಗಳಿಗಷ್ಟೇ ಅಲ್ಲ, ಒತ್ತಡ ಕಡಿಮೆ ಮಾಡಿಕೊಳ್ಳ ಬಯಸುವವರು ಕೂಡ ಈ ಚಿಕಿತ್ಸೆ ಪಡೆಯಬಹುದು. ಮಾನಸಿಕ ರೋಗ, ರೋಗಿಗಳ ಬಗ್ಗೆ ಜನರ ದೃಷ್ಟಿಕೋನವನ್ನು ಬದಲಾಯಿಸುವುದು ನನ್ನ ಉದ್ದೇಶ’ ಎಂದು ಹೇಳುತ್ತಾರೆ ರಮ್ಯಾ. ಈ ಚಿಕಿತ್ಸಾ ವಿಧಾನಕ್ಕೆ ಪಾಶ್ಚಾತ್ಯ ಹಾಗೂ ಪೌರಾತ್ಯ ಎರಡೂ ಬಗೆಯ ಸಂಗೀತವನ್ನು ಅವರು ಬಳಸುತ್ತಾರೆ.

ರಮ್ಯಾ ಮೋಹನ್‌ ಚಿಕಿತ್ಸೆ ಬಗ್ಗೆ ತಿಳಿಯಲು– www.ramyamohan.com, www.imanaslondon.com

ಪ್ರಶಸ್ತಿ ಬಗ್ಗೆ: ಜಾಗತಿಕ ಮಟ್ಟದಲ್ಲಿ ಮಾನಸಿಕ ಆರೋಗ್ಯ ಚಿಕಿತ್ಸೆಯಲ್ಲಿ ಕೆಲಸ ಮಾಡುತ್ತಿರುವ ವ್ಯಕ್ತಿಗಳು ಮತ್ತು ತಂಡಗಳ ಶ್ಲಾಘನೀಯ ಕಾರ್ಯವನ್ನು ಗುರುತಿಸುವ ಸಲುವಾಗಿ ರಾಯಲ್‌ ಕಾಲೇಜ್‌ ಆಫ್‌ ಸೈಕಿಯಾಟ್ರಿಸ್ಟ್ಸ್‌ ಪ್ರಶಸ್ತಿಗಳನ್ನು ನೀಡುತ್ತದೆ. ಒಟ್ಟು 17 ವಿಭಾಗದಲ್ಲಿ ಪ್ರಶಸ್ತಿಗಳನ್ನು ನೀಡಲಾಗುತ್ತಿದ್ದು, ನವೆಂಬರ್‌ನಲ್ಲಿ ವಿಜೇತರನ್ನು ಘೋಷಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.