ADVERTISEMENT

ಜೂನ್‌ನಲ್ಲೇ ಎಂಜಿನಿಯರಿಂಗ್ ಅಂತಿಮ ಸೆಮಿಸ್ಟರ್ ಪರೀಕ್ಷೆ?

ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಆನ್‌ಲೈನ್ ತರಗತಿ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2020, 20:15 IST
Last Updated 23 ಏಪ್ರಿಲ್ 2020, 20:15 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಬೆಂಗಳೂರು: ಲಾಕ್‌ಡೌನ್‌ ಜಾರಿಯಲ್ಲಿದ್ದರೂ ಬಹುತೇಕ ಎಂಜಿನಿಯರಿಂಗ್‌ ಕಾಲೇಜುಗಳು ಆನ್‌ಲೈನ್‌ನಲ್ಲಿ ತರಗತಿಗಳನ್ನು ನಡೆಸುತ್ತಿದ್ದು, ಅಂತಿಮ ಸೆಮಿಸ್ಟರ್‌ ಪರೀಕ್ಷೆಗಳು ಜೂನ್‌ 2ನೇ ವಾರ ನಡೆಯುವ ನಿರೀಕ್ಷೆ ಇದೆ.

‘ಆನ್‌ಲೈನ್‌ ತರಗತಿಗಳು ಯಶಸ್ವಿಯಾಗಿ ನಡೆಯುತ್ತಿವೆ, ಆದರೆ ಪ್ರಾಜೆಕ್ಟ್ ಕೆಲಸಗಳನ್ನು ವಿದ್ಯಾರ್ಥಿಗಳು ಸಾಮೂಹಿಕವಾಗಿಯೇ ಮಾಡಬೇಕಾಗುತ್ತದೆ. ಲಾಕ್‌ಡೌನ್ ಮೇ 3ರ ನಂತರವೂ ಮುಂದುವರಿದರೆ ಇದಕ್ಕೆ ಪರ್ಯಾಯವಾಗಿ ಏನು ಮಾಡಬೇಕೆಂಬುದರ ಬಗ್ಗೆ ಚಿಂತಿಸಬೇಕಾಗುತ್ತದೆ’ ಎಂದು ಅಂತಿಮ ವರ್ಷದಲ್ಲಿರುವ ಹಲವು ವಿದ್ಯಾರ್ಥಿಗಳು ಆತಂಕ ತೋಡಿಕೊಂಡಿದ್ದಾರೆ.

2, 4 ಮತ್ತು 6ನೇ ಸೆಮಿಸ್ಟರ್ ಪರೀಕ್ಷೆಗಳು ಜುಲೈ ಕೊನೆಯ ವಾರ ಅಥವಾ ಆಗಸ್ಟ್‌ ಮೊದಲ ವಾರವಷ್ಟೇ ನಡೆಯಬಹುದು ಎಂದು ಹೇಳಲಾಗುತ್ತಿದೆ. ಆನ್‌ಲೈನ್ ತರಗತಿಗಳು ನಡೆದರೂ ಕೂಡಾ, ಪರೀಕ್ಷೆಗೆ ಮೊದಲು ಕೆಲವು ತರಗತಿಗಳನ್ನು ತೆಗೆದುಕೊಳ್ಳಲು ಬಹುತೇಕ ಎಲ್ಲ ಕಾಲೇಜುಗಳು ನಿರ್ಧರಿಸಿವೆ. ಮುಖ್ಯವಾಗಿ ಗ್ರಾಮೀಣ ಪ್ರದೇಶದಲ್ಲಿನ ವಿದ್ಯಾರ್ಥಿಗಳಿಗೆ ನೆಟ್‌ವರ್ಕ್‌ ಸಮಸ್ಯೆಯಿಂದ ಎಲ್ಲ ತರಗತಿಗಳೂ ಪೂರ್ಣವಾಗಿ ಲಭಿಸಿರುವ ನಿರೀಕ್ಷೆ ಇರುವುರಿಲ್ಲ. ಹೀಗಾಗಿ ಸಾಂಪ್ರದಾಯಿಕ ತರಗತಿ ನಡೆಸಲು ನಿರ್ಧರಿಸಲಾಗಿದೆ ಎಂದು ಹೇಳಲಾಗಿದೆ.

ADVERTISEMENT

‘ಪ್ರಾಜೆಕ್ಟ್‌ಗಳು ಮತ್ತು ಆನ್‌ಲೈನ್ ತರಗತಿಗಳ ಬಗ್ಗೆ ನಾವು ಈಗಾಗಲೇ ಮಾರ್ಗದರ್ಶನ ನೀಡಿದ್ದೇವೆ. ತರಗತಿ ಪುನರಾರಂಭಿಸುವುದು ಹಾಗೂ ಪರೀಕ್ಷೆ ನಡೆಸುವ ವಿಚಾರದಲ್ಲಿ ಯುಜಿಸಿಯ ಮಾರ್ಗಸೂಚಿ ಅನುಸರಿಸಲಾಗುವುದು‘ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಸಚಿವ ಡಾ.ಎ.ಎಸ್‌.ದೇಶಪಾಂಡೆ ತಿಳಿಸಿದ್ದಾರೆ.

ಆಂತರಿಕ ಮೌಲ್ಯಮಾಪನ ಅಂಕ: ಇಡೀ ಶಿಕ್ಷಣ ಕ್ಷೇತ್ರಕ್ಕೆ ಕಂಡು ಕೇಳರಿಯದ ಪರಿಸ್ಥಿತಿಯನ್ನು ಕೊರೊನಾ ವೈರಸ್‌ ತಂದಿತ್ತಿದ್ದು, ಇದೇ ಪ್ರಥಮ ಬಾರಿಗೆ ಆನ್‌ಲೈನ್‌ನಲ್ಲಿ ನಡೆಸಿದ ಪರೀಕ್ಷೆಯ ಆಧಾರದಲ್ಲೇ ಆಂತರಿಕ ಮೌಲ್ಯಮಾಪನ ಅಂಕಗಳನ್ನು ಲೆಕ್ಕಹಾಕುವ ಸಾಧ್ಯತೆ ಕಂಡುಬಂದಿದೆ.

ಉದ್ಯೋಗ–ಪರೀಕ್ಷೆ ಗೊಂದಲ

ಪ್ರತಿ ವರ್ಷದಂತೆ ಈ ವರ್ಷವೂ ಹಲವು ಕಂಪನಿಗಳು ಕ್ಯಾಂಪಸ್‌ಗೆ ಬಂದು ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿಕೊಂಡಿದ್ದು, ಕೊರೊನಾ ಲಾಕ್‌ಡೌನ್‌ನಿಂದ ಅವರೆಲ್ಲ ಸಂದಿಗ್ಧ ಸ್ಥಿತಿಯಲ್ಲಿದ್ದಾರೆ. ಪರೀಕ್ಷೆಗೆ ತಯಾರಾಗುವುದರ ಜತೆಗೆ ಕಂಪನಿಗಳು ನೀಡಿದ ಪ್ರಾಜೆಕ್ಟ್‌ಗಳನ್ನೂ ಮುಗಿಸುವ ಹೊಣೆಗಾರಿಕೆ ಇದ್ದು, ಲಾಕ್‌ಡೌನ್‌ ಕೊನೆಗೊಳ್ಳೂವುದನ್ನೇ ಎದುರು ನೋಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.