ADVERTISEMENT

ವಿಜಯಪುರ: ಸರ್ಕಾರಿ ಶಾಲೆಯಲ್ಲಿ ಕೈತೋಟ..!

ಬಸವನಬಾಗೇವಾಡಿ ತಾಲ್ಲೂಕು ರಾಮನಹಟ್ಟಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಪಾಠಶಾಲೆ

ಬಾಬುಗೌಡ ರೋಡಗಿ
Published 2 ನವೆಂಬರ್ 2018, 9:17 IST
Last Updated 2 ನವೆಂಬರ್ 2018, 9:17 IST
ಬಸವನಬಾಗೇವಾಡಿ ತಾಲ್ಲೂಕು ರಾಮನಹಟ್ಟಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಪಾಠಶಾಲೆಯ ಚಿತ್ರಣ
ಬಸವನಬಾಗೇವಾಡಿ ತಾಲ್ಲೂಕು ರಾಮನಹಟ್ಟಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಪಾಠಶಾಲೆಯ ಚಿತ್ರಣ   

ವಿಜಯಪುರ: ಸರ್ಕಾರಿ ಶಾಲೆ ಎಂದೊಡನೆ ಮೂಗು ಮುರಿಯುವವರೇ ಹೆಚ್ಚು. ಇದಕ್ಕೆ ವ್ಯತಿರಿಕ್ತವಾಗಿ ಬಸವನಬಾಗೇವಾಡಿ ತಾಲ್ಲೂಕು ರಾಮನಹಟ್ಟಿಯ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಪಾಠಶಾಲೆ ಕಾರ್ಯ ನಿರ್ವಹಿಸುತ್ತಿದೆ.

ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆಯುವಂತೆ ಶಿಕ್ಷಣ ನೀಡುವ ಜತೆಯಲ್ಲೇ, ಶಾಲಾ ಆವರಣದಲ್ಲಿ ವಿವಿಧ ಬಗೆಯ ತರಕಾರಿ ಬೆಳೆದು ಬಿಸಿಯೂಟಕ್ಕೆ ಬಳಸಲಾಗುತ್ತಿದೆ. ಸಸಿಗಳನ್ನು ನೆಟ್ಟು ಪೋಷಿಸುವ ಮೂಲಕ ಪರಿಸರ ಸ್ನೇಹಿ ಶಾಲೆ ನಿರ್ಮಾಣಗೊಂಡಿದೆ.

‘2010ರಿಂದ ಇಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಶಾಲೆಗೆ ಆವರಣ ಗೋಡೆ ಇರಲಿಲ್ಲ. ಎಸ್‌ಡಿಎಂಸಿಯ ಸಹಕಾರದೊಂದಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ನಿರ್ಮಿಸಿಕೊಂಡೆವು. ಇದರ ಬಳಿಕ ಹೊಸತು ಮಾಡಬೇಕೆಂಬ ಆಲೋಚನೆ ಹೊಳೆಯಿತು.

ADVERTISEMENT

ಮೂರು ವರ್ಷಗಳಿಂದ ಶಾಲಾ ಆವರಣದಲ್ಲಿ ಬಿಸಿಯೂಟಕ್ಕೆ ಅಗತ್ಯವಿರುವ ತರಕಾರಿ ಬೆಳೆಯುತ್ತಿದ್ದೇವೆ. ಮೈದಾನದ ಸುತ್ತಲೂ ಹಲ ಸಸಿ ನೆಟ್ಟಿದ್ದು, ಅವನ್ನು ಪೋಷಿಸುತ್ತಿದ್ದೇವೆ. ಸಂಜೆ ವೇಳೆ ಸ್ಪರ್ಧಾತ್ಮಕತೆಗೆ ಸಂಬಂಧಿಸಿದಂತೆ ಮಕ್ಕಳಿಗೆ ಮಾರ್ಗದರ್ಶನ ನೀಡುತ್ತಿದ್ದೇವೆ’ ಎಂದು ಶಾಲೆಯ ಮುಖ್ಯೋಪಾಧ್ಯಾಯ ಎಸ್‌.ಬಿ.ಬಾಗೇವಾಡಿ ತಿಳಿಸಿದರು.

‘ದಾಖಲೆಗಳಲ್ಲಿ ಮಕ್ಕಳ ಸಂಖ್ಯೆ ಸಾಕಷ್ಟಿದ್ದರೂ; ಹಾಜರಾತಿ ಕಡಿಮೆಯಿರುತ್ತಿತ್ತು. ಇದನ್ನು ತಪ್ಪಿಸಲು ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ನೀಡಲು ಮುಂದಾದೆವು. ನಮ್ಮ ಮಕ್ಕಳು ನವೋದಯ, ಮೊರಾರ್ಜಿ ಶಾಲೆಗೆ ಆಯ್ಕೆಯಾಗುತ್ತಿದ್ದಂತೆ; ದಾಖಲಾತಿ, ಹಾಜರಾತಿಯೂ ಹೆಚ್ಚಿತು. ಪ್ರಸ್ತುತ 1ರಿಂದ 5ನೇ ತರಗತಿವರೆಗೂ 112 ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ’ ಎಂದು ಶಾಲೆಯ ಪ್ರಗತಿ ಬಗ್ಗೆ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಖಾಸಗಿ ಶಾಲೆಗಳಿಗಿಂತ ನಮ್ಮೂರ ಸರ್ಕಾರಿ ಶಾಲೆ ಯಾವುದರಲ್ಲೂ ಕಮ್ಮಿಯಿಲ್ಲ. ಈಗಿನ ಶಿಕ್ಷಕರು ನಮ್ಮೂರ ಶಾಲೆಗೆ ಬಂದ ಬಳಿಕ ಸಾಕಷ್ಟ್ ಪ್ರಗತಿಯಾಗಿದೆ. ಪ್ರತಿ ವರ್ಷ ಇಲ್ಲಿಂದ ಐದಾರು ಮಕ್ಕಳು ಮೊರಾರ್ಜಿ ಶಾಲೆಗೆ ಆಯ್ಕೆಯಾಗುವುದು ನಮಗೆ ಹೆಮ್ಮೆ ಮೂಡಿಸಿದೆ. ರೊಕ್ಕದ ಖರ್ಚಿಲ್ಲದೆ ಒಳ್ಳೆ ಶಿಕ್ಷಣ ಇಲ್ಲಿಯೇ ಸಿಗ್ತಿದೆ. 7ನೇ ತರಗತಿವರೆಗೂ ವಿಸ್ತರಿಸಿದರೆ ಸಾಕಷ್ಟು ಅನುಕೂಲವಾಗಲಿದೆ’ ಎಂದು ಗ್ರಾಮಸ್ಥ ಶಿವಪ್ಪ ಕಟ್ಟಿಮನಿ ಹೇಳಿದರು.

ಪರಿಸರ ಶಾಲೆ
ಪಾಲಕ್‌, ಕೊತ್ತಂಬರಿ, ಕರಿ ಬೇವು, ಟೊಮೆಟೊ, ಹುಣಸೆ ಪಲ್ಲೆ, ಮೆಣಸಿನಕಾಯಿ, ಹೀರೆಕಾಯಿ ಸೇರಿದಂತೆ ವಿವಿಧ ತರಕಾರಿ, 25 ಅಶೋಕ ಗಿಡ, 10 ಸಾಗವಾನಿ, 15 ಬದಾಮಿ, ತಲಾ ಐದೈದು ತೆಂಗು, ನುಗ್ಗೆಯ ಜತೆ ಹಲ ಬಗೆಯ ಹೂವಿನ ಗಿಡಗಳು ಶಾಲಾ ಆವರಣದಲ್ಲಿವೆ.

ಶಾಲೆಯ ಶಿಕ್ಷಕರೇ ಒಟ್ಟಾಗಿ ₹ 10000 ಮೊತ್ತವನ್ನು ಬ್ಯಾಂಕ್‌ನಲ್ಲಿ ಠೇವಣಿಯಿಟ್ಟಿದ್ದಾರೆ. ಪ್ರತಿ ವರ್ಷ ಐದನೇ ತರಗತಿಯಲ್ಲಿ ಹೆಚ್ಚು ಅಂಕ ಗಳಿಸುವ ವಿದ್ಯಾರ್ಥಿಗೆ ಇದರಿಂದ ಬರುವ ಬಡ್ಡಿ ಹಣವನ್ನು ಪ್ರೋತ್ಸಾಹಧನವಾಗಿ ನೀಡುತ್ತಿರುವುದು ಈ ಶಾಲೆಯ ವಿಶೇಷ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.