ADVERTISEMENT

ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸರ್ಕಾರಿ ಶಾಲೆ ಪೈಪೋಟಿ

ಮಸ್ಕಿ ನಾಯಕವಾಡಿ ಸರ್ಕಾರಿ ಪ್ರಾಥಮಿಕ ಶಾಲೆ

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2018, 12:45 IST
Last Updated 18 ಡಿಸೆಂಬರ್ 2018, 12:45 IST
ಶಾಲೆಯ ಗ್ರಂಥಾಲಯ
ಶಾಲೆಯ ಗ್ರಂಥಾಲಯ   

ಮಸ್ಕಿ: ಖಾಸಗಿ ಶಿಕ್ಷಣ ಸಂಸ್ಥೆಗಳ ಪೈಪೋಟಿ ನಡುವೆಯೂ ಕೆಲವು ಸರ್ಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣ ನೀಡುತ್ತಿವೆ. ಇಲ್ಲಿನ ನಾಯಕವಾಡಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಈ ನಿಟ್ಟಿನಲ್ಲಿ ಮಾದರಿಯಾಗಿದೆ.

ಹಿಂದುಳಿದವರು ವಾಸಿಸುವ ನಾಯಕವಾಡಿಯಲ್ಲಿ 1972ರಲ್ಲಿ ಆರಂಭವಾದ ಸರ್ಕಾರಿ ಶಾಲೆಗೆ ಇದೀಗ 46 ವರ್ಷ ತುಂಬಿದೆ. ಪಟ್ಟಣದ ಉಳಿದ ಸರ್ಕಾರಿ ಪ್ರಾಥಮಿಕ ಶಾಲೆಗಳಿಗಿಂತ ಈ ಶಾಲೆಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಸದ್ಯ 280 ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಓದುತ್ತಿದ್ದಾರೆ. ಸರ್ಕಾರದ ‘ನಲಿ- ಕಲಿ’ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಗೆ ತರುವ ಮೂಲಕ ತಾಲ್ಲೂಕಿನ ಅತ್ಯುತ್ತಮ ಶಾಲೆ ಎಂಬ ಹೆಗ್ಗಳಿಕೆಯ ಜೊತೆಗೆ ಪ್ರಶಸ್ತಿ ಪಡೆದುಕೊಂಡಿದೆ.

ಶಾಲಾ ಕೊಠಡಿಗಳ ಗೋಡೆ, ಕಂಪೌಂಡ್‌ ಮುಂತಾದ ಕಡೆ ‘ನಲಿ- ಕಲಿ’ ಯೋಜನೆಯ ಬರಹ ಬರೆಸುವ ಮೂಲಕ ವಿದ್ಯಾರ್ಥಿಗಳನ್ನು ಶಾಲೆಯತ್ತ ಆಕರ್ಷಿಸಲಾಗುತ್ತಿದೆ.

ADVERTISEMENT

ಪ್ರತಿನಿತ್ಯ ರೇಡಿಯೋ ಪಾಠ, ಪಡೆ ಭಾರತ- ಬಡೇ ಭಾರತ, ಓದುವೆ ನಾನು, ಹವಾಮಾನ ಮಾಹಿತಿ ಜೊತೆಗೆ, ಪ್ರತಿ ದಿನ ಬೆಳಿಗ್ಗೆ ಪ್ರಾರ್ಥನೆ ನಂತರ ದಿನಪತ್ರಿಕೆಯನ್ನು ವಿದ್ಯಾರ್ಥಿಗಳಿಂದ ಓದಿಸಲಾಗುತ್ತಿದೆ. ಪ್ರತಿವಾರ ವಿದ್ಯಾರ್ಥಿಗಳ ಶೈಕ್ಷಣಿಕ ಬೆಳವಣಿಗೆ ಕುರಿತು ಶಿಕ್ಷಕರು ಹಾಗೂ ಪಾಲಕರ ಜೊತೆ ಸಮಾಲೋಚನಾ ಸಭೆ ನಡೆಸುತ್ತಿದ್ದಾರೆ.

ಈ ಶಾಲೆ ಆರಂಭದಲ್ಲಿ ಆಂಜನೇಯನ ದೇವಸ್ಥಾನದಲ್ಲಿ ನಡೆಯುತಿತ್ತು. ಈಗ ದೇವಸ್ಥಾನದ ಸುತ್ತ ಸುಸಜ್ಜಿತ ಶಾಲಾ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ. ಶುದ್ಧ ಕುಡಿವ ನೀರು, ಸುಸಜ್ಜಿತ ಶೌಚಾಲಯ, ಸಾಮೂಹಿಕವಾಗಿ ಕುಳಿತು ಊಟ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.

ಓದಿನ ಜೊತೆಗೆ ಶಾಲಾ ಆವರಣದಲ್ಲಿ ಕೈತೋಟ ನಿರ್ಮಾಣ ಮಾಡಲಾಗಿದೆ. ಅನೇಕ ರಚನಾತ್ಮಕ ಕೆಲಸಗಳಲ್ಲಿ ವಿದ್ಯಾರ್ಥಿಗಳನ್ನು ತೊಡಗಿಸುವ ಜೊತೆಗೆ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿ ಕ್ರಿಯಾಶೀಲಗೊಳಿಸುವುದು ಉದ್ದೇಶ ಎಂದು ಶಾಲೆಯ ಮುಖ್ಯಶಿಕ್ಷಕ ಬಸನಗೌಡ ಪಾಟೀಲ ಹೇಳುತ್ತಾರೆ.

ಇಲ್ಲಿಯ ಶಿಕ್ಷಣ ಪ್ರೇಮಿಗಳು ಸರ್ಕಾರಿ ಶಾಲೆಗೆ ಬೆಂಚು, ಡ್ರಮ್‌ಸೆಟ್, ಮೈಕ್ ಸೆಟ್ ಸೇರಿದಂತೆ ಅನೇಕ ವಸ್ತುಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಸರ್ಕಾರದ ಯೋಜನೆಗಳ ಜೊತೆಗೆ ದಾನಿಗಳ ಸಹಕಾರದಿಂದ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಈ ಶಾಲೆಯಲ್ಲಿ ಕಲಿತ ಅನೇಕರು ಇಂದು ಉನ್ನತ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.