ADVERTISEMENT

ಮನೆಯಲ್ಲಿರಲಿಮಗುಸ್ನೇಹಿ ಕಲಿಕಾ ವಾತಾವರಣ

ಆರ್.ಬಿ.ಗುರುಬಸವರಾಜ
Published 18 ಜೂನ್ 2019, 19:30 IST
Last Updated 18 ಜೂನ್ 2019, 19:30 IST
Mother helping daughter with homework
Mother helping daughter with homework   

ಮಕ್ಕಳಿಗೆ ಅರ್ಥಪೂರ್ಣ ಶಿಕ್ಷಣವನ್ನು ಕೊಡಬೇಕಾದರೆ ಅವರನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವುದು ತುಂಬಾ ಅವಶ್ಯಕ. ಮಕ್ಕಳ ಕಲ್ಪನೆ, ಸಾಮರ್ಥ್ಯಗಳನ್ನು ಅರ್ಥ ಮಾಡಿಕೊಡರೆ, ಮಕ್ಕಳ ಬೆಳವಣಿಗೆ ಹಾಗೂ ಕಲಿಕೆಯನ್ನು ಪ್ರೇರೇಪಿಸುವ ಅಂಶಗಳ ಬಗ್ಗೆ ತಿಳಿದುಕೊಂಡರೆ ಅವರ ಶಿಕ್ಷಣದ ಕುರಿತು ಸರಿಯಾದ ತೀರ್ಮಾನಗಳನ್ನು ಪೋಷಕರು ತೆಗೆದುಕೊಳ್ಳಲು ಅನುಕೂಲವಾಗುತ್ತದೆ.

ಮಗು ಕೇವಲ ಶಾಲೆಯಲ್ಲಿ ಮಾತ್ರವಲ್ಲದೇ ಮನೆಯ ವಾತಾವರಣದಲ್ಲಿಯೂ ಕಲಿಯುತ್ತದೆ. ಮಗುವಿನ ಕಲಿಕೆಯು ಮಗುವಿನ ಸುತ್ತಮುತ್ತಲಿನ ವಾತಾವರಣದಲ್ಲಿ ನಡೆಯುವ ಅನೌಪಚಾರಿಕ ಕಲಿಕಾ ಪ್ರಕ್ರಿಯೆಗಳನ್ನು ಅವಲಂಬಿಸಿರುತ್ತದೆ. ಕುಟುಂಬದಲ್ಲಿ ನಡೆಯುತ್ತಿರುವ ಬಹುತೇಕ ಬದಲಾವಣೆಗಳು ಸಹ ಮಕ್ಕಳ ಮೇಲೆ ಗಂಭೀರವಾದ ಪರಿಣಾಮ ಬೀರುತ್ತವೆ.

ಆದಕಾರಣ ಪಾಲಕರು ಮಗುವಿನ ಕಲಿಕಾ ಪರಿಸರವನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಪ್ರಥಮ ಆದ್ಯತೆ ನೀಡಬೇಕಾಗುತ್ತದೆ. ಬಹು ಮುಖ್ಯವಾಗಿ ಮಗುವಿನ ಬಾಲ್ಯವು ಹೆಚ್ಚು ಸಂಕೀರ್ಣ ಅಂಶಗಳಿಂದ ಕೂಡಿದ್ದು ಬದಲಾವಣೆಯಾಗುತ್ತಲೇ ಇರುತ್ತದೆ. ಸಮಾಜದ ಎಲ್ಲಾ ಪ್ರಮುಖ ಬದಲಾವಣೆಗಳು ಮಗುವಿನ ಕಲಿಕಾ ಸಾಮರ್ಥ್ಯದ ಮೇಲೆ ಹೆಚ್ಚಾಗಿ ಪರಿಣಾಮ ಬೀರುತ್ತವೆ.

ADVERTISEMENT

ಮಗುವನ್ನು ಅರ್ಥ ಮಾಡಿಕೊಳ್ಳುವುದು ತುಂಬಾ ತ್ರಾಸದಾಯಕ ಕೆಲಸ. ಏಕೆಂದರೆ ಪ್ರತಿಯೊಂದು ಮಗುವಿನ ಕಲಿಕಾ ವಿಧಾನ, ಕಲಿಯುವ ವೇಗ ಮತ್ತು ಗ್ರಹಿಕೆಗಳು ವಿಭಿನ್ನವಾಗಿರುತ್ತವೆ. ಇದನ್ನು ಆಧರಿಸಿ ಮನೋವಿಜ್ಞಾನಿಗಳು ಅನೇಕ ಕಲಿಕಾ ಸಿದ್ಧಾಂತಗಳನ್ನು ರೂಪಿಸಿದ್ದಾರೆ.

ಮಗುಸ್ನೇಹಿ ವಾತಾವರಣ ಏಕೆ?

ಮಗುವಿನ ಸಾಮರ್ಥ್ಯಗಳು, ಆಸಕ್ತಿಯ ಕ್ಷೇತ್ರಗಳು, ಕಲಿಕಾ ಶೈಲಿ ಮತ್ತು ಅವಶ್ಯಕತೆಗಳು ಕಲಿಕೆಯ ಮೇಲೆ ಪ್ರಭಾವ ಬೀರುತ್ತವೆ. ಹೀಗಾಗಿ ಪಠ್ಯಕ್ರಮ, ಕಲಿಕಾ ವಿಧಾನಗಳು, ಕಲಿಕಾ ಚಟುವಟಿಕೆಗಳು, ಮತ್ತು ಕಲಿಕೆಯ ವಾತಾವರಣ ಮಗುಸ್ನೇಹಿಯಾಗಿದ್ದಾಗ ಕಲಿಕೆಯು ಸುಗಮವಾಗುತ್ತದೆ ಎಂಬುದು ಶಿಕ್ಷಣ ತಜ್ಞರ ಅಭಿಮತ. ರೂಸೋ, ಪ್ರೊಬೆಲ್, ರವೀಂದ್ರನಾಥ ಟಾಗೋರ್ ಮೊದಲಾದ ಶಿಕ್ಷಣ ತಜ್ಞರು ಮಗುಸ್ನೇಹಿ ಕಲಿಕಾ ವಾತಾವರಣದ ಅವಶ್ಯಕತೆಯನ್ನು ಅರಿತು ಅದನ್ನು ತಮ್ಮ ಪ್ರಯೋಗಗಳಲ್ಲಿ ಸಾಧಿಸಿ ತೋರಿಸಿದ್ದಾರೆ.

ಇಂತಹ ವಾತಾವರಣವು ಮಗು ಸ್ವಂತಂತ್ರವಾಗಿ ಕಲಿಕೆಯಲ್ಲಿ ತೊಡಗುವಂತೆ ಮಾಡುತ್ತದೆ. ಇದು ಮುಖ್ಯವಾಗಿ ಭಯರಹಿತ ಮುಕ್ತ ವಾತಾವರಣವನ್ನು ಅವಲಂಬಿಸಿದೆ. ಮಗುವಿನ ಭೌತಿಕ, ಬೌದ್ಧಿಕ, ಸಾಮಾಜಿಕ ಮತ್ತು ನೈತಿಕ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಈ ವಾತಾವರಣವನ್ನು ಪಾಲಕರು ಕಲ್ಪಿಸಬೇಕಾಗುತ್ತದೆ.

ಮಕ್ಕಳಲ್ಲಿನ ಸಾಮಾನ್ಯ ಗುಣಲಕ್ಷಣಗಳೆಂದರೆ ಮೇರೆ ಇಲ್ಲದ ಕುತೂಹಲ, ಸ್ವಾತಂತ್ರ್ಯದ ಹಂಬಲ, ಅನ್ವೇಷಣೆ ಅಥವಾ ಪ್ರಯೋಗ ನಡೆಸಬೇಕೆಂಬ ಆಸಕ್ತಿ ಹಾಗೂ ಎಲ್ಲವನ್ನೂ ತಾನೇ ಮಾಡಬೇಕೆಂಬ ತುಡಿತ. ಮಗುವಿನ ಈ ಗುಣಗಳನ್ನು ಪಾಲಕರು ಅರಿತುಕೊಂಡು ಸೂಕ್ತ ವ್ಯವಸ್ಥೆ ಮಾಡಬೇಕಾಗುತ್ತದೆ. ಮಗು ಅನ್ವೇಷಣೆ ಮಾಡಲು, ತಾನೇ ಸ್ವತಃ ಕೆಲಸ ಕಾರ್ಯಗಳನ್ನು ಮಾಡಲು ಬಿಡಬೇಕು. ಮಗುವಿನ ಸಂಕಲ್ಪ ಶಕ್ತಿ ಹಾಗೂ ನಿರ್ಧಾರಗಳಿಗೆ ಮನ್ನಣೆ ನೀಡಬೇಕು. ಹಾಗೆಯೇ ಮಗುವಿನ ಸಾಮರ್ಥ್ಯದ ಬಗ್ಗೆ ಗೌರವ ಇರಬೇಕು. ಪಾಲಕರು ಮಕ್ಕಳಿಗೆ ಮುಕ್ತ ಅವಕಾಶ ಒದಗಿಸಬೇಕು ಮತ್ತು ಮಗುವು ಅಪಾಯಕಾರಿಯಲ್ಲದ ಸವಾಲುಗಳು ಮತ್ತು ಸಾಹಸಗಳಿಗೆ ಮಾತ್ರ ಕೈ ಹಾಕುವಂತೆ ನೋಡಿಕೊಳ್ಳಬೇಕು.

ಕಲಿಕಾ ಪರಿಸರ ಹೇಗಿರಬೇಕು?

ಮನೆಯಲ್ಲದೆ, ಮಗುವಿಗೆ ದೊರೆಯುವ ಇನ್ನೊಂದು ಪರಿಸರವೆಂದರೆ ಶಾಲೆ. ಮನೆಗೂ ಶಾಲೆಗೂ ವ್ಯತ್ಯಾಸವಿದೆ. ಶಾಲೆಯಲ್ಲಿ ಶಿಕ್ಷಕರ ಬೋಧನಾ ಶೈಲಿಗೂ, ಮನೆಯಲ್ಲಿ ಪಾಲಕರು ಹೇಳುವ ಶೈಲಿಗೂ ವ್ಯತ್ಯಾಸ ಇರಬಹುದು. ಶಾಲೆಯಲ್ಲಿ ಶಿಕ್ಷಕರು ಮತ್ತು ಮಗುವಿನ ಸಂಬಂಧವು, ಮನೆಯಲ್ಲಿನ ಮಕ್ಕಳು ಮತ್ತು ಹಿರಿಯರ ಸಂಬಂಧಕ್ಕಿಂತ ಭಿನ್ನವಾಗಿರುತ್ತದೆ. ಅದೇ ರೀತಿ ಮಗುವಿನ ಬಗ್ಗೆ ಅವರು ತೋರುವ ಕಾಳಜಿಯೂ ಬಹಳ ಭಿನ್ನವಾಗಿರುತ್ತದೆ. ಆದರೆ ಶಾಲೆಯಲ್ಲಿನ ಕಲಿಕಾ ಪರಿಸರದಂತೆ ಮನೆಯಲ್ಲಿಯೂ ಕಲಿಕಾ ಪರಿಸರ ನಿರ್ಮಿಸಿದರೆ ಖಂಡಿತವಾಗಿ ಮಗುವು ಹೆಚ್ಚು ಆಸಕ್ತಿಯಿಂದ ಕಲಿಕೆಯಲ್ಲಿ ಮುನ್ನುಗ್ಗುತ್ತದೆ.

ಶಾಲೆಯಲ್ಲಿ ದೊರಕುವ ಸಮಯ ಮತ್ತು ಅವಕಾಶಗಳು ಸೀಮಿತ. ಪ್ರತಿಯೊಂದು ಮಗುವು ಏನನ್ನು ಅನ್ವೇಷಣೆ ಮಾಡಲು ಇಚ್ಛಿಸುತ್ತದೋ ಅದನ್ನೆಲ್ಲಾ ಅನ್ವೇಷಿಸಲು ಅಥವಾ ಏನೇನು ಕಲಿಯಲು ಬಯಸುತ್ತದೆಯೋ ಅದನ್ನು ಕಲಿಯಲು ಮನೆಯಲ್ಲಿ ಅವಕಾಶ ಮಾಡಿಕೊಡುವುದು ಸಾಧ್ಯವಿಲ್ಲ. ಶಾಲೆಯ ಸಂದರ್ಭದಲ್ಲಿ ಮಕ್ಕಳ ಗುಣಲಕ್ಷಣಗಳನ್ನು ಅರ್ಥೈಸಿಕೊಳ್ಳುವ ಹಿನ್ನಲೆಯನ್ನು ಪಾಲಕರು ಅರಿಯಬೇಕಿದೆ. ಆಗ ಮಾತ್ರ ಕೌಟುಂಬಿಕ ವಾತಾವರಣದಲ್ಲಿ ಮಗುಸ್ನೇಹಿ ವಾತಾವರಣ ನಿರ್ಮಾಣವಾಗುವ ಸಾಧ್ಯತೆ ಇರುತ್ತದೆ. ಒಂದಿಷ್ಟು ತಂತ್ರಗಳನ್ನು ಮನೆಯಲ್ಲಿ ಅನುಸರಿಸುವ ಮೂಲಕ ಮಗುಸ್ನೇಹಿ ವಾತಾವರಣ ನಿರ್ಮಿಸಬಹುದು.

‘ಬೆತ್ತ ಬಳಸದೇ ಬಾಲ್ಯ ಉಳಿಸಿ’ ಎಂಬುದು ಕುಟುಂಬದ, ತಂದೆ– ತಾಯಿಯರ ಅಥವಾ ಸಮುದಾಯದ ಘೋಷಣೆ ಮತ್ತು ಸಂದೇಶವಾಗಬೇಕು. ಆಗ ಮಾತ್ರ ಮಗುಸ್ನೇಹಿ ಸುಂದರ ವಾತಾವರಣ ನಿರ್ಮಾಣ ಮಾಡಲು ಸಾಧ್ಯ.

ಮಗುವಿನ ಮನಃಸ್ಥಿತಿ ಅರಿಯಿರಿ

ಮಗುವಿನಲ್ಲಿ ಭಾವನಾತ್ಮಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಬೆಳೆಸಬೇಕು. ಅದಕ್ಕಾಗಿ ಪೋಷಕರು ಪ್ರತಿದಿನ ನಿಗದಿತ ವೇಳೆಯಲ್ಲಿ ಮಗುವಿನೊಂದಿಗೆ ಬೆರೆಯುವ ಮೂಲಕ ಸಾಮರ್ಥ್ಯಗಳನ್ನು ವೃದ್ಧಿಸಬೇಕು ಹಾಗೂ ಸಮಸ್ಯೆಗಳನ್ನು ಆಲಿಸಿ ಪರಿಹರಿಸಬೇಕು.

ನೈತಿಕತೆಯ ಪಾಠ ಮನೆಯಿಂದಲೇ ಪ್ರಾರಂಭವಾಗಬೇಕು. ಆದರೆ ಅದು ಒತ್ತಾಯಪೂರ್ವಕವಾಗಬಾರದು.

ಮಗುವಿಗೆ ಶೈಕ್ಷಣಿಕ ಹಾಗೂ ಮಾನಸಿಕ ಸ್ಥಿತಿಯನ್ನು ಉತ್ತಮಪಡಿಸಲು ಮಕ್ಕಳ ಪುಸ್ತಕಗಳಿರಬೇಕು.

ಯಾವುದೇ ಕಾರಣಕ್ಕೂ ಯಾವ ಮಗುವೂ ತಿರಸ್ಕೃತವಾಗಬಾರದು. ಪ್ರತಿ ಮಗುವಿನ ಭಾವನೆಗಳನ್ನು ಗಟ್ಟಿಗೊಳಿಸಬೇಕು.

ಮನೆಯಲ್ಲಿ ಅಥವಾ ಸಮುದಾಯದಲ್ಲಿ ಮಕ್ಕಳ ದುರ್ಬಳಕೆ ಆಗದಂತೆ ನೋಡಿಕೊಳ್ಳಬೇಕು. ಹೆಣ್ಣುಮಕ್ಕಳಿಗೆ ರಕ್ಷಣೆಯ ಭರವಸೆ ಇರಬೇಕು. ಹದಿಹರೆಯದ ಮಕ್ಕಳು ತಮ್ಮ ಸಮಸ್ಯೆಗಳನ್ನು ಮುಕ್ತವಾಗಿ ಹಂಚಿಕೊಳ್ಳಲು ಅವಕಾಶ ಇರಬೇಕು.

ಏಕತಾನತೆ ಹೊಡೆದೋಡಿಸಲು ಮಕ್ಕಳಿಗೆ ವಿಭಿನ್ನ ಚಟುವಟಿಕೆಗಳಿರಬೇಕು. ಗಂಡು ಮಕ್ಕಳು ಅಡುಗೆ ಕೆಲಸ ಹಾಗೂ ಮನೆಕೆಲಸಗಳಲ್ಲಿ ಸಹಾಯ ಮಾಡುವ, ಹೆಣ್ಣು ಮಕ್ಕಳು ಹೊರಗಿನ ವ್ಯವಹಾರ ಅಥವಾ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳನ್ನು ಖರೀದಿ ಮಾಡುವ, ತಂದೆಗೆ ಸಹಾಯ ಮಾಡುವ ಅಥವಾ ಇತರ ಸಾಮಾಜಿಕ ಚಟುವಟಿಕೆಗಳಲ್ಲಿ ಭಾಗವಹಿಸುವ ಅವಕಾಶ ನೀಡಬೇಕು.

ಹೀಗಿರಲಿ ಮನೆ ವಾತಾವರಣ

ಕುಟಂಬದ ಸದಸ್ಯರು ಮಗುವಿನ ಸಮಸ್ಯೆಯ ಕುರಿತು ಅಗತ್ಯವಿರುವ ಆಪ್ತ ಸಲಹೆ ನೀಡುವಂತಿರಬೇಕು.

ಪಾಲಕರು ಆಗಾಗ ಶಾಲೆಗೆ ಭೇಟಿ ನೀಡಬೇಕು. ಮಗುವಿನ ತರಗತಿಯ ಪ್ರಗತಿ ಮಾತ್ರವಲ್ಲದೇ ಸರ್ವಾಂಗೀಣ ಅಭಿವೃದ್ಧಿಯ ಬಗ್ಗೆ ಶಿಕ್ಷಕರೊಂದಿಗೆ ಸಮಾಲೋಚನೆ ಮಾಡಬೇಕು.

ಕುಟುಂಬದ ಅಭಿವೃದ್ಧಿಗೆ ಸಂಬಂಧಿಸಿದ ಕೌಟುಂಬಿಕ ಚರ್ಚೆಯಲ್ಲಿ ಮಕ್ಕಳನ್ನು ಸೇರಿಸಿಕೊಳ್ಳಬೇಕು. ಇದರಿಂದ ಅವರಿಗೂ ಒಂದಿಷ್ಟು ಜವಾಬ್ದಾರಿಗಳು ಅರ್ಥವಾಗುತ್ತವೆ. ಜೊತೆಗೆ ಅವರ ಪಾತ್ರಗಳ ಸ್ಪಷ್ಟ ಅರಿವು ಉಂಟಾಗುತ್ತದೆ.

ಕುಟುಂಬದಲ್ಲಿ ವಿಕಲ ಚೇತನ ಮಕ್ಕಳಿದ್ದರೆ ಅವರಿಗೆ ಸೂಕ್ತವಾದ ಮೂಲಸೌಕರ್ಯಗಳು ಹಾಗೂ ಅವರಿಗೆ ಅಗತ್ಯ ಪೀಠೋಪಕರಣ ಮತ್ತು ಕಲಿಕಾ ಉಪಕರಣಗಳು ಇರಬೇಕು.

ಲಿಂಗ, ವಿಕಲತೆ, ಅಥವಾ ಕಾಯಿಲೆಗಳ ಆಧಾರದ ಮೇಲೆ ಮಗುವನ್ನು ತಾರತಮ್ಯ ಮಾಡಬಾರದು.

ಜೀವನ ಕೌಶಲಗಳು ಶಿಕ್ಷಣದ ಮುಖ್ಯ ಭಾಗವಾಗಬೇಕು. ಅಂದರೆ ಆಗಾಗ ಮನೆಯಲ್ಲಿ ವೃತ್ತಿ ಕೌಶಲದ ಬಗ್ಗೆ ಮಾಹಿತಿ ಮತ್ತು ತರಬೇತಿ ನೀಡಬೇಕು. ಆಗ ಶಿಕ್ಷಣವು ಬದುಕಿನ ಭಾಗವಾಗುತ್ತದೆ.

ಮಕ್ಕಳಿಗೆ ಶಿಸ್ತಿನ ಹೆಸರಿನಲ್ಲಿ ಶಿಕ್ಷೆ ನೀಡುವುದನ್ನು ರದ್ದುಗೊಳಿಸಬೇಕು. ಮನೆಯಲ್ಲಿ ಭಯ ಮುಕ್ತ ವಾತಾವರಣ ನಿರ್ಮಾಣವಾಗಬೇಕು. ಸರಿ– ತಪ್ಪುಗಳ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡುವಂತಿರಬೇಕು.

ಮನೆಯಲ್ಲಿಯೂ ಒತ್ತಡ ರಹಿತ ವಾತಾವರಣ ನಿರ್ಮಿಸಬೇಕು. ಅಪಾಯಕಾರಿಯಲ್ಲದ ಸಂತಸದ ಚಟುವಟಿಕೆಗಳನ್ನು ಪ್ರೋತ್ಸಾಹಿಸಿ ಅದರ ಮೂಲಕ ಕಲಿಕಾ ವಾತಾವರಣ ನಿರ್ಮಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.