ADVERTISEMENT

ಶಾಲೆಯ ಆಯ್ಕೆ ಹೇಗೆ?

ಡಾ.ಎಚ್.ಬಿ.ಚಂದ್ರಶೇಖರ್
Published 19 ಮಾರ್ಚ್ 2019, 19:45 IST
Last Updated 19 ಮಾರ್ಚ್ 2019, 19:45 IST
ಮಕ್ಕಳ ಶಾಲೆ
ಮಕ್ಕಳ ಶಾಲೆ   

ಮತ್ತೊಂದು ಶೈಕ್ಷಣಿಕ ವರ್ಷದ ಆರಂಭದ ನಿರೀಕ್ಷೆಯಲ್ಲಿದ್ದೇವೆ. ತಮ್ಮ ಮಕ್ಕಳನ್ನು ನೂತನವಾಗಿ ಶಾಲೆಗೆ ದಾಖಲಾತಿ ಮಾಡಲು ಪೋಷಕರು ಉತ್ಸುಕತೆಯಿಂದ ಎದುರು ನೋಡುತ್ತಿದ್ದಾರೆ. ಉತ್ಸುಕತೆಯ ಜೊತೆ ಒಂದಷ್ಟು ಆತಂಕ, ಗೊಂದಲ ಮೂಡುವುದು ಸಹಜವೇ ಆಗಿದೆ. ಕೆಲವು ವರ್ಷಗಳ ಕೆಳಗೆ ಶಾಲೆಗಳ ಸಂಖ್ಯೆ ಕಡಿಮೆ ಇದ್ದ ಕಾರಣ ಆಯ್ಕೆಯ ಸಮಸ್ಯೆ ಇರಲಿಲ್ಲ. ಆದರೆ ಈಗ ಪಟ್ಟಣ ಹಾಗೂ ನಗರಗಳಲ್ಲಿ ಅನೇಕ ಶಾಲೆಗಳಿದ್ದು ಯಾವ ಶಾಲೆಯನ್ನು ಆಯ್ಕೆ ಮಾಡಬೇಕು ಎಂಬ ಕುರಿತಂತೆ ಪೋಷಕರು ತಲೆ ಕೆಡಿಸಿಕೊಳ್ಳಲೇ ಬೇಕಾಗುತ್ತದೆ. ಈ ಹೊತ್ತಿನಲ್ಲಿ ಶಾಲೆಯ ಆಯ್ಕೆಯನ್ನು ಮಾಡಲು ಅನುಸರಿಸಬಹುದಾದ ಮಾನದಂಡಗಳ ಕುರಿತಂತೆ ಕೆಲವು ಟಿಪ್ಸ್‌ಗಳನ್ನು ನೀಡಿದ್ದು, ಪೋಷಕರಿಗೆ ನೆರವಾಗಬಹುದು.

ಮಗುವನ್ನು ಅರ್ಥ ಮಾಡಿಕೊಳ್ಳುವುದು

ಶಾಲಾ ಆಯ್ಕೆಗಿಂತ ಪೂರ್ವದಲ್ಲಿ ಪೋಷಕರು ತಮ್ಮ ಮಗುವನ್ನು ಅರ್ಥ ಮಾಡಿಕೊಳ್ಳುವುದು ಮುಖ್ಯ. ತಮ್ಮ ಮಗುವಿನ ಆಸಕ್ತಿ, ಸಾಮರ್ಥ್ಯ, ಅವಶ್ಯಕತೆಯನ್ನು ಮುಕ್ತ ಮನಸ್ಸಿನಿಂದ ಕಂಡುಕೊಳ್ಳುವುದು ಮೊದಲ ಹೆಜ್ಜೆಯಾಗಿದೆ. ವಿಭಿನ್ನ ಸನ್ನಿವೇಶಗಳಲ್ಲಿ ಮಗುವಿನ ವರ್ತನೆ ಹೇಗಿದೆ ಎಂಬುದನ್ನು ಗುರುತಿಸಬೇಕು. ಮಗುವು ದೈಹಿಕ ಅಥವಾ ಮಾನಸಿಕ ಸವಾಲುಗಳನ್ನು ಎದುರಿಸುತ್ತಿದೆಯೇ ಎಂಬುದನ್ನು ಪರಿಶೀಲಿಸಬೇಕು. ಮಗುವು ಯಾವುದಾದರೂ ಸವಾಲುಗಳನ್ನು ಎದುರಿಸುತ್ತಿದ್ದಲ್ಲಿ ಅದಕ್ಕೆ ಸೂಕ್ತವಾದ ಶಾಲೆಯನ್ನು ಆಯ್ಕೆ ಮಾಡಬೇಕಾಗುತ್ತದೆ. ಮಗುವಿನ ಬುದ್ಧಿಶಕ್ತಿ, ಸೃಜನಶೀಲತೆ, ಮನೋಧರ್ಮಗಳನ್ನು ಅರ್ಥ ಮಾಡಿಕೊಳ್ಳಬೇಕು. ಮಗುವು ಎಂತಹ ವಾತಾವರಣದಲ್ಲಿರಲು ಇಚ್ಛಿಸುತ್ತದೆ ಎಂಬುದನ್ನು ಗಮನಿಸಬೇಕು. ಕೆಲವು ಮಕ್ಕಳಲ್ಲಿ ಔಪಚಾರಿಕ ವಾತಾವರಣಕ್ಕಿಂತ ಅನೌಪಚಾರಿಕ ವಾತಾವರಣದಲ್ಲಿ ಇರಲು ಇಚ್ಛಿಸುವ ಮನೋಭಾವ ಇದ್ದಲ್ಲಿ ಆಟ, ಚಿತ್ರಕಲೆ, ಸಂಗೀತ, ಇತ್ಯಾದಿ ಸೃಜನಶೀಲ ಚಟುವಟಿಕೆಗಳ ಮೂಲಕ ಶಿಕ್ಷಣ ನೀಡುವ ಪರ್ಯಾಯ ಪಠ್ಯಕ್ರಮ ಅನುಸರಿಸುವ ಶಾಲೆಗಳನ್ನು ಆಯ್ಕೆ ಮಾಡಬೇಕಾಗುತ್ತದೆ.

ADVERTISEMENT

ಮನೆಯಿಂದ ಶಾಲೆಗಿರುವ ದೂರ

ಆಯ್ಕೆ ಮಾಡುವ ಶಾಲೆಯು ಮನೆಯಿಂದ ಸಾಧ್ಯವಾದಷ್ಟು ಹತ್ತಿರ ಇರುವಂತೆ ಆಯ್ಕೆ ಮಾಡುವುದು ಒಳ್ಳೆಯದು. ಇಲ್ಲದಿದ್ದಲ್ಲಿ ಹೆಚ್ಚಿನ ಸಮಯ ಮಗುವು ಶಾಲೆಗೆ ಹೋಗಿ ಬರಲು ಪ್ರಯಾಣದಲ್ಲಿ ಕಳೆಯಬೇಕಾಗುತ್ತದೆ. ಶಾಲೆ ಹತ್ತಿರವಿದ್ದಲ್ಲಿ ಪೋಷಕರು ಅಗತ್ಯ ಮತ್ತು ತುರ್ತು ಪ್ರಸಂಗಗಳಲ್ಲಿ ತಕ್ಷಣವೇ ಹೋಗಿ ಬರಬಹುದು. ಆ ಮೂಲಕ ಮಕ್ಕಳಿಗೆ ಸೂಕ್ತ ಬೆಂಬಲ ನೀಡಬಹುದು.

ಪೋಷಕರ ಆರ್ಥಿಕ ಅನುಕೂಲ

ಪೋಷಕರು ಶಾಲಾ ಆಯ್ಕೆಗಿಂತ ಪೂರ್ವದಲ್ಲಿ ತಮ್ಮ ಆದಾಯವನ್ನು ಪರಿಶೀಲನೆ ಮಾಡಿಕೊಳ್ಳಬೇಕು. ಪೋಷಕರ ಆದಾಯ ಹಾಗೂ ಶಾಲಾ ಶುಲ್ಕ ಮತ್ತು ಇತರೆ ವೆಚ್ಚಗಳು ಸೇರಿ ಒಟ್ಟು ವಾರ್ಷಿಕ ವೆಚ್ಚ ಎಷ್ಟಾಗಬಹುದು ಎಂಬುದನ್ನು ತುಲನೆ ಮಾಡಿ ಶಾಲೆಯನ್ನು ಆಯ್ಕೆ ಮಾಡಬೇಕು. ಸಾಲ ಸೋಲ ಮಾಡಿ, ದುಬಾರಿ ಶುಲ್ಕ ತೆತ್ತು ಶಾಲೆಗೆ ದಾಖಲಾತಿ ಮಾಡಿಸಿ, ನಂತರ ಶುಲ್ಕ ಭರಿಸಲು ಸಾಧ್ಯವಾಗದೇ ಸಂಕಷ್ಟ ಅನುಭವಿಸುವ ಪೋಷಕರು ಈ ಕುರಿತು ಮುಂಚೆಯೇ ಜಾಗರೂಕತೆ ವಹಿಸುವುದು ಒಳಿತು.

ಪಠ್ಯಕ್ರಮ

ರಾಜ್ಯ ಪಠ್ಯಕ್ರಮ, ಸಿ.ಬಿ.ಎಸ್.ಇ., ಐ.ಸಿ.ಎಸ್.ಇ., ಕೇಂಬ್ರಿಡ್ಜ್ ವಿಶ್ವವಿದ್ಯಾಲಯ ರೂಪಿಸಿರುವ International General Certificate of School Education (IGCSE), ಸ್ವಿಡ್ಜರ್‌ಲ್ಯಾಂಡ್ ದೇಶದ International Baccalaureate (I.B) ಗಳಂತಹ ಅಂತರರಾಷ್ಟ್ರೀಯ ಪಠ್ಯಕ್ರಮ ಐ.ಬಿ. ಇತ್ಯಾದಿ, ರಿಷಿ ವ್ಯಾಲಿ, Centre for Learning (CFL) ನಂತಹ ಪರ್ಯಾಯ ಪಠ್ಯಕ್ರಮ ಅನುಸರಿಸುವ ಶಾಲೆಗಳು ಇವೆ. ಮಗುವಿನ ಆಸಕ್ತಿ, ಸಾಮರ್ಥ್ಯ ಹಾಗೂ ಪೋಷಕರ ಆದಾಯವನ್ನು ಗಣನೆಗೆ ತೆಗೆದುಕೊಂಡು ಯಾವ ಪಠ್ಯಕ್ರಮದ ಶಾಲೆ ಎಂಬುದನ್ನು ಪೋಷಕರು ನಿರ್ಧರಿಸಬೇಕು.

ಮಕ್ಕಳ ಸ್ನೇಹಿ ಶಾಲೆ

ಶಾಲೆಯು ಮಕ್ಕಳ ಮನಸ್ಸನ್ನು ಅರ್ಥ ಮಾಡಿಕೊಂಡು ಅವರಿಗೆ ಸ್ನೇಹಪರವಾಗಿ ಇರುವುದು ಮುಖ್ಯ. ಈ ನಿಟ್ಟಿನಲ್ಲಿ ಶಾಲೆಯ ಮುಖ್ಯ ಶಿಕ್ಷಕರು, ಶಿಕ್ಷಕರು, ಶಾಲಾ ಸಿಬ್ಬಂದಿ ಮಕ್ಕಳ ಸ್ನೇಹಪರ ನಿಲುವು ಹೊಂದಿದ್ದಾರೆಯೇ ಎಂಬುದನ್ನು ಪರಿಶೀಲಿಸುವುದು ಅಗತ್ಯವಾಗಿದೆ. ಕಲಿಕೆ, ಶಿಸ್ತು ಇತ್ಯಾದಿಗಳ ಹೆಸರಿನಲ್ಲಿ ಮಕ್ಕಳನ್ನು ಕಠಿಣ ಶಿಸ್ತಿಗೆ ಒಳಪಡುವ ಶಾಲೆಗೆ ಸೇರಿಸಿ, ನಂತರ ಪಶ್ಚಾತ್ತಾಪ ಪಡುವ ಬದಲು ಮೊದಲೇ ಎಚ್ಚರವಹಿಸುವುದು ಒಳ್ಳೆಯದು.

ಮೂಲಭೂತ ಸೌಕರ್ಯ

ಶಾಲೆಯಲ್ಲಿ ಅಗತ್ಯ ಮೂಲಭೂತ ಸೌಕರ್ಯಗಳು ಹಾಗೂ ಶಿಕ್ಷಕರಲ್ಲಿ ಅಗತ್ಯ ವಿದ್ಯಾರ್ಹತೆ ಇದೆಯೇ ಎಂಬುದನ್ನು ಪರಿಶೀಲಿಸಬೇಕು.
ಮೇಲಿನ ಅಂಶಗಳನ್ನು ಹಿನ್ನೆಲೆಯಾಗಿಟ್ಟುಕೊಂಡು ಶಾಲೆಗಳ ಆಯ್ಕೆಯನ್ನು ಮಾಡಲು ಜಾಲತಾಣಗಳ ನೆರವು, ಆತ್ಮೀಯರು, ಸ್ನೇಹಿತರ ಸಹಾಯ ಪಡೆದು ಕೆಲವು ಶಾಲೆಗಳನ್ನು ಪಟ್ಟಿ ಮಾಡಬೇಕು. ಪಟ್ಟಿ ಮಾಡಲ್ಪಟ್ಟ ಶಾಲೆಗೆ ಪೂರ್ವಭಾವಿ ಭೇಟಿ ನೀಡಿ, ಅಲ್ಲಿಯ ವಾತಾವರಣವನ್ನು ಗಮನಿಸಿ, ಶಾಲಾ ಶಿಕ್ಷಕರು, ಪೋಷಕರು, ಆಡಳಿತ ಮಂಡಳಿಯೊಂದಿಗೆ ಮಾತನಾಡಿ, ತೀರ್ಮಾನ ತೆಗೆದುಕೊಳ್ಳಬಹುದು. ಮನೆಯ ಹತ್ತಿರದಲ್ಲಿ ಸರ್ಕಾರಿ ಶಾಲೆಗಳಿದ್ದಲ್ಲಿ ಸರ್ಕಾರಿ ಶಾಲೆ ಕುರಿತು ಯಾವುದೇ ಪೂರ್ವಾಗ್ರಹಗಳಿಲ್ಲದೇ ಭೇಟಿ ನೀಡಿ, ದಾಖಲಿಸಲು ತೀರ್ಮಾನ ಕೈಗೊಳ್ಳಬಹುದು.

ಮಕ್ಕಳ ಸುರಕ್ಷತೆ

ಮಕ್ಕಳ ಸುರಕ್ಷತೆಯ ಕುರಿತಂತೆ ಕಾಳಜಿ ವಹಿಸುವ ಶಾಲೆಯನ್ನು ಆಯ್ಕೆ ಮಾಡುವುದು ಒಳಿತು. ಶಾಲೆಯು ಮಕ್ಕಳ ಸುರಕ್ಷತೆಗೆ ಯಾವ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ ಎಂಬುದನ್ನು ಪರಿಶೀಲಿಸಿ, ತೀರ್ಮಾನ ಕೈಗೊಳ್ಳಬೇಕು. ಶಾಲಾ ವಾಹನ, ಶಾಲಾ ತರಗತಿ ಹಾಗೂ ಶಾಲಾ ಆವರಣದಲ್ಲಿ ಇರುವ ಸುರಕ್ಷತಾ ವ್ಯವಸ್ಥೆಯನ್ನು ಗಮನಿಸಿ, ಉತ್ತಮ ಸುರಕ್ಷತಾ ವ್ಯವಸ್ಥೆ ಇರುವ ಶಾಲೆಯನ್ನು ಆಯ್ಕೆ ಮಾಡುವುದು ಒಳಿತು.

(ಲೇಖಕರು ಹಿರಿಯ ಸಹಾಯಕ ನಿರ್ದೇಶಕರು, ಡಿ.ಎಸ್.ಇ.ಆರ್.ಟಿ.)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.