ADVERTISEMENT

ಪಿಯುಸಿನಾ? ಯಾವ ಕಾಂಬಿನೇಷನ್‌? ವಿಷಯ ಸಂಯೋಜನೆ, ಕಾಲೇಜು ಆಯ್ಕೆ ಹೇಗೆ?

ಗುರುರಾಜ ಎಸ್ ದಾವಣಗೇರೆ
Published 20 ಫೆಬ್ರುವರಿ 2023, 0:30 IST
Last Updated 20 ಫೆಬ್ರುವರಿ 2023, 0:30 IST
   

ಎಸ್ಸೆಸ್ಸೆಲ್ಸಿ ಪಾಸಾದ ಮಕ್ಕಳಿಗೆ ಧುತ್ತನೆ ಎದುರಾಗುವ ಪ್ರಶ್ನೆಯೇ ‘ಪಿಯುಸಿನಾ..ಯಾವ ಕಾಂಬಿನೇಷನ್‌?’. ಅದರಲ್ಲೂ ‘ಸೈನ್ಸ್‌’ ಓದಬೇಕೆನ್ನುವವರಿಗೆ ವಿಷಯ ಸಂಯೋಜನೆ ಆಯ್ಕೆಯಲ್ಲಿ ಹಲವು ಪ್ರಶ್ನೆಗಳು ಉದ್ಭವಿಸಿರುತ್ತವೆ. ಈ ಹಿನ್ನೆಲೆ ಯಲ್ಲಿ ಅಭಿರುಚಿಗೆ ಅನುಸಾರವಾಗಿ ಹೇಗೆ ವಿಷಯ ಸಂಯೋಜನೆ ಹಾಗೂ ಕಾಲೇಜಿನ ಆಯ್ಕೆ ಮಾಡಬಹುದು ? ಇಲ್ಲಿದೆ ಮಾಹಿತಿ.

ಪ್ರೌ ಢಶಾಲಾ ಶಿಕ್ಷಣದ ನಂತರದ ವಿದ್ಯಾಭ್ಯಾಸಕ್ಕಾಗಿ ಪಿಯುಸಿಗೆ ಸೇರಬಯಸುವ ವಿದ್ಯಾರ್ಥಿಗಳು ಮತ್ತು ಅವರ ಏಳಿಗೆ ಕಾಣಬಯಸುವ ಪೋಷಕರು ತಮ್ಮ ಮಕ್ಕಳು ಸೇರುತ್ತಿರುವ ಕಾಲೇಜುಗಳ ವಿಧ ಮತ್ತು ಸ್ವರೂಪಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಲೇಬೇಕು. ಹದಿಮೂರು ವರ್ಷಗಳ ಕಾಲ ಒಂದೇ ಶಾಲೆಯಲ್ಲಿ ಓದುವ ಬಹುತೇಕ ವಿದ್ಯಾರ್ಥಿಗಳು ಒಮ್ಮಿಂದೊಮ್ಮೆಗೆ ಹೊಸ ವಾತಾವರಣ, ಹೊಸ ಶಿಕ್ಷಣ ಕ್ರಮದ ಎರಡು ವರ್ಷಗಳ ಅವಧಿಯ ಪಿಯುಸಿಗೆ ಸೇರುವಾಗ ತಾವು ಓದಬಯಸುವ ಸಂಯೋಜನೆ ಮತ್ತು ಮಾಧ್ಯಮಗಳ ಬಗ್ಗೆ ಮತ್ತು ಆಯ್ಕೆ ಮಾಡಿಕೊಳ್ಳುವ ಕಾಲೇಜುಗಳ ಬಗ್ಗೆ ನಿರ್ದಿಷ್ಟವಾಗಿ ತಿಳಿದುಕೊಳ್ಳಲೆಬೇಕಾಗುತ್ತದೆ.

ಹಲವು ಬಗೆಯ ಕಾಲೇಜುಗಳು

ADVERTISEMENT

ರಾಜ್ಯದಲ್ಲಿ ಪದವಿ ಪೂರ್ವ ಶಿಕ್ಷಣ ನೀಡುವ ಐದು ವಿವಿಧ ಬಗೆಯ ಕಾಲೇಜುಗಳಿವೆ. ಒಟ್ಟು ಪದವಿ ಪೂರ್ವ ಕಾಲೇಜುಗಳ ಸಂಖ್ಯೆ 5606. ಸರ್ಕಾರಿ, ಅನುದಾನಿತ, ಅನುದಾನರಹಿತ, ಮಹಾನಗರಪಾಲಿಕೆ ಮತ್ತು ಪದವಿ ಕಾಲೇಜುಗಳಿಂದ ವಿಭಜಿತ ಪಿಯು ಕಾಲೇಜುಗಳು (ಬೈಫರ್‌ಕೇಟೆಡ್‌) ಎಂಬ ಐದು ವಿವಿಧ ಬಗೆಯ ಕಾಲೇಜುಗಳಲ್ಲಿ ಪದವಿ ಪೂರ್ವ ಶಿಕ್ಷಣ ಬೋಧಿಸಲಾಗುತ್ತಿದೆ.

ರಾಜ್ಯದಲ್ಲಿ 1233 ಸರ್ಕಾರಿ, 824 ಅನುದಾನಿತ, 3274 ಅನುದಾನರಹಿತ, 161 ಬೈಫರ್‌ಕೇಟೆಡ್ ಮತ್ತು 14 ಕಾರ್ಪೊರೇಶನ್ ಪಿಯು ಕಾಲೇಜುಗಳಿವೆ. ಪ್ರಥಮ ಹಾಗೂ ದ್ವಿತೀಯ ಪಿಯುಸಿ ಎರಡೂ ಸೇರಿದಂತೆ ಒಟ್ಟು 13 ಲಕ್ಷ ವಿದ್ಯಾರ್ಥಿಗಳು ಅಧ್ಯಯನ ನಡೆಸುತ್ತಾರೆ. ಇವರಲ್ಲಿ ಶೇ25 ರಷ್ಟು ನಗರದಲ್ಲಿದ್ದರೆ ಉಳಿದ ಶೇ75 ವಿದ್ಯಾರ್ಥಿಗಳು ಗ್ರಾಮೀಣ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿದ್ದಾರೆ.

ಕನ್ನಡ ಹಾಗೂ ಇಂಗ್ಲಿಷ್ ಮಾಧ್ಯಮಗಳಲ್ಲಿ ಕಲಿಯುವ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್ ಹಾಗೂ ಪದವಿ ಶಿಕ್ಷಣಕ್ಕೆ ಅರ್ಹತೆ ಪಡೆಯುತ್ತಾರೆ. ಸರ್ಕಾರಿ ಕಾಲೇಜುಗಳಲ್ಲಿ ಯಾವುದೇ ಶುಲ್ಕವಿರುವುದಿಲ್ಲ. ಅನುದಾ ನಿತ ಕಾಲೇಜುಗಳಲ್ಲಿ ಸರ್ಕಾರ ನಿಗದಿ ಪಡಿಸಿರುವ ಶುಲ್ಕ ಪಾವತಿಸಬೇಕು. ಖಾಸಗಿ ಅನುದಾನಿತ, ಬೈಫರ್‌ಕೇಟೆಡ್ ಕಾಲೇಜುಗಳಿಗೆ ಸರ್ಕಾರದ ವೇತನಾನುದಾನ ಸಿಗುತ್ತದೆ. ಪಾಲಿಕೆ ಕಾಲೇಜುಗಳಿಗೆ ಸರ್ಕಾರದ ಅನುದಾನವಿರುತ್ತದೆ.

ಅನುದಾನರಹಿತ ಕಾಲೇಜುಗಳಿಗೆ ಸರ್ಕಾರದಿಂದ ಯಾವುದೇ ರೀತಿಯ ಧನಸಹಾಯವಿರುವುದಿಲ್ಲ. ಎಲ್ಲ ಖರ್ಚನ್ನೂ ಆಡಳಿತ ಮಂಡಳಿಗಳೇ ನೋಡಿಕೊಳ್ಳುತ್ತವೆ.ಅನುದಾನರಹಿತ ಕಾಲೇಜುಗಳು ವಿದ್ಯಾರ್ಥಿಗಳು ಸಂದಾಯ ಮಾಡುವ ವಾರ್ಷಿಕ ಶುಲ್ಕಗಳಿಂದಲೇ ನಡೆಯುತ್ತವೆ. ಆದ್ದರಿಂದ ಅಲ್ಲಿನ ಶೈಕ್ಷಣಿಕ ಗುಣಮಟ್ಟ ಮತ್ತು ಮೂಲಸೌಲಭ್ಯಗಳಿಗೆ ಅನುಗುಣವಾಗಿ ಶುಲ್ಕ ನಿಗದಿಯಾಗಿರುತ್ತದೆ.ಸರ್ಕಾರಿ, ಅನುದಾನಿತ ಮತ್ತು ಇತರೆ ಕಾಲೇಜುಗಳಿಗೆ ಹೋಲಿಸಿದಲ್ಲಿ ಇಲ್ಲಿನ ಶುಲ್ಕ ತುಂಬಾ ಹೆಚ್ಚಿರುತ್ತದೆ.

ಶೈಕ್ಷಣಿಕ ಗುಣಮಟ್ಟ ಮತ್ತು ಸೌಲಭ್ಯ

ಇತ್ತೀಚಿನ ವರ್ಷಗಳಲ್ಲಿ ಸರ್ಕಾರಿ ಕಾಲೇಜುಗಳು ಪ್ರತಿಷ್ಠಿತ ಖಾಸಗಿ ಕಾಲೇಜುಗಳಿಗಿಂತ ಚೆನ್ನಾಗಿಯೇ ಕೆಲಸ ಮಾಡುತ್ತಿವೆ. ಶೈಕ್ಷಣಿಕ ಗುಣಮಟ್ಟ, ಫಲಿತಾಂಶ ಸುಧಾರಣೆಗಳಲ್ಲಿ ಮಾದರಿ ಕೆಲಸ ಮಾಡಿರುವ ಅನೇಕ ಸರ್ಕಾರಿ ಕಾಲೇಜುಗಳು ರಾಜ್ಯದಲ್ಲಿವೆ. ಅಲ್ಲಲ್ಲಿ ಮೂಲಸೌಲಭ್ಯಗಳ ಕೊರತೆ ಇದೆಯಾದರೂ, ನುರಿತ ಹಾಗೂ ತರಬೇತಿ ಇರುವ ಅಧ್ಯಾಪಕರಿಂದಾಗಿ ಸರ್ಕಾರಿ ಕಾಲೇಜುಗಳ ಫಲಿತಾಂಶ ಸುಧಾರಣೆ ಕಾಣುತ್ತಲೇ ಇದೆ. ಆದರೆ ಅತ್ಯಂತ ಕಡಿಮೆ ಹಾಗೂ ಶೂನ್ಯ ಫಲಿತಾಂಶ ಸಂಪಾದಿಸುವ ಕಾಲೇಜುಗಳೂ ಇವೆ! ಆದರೆ ಬೆರಳೆಣಿಕೆಯಷ್ಟು. ಖಾಸಗಿ ಹಾಗೂ ಅನುದಾನಿತ ಕಾಲೇಜುಗಳೂ ಇದಕ್ಕೆ ಹೊರತಲ್ಲ. ಶೇ 100 ರಷ್ಟು ಫಲಿತಾಂಶ ಪಡೆಯುವ ಕಾಲೇಜುಗಳಿರುವಂತೆ ಶೂನ್ಯ ಫಲಿತಾಂಶ ಸಂಪಾದಿಸುವ ಕಾಲೇಜುಗಳೂ ಸಿಗುತ್ತವೆ. ಯಾವುದಕ್ಕೂ ಸಾವಧಾನದಿಂದ ಮುಂದುವರಿಯಿರಿ.

ಫಲಿತಾಂಶವಷ್ಟೇ ಮಾನದಂಡವಲ್ಲ!

ಕಡಿಮೆ ಅಥವಾ ಶೂನ್ಯ ಫಲಿತಾಂಶ ಸಂಪಾದಿಸುವ ಕಾಲೇಜುಗಳ ಬಗ್ಗೆ ತಾತ್ಸಾರ ಭಾವನೆ ಸಾಮಾನ್ಯ. ಹಾಗೆಂದು ಉತ್ತಮ ಫಲಿತಾಂಶ ಪಡೆಯುವ ಕಾಲೇಜುಗಳಲ್ಲಿ ಎಲ್ಲವೂ ಸರಿಯಾಗಿರುತ್ತದೆ ಎಂದು ಹೇಳಲು ಬರುವುದಿಲ್ಲ. ಆಟೋಟ - ಸಾಂಸ್ಕೃತಿ ಕಾರ್ಯಕ್ರಮಗಳನ್ನು ಕಡೆಗಣಿಸಿ, ಸಾಮಾಜಿಕ ಬದ್ಧತೆಯ ಚಟುವಟಿಕೆಗಳನ್ನು ದೂರವಿರಿಸಿ ಬರೀ ಪುಸ್ತಕದ ವಿಷಯಗಳನ್ನು ಕಂಠಸ್ತಗೊಳಿಸುವ, ಉರು ಹೊಡೆ ವುದನ್ನು ಪ್ರೋತ್ಸಾಹಿಸುವ ಕಾಲೇಜುಗಳೂ ಇವೆ. ಇಲ್ಲಿ ವಿದ್ಯಾರ್ಥಿಯ ಸರ್ವಾಂಗೀಣ ಬೆಳವಣಿಗೆಗೆ ಅವಕಾಶ ವಿರುವುದಿಲ್ಲ. ಕೇವಲ ಅಂಕಗಳಿಕೆಗಾಗಿ ವಿದ್ಯಾರ್ಥಿಗಳನ್ನು ತಯಾರು ಮಾಡುವ ಕಾಲೇಜುಗಳು ಹೆಜ್ಜೆಗೊಂದರಂತೆ ಇವೆ. ಆಯ್ಕೆಯ ಸ್ವಾತಂತ್ರ್ಯ ನಿಮ್ಮದು.

ಸಂಯೋಜನೆ: ಗಣಿತವಿರದ ಪಿಯುಸಿ ಓದು

ಪಿಯುಸಿಯಲ್ಲಿ ‘ವಿಜ್ಞಾನ’ದ ಕಾಂಬಿನೇಶನ್‌ಗೆ ಸೇರಬೇಕು. ಆದರೆ ಗಣಿತ ಕಷ್ಟ ಎನ್ನುವವರು ಗಣಿತ ವಿಷಯವನ್ನು ಓದದೇ ಪಿಯುಸಿ ವಿಜ್ಞಾನ ಓದಬಹುದು. ಅದಕ್ಕೆಂದೇ ಒಂದು ಸಂಯೋಜನೆಯಿದೆ. ಅದರಲ್ಲಿ ಗಣಿತದ ಬದಲಾಗಿ ಗೃಹ ವಿಜ್ಞಾನವಿದೆ.

ಮೇಲಿನ ಬಾಕ್ಸ್‌ನಲ್ಲಿ ಸಂಯೋಜನೆಯ ಮಾಹಿತಿ ಇದೆ. ಆ ಪ್ರಕಾರ ಮೊದಲ ನಾಲ್ಕು ಸಂಯೋಜನೆಗಳಲ್ಲಿ ಗಣಿತ ಹೊರತುಪಡಿಸಿ ಮೂರು ವಿಷಯಗಳಿಗೆ ಪ್ರಾಯೋಗಿಕ ತರಗತಿ ಮತ್ತು ಪ್ರಾಯೋಗಿಕ ಪರೀಕ್ಷೆಗಳಿರುತ್ತವೆ. ಐದನೆಯ ಸಂಯೋಜನೆಯಲ್ಲಿ ಸ್ಟ್ಯಾಟಿಸ್ಟಿಕ್‌ ವಿಷಯಕ್ಕೆ ಪ್ರಾಯೋಗಿಕ ತರಗತಿಯಾಗಲೀ, ಪರೀಕ್ಷೆಯಾಗಲೀ ಇರುವುದಿಲ್ಲ. ಆದರೆ ಕೊನೆಯ ಸಂಯೋಜನೆಯ ನಾಲ್ಕೂ ವಿಷಯಗಳಿಗೆ ಪ್ರಾಯೋಗಿಕ ತರಗತಿ ಮತ್ತು ಪರೀಕ್ಷೆ ಎರಡೂ ಇರುತ್ತವೆ. ಗಣಿತದ ಭಯ ಇರುವವರು ಈ ಸಂಯೋಜನೆಯನ್ನು ಆಯ್ದುಕೊಳ್ಳಬಹುದು. ಈ ಸಂಯೋಜನೆಯ ವಿದ್ಯಾರ್ಥಿಗಳು ಎಂಜಿನಿಯರಿಂಗ್ ಸೇರಲು ಅವಕಾಶವಿರುವುದಿಲ್ಲ. ವೈದ್ಯಕೀಯ ಮತ್ತು ಅರೆವೈದ್ಯಕೀಯ ಹಾಗೂ ಫಾರ್ಮಸಿ ಕೋರ್ಸ್‌ಗಳಿಗೆ ದಾಖಲಾಗಬಹುದು.

ಪಿಯುಸಿ– ವಿಷಯ ವಿವರ

l →ಪಿಯುಸಿ ಶಿಕ್ಷಣದ ವಿಷಯಗಳನ್ನು ಭಾಗ– 1 ಮತ್ತು 2 ಎಂದು ವಿಂಗಡಿಸಲಾಗಿದೆ. ಭಾಗ - 1 ರಲ್ಲಿ ಭಾಷಾ ವಿಷಯಗಳು ಮತ್ತು ಭಾಗ-2 ರಲ್ಲಿ ಐಚ್ಛಿಕ (Optional)) ಗಳಿರುತ್ತವೆ.

l →ಯಾವುದೇ ವಿದ್ಯಾರ್ಥಿಯು ಭಾಗ – 1 ರಿಂದ 2 ಭಾಷೆ ಹಾಗೂ ಭಾಗ – 2 ರಿಂದ 4 ವಿಷಯಗಳನ್ನು ಆಯ್ಕೆಮಾಡಿಕೊಂಡು ಕಲಿಯಬೇಕಾಗುತ್ತದೆ.

l →ವಿಜ್ಞಾನದಲ್ಲಿ 6, ವಾಣಿಜ್ಯ ವಿಭಾಗದಲ್ಲಿ 9 ಮತ್ತು ಕಲಾ ವಿಭಾಗದಲ್ಲಿ 35 ವಿಷಯ ಸಂಯೋಜನೆಗಳಿವೆ.

l →ಪ್ರಥಮ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿ 100 ಅಂಕಗಳ 6 ವಿವಿಧ ವಿಷಯಗಳನ್ನು ಓದಬೇಕು..

l →ಪಿಯುಸಿ ಶಿಕ್ಷಣದಲ್ಲಿ ಒಟ್ಟು 11 ಭಾಷೆ ಹಾಗೂ ವಿವಿಧ ಸಂಯೋಜನೆಗಳಿಗೆ (combination ) ಸಂಬಂಧಿಸಿದ 23 ವಿಷಯಗಳಿವೆ.

l →ಸಂಗೀತದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳು ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತಗಳನ್ನು ಐಚ್ಛಿಕ ವಿಷಯಗಳನ್ನಾಗಿ ಓದಬಹುದು / ಕಲಿಯ ಬಹುದು. ಇವುಗಳಿಗೆ ಪ್ರಾಯೋಗಿಕ ಹಾಗೂ ತಾತ್ವಿಕ ಎರಡೂ ಪರೀಕ್ಷೆಗಳಿರುತ್ತವೆ.

l →ಕನ್ನಡ, ಇಂಗ್ಲಿಷ್, ಹಿಂದಿ, ಸಂಸ್ಕೃತಗಳಲ್ಲದೆ ಉರ್ದು, ಅರೇಬಿಕ್, ತೆಲುಗು, ತಮಿಳು, ಮಲೆಯಾಳಂ, ಮರಾಠಿ ಮತ್ತು ಫ್ರೆಂಚ್ ಭಾಷೆಗಳನ್ನು ವಿದ್ಯಾರ್ಥಿಗಳು ಆಯ್ಕೆ ಮಾಡಿಕೊಳ್ಳಬಹುದು. ಆಯ್ಕೆ ಎರಡನ್ನು ಮೀರುವಂತಿಲ್ಲ.

l →ಇಂಗ್ಲಿಷ್ ಕಷ್ಟ ಎನ್ನುವವರು ಭಾಗ–1ರ ಯಾವು ದಾದರೂ 2 ವಿಷಯಗಳನ್ನು ಆಯ್ದುಕೊಳ್ಳಬಹುದು.

l →ಪಿಯುಸಿ ವಿಜ್ಞಾನ ಸಂಯೋಜನೆಯಲ್ಲಿ ಜೀವ ವಿಜ್ಞಾನ ಓದದೇ ಇರುವವರೂ ಸಹ ಫಾರ್ಮಸಿ ಕೋರ್ಸ್‌ಗೆ ದಾಖಲಾಗಬಹುದು.

(ಲೇಖಕರು– ಪ್ರಾಚಾರ್ಯರು, ವಿಡಿಯ ಪೂರ್ಣಪ್ರಜ್ಞ ಪದವಿ ಪೂರ್ವ ಕಾಲೇಜು, ಬೆಂಗಳೂರು)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.