ADVERTISEMENT

ಸಮಾಧಾನ | ಕದಿಯುವ ಮಗನಿಗೆ ಏನು ಹೇಳಲಿ?

ಸಮಾಲೋಚಕರು: ಡಾ.ಡಿ.ಎಂ. ಹೆಗಡೆ

​ಪ್ರಜಾವಾಣಿ ವಾರ್ತೆ
Published 3 ಮಾರ್ಚ್ 2025, 0:30 IST
Last Updated 3 ಮಾರ್ಚ್ 2025, 0:30 IST
   

ಮನೆಯಲ್ಲಿ ಮಗ ಕಳುವು ಮಾಡುತ್ತಿದ್ದಾನೆ ಎಂಬ ಅನುಮಾನವಿದೆ. ಇದನ್ನು ಹೇಗೆ ಪತ್ತೆ ಮಾಡುವುದು? ಅವನನ್ನು ಹೇಗೆ ಸರಿ ದಾರಿಗೆ ತರುವುದು? ಹಿಂದೆ ಒಂದೆರಡು ಸಲ ವಿಚಾರಿಸಿದಾಗ, ಕೋಪಗೊಂಡು ಮನೆಯಲ್ಲಿರುವ ವಸ್ತುಗಳನ್ನು ಎಸೆದು ಭರವಸೆ ಇಲ್ಲವೇ ಎಂದೆಲ್ಲ ಪ್ರಶ್ನಿಸಿದ್ದ.  ಈ ವರ್ತನೆಯನ್ನು ಹತೋಟಿಗೆ ತರುವುದು ಹೇಗೆ?

ನಿಮ್ಮ ಮಗನೇ ನಿಮ್ಮ ಮನೆಯಲ್ಲಿ ಕಳ್ಳತನ ಮಾಡಿದ್ದಾನೆ ಎನ್ನುವುದು ನಿಮಗೆ ಸ್ಪಷ್ಟವಾಗಿಲ್ಲ. ಇನ್ನೂ ಅನುಮಾನವಷ್ಟೇ. ಅವನನ್ನು ನೀವು ಹಿಡಿಯಲಿಲ್ಲ. ನಿಮಗೆ ಅವನ ಮೇಲೆ ನಂಬಿಕೆ ಇಲ್ಲ ಎನ್ನುವುದು ಅವನಿಗೆ ಗೊತ್ತಾಗಿದೆ. ಅವನನ್ನು ನಿಮ್ಮ ರೀತಿಯಲ್ಲಿ ವಿಚಾರಿಸಿದಾಗ ಆತ ತೀವ್ರವಾಗಿ ಪ್ರತಿಭಟಿಸಿದ್ದಾನೆ. ತಾನೂ ಪ್ರೌಢನಾಗುತ್ತಿದ್ದೇನೆ ಎನ್ನುವ ಸಂದೇಶವನ್ನು ಕೊಡಲಿಕ್ಕೆ ಪ್ರಯತ್ನಿಸಿದ್ದಾನೆ. ಇಷ್ಟರಲ್ಲಿ ಅವನು ನಿಮ್ಮನ್ನು ನಂಬುವುದಿಲ್ಲ. ನೀವೂ ಅವನನ್ನು ನಂಬುವುದಿಲ್ಲ ಎನ್ನುವ ಹಾಗಾಗಿದೆ.

ಬಹಳ ಮುಖ್ಯವಾಗಿ ಪಾಲಕರ ಹಾಗೂ ಮಕ್ಕಳ ಮಧ್ಯೆ ಪರಸ್ಪರ ಪ್ರೀತಿ, ವಿಶ್ವಾಸ ಇಲ್ಲ ಎನ್ನುವ ಹಾಗೆ ಆಗಬಾರದು. ಇಬ್ಬರಿಗೂ ಇರುಸು ಮುರುಸಾಗುತ್ತದೆ. ಪರಸ್ಪರರಲ್ಲಿ ಇರಬೇಕಾದ ಸುಮಧುರ ಸಂಬಂಧ ಹಾಳಾಗುತ್ತದೆ. ಮಕ್ಕಳ ಮನಸ್ಸು ಕನ್ನಡಿಯ ಹಾಗೆ ಇರುತ್ತದೆ. ಅದಕ್ಕೆ ಕಲ್ಲೆಸೆದರೆ ಒಡೆದುಹೋಗುತ್ತದೆ. ಹಾಗಾಗದಂತೆ ಮೊದಲಿನಿಂದಲೂ ಪಾಲಕರು ಎಚ್ಚರ ವಹಿಸಬೇಕು. ಮಕ್ಕಳೆದುರಿನಲ್ಲಿ ಪಾಲಕರು ಅತಿಯಾಗಿ ಜಗಳ ಮಾಡುವುದು, ಹೊಡೆದಾಡಿಕೊಳ್ಳುವುದು ಮಾಡುವುದರಿಂದಲೂ ಮಗುವಿನ ಮನಸ್ಸಿನ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುತ್ತವೆ.

ADVERTISEMENT

ಮೊದಲ ತಪ್ಪನ್ನು ಮಕ್ಕಳು ಮಾಡುವುದಿಲ್ಲ. ಹಿರಿಯರು ಮಾಡಿದ್ದನ್ನು ನೋಡಿಯೇ ಮಕ್ಕಳು ಮಾಡುತ್ತಾರೆ. ಪ್ರತಿಭಟನೆಗಾಗಿಯೂ ಕೆಲವು ಸಲ ಮಕ್ಕಳು ತಪ್ಪು ಮಾಡುತ್ತಾರೆ. ಅದಕ್ಕೂ ಅವರ ನಿರೀಕ್ಷೆಯಂತೆ ಪುರಸ್ಕಾರ ಸಿಗದಿದ್ದಾಗ ಮುಂದೆ, ಕಾಲಾಂತರದಲ್ಲಿ ಅಪರಾಧವನ್ನು ಮಾಡುವ ಮಟ್ಟಕ್ಕೂ ಬೆಳೆಯುತ್ತಾರೆ. ಅತಿಯಾದ ಅಂಜಿಕೆಯಲ್ಲಿ ಬೆಳೆದ ಮಗು, ಮುಂದೆ ದೊಟ್ಟವನಾದ ಮೇಲೆ ಇತರರನ್ನು ಹೆದರಿಸುವ ಮೂಲಕ ತನ್ನೊಳಗಿನ ಹೆದರಿಕೆಯನ್ನು ಸಂತೈಸಿಕೊಳ್ಳುವುದೂ ಇದೆ.

ಇನ್ನು, ವಂಶವಾಹಿ (ಜೆನೆಟಿಕ್ಸ್)‌ ಪ್ರಭಾವದಿಂದಲೂ ಮಕ್ಕಳು ಕೆಟ್ಟ ಹವ್ಯಾಸಗಳನ್ನು ಬೆಳೆಸಿಕೊಳ್ಳುತ್ತಾರೆ, ಅಪರಾಧಿಗಳಾಗುತ್ತಾರೆ, ಕ್ರಿಮಿನಲ್‌ ಗಳಾಗುತ್ತಾರೆ ಎನ್ನುವ ಅಧ್ಯಯನವೂ ನಡೆದಿದೆ. ‘ಕ್ಲೆಪ್ಟೋಮೇನಿಯಾ’ (Kleptomania) ಎನ್ನುವ ವಿಚಿತ್ರ ಹೆಸರಿನ ಮಾನಸಿಕ ಅಸ್ವಸ್ಥತೆಯಿಂದಲೂ ಮಕ್ಕಳು ಕಳ್ಳತನವನ್ನು ಮಾಡುತ್ತಾರೆ. ಈ ಸಮಸ್ಯೆಯಿಂದ ಬಳಲುತ್ತಿರುವವರು ಕದಿಯಲಾರದೇ ಇರಲಾರದಷ್ಟು ಒತ್ತಡಕ್ಕೆ ಒಳಗಾಗುತ್ತಾರೆ. ಯಾರಿಗೂ ಕಾಣದ ಹಾಗೆ, ಏನನ್ನೋ ಕದಿಯುವುದರಿಂದ ಕ್ಷಣಿಕ ಖುಷಿಯನ್ನು ಅನುಭವಿಸುತ್ತಾರೆ. ಯಾರಿಗೂ ಉಪಯೋಗಕ್ಕೆ ಬಾರದ ವಸ್ತುಗಳನ್ನಾದರೂ ಅವರು ಕದ್ದುಬಿಡುತ್ತಾರೆ. ಅದನ್ನು ಹಣಕೊಟ್ಟು ಕೊಂಡುಕೊಳ್ಳುವ ಸಾಮರ್ಥ್ಯ ಅವರಿಗೆ ಇರುತ್ತದೆ. ಇಂಥವರಲ್ಲಿ ಕೆಲವರು ಮಾತ್ರ ಕದ್ದ ನಂತರ ಪಾಪಪ್ರಜ್ಞೆಯಿಂದಲೂ ನರಳುವುದುಂಟು.

ನಿಮ್ಮ ಮಗನ ಮಾನಸಿಕ ಸಮತೋಲನವನ್ನು ಗಮನಿಸಿ. ಅವನು ನಿಮಗೆ ಎಷ್ಟು ಮುಖ್ಯ, ಎಷ್ಟೆಲ್ಲ ಪ್ರೀತಿಸುತ್ತೀರಿ ಎನ್ನುವುದನ್ನು, ಅವನ ಏಳ್ಗೆಗಾಗಿ ನೀವು ಎಷ್ಟೆಲ್ಲ ಶ್ರಮವಹಿಸುತ್ತೀದ್ದೀರಿ ಎನ್ನುವುದನ್ನು ಅವನಿಗೆ ಮನವರಿಕೆಯಾಗುವ ಹಾಗೆ ಹೇಳಿ. ಮನೆಯಲ್ಲಿ ಶಾಂತವಾಗಿ ಎಲ್ಲರೂ ಒಟ್ಟಿಗೆ ಕುಳಿತುಕೊಂಡು, ಸಂಸಾರದ ಆಗು ಹೋಗುಗಳ ಬಗ್ಗೆ ಮಾತನಾಡಿ. ಮನೆಯ ಹಾಗೂ ಮನಸ್ಸಿನ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಚರ್ಚಿಸಿ. ಇಷ್ಟಾಗಿಯೂ ಮಗನ ವರ್ತನೆಯಲ್ಲಿ ಧನಾತ್ಮಕ ಬದಲಾವಣೆ ಕಾಣಿಸದಿದ್ದರೆ, ಸಮರ್ಥ ಆಪ್ತಸಮಾಲೋಚಕರನ್ನು, ಮಾನಸಿಕತಜ್ಞರನ್ನು ಭೇಟಿಯಾಗಿ. ದೈಹಿಕ ಕಾಯಿಲೆಗಿಂತಲೂ ಮಾನಸಿಕ ಕಾಯಿಲೆಗಳು ಹೆಚ್ಚು ಅಪಾಯಕಾರಿ ಎನ್ನುವುದನ್ನು ಗಮನಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.