ADVERTISEMENT

ಸ್ಪರ್ಧಾತ್ಮಕ ಪರೀಕ್ಷೆಗೆ ಟಿಪ್ಪಣಿ ಎಂಬ ‘ಸೂಪರ್ ಚಾರ್ಜರ್’

ಆರ್.ಬಿ.ಗುರುಬಸವರಾಜ
Published 3 ಮಾರ್ಚ್ 2021, 19:30 IST
Last Updated 3 ಮಾರ್ಚ್ 2021, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಓದಿದ್ದನ್ನು ನೆನಪಿಟ್ಟುಕೊಳ್ಳುವುದು ಹೇಗೆ ಎಂಬುದು ಬಹುತೇಕ ಸ್ಪರ್ಧಾರ್ಥಿಗಳ ಪ್ರಶ್ನೆ. ಇತ್ತೀಚೆಗೆ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳ ಬಳಕೆಯಿಂದಾಗಿ ಗಮನ ಕೇಂದ್ರೀಕರಿಸಿ ಓದುವ, ಓದಿದ್ದನ್ನು ಉಳಿಸಿಕೊಳ್ಳುವ ಮತ್ತು ಸಕಾಲದಲ್ಲಿ ಅದನ್ನು ಬಳಸುವ ಬಗ್ಗೆ ಸಾಕಷ್ಟು ತೊಂದರೆಗಳಾಗುತ್ತಿವೆ. ಇಂತಹ ಸಮಸ್ಯೆಗಳಿಗೆ ಸೂಕ್ತ ಮಾರ್ಗವೆಂದರೆ ಓದಿನ ಜೊತೆಗೆ ಟಿಪ್ಪಣಿ ಬರೆದಿಟ್ಟುಕೊಳ್ಳುವುದು.

ಟಿಪ್ಪಣಿ ಬರಹವು ‘ಸೂಪರ್ ಚಾರ್ಜರ್’ ಇದ್ದಂತೆ. ಓದಿದ್ದನ್ನು ವೇಗವಾಗಿ ನೆನಪಿಡಲು ಮತ್ತು ಸಕಾಲದಲ್ಲಿ ಅದನ್ನು ಬಳಸಲು ಇದು ತುಂಬಾ ಪ್ರಭಾವಿ ತಂತ್ರಗಾರಿಕೆ.

ಟಿಪ್ಪಣಿ ತೆಗೆದುಕೊಳ್ಳುವುದಕ್ಕಿಂತ ಮೊದಲು ಅದರ ಉದ್ದೇಶವನ್ನು ಅರ್ಥ ಮಾಡಿಕೊಳ್ಳಬೇಕು. ಏಕೆಂದರೆ ಸ್ಪರ್ಧಾತ್ಮಕ ಪರೀಕ್ಷಾ ಅಧ್ಯಯನದ ಟಿಪ್ಪಣಿಯು ಸಂಶೋಧನಾ ಅಧ್ಯಯನದ ಟಿಪ್ಪಣಿಗಿಂತ ಭಿನ್ನವಾಗಿರುತ್ತದೆ. ಹಾಗೆಯೇ ಟಿಪ್ಪಣಿ ತೆಗೆದುಕೊಳ್ಳುವ ವಿಧಾನವು ಕೂಡ ಬೇರೆ ಬೇರೆಯಾಗಿರುತ್ತದೆ. ಟಿಪ್ಪಣಿ ಮಾಡಿಕೊಳ್ಳಲು ಎಲ್ಲರಿಗೂ ಸರಿಹೊಂದುವ ಯಾವುದೇ ತಂತ್ರಗಳಿಲ್ಲ. ನೀವು ಸ್ವಲ್ಪ ಪ್ರಯತ್ನ- ಪ್ರಮಾದ (ಟ್ರಯಲ್‌ ಅಂಡ್‌ ಎರರ್‌) ವಿಧಾನಗಳಿಂದ ನಿಮ್ಮದೇ ಆದ ತಂತ್ರಗಾರಿಕೆಯನ್ನು ರೂಪಿಸಿಕೊಳ್ಳುವುದು ಅಗತ್ಯ. ಯಾವ ವಿಧಾನದಿಂದ ನಿಮಗೆ ಅನುಕೂಲವಾಗುತ್ತದೆ ಎಂಬುದು ಮುಖ್ಯ.

ADVERTISEMENT

ಮೊದಲ ಹಂತದಲ್ಲಿ ಓದಲು ಕೈಗೆತ್ತಿಕೊಂಡ ಪುಸ್ತಕವು ನೀವು ಪಡೆಯಲು ಬಯಸಿದ ಮಾಹಿತಿಯನ್ನು ಒಳಗೊಂಡಿದೆಯೇ ಅಥವಾ ಇಲ್ಲವೇ ಎಂಬುದನ್ನು ಪರಿಶೀಲಿಸಿ. ಅದಕ್ಕಾಗಿ ಪುಸ್ತಕದ ಮುನ್ನುಡಿ, ವಿಷಯಗಳ ಪಟ್ಟಿ ಮತ್ತು ಕವರ್‌ಪೇಜ್‌ಗಳನ್ನು ಗಮನಿಸಿ. ಸಾಧ್ಯವಾದರೆ ಸುಮ್ಮನೆ ಒಂದೆರಡು ಒಳಪುಟಗಳನ್ನು ತಿರುವಿಹಾಕಿ. ನೀವು ಪಡೆಯಬಯಸಿದ ಮಾಹಿತಿ ಒಳಗೊಂಡಿದ್ದರೆ ಪುಸ್ತಕವನ್ನು ವಿವರವಾಗಿ ಓದಿ, ಇಲ್ಲದಿದ್ದರೆ ಪಕ್ಕಕ್ಕಿಡಿ.

ಎರಡನೇ ಹಂತದಲ್ಲಿ ಪಾರಿಭಾಷಿಕ ಪದಗಳತ್ತ ಗಮನ ಹರಿಸಿ ಅರ್ಥೈಸಿಕೊಳ್ಳಿ. ಓದುವ ವೇಳೆ ಪ್ರತಿ ಪ್ಯಾರಾದೊಂದಿಗೆ, ಸಂವಾದ ಚರ್ಚೆ ನಡೆಸಿ. ನೀವೇ ಪ್ರಶ್ನೆಗಳನ್ನು ರೂಪಿಸಿಕೊಂಡು ಉತ್ತರಗಳನ್ನು ಟಿಪ್ಪಣಿ ರೂಪದಲ್ಲಿ ಬರೆದಿಟ್ಟುಕೊಳ್ಳಿ.

ಮೂರನೇ ಹಂತದಲ್ಲಿ ಪ್ರತಿ ಅಧ್ಯಾಯ ಓದಿದ ನಂತರ ಸಾರಾಂಶವನ್ನು ನಿಮ್ಮದೇ ಆದ ಶೈಲಿಯಲ್ಲಿ ಬುಲೆಟ್ ಪಾಯಿಂಟ್‌ಗಳಲ್ಲಿ ಬರೆದುಕೊಳ್ಳಿ. ನಂತರ ನೀವು ಬರೆದುಕೊಂಡ ಪ್ರಶ್ನೆಗಳನ್ನು ಗಮನಿಸಿ ಅವುಗಳಿಗೆ ಉತ್ತರ ಕಂಡುಕೊಳ್ಳಿ. ಉತ್ತರ ಕಂಡುಕೊಳ್ಳಲಾಗದ ಪ್ರಶ್ನೆಗಳನ್ನು ಬರೆದಿಟ್ಟುಕೊಳ್ಳಿ. ನಾಲ್ಕಾರು ದಿನಗಳು ಕಳೆದ ನಂತರ ಆ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿ. ಆಗಲೂ ಉತ್ತರ ದೊರೆಯದಿದ್ದರೆ ಸಂಬಂಧಿಸಿದ ವಿಷಯತಜ್ಞರಿಂದ ಉತ್ತರ ಪಡೆಯಿರಿ.

ನಾಲ್ಕಾರು ದಿನಗಳು ಕಳೆದ ನಂತರ ಇನ್ನೊಮ್ಮೆ ಅದೇ ಘಟಕ ಅಥವಾ ಅಧ್ಯಾಯದ ಮೇಲೆ ಪಕ್ಷಿನೋಟ ಹರಿಸಿ. ಇನ್ನೂ ಯಾವುದಾದರೂ ಪ್ರಮುಖಾಂಶಗಳನ್ನು ಟಿಪ್ಪಣಿ ಮಾಡಿಕೊಳ್ಳಬೇಕು ಎನಿಸಿದರೆ ಟಿಪ್ಪಣಿ ಮಾಡಿಕೊಳ್ಳಿ. ಹೀಗೆ ಮಾಡುವುದರಿಂದ ಓದಿನ ಪ್ರಕ್ರಿಯೆಗೆ ಜ್ಞಾನವನ್ನು ಅನ್ವಯಿಸುವ ಪ್ರಕ್ರಿಯೆ ಮುಂದುವರೆಯುತ್ತದೆ. ಆಗ ಪುಸ್ತಕದ ಮೇಲಿನ ನಿಮ್ಮ ಅವಲಂಬನೆ ಕಡಿಮೆಯಾಗುತ್ತದೆ. ಜೊತೆಗೆ ಪರಿಕಲ್ಪನೆಯಾಧಾರಿತ ಇನ್ನಿತರೇ ಓದಿನ ಲಿಂಕ್‌ಗಳಿಗೆ ನಮ್ಮನ್ನು ಕರೆದೊಯ್ಯುತ್ತದೆ.

ಟಿಪ್ಪಣಿಯ ಅಂಶಗಳನ್ನು ನಿಮ್ಮ ಸ್ನೇಹಿತರು ಅಥವಾ ಮಾರ್ಗದರ್ಶಕರೊಂದಿಗೆ ಹಂಚಿಕೊಳ್ಳಿ. ಸೂಕ್ತ ಸಲಹೆಗಳಿದ್ದರೆ ನಿಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡು ಮುಂದುವರಿಯಿರಿ. ಟಿಪ್ಪಣಿಯು ಸರಳ, ನಿಖರ ಹಾಗೂ ನೇರವಾಗಿರಲಿ. ಗೊಂದಲಗಳಿಗೆ ಅವಕಾಶ ಇರಬಾರದು.

ಪುಸ್ತಕದಲ್ಲಿನ ಎಲ್ಲಾ ಅಂಶಗಳು ಮತ್ತು ಮಾಹಿತಿಗಳು ನಿಮಗೆ ಉಪಯುಕ್ತವೇ ಆಗಿವೆ. ಆದರೆ ಎಲ್ಲಾ ಅಂಶಗಳನ್ನು ನೆನಪಿಟ್ಟುಕೊಳ್ಳಲಾಗದು. ಪರೀಕ್ಷಾ ದೃಷ್ಟಿಯಿಂದ ಕೆಲವು ಅಂಶಗಳು ಮಾತ್ರ ಪ್ರಮುಖ ಎನಿಸಬಹುದು. ಪ್ರಮುಖಾಂಶಗಳನ್ನು ಪುಟ ಸಂಖ್ಯೆಯ ಸಮೇತವಾಗಿ ಬರೆದಿಟ್ಟುಕೊಂಡರೆ ವಿಸ್ತೃತ ಓದಿಗೆ ಸಹಾಯವಾಗುತ್ತದೆ.

ಆಯ್ದ ಭಾಗಗಳನ್ನು ಕೈಯಿಂದ ನೋಟ್ ಮಾಡಿಟ್ಟುಕೊಳ್ಳಿ. ಟಿಪ್ಪಣಿಯನ್ನು ಆದಷ್ಟೂ ಕೈಯಿಂದಲೇ ಬರೆದಿಟ್ಟುಕೊಳ್ಳುವುದು ಉತ್ತಮ. ಇದು ನಿಮ್ಮ ಬರವಣಿಗೆಯ ಶೈಲಿ ಮತ್ತು ಮಟ್ಟವನ್ನು ಸುಧಾರಿಸುತ್ತದೆ. ಟಿಪ್ಪಣಿಯನ್ನು ಪರಿಕಲ್ಪನಾತ್ಮಕ ನಕ್ಷೆಯ(ಮೈಂಡ್ ಮ್ಯಾಪ್) ರೂಪದಲ್ಲಿಯೂ ಬರೆದಿಟ್ಟುಕೊಳ್ಳಬಹುದು. ಟಿಪ್ಪಣಿಯು ಓದಿನ ವೈಯಕ್ತಿಕ ದಾಖಲೆಯಾದ್ದರಿಂದ ವ್ಯಕ್ತಿಗತವಾಗಿ ಭಿನ್ನವಾಗಿರುತ್ತದೆ. ಇದರಲ್ಲಿ ನಿಮ್ಮ ಐಡೆಂಟಿಟಿಯೂ ಇರಲಿದೆ. ಇದು ಓದಿನ ದಾಖಲಾತ್ಮಕ ತಂತ್ರಗಾರಿಕೆಯಾದ್ದರಿಂದ ನೆನಪಿನ ಸೂಪರ್ ಚಾರ್ಜರ್ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.