ADVERTISEMENT

ಕೋವಿಡ್ ಕಾಲದಲ್ಲಿ ಪುಟಾಣಿಗಳಿಗೆ ಪಾಠ ಹೇಗೆ?

​ಪ್ರಜಾವಾಣಿ ವಾರ್ತೆ
Published 31 ಮೇ 2020, 4:06 IST
Last Updated 31 ಮೇ 2020, 4:06 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊರೊನಾ ವೈರಾಣು ಹರಡುವುದನ್ನು ತಡೆಯಲು ಅಗತ್ಯ ಸೇವೆಗಳನ್ನು ಹೊರತುಪಡಿಸಿ ಎಲ್ಲವನ್ನೂ ಬಂದ್ ಮಾಡಲಾಯಿತು. ಪುಟಾಣಿಗಳು ಖುಷಿಯಿಂದ, ಕೆಲವೊಮ್ಮ ಅಮ್ಮಂದಿರ ಜೊತೆ ಮುನಿಸಿಕೊಂಡು ಹೋಗುವ ಎಲ್‌ಕೆಜಿ, ಯುಕೆಜಿ ತರಗತಿಗಳಿಗೂ ಬೀಗ ಹಾಕಲಾಯಿತು. ಈಗ ನಾವು ಈ ವೈರಾಣುವಿನ ಜೊತೆ ಬದುಕುವುದನ್ನು ಕಲಿಯಬೇಕು ಎಂದು ಹೇಳಲಾಗುತ್ತಿದೆ.

ಅಂತರ ಕಾಯ್ದುಕೊಳ್ಳುವುದು, ಮಾಸ್ಕ್‌ ಧರಿಸುವುದು, ಆಗಾಗ್ಗೆ ಕೈತೊಳೆದುಕೊಂಡು ಶುಚಿತ್ವ ಕಾಪಾಡಿಕೊಳ್ಳುವುದು... ಇವೆಲ್ಲ ಈ ವೈರಾಣುವಿನಿಂದ ದೂರ ಉಳಿಯಲು ಅನುಸರಿಸಬೇಕಿರುವ ಕ್ರಮಗಳು. ದೊಡ್ಡವರು ಇವನ್ನೆಲ್ಲ ಮಾಡಬಹುದು. ಆದರೆ, ಎಲ್‌ಕೆಜಿ ಹಾಗೂ ಯುಕೆಜಿ ವಯಸ್ಸಿನ ಪುಟಾಣಿಗಳಿಂದ ಇವನ್ನೆಲ್ಲ ಮಾಡಲು ಸಾಧ್ಯವೇ? ಮಾಡದಿದ್ದರೆ ವೈರಾಣುವಿನಿಂದ ಅವರ ರಕ್ಷಣೆ ಹೇಗೆ?

ಪುಟ್ಟ ಪುಟ್ಟ ಕೋಣೆಗಳಲ್ಲಿ ತರಗತಿಗಳನ್ನು ನಡೆಸುವ ಕಡೆಗಳಲ್ಲಿ ಪುಟಾಣಿಗಳ ನಡುವೆ ಅಂತರ ಕಾಯ್ದುಕೊಳ್ಳಲು ಸಾಧ್ಯವಿಲ್ಲ, ಅಮ್ಮಂದಿರು ಮಾಸ್ಕ್‌ ಹಾಕಿ ಕಳುಹಿಸಿದರೆ ಮಕ್ಕಳು ನಿಮಿಷದಲ್ಲಿ ಅವನ್ನು ಕಿತ್ತೆಸೆಯಬಹುದು. ಮತ್ತೆ ಮತ್ತೆ ಕೈತೊಳೆಯುತ್ತಿರಿ ಎಂದು ಹೇಳಿದರೂ ಅವು ಕೇಳಿಯಾವೇ? ಹೀಗಿರುವಾಗ ಇವರನ್ನು ಎಲ್‌ಕೆಜಿ, ಯುಕೆಜಿ ತರಗತಿಗಳಿಗೆ ಕಳುಹಿಸುವುದಾದರೂ ಹೇಗೆ?

ADVERTISEMENT

ಕೊರೊನಾ ಸಂದರ್ಭದಲ್ಲಿ ಪುಟಾಣಿಗಳನ್ನು ಕಿಂಡರ್‌ಗಾರ್ಟನ್‌ಗೆ ಕಳಿಸುವ ಬದಲು ಮನೆಯಲ್ಲೇ ಅವರಿಗೆ ಒಂದಿಷ್ಟು ಆಟ, ಪಾಠ ಹೇಳಿಕೊಡುವುದು ಒಳಿತು ಎನ್ನುವ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ ಶಿಕ್ಷಣ ತಜ್ಞರು.ಆದರೆ, ಇದು ಹೇಳಿದಷ್ಟು ಸುಲಭದ ಕೆಲಸವಲ್ಲ ಎಂಬ ಮಾತನ್ನೂ ಅವರು ಹೇಳಿದ್ದಾರೆ. ಪ್ರೌಢಶಾಲೆ ಅಥವಾ ಕಾಲೇಜು ವಿದ್ಯಾರ್ಥಿಗಳಿಗೆ ಆನ್‌ಲೈನ್‌ ಮೂಲಕ ಶಿಕ್ಷಣ ನೀಡಬಹುದು. ಈ ಪುಟ್ಟ ಕಂದಮ್ಮಗಳಿಗೆ ಆನ್‌ಲೈನ್‌ ಮೂಲಕ ಪಾಠ ಹೇಳಲು ಸಾಧ್ಯವಿಲ್ಲ.

ಅಪ್ಪ–ಅಮ್ಮ ಇಬ್ಬರೂ ದುಡಿದರೆ ಮಾತ್ರ ಜೀವನ ಸಾಗುತ್ತದೆ ಎಂಬ ಸ್ಥಿತಿಯಲ್ಲಿರುವ ಪುಟ್ಟ ಕುಟುಂಬಗಳ ಮಕ್ಕಳಿಗೆ ಮನೆಯಲ್ಲಿ ಪಾಠ ಹೇಳುವವರು, ಆಟ ಆಡಿಸುವವರು ಯಾರು? ಹಾಗೆಯೇ, ಶ್ರೀಮಂತರಾಗಿದ್ದರೂ ತಂದೆ–ತಾಯಿ ಇಬ್ಬರೂ ಕೆಲಸದಲ್ಲಿ ಇರುವ ಕುಟುಂಬಗಳ ಮಕ್ಕಳಿಗೆ ಮನೆಯಲ್ಲೇ ಪಾಠ ಹೇಳಿಕೊಡುವ ಕೆಲಸ ಕಷ್ಟದ್ದು ಎಂಬ ಅಭಿಪ್ರಾಯವನ್ನೂ ತಜ್ಞರು ವ್ಯಕ್ತಪಡಿಸಿದ್ದಾರೆ.

ಅಕ್ಕಪಕ್ಕದ ಮನೆಯ ಪುಟಾಣಿಗಳನ್ನು ಒಗ್ಗೂಡಿಸಿ ಒಂದು ಮರದ ಕೆಳಗೆ ಅಥವಾ ಆ ಪುಟಾಣಿಗಳಲ್ಲೇ ಯಾರದಾದರೂ ಒಬ್ಬರ ಮನೆಯಲ್ಲಿ ಆಟ, ಪಾಠ ಹೇಳುವ ವ್ಯವಸ್ಥೆ ಮಾಡಬಹುದು ಎಂಬ ಸಲಹೆ ಕೂಡ ಶಿಕ್ಷಣ ತಜ್ಞರಿಂದ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.