ADVERTISEMENT

ಐಒಇ ಸಂಸ್ಥೆಗಳಿಗೆ ವಿದೇಶದಲ್ಲಿ ಕ್ಯಾಂಪಸ್‌ ತೆರೆಯಲು ಅವಕಾಶ

ಹೊಸ ರಾಷ್ಟ್ರೀಯ ಶಿಕ್ಷಣ ನೀತಿ

ಪಿಟಿಐ
Published 9 ಜನವರಿ 2021, 9:51 IST
Last Updated 9 ಜನವರಿ 2021, 9:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ದೇಶದ ಶ್ರೇಷ್ಠ ಶೈಕ್ಷಣಿಕ ಸಂಸ್ಥೆಗಳು (ಇನ್‌ಸ್ಟಿಟ್ಯೂಷನ್ಸ್ ಆಫ್ ಎಮಿನೆನ್ಸ್‌– ಐಒಇ) ಎಂಬ ಗರಿಮೆ ಹೊಂದಿರುವ ಕೆಲ ಐಐಟಿಗಳೂ ಸೇರಿದಂತೆ ಭಾರತದ ವಿಶ್ವವಿದ್ಯಾಲಯಗಳು, ಪ್ರತಿಷ್ಠಿತ ಕಾಲೇಜುಗಳಿಗೆ ವಿದೇಶಗಳಲ್ಲಿ ತಮ್ಮ ಕ್ಯಾಂಪಸ್‌ಗಳನ್ನು ಆರಂಭಿಸಲು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಅನುಮತಿ ನೀಡಿದೆ. ಈ ಕುರಿತು ಅದು ಹೊಸ ಮಾರ್ಗಸೂಚಿ ಪ್ರಕಟಿಸಿದೆ.

ಕೇಂದ್ರ ಶಿಕ್ಷಣ ಸಚಿವಾಲಯವು 2018ರಲ್ಲಿ ಐಒಇಗಳನ್ನು ಗುರುತಿಸುವ ಕಾರ್ಯಕ್ಕೆ ಚಾಲನೆ ನೀಡಿತು. ಇದರಲ್ಲಿ ಆಯ್ಕೆಯಾದ 10 ಸರ್ಕಾರಿ ಮತ್ತು 10 ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸಂಪೂರ್ಣ ಶೈಕ್ಷಣಿಕ ಮತ್ತು ಆಡಳಿತ ಸ್ವಾಯತ್ತತೆ ನೀಡಲಾಯಿತು. ಇದೀಗ ಈ ಸಂಸ್ಥೆಗಳಿಗೆ ವಿದೇಶಗಳಲ್ಲಿ ತಮ್ಮ ಕ್ಯಾಂಪಸ್‌ ಆರಂಭಿಸಲು ಅವಕಾಶ ದೊರೆತಂತಾಗಿದೆ.

ಹೊಸ ರಾಷ್ಟ್ರೀಯ ಶಿಕ್ಷಣ ನೀತಿಗೆ (ಎನ್‌ಇಪಿ) ಅನುಗುಣವಾಗಿ ಮಾರ್ಗಸೂಚಿಗಳನ್ನು ಹೊರಡಿಸಲಾಗಿದೆ. ವಿದೇಶಿ ವಿಶ್ವವಿದ್ಯಾಲಯಗಳಿಗೆ ಭಾರತದಲ್ಲಿ ಕ್ಯಾಂಪಸ್‌ಗಳನ್ನು ಸ್ಥಾಪಿಸಲು ಮತ್ತು ವಿದೇಶಗಳಲ್ಲಿ ಭಾರತದ ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಕ್ಯಾಂಪಸ್‌ ಸ್ಥಾಪಿಸಲು ಅವಕಾಶ ಕಲ್ಪಿಸಲಾಗಿದೆ.

ADVERTISEMENT

ಮಾನದಂಡಗಳ ಪ್ರಕಾರ, ಐಒಇಗಳಿಗೆ ವಿದೇಶದಲ್ಲಿ ಐದು ವರ್ಷಗಳಲ್ಲಿ ಗರಿಷ್ಠ ಮೂರು ‘ಆಫ್-ಕ್ಯಾಂಪಸ್‌‘ಗಳನ್ನು ಪ್ರಾರಂಭಿಸಲು ಅವಕಾಶ ದೊರೆಯುತ್ತದೆ. ಆದರೆ ಒಂದು ಶೈಕ್ಷಣಿಕ ವರ್ಷದಲ್ಲಿ ಒಂದಕ್ಕಿಂತ ಹೆಚ್ಚು ‘ಆಫ್-ಕ್ಯಾಂಪಸ್‌‘ ಆರಂಭಿಸುವಂತಿಲ್ಲ ಎಂಬ ನಿಬಂಧನೆಯೂ ಇದೆ.

ಇವೆಲ್ಲದರ ಜತೆಗೆ, ಈ ಶಿಕ್ಷಣ ಸಂಸ್ಥೆಗಳು ಶಿಕ್ಷಣ ಇಲಾಖೆ, ಗೃಹ ಇಲಾಖೆ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದಿಂದ ಅನುಮೋದನೆ ಪಡೆಯಬೇಕು.

ದೇಶದಲ್ಲಿ ಐಒಇ ಗರಿಮೆ ಹೊಂದಿರುವ ದೆಹಲಿ, ಮುಂಬೈ, ಮದ್ರಾಸ್‌, ಖರಗ್‌ಪುರ ಐಐಟಿಗಳು, ಬೆಂಗಳೂರಿನ ಐಐಎಸ್ಸಿ, ದೆಹಲಿ ವಿಶ್ವವಿದ್ಯಾಲಯ, ಬನಾರಸ್‌ ಹಿಂದು ವಿಶ್ವವಿದ್ಯಾಲಯ, ಹೈದರಾಬಾದ್‌ ವಿಶ್ವವಿದ್ಯಾಲಯ, ಮಣಿಪಾಲ್‌ ಅಕಾಡೆಮಿ ಆಫ್‌ ಹೈಯರ್‌ ಎಜುಕೇಷನ್‌, ಒಡಿಶಾದ ಕಳಿಂಗಾ ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಸೇರಿದಂತೆ 20 ಉನ್ನತ ಶಿಕ್ಷಣ ಸಂಸ್ಥೆಗಳಿಗೆ ವಿದೇಶಗಳಲ್ಲಿ ಕ್ಯಾಂಪಸ್‌ ಆರಂಭಿಸಲು ಅವಕಾಶ ದೊರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.